ಮೂರು ದಿನ ಪ್ರೊಫೆಸರ್,ಮೂರು ದಿನ ಇಂಜಿನಿಯರ್

Submitted by ASHOKKUMAR on Fri, 09/28/2012 - 15:06

 
ಕನ್ನಡದ ಸಮುದಾಯ ತಾಣ ಸಂಪದ ಈಗ ಏಳು ವರ್ಷ ಪೂರೈಸುತ್ತಿದೆ.ತಾಣಕ್ಕೀಗ ಹೊಸ ವಿನ್ಯಾಸ,ರೂಪ ನೀಡಲಾಗುತ್ತಿದೆ.ಸರಳತೆ ಮತ್ತು ಬಳಸಲು ಸುಲಭವಾಗುವ ವಿನ್ಯಾಸ ಎಂದಿನಂತೆ ಮುಂದುವರಿದಿದೆ.ಜಾಹೀರಾತು ಪ್ರಕಟಿಸದ ತಾಣವಿದಾದ್ದರಿಂದ ಓದುಗರಿಗೆ ಅದರ ಕಿರಿಕಿರಿಯೂ ಇಲ್ಲ.ಸಮುದಾಯ ತಾಣವಾದರೂ ನಿರ್ವಹಣೆಯ ವಿಷಯ ಬಂದಾಗ,ಹರಿಪ್ರಸಾದ್ ನಾಡಿಗ್ ಜತೆಗೆ ಅವರ ಬೆರಳೆಣಿಕೆಯ ತಂಡವೇ ಎಲ್ಲಾ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ.ಈಗದಕ್ಕೆ ಅವರು ಸಾರಂಗ ಆನ್ಲೈನ್ ಪುಸ್ತಕದಂಗಡಿಯ ಮೂಲಕ ಆರ್ಥಿಕ ಸಂನಪನ್ಮೂಲವನ್ನು ಕೂಡಿಸುವ ಪ್ರಯತ್ನಕ್ಕಿಳಿದಿದ್ದಾರೆ.ಟೆಕ್ ಸಂಪದ,ಹರಿದಾಸ ಸಂಪದ,ಆರೋಗ್ಯ ಸಂಪದ,ಕೃಷಿ ಸಂಪದ ಹೀಗೆ ವಿಷಯನುಸಾರ ಸಂಪದದ ಇತರ ಚಾನೆಲ್‌ಗಳೂ ಲಭ್ಯವಿವೆ.ಬರವಣಿಗೆಗಳನ್ನು ತಕ್ಷಣ ಪ್ರಕಟಿಸಲು ನೋಂದಾಯಿಸಿದ ಸದಸ್ಯರಿಗೆ ಅನುವು ಮಾಡಲಾಗಿದೆ.
---------------------------------------
ಸ್ಪೇಸ್ ಶಟಲ್ ಯೋಜನೆ ಮುಕ್ತಾಯ
ನಾಸಾದ ಸ್ಪೇಸ್ ಶಟಲ್ ಯೋಜನೆ ಮೂವತ್ತು ವರ್ಷಗಳಷ್ಟು ಹಳೆಯದ್ದು.ಎಂಡೇವರ್ ಇದರಲ್ಲಿ ಕೊನೆಯದ್ದು.ಚಾಲೆಂಜರ್,ಕೊಲಂಬಿಯಾ ಇನ್ನೆರಡು ಶಟಲ್‌ಗಳು.ಅವೆರಡೂ ಅಪಘಾತಕ್ಕೀಡಾಗಿ ನಾಶವಾದುವು.ಎಂಡೇವರ್ ಸುಮಾರು ಇನ್ನೂರು ದಶಲಕ್ಷ ಕಿಲೋಮೀಟರ್ ಹಾರಿದೆ.ಡಿಸ್ಕವರಿ ಇನ್ನೊಂದು ಉಳಿದಿರುವ ಸ್ಪೇಸ್ ಶಟಲ್.ಐದೀಗ ಎಂಡೇವರನ್ನು  ಬೋಯಿಂಗ್ ವಿಮಾನದ ಮೇಲಿರಿ ಲಾಸ್ ಏಂಜಲೀಸ್‌ಗೆ ತರಲಾಗಿದೆ.
