ಜೀವನದ ಸೂತ್ರ

Submitted by Prakash Narasimhaiya on Fri, 09/28/2012 - 20:48

 

ಗುಂಡಪ್ಪನವರು ಹೇಳುತ್ತಾರೆ 

                 ಗೌರವಿಸು ಜೀವನವ , ಗೌರವಿಸು ಚೇತನವ |

                 ಆರದೋ ಜಗವೆಂದು ಬೇಧವೆಣಿಸದಿರು|

                 ಹೋರುವುದೆ  ಜೀವನ ಸಮೃದ್ಧಿಗೋಸುಗ  ನಿನಗೆ|

                 ದಾರಿಯಾತ್ಮೊನ್ನತಿಗೆ --------ಮಂಕುತಿಮ್ಮ || 475 ||

 

 

                ಜೀವನವನ್ನು ಗೌರವಿಸು, ಇತರರನ್ನು ಗೌರವಿಸು, ಹಾಗೆಯೇ ನಿನ್ನೊಳಗಿರುವ ಚೇತನವನ್ನು ಗೌರವಿಸು.  ಬಾಡಿಗೆ ಮನೆಯೆಂದು  ಬೇಕಾಬಿಟ್ಟಿ ಜೀವಿಸಬೇಡ, ಮನೆಯನ್ನು ಹಾಳುಮಾಡಬೇಡ. ಇರುವ ತನಕವಾದರೂ ಈ ಮನೆ ನಿನ್ನ ತಲೆ ಕಾಯಬೇಡವೇ ?  ಇರುವಷ್ಟು ದಿನ ಜೀವನ ತಳ್ಳಿ ಒಂದು ದಿನ ಒಗೆದರಾಯಿತು ಎನ್ನುವ ಶುಷ್ಕ ವೇದಾಂತ ಬೇಡ. ಇರುವಷ್ಟು ದಿನ ಹೇಗಿರಬೇಕೋ ಹಾಗೆ ಇದ್ದು ಎಷ್ಟು ಗೌರವಯುತ ಜೀವನ ನಡೆಸಬೇಕೋ ಹಾಗೆ ನಡೆಸಿ, ತನ್ನಂತೆ ಇತರ ಜೊತೆಗಾರರನ್ನು ಗೌರವದಿಂದ ನಡೆಸಿಕೊಂಡು ಸಮೃದ್ಧ ಜೀವನ ನಡೆಸಿ ಕೊನೆಗೊಂದು ದಿನ ಎಲ್ಲರಲ್ಲೂ ಸೈ ಎನಿಸಿಕೊಂಡು  ಕಂತೆ ಒಗೆಯುವುದೇ ಈ ಬಾಳಿನ ಉದ್ದೇಶ. ಈ ಘನ ಉದ್ದೇಶ ತಲುಪಲು ಕ್ರಮಿಸುವ ಹಾದಿಯಿಂದ ನಮ್ಮ ಆತ್ಮೋನ್ನತಿ ಆಗಲಿ, ಜೀವನ ಸಮೃದ್ಧಿಯಾಗಲಿ, ನಮ್ಮ ಬಾಳು ಬೆಳಗಲಿ.  ಈ ಜಗಕೆ ಬಂದ ಪಾತ್ರಧಾರಿಗಳು ನಾವಾದರು ಆಡುವ ನಾಟಕ ಮಾತ್ರ ಚನಾಗಿಯೇ ಇರಬೇಕು. ನಟಿಸುವ ನಟನೆಯು ಅಷ್ಟೇ ಪರಿನಾಮಕಾರಿಯಾಗಿರಬೇಕು. ಇದೆ ಜೀವನದ ಸೂತ್ರ , ದಿವ್ಯ ಮಂತ್ರ  ಎನ್ನುವುದು ಗುಂಡಪ್ಪನವರ ಆಶಯ.