ಪ್ರಾಮಾಣಿಕತೆಯೇ ಮೈದೆಳೆದ ಮೂರ್ತಿ - ಲಾಲ್ ಬಹಾದ್ದೂರ ಶಾಸ್ತ್ರೀಜಿ
‘ಭಾರತದ ಸಮಗ್ರತೆ ಹಾಗೂ ರಾಷ್ಟ್ರ ದ್ವಜದ ಗೌರವ ಕಾಪಾಡಲು ನಮ್ಮ ಬದುಕಿನ ಕೊನೆ ಕ್ಷಣದ ವರೆಗೂ ಹೋರಾಡುತ್ತೇವೆ. ಈ ವಿಷಯದಲ್ಲಿ ನಾವೂ ಸಾವಿಗೂ ಅಂಜುವುದಿಲ್ಲ’
ಲಾಲ ಬಹಾದ್ದೂರ ಶಾಸ್ತ್ರಿ ಗಾಂಧಿ ತತ್ವಗಳಲ್ಲಿ ನಂಬಿಕೆ ಇಟ್ಟ ಸ್ವಾತಂತ್ರ್ಯ ಸೇನಾನಿ, ಈ ದೇಶ ಕಂಡ ಅತ್ಯುತ್ತಮ ಪ್ರಧಾನಿ. ಕಡಿಮೆ ಮಾತಾಡಿ ಹೆಚ್ಚು ಕೆಲಸ ಮಾಡಿದ ನೀತಿವೆತ್ತ ರಾಜಕಾರಣಿ. ಮೌಲ್ಯ ಬದ್ಧ ರಾಜಕಾರಣಕ್ಕೆ, ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಶಾಸ್ತ್ರೀಜಿ. ತನ್ನ ಅಚಲ ನಿರ್ಧಾರ, ಅದಮ್ಯ ಸಮಯ ಪ್ರಜ್ಞೆ, ಆಗಾಧ ಅರಿವು ಇವುಗಳಿಂದ ಅಧಿಕಾರದುದ್ದಕ್ಕೂ ಎದುರಾದ ಎಲ್ಲ ರಾಷ್ಟ್ರೀಯ, ರಾಜಕೀಯ ವಿಪ್ಲವಗಳನ್ನು ಸಮರ್ಥವಾಗಿ ನಿಭಾಯಿಸಿದ ನೇತಾರ. ಶಾಸ್ತ್ರಿಯವರು ಜನಿಸಿದ್ದು 1904 ರ ಅಕ್ಟೋಬರ 2 ರಂದು, ಉತ್ತರ ಪ್ರದೇಶದ ಕಾಶಿ ಸಮೀಪದ ಮೊಘಲ್-ಸರಾಯಿ ಗ್ರಾಮದಲ್ಲಿ. ಗಾಂಧಿ ಜಯಂತಿಯ ದಿನವೇ ಈ ಗಾಂಧಿವಾದಿಯ ಜನನವಾಗಿದ್ದು. ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡ ಶಾಸ್ತ್ರಿಯವರಿಗೆ ಆಸರೆಯಾಗಿದ್ದು ಅವರ ತಾಯಿಯ ತಂದೆ ಹಝಾರಿ ಲಾಯಿ. ಕೆಂಬಣ್ಣದ ಮಗನಿಗೆ ತಂದೆ ತಾಯಿ ಇಟ್ಟ ಹೆಸರು `ಶ್ರೀವಾಸ್ತವ’, ಆದರೆ ವಾಸ್ತವದಲ್ಲಿ ಅವರು ಬದಲಾಗಿದ್ದು ಲಾಲ್ ಬಹಾದ್ದೂರ್ ಆಗಿ.
ಖಾದಿಯೋಗಿ ಈ ಗಾಂಧಿವಾದಿ
ಕೊನೆವರೆಗೂ ಸರಳ ಖಾದಿಧಾರಿಯಾಗಿದ್ದ ಶಾಸ್ತ್ರೀಜಿ, ಸ್ವತಃ ನೂಲುತ್ತಿದ್ದರು, ತಮ್ಮ ಹರಿದ ಬಟ್ಟಿಗಳನ್ನು ತಾವೇ ಹೊಲೆದುಕೊಳ್ಳುತ್ತಿದ್ದರು. 1927 ರಲ್ಲಿ ತುಂಬಾ ಸರಳ ಸಮಾರಂಭದಲ್ಲಿ ಲಲಿತಾದೇವಿಯವರನ್ನು ವರಿಸಿದ ಶಾಸ್ತ್ರೀಜಿ, ತನ್ನ ಮಾವನಿಂದ ವರೋಪಚಾರವಾಗಿ ಪಡೆದದ್ದು ಒಂದು ಚರಖಾ ಮತ್ತು ಖಾದಿ ನೂಲಿನ ಉಂಡೆಗಳು.
ಹಣವಿಲ್ಲದ ರಾಜಕಾರಣಿ
ಅವರ ನಿಧನದ ನಂತರ ಅವರ ಖಾತೆಯಲ್ಲಿದ್ದ ಒಟ್ಟು ಹಣ ಕೇವಲ 33 ರೂಪಾಯಿ. ಶಾಸ್ತ್ರೀಜಿ ಪ್ರಧಾನಿಯಾಗಿದ್ದ ಸಮಯದಲ್ಲಿ, ಅವರ ಮಗ ಕಛೇರಿಗೆ ಹತ್ತು