----------------------------------------
ಗೂಗಲ್ ಅರ್ತ್:ಇನ್ನೇನು ಭೂದೃಶ್ಯಗಳ ನೇರ ಲಭ್ಯತೆ 
ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಗಳಿಂದ ತೆಗೆವ ಚಿತ್ರವು ಪ್ರತಿ ಮೀಟರ್ ಅನ್ನು ಒಂದು ಪಿಕ್ಸೆಲ್ ಆಗಿ ತೋರಿಸುವ ಸ್ಪಷ್ಟತೆ ಪಡೆದಿದೆ.ಹೀಗಾಗಿ,ಅಲ್ಲಿಂದ ತೆಗೆದ ವಿಡಿಯೋಗಳು ಭೂಮಿಯಲ್ಲಿನ ಚಟುವಟಿಕೆಗಳು,ಸಂಚಾರವನ್ನು ತೋರಿಸಲು ಸಮರ್ಥವಾಗಿದೆ.ಮುಂದಿನ ದಿನಗಳಲ್ಲಿ ಇಂತಹ ಬಾಹ್ಯಾಕಾಶ ಕೇಂದ್ರಗಳಿಂದ ತೆಗೆದ ವಿಡಿಯೋಗಳನ್ನು ಜನರಿಗೆ ಒದಗಿಸುವ ಸೇವೆಯನ್ನು ಒದಗಿಸಲಿವೆ.ತಮ್ಮ ಮೇಲೆ ಈ ಕೇಂದ್ರಗಳು ಹಾದುಹೋಗಲಿರುವ ಸಮಯವನ್ನು ತಿಳಿದುಕೊಂದು,ಸಮಾರಂಭಗಳನ್ನು ಚಿತ್ರೀಕರಿಸಿಕೊಂಡರೆ,ಮದುವೆಯಂತಹ ಸಮಾರಂಭದ ಬಾಹ್ಯಾಕಾಶ ಪಕ್ಷಿನೋಟವನ್ನು ಜನರು ಪಡೆಯಬಹುದು.
----------------------------------------------
ಗೂಗಲ್ ಪ್ಲೇಸ್ಟೊರಿನಲ್ಲಿ ಕನ್ನಡ ಆಪ್‌ಗಳು
ಕನ್ನಡ ಕಲಿ ಎನ್ನುವುದು ಗೂಗಲ್ ಪ್ಲೇಸ್ಟೋರಿನಲ್ಲಿರುವ ಆಂಡ್ರಾಯಿಡ್ ಸ್ಮಾರ್ಟ್‌ಪೋನುಗಳಿಗೆ ಸೂಕ್ತವಾದ ತಂತ್ರಾಂಶ.ಇದರಲ್ಲಿ ಅಂಕೆಗಳು,ದಿನಬಳಕೆಗೆ ಬೇಕಾದ ಶಬ್ದಗಳು,ವಾಕ್ಯಗಳು,ವಿವಿಧ ಸಂದರ್ಭಗಳಲ್ಲಿ ಅಗತ್ಯವಿರುವ ವಾಕ್ಯಗಳನ್ನು ಇಂಗ್ಲೀಷಿನಲ್ಲಿ ಮಾತು ಕನ್ನಡದಲ್ಲಿ ನೀಡಿ,ಸುಲಭವಾಗಿ ಕನ್ನಡ ಬಳಸುವ ತಂತ್ರವನ್ನು ಬಳಸಲಾಗಿದೆ.ಕನ್ನಡ ತಿಳಿಯದವರಿಗೆ ಇರುವ ತಂತ್ರಾಂಶವಾದ್ದರಿಂದ,ಕನ್ನಡವನ್ನು ಇಂಗ್ಲೀಷ್‌ನಲ್ಲೇ ಬರೆದು ಪ್ರದರ್ಶಿಸುತ್ತದೆ.ಇದು ಉಚಿತ ತಂತ್ರಾಂಶವಾಗಿ ಲಭ್ಯ.
ಇನ್ನು ಕನ್ನಡ ವಿಕಿ ಎನ್ನುವುದು ಇನ್ನೊಂದು ತಂತ್ರಾಂಶ.ಇದೂ ಉಚಿತವೇ.ಇಂಗ್ಲೀಷ್-ಕನ್ನಡ ನಿಘಂಟುವನ್ನು ಇದು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒದಗಿಸುತ್ತದೆ.ಶೋಧಿಸುವ ಇಂಗ್ಲೀಷ್ ಶಬ್ದವನ್ನು ಟೈಪಿಸಿ,ಶೋಧಿಸಿದಾಗ,ಕನ್ನಡ ವಿಕ್ಷನರಿಯಲ್ಲಿ ನೀಡಿರುವ ಸಮಾನಾರ್ಥಕ ಶಬ್ದಗಳನ್ನು ಚಿತ್ರ ರೂಪದಲ್ಲಿ ಪ್ರದರ್ಶಿಸುವ ತಂತ್ರಾಂಶ,ಕನ್ನಡ ಭಾಷೆ ಬೆಂಬಲಿಸದ ಪೋನುಗಳಲ್ಲಿ ಸಮಸ್ಯೆಯಾಗದಂತೆ
ಈ ಸ್ಮಾರ್ಟ್‌ನೆಸ್ ಪ್ರದರ್ಶಿಸಿದೆ.
-------------------------------------
ಆಪಲ್ ಐವೋಸ್ ಆರರಲ್ಲಿ ನಕ್ಷೆಗಳು ತಪ್ಪುತಪ್ಪು!
ಆಪಲ್ ತನ್ನ ಸಾಧನಗಳಿಗಾಗಿ ಹೊಸ ಆಪರೇಟಿಂಗ್ ವ್ಯವಸ್ಥೆ ಐ‌ಓಸ್ ಆರನ್ನು ಬಿಡುಗಡೆ ಮಾಡಿದೆ.ಹಳೆಯ ಆವೃತ್ತಿಯಲ್ಲಿ ಗೂಗಲ್ ಮ್ಯಾಪ್ ಮೂಲಕ,ಒದಗಿಸಲಾಗುತ್ತಿತ್ತು.ಹೊಸ ಆವೃತ್ತಿಯಲ್ಲಿ ಆಪಲ್ ಮ್ಯಾಪನ್ನು ಒದಗಿಸಲಾಗಿದ್ದು,ಇದನ್ನು ಬಳಸಿದೆ ಹೊಸ ಐಫೋನ್5ನ ಬಳಕೆದಾರರರು ಆಪಲ್ ಮ್ಯಾಪ್‌ನ ಕಳಪೆ ಗುಣಮಟ್ಟದ ಬಗ್ಗೆ ಕಟು ಟೀಕೆ ಮಾಡಿದ್ದಾರೆ.ಆಪಲ್ ಮ್ಯಾಪ್‌ನಲ್ಲಿ ಹಲವು ಭೂಗುರುತುಗಳನ್ನು ತಪ್ಪಾಗಿ ಹೆಸರಿಸುವುದು ಕಂಡುಬಂದಿದೆ.
ಆದರೆ ಐಫೋನ್5 ಮಾರಾಟ ಅತ್ಯುತ್ಸಾಹದ ಪ್ರತಿಕ್ರಿಯಿಯಿದೆ.ಇದೂ ಮಾರುಕಟ್ಟೆಯಲ್ಲಿ ದಾಖಲೆ ಮಾರಾಟ ಆಗುವುದು ನಿಶ್ಚಿತ.ಉದ್ದುದ್ದ ಕ್ಯೂಗಳಲ್ಲಿ ಜನರು ಕಾದು ಐಫೋನ್ ಖರೀದಿಸಿ ಸಂಭ್ರಮಿಸುವ ಜತೆ,ಕಾಳಸಂತೆಯಲ್ಲಿ ಹಲವು ಪಟ್ಟು ತೆತ್ತು ಖರೀದಿಸುವ ಐಫೋನ್ ಭಕ್ತರೂ ಇದ್ದಾರೆ.
---------------------------------
ಮೂರು ದಿನ ಪ್ರೊಫೆಸರ್,ಮೂರು ದಿನ ಇಂಜಿನಿಯರ್
ವಿದೇಶಗಳ ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕರು,ಉದ್ಯಮಗಳವರಿಗೆ ಸಂಶೋಧನೆ ಕೆಲಸ ಮಾಡಿಕೊಡುವ,ಸಲಹೆಗಳನ್ನು ನೀಡುವ ಕೆಲಸವನ್ನು ಮಾಡುವುದೂ ಸಾಮಾನ್ಯ.ಹಾಗೆಯೇ,ಇಂಜಿನಿಯರ್‌ಗಳು ತಮ್ಮ ಉದ್ಯಮದ ಅನುಭವಗಳನ್ನು ವಿದ್ಯಾರ್ಥಿಗಳ ಜತೆ ಹಂಚಿಕೊಳ್ಳಲು,ಕಾಲೇಜುಗಳಲ್ಲಿ ಪಾಠ ಮಾಡುವುದೂ ಇದ್ದದ್ದೇ.ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರ ಸೂರ್ಯನಾರಾಯಣ,ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದರು.ನಂತರ ಸ್ನಾತಕೋತ್ತರ ಪದವಿಯನ್ನು ಸುರತ್ಕಲ್‌ನಲ್ಲಿ ಪಡೆದು,ಕಂಪೆನಿಗಳಲ್ಲಿ ಕೆಲಸ ಮಾಡಿ ಅನುಭವ ಗಳಿಸಿದರು.ತಮ್ಮ ಅನುಭವವನ್ನು ವಿದ್ಯಾರ್ಥಿಗಳ ಜತೆ ಹಂಚಿಕೊಳ್ಳಲು ಬಯಸಿ ಮತ್ತೆ ಕಾಲೇಜು ಸೇರಿದರು.ಟೆಸ್ಲಾ ಕಾಯಿಲ್ ಅಂಥಹ ಕೆಲವು ಪ್ರಾಜೆಕ್ಟುಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು.ಪರೀಕ್ಷೆಗಾಗಿ ಇದನ್ನು ಮಾಡಿಸಿರಲಿಲ್ಲ.ಇದು ಈ ವರ್ಷದ ಅತ್ಯುತ್ತಮ ಹವ್ಯಾಸಿ ಪ್ರಾಜೆಕ್ಟ್ ಆಗಿ ಸೃಷ್ಟಿ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ  ಬಹುಮಾನ ಗೆದ್ದಿತು.
ಆದರೂ ಪ್ರಾಜೆಕ್ಟ್‌ಗಳನ್ನು ಮಾಡಿಸುವಾಗ ವಿದ್ಯಾರ್ಥಿಗಳ ಪ್ರತಿಸ್ಪಂದನ ನಿರೀಕ್ಷೆ ಮುಟ್ಟದಿದ್ದಾಗ,ಮತ್ತೆ ಇಂಜಿನಿಯರಿಂಗ್ ಉದ್ಯೋಗಕ್ಕೆ ಮರಳುವುದೇ ಎನ್ನುವ ಡೋಲಾಯಮಾನ ಸ್ಥಿತಿ ತಲುಪಿದರು.ಕೊನೆಗೆ ಅವರು ಮೂರು ದಿನ ಕಲಿಸುವ,ಮೂರು ದಿನ ಇಂಜಿನಿಯರ್ ಆಗುವ ಹೊಸ ಹಾದಿ ಹಿಡಿಯಲು ನಿರ್ಧರಿಸಿದರು.ಈಗ ವಾರದ ಮೂರು ದಿನ ಕಲಿಸುವ,ಮೂರು ದಿನ ಇಂಜಿನಿಯರ್ ಆಗಲು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯ ಮತ್ತು ಟೆಕ್ಸ್ಮಾಕೋ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಇಂತಹ ಅಪೂರ್ವ ಪ್ರೊಫೆಸರ್-ಇಂಜಿನಿಯರ್ ಜೋಡಾಟ ಅಪರೂಪದಲ್ಲಿ ಅಪರೂಪ ಎನ್ನುವುದರಲ್ಲಿ ಅನುಮಾನವೇ ಇಲ್ಲ!
