‘ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತ’-ಮಾಧ್ಯಮ ಸಂವಾದದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮ

Submitted by hariharapurasridhar on Sat, 09/29/2012 - 20:11

ಹಾಸನ, ಸೆ. ೨೯: ವೇದಗಳು ಹಳಸಲು ಎಂದಾಗಲಿ, ಕಾಲ ಮಿತಿಯುಳ್ಳ ಅಪ್ರಸ್ತುತ ವಿಷಯವೆಂದಾಗಲಿ ತಿಳಿಯುವುದೇ ಅಜ್ಞಾನ ಹಾಗೂ ತಪ್ಪು ಕಲ್ಪನೆಯಾಗಿದೆ; ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತವೇ ಆಗಿವೆ ಎಂದು ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರು  ಪ್ರತಿಪಾದಿಸಿದರು.
ಭಾನುವಾರ ವೇದಗಳ ಕುರಿತಾದ ಮುಕ್ತ ಸಂವಾದ ನಡೆಸಿಕೊಡಲಿಕ್ಕಾಗಿ ಇಂದು ನಗರಕ್ಕೆ ಭೇಟಿ ನೀಡಿದ್ದ ಅವರು, ಇಂದು ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಭಾಗವಹಿಸಿ ವೇದಗಳ ಕುರಿತಾದ ಹತ್ತು     ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಮಾನವ ಜೀವಿಯ ಜತೆಯಾಗಿಯೇ ಇರುವ ಹಾಗೂ ಇರಬೇಕಾದ ಹಲವಾರು ಸತ್ಯ ಸಂಗತಿಗಳ ಕುರಿತು ತಿಳಿವಳಿಕೆ, ಜ್ಞಾನ ಹಾಗೂ ಮುನ್ನಡೆಯಲು ಮಾರ್ಗದರ್ಶನ ಮಾಡುವುದರಿಂದ ವೇದಗಳು ಎಂದೆಂದಿಗೂ ಪ್ರಸ್ತುತವೇ ಎಂದು ಹಲವು ನಿದರ್ಶನಗಳ ಸಹಿತ ತಿಳಿಸಿಕೊಟ್ಟ ಅವರು, ಮತ್ತೊಬ್ಬರನ್ನು ಹಾಳು ಮಾಡುವ ಗುಣ, ಹಿಂಸೆ, ತಾರತಮ್ಯ ಅಥವಾ ಭೇದ ಭಾವ ಇತ್ಯಾದಿ ಯಾವುದೇ ನಕಾರಾತ್ಮಕ ಅಂಶಗಳು ವೇದಗಳಲ್ಲಿಲ್ಲ ಎಂದು ತಿಳಿಸಿದರು.
ಮನು ಸ್ಮೃತಿ ಸೇರಿದಂತೆ ಹಲವಾರು ಸ್ಮೃತಿಗಳು ಆಯಾ ಕಾಲ ಕಾಲಮಾನಗಳಿಗೆ ತಕ್ಕಂತೆ ರಚಿತವಾದ ನಿಯಮಗಳೇ ಹೊರತು ಅವು ಪ್ರಸ್ತುತವಾಗುವುದಿಲ್ಲ ಹಾಗೂ ಹಲವಾರು ಕಲಬೆರಕೆ ಅಂಶಗಳೂ ಸಹ ಸೇರಿರುವುದರಿಂದ ಅವು ಪರಮ ಪ್ರಮಾಣವೂ ಆಗುವುದಿಲ್ಲ; ಆದರೆ ಮೂಲ ವೇದಗಳು ಮಾತ್ರ ಎಲ್ಲ ವಿಷಯಗಳಿಗೂ ಪರಮ ಪ್ರಮಾಣವಾಗುತ್ತವೆ. ಏಕೆಂದರೆ ವೇದಗಳೊಂದಿಗೆ ವ್ಯಾಕರಣ, ಶಿಕ್ಷಾ, ಛಂದಸ್ಸು, ಜ್ಯೋತಿಷ (ಖಗೋಳ ವಿಜ್ಞಾನವೇ ಹೊರತು ಈಗಿನ ಫಲ ಜ್ಯೋತಿಷ್ಯ ಅಲ್ಲ), ನಿರುಕ್ತ ಮತ್ತು ಕಲ್ಪ ಎಂಬ ಈ ೬ ವೇದಾಂಗಗಳ ಚೌಕಟ್ಟಿನ ನಡುವೆ ವೇದಗಳು ಬಂಧಿಸಲ್ಪಟ್ಟಿರುವುದರಿಂದ ಅವು ಸುರಕ್ಷಿತವಾಗಿವೆ. ಯಾವುದೇ ಕಲಬೆರಕೆಯಾಗಲಿ; ತಿದ್ದುಪಡಿಯಾಗಲಿ; ಬದಲಾವಣೆಯಾಗಲಿ ಮಾಡಲು ಸಾಧ್ಯವಾಗಿಲ್ಲ; ಸಾಧ್ಯವಾಗುವುದೂ ಇಲ್ಲ. ಹೀಗಾಗಿ ಅವರು ಪರಮ ಪ್ರಮಾಣವೇ ಸರಿ; ಆದರೆ ಇದೇ ಮಾತನ್ನು ಇತರೆ ಪುರಾಣ ಪುಣ್ಯ ಕಥೆಗಳ ಬಗ್ಗೆ ಹೇಳುವಂತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಹಲವು ಸಮರ್ಥನೆಗೊಂದಿಗೆ ಉತ್ತರ ಬಿಡಿಸಿಟ್ಟರು.