-------------------------------------------
ರಸ್ತೆಗುಂಡಿ ಚಿತ್ರರವಾನಿಸಿ,ದೂರು ಸಲ್ಲಿಸಿ
ಬೆಂಗಳೂಋ ಮಹಾನಗರಪಾಲಿಕೆಯು ಕಿಯೋನಿಕ್ಸ್ ಸಹಭಾಗಿತ್ವದಲ್ಲಿ ಇಂಟರ್‌ನೆಟ್ ವೆಬ್‌ಸೈಟ್ ತೆರೆದಿದ್ದು,ಜನರು ಗೂಗಲ್ ಆಂಡ್ರಾಯಿಡ್ ಪೋನುಗಳ ಕ್ಯಾಮರಾದಿಂದ ರಸ್ತೆ ಹೊಂಡಗಳ ಚಿತ್ರ ತೆಗೆದು ತಾಣಕ್ಕೆ ಅಪ್ಲೋಡ್ ಮಾಡುವ ಸೇವೆ ಒದಗಿಸಲಾಗಿದೆ.ಜಿಪಿಎಸ್ ಇರುವ ಫೋನುಗಳಲ್ಲಿ ಹೊಂಡದ ಸ್ಥಾನದ ಮಾಹಿತಿಯು ಸಂಬಂಧಿಸಿದ ಇಂಜಿನಿಯರ್‌ಗೆ ಕಿರು ಸಂದೇಶವಾಗಿ ಸಿಗುತ್ತದೆ.ವಿದೇಶೀ ಯಂತ್ರ ಬಳಸಿ,ಪ್ಲಾಸ್ಟಿಕ್ ಮಿಶ್ರಣ ಮಾಡಿದ ಡಾಂಬರಿನಿಂದ ಹೊಂಡ ಮುಚ್ಚುವ ಕಾರ್ಯ ತ್ವರಿತಗತಿಯಲ್ಲಿ ಜರಗುತ್ತದೆ.ಎಷ್ಟು ಹೊಂಡಗಳ ವಿಲೇವಾರಿ ಆಗಿದೆ ಎನ್ನುವ ಮಾಹಿತಿಯೂ ತಾಣದಲ್ಲಿ ಸಿಗುತ್ತದೆ.
----------------------------------------------------
ಗೂಗಲ್ ಆಂಡ್ರಾಯಿಡ್:ನಾಲ್ಕನೇ ಹುಟ್ಟುಹಬ್ಬ
ಗೂಗಲ್‌ನ ಸಾಧನಗಳಲ್ಲಿ ಬಳಸಲು ಅಭಿವೃದ್ಧಿ ಪಡಿಸಿದ ಆಪರೇಟಿಂಗ್ ವ್ಯವಸ್ಥೆ ಆಂಡ್ರಾಯಿಡ್ ನಾಲ್ಕನೆ ಹುಟ್ಟುಹಬ್ಬ ಆಚರಿಸುತ್ತಿದೆ.ಈ ಕಡಿಮೆ ಅವಧಿಯಲ್ಲಿ ಆಂಡ್ರಾಯಿಡ್ ಬಹು ಜನಪ್ರಿಯವಾಗಿರುವುದು ದಾಖಲೆಯೇ ಸರಿ.
UDAYAVANI
UDAYAVANI
*ಅಶೋಕ್‌ಕುಮಾರ್ ಎ