ಬ್ರೀಟೀಷರ ಲಾರ್ಡ್ ಮೆಕಾಲೆ ಪ್ರಣೀತವಾದ ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಯಾರ ಉದ್ಧಾರವೂ ಸಾಧ್ಯವಿಲ್ಲ. ಈಗಿನ ಎಲ್.ಕೆ.ಜಿ.ಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಯಾವುದೇ ಸರ್ಟಿಫಿಕೇಟ್ ಆಧಾರಿತ ಶಿಕ್ಷಣದಲ್ಲಿ ಹೊರಗಿನ ವಿಷಯಗಳನ್ನು ಬಲವಂತವಾಗಿ ಮನುಷ್ಯನ ಮೆದುಳಿಗೆ ತುರುಕುವುದಾಗಿದೆ. ಆದ್ದರಿಂದ ಅದು ನಿಜವಾದ ಶಿಕ್ಷಣವೇ ಅಲ್ಲ. ಮನುಷ್ಯನೊಳಗಿನ ಪ್ರತಿಭೆ ಅಥವಾ ಶಕ್ತಿಯನ್ನು ಸಮಾಜದ ಉದ್ಧಾರಕ್ಕಾಗಿ ಹೊರಗೆ ಹಾಕುವುದೇ ನಿಜವಾದ ಶಿಕ್ಷಣ. ಆದರೆ ಅದು ನಡೆಯುತ್ತಿಲ್ಲ. ಈಗೆಲ್ಲಾ ಉಲ್ಟಾ ಶಿಕ್ಷಣವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ವಿಷಾದಿಸಿ, ಶಾಲೆಯ ಮೆಟ್ಟಿಲನ್ನೂ ಹತ್ತದವರು ಪ್ರತಿಭಾವಂತರಾಗಿ ಸಮಾಜ ಸುಧಾರಣೆ ಮಾಡಿದವರ ಪಟ್ಟಿಯನ್ನೇ ಮುಂದಿಟ್ಟರು!
ವೇದಗಳು ಜಗತ್ತಿನ ಸರ್ವರಿಗಾಗಿಯೇ ಇವೆ; ವೇದ ಎಂದರೆ ಜ್ಞಾನ ಎಂದರ್ಥ. ಅವು ಎಲ್ಲೂ ಜಾತಿ ಪದ್ಧತಿ, ಲಿಂಗ ಭೇದ, ಮೂರ್ತಿ ಪೂಜೆಗಳನ್ನು ಹೇಳಿಲ್ಲ; ಅವೆಲ್ಲ ಶತಮಾನಗಳಿಂದೀಚೆಗೆ ಹುಟ್ಟಿಕೊಂಡ ಸ್ವಾರ್ಥ ಲಾಲಸೆಯ ಪಿಡುಗುಗಳಾಗಿವೆ. ವೇದಗಳು ವಾಸ್ತವವಾಗಿ ವೇದಗಳು ವರ್ಣಗಳ ಕುರಿತು ಹೇಳುತ್ತವೆ; ವರ್ಣ ಎಂದರೆ ಜಾತಿಯಲ್ಲ; ಅದು ‘ಆಯ್ಕೆ’ ಎಂದರ್ಥ. ಸಾಮಾಜಿಕ ಅನಿಷ್ಟಗಳಾದ ಅಜ್ಞಾನ, ಅನ್ಯಾಯ, ಅಭಾವ ಮತ್ತು ಆಲಸ್ಯಗಳ ವಿರುದ್ಧ ಹೋರಾಡಲು ಯಾರಿಗೆ ಯೋಗ್ಯತೆ ಇದೆಯೋ; ಯಾರು ಆ ರೀತಿ ಹೋರಾಟ ಮಾಡಲು ‘ಆಯ್ಕೆ’ ಮಾಡಿಕೊಳ್ಳುವರೋ ಅಂತಹವರಿಗೆ ಕ್ರಮವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ಹೆಸರು. ಅಂತಹ ಮನೋಭಾವ ಹುಟ್ಟಿನಿಂದಲೇ ಬರಬೇಕೆಂದೇನೂ ಇಲ್ಲ; ಯೋಗ್ಯತೆಯಿಂದ ಗಳಿಸಬೇಕು. ಈ ನಾಲ್ವರಲ್ಲಿ ಯಾರೂ ಜೇಷ್ಠರೂ ಅಲ್ಲ; ಕನಿಷ್ಠರೂ ಅಲ್ಲ. ಸಮಾಜೋದ್ಧಾರಕ್ಕೆ ಈ ಎಲ್ಲರೂ ಅಗತ್ಯವಾಗಿ ಬೇಕಾದವರೇ ಆಗಿದ್ದಾರೆ. ಹೀಗಾಗಿ ಈ ಅರ್ಥದಲ್ಲಿ ವರ್ಣಾಶ್ರಮಗಳು ಎಂದೆಂದಿಗೂ ಪ್ರಸ್ತುತ ಎಂದು ಶರ್ಮಾಜಿ ವ್ಯಾಖ್ಯಾನಿಸಿದರು.
ಅರ್ಥಪೂರ್ಣವಾಗಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ‘ವೇದ ಭಾರತೀ’ ಸಂಚಾಲಕರುಗಳಾದ ಹರಿಹರಪುರ ಶ್ರೀಧರ್, ಕವಿ ನಾಗರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಪ್ರಭಾಕರ ಸ್ವಾಗತಿಸಿ, ವಂದಿಸಿದರು.

File attachments
Rating
No votes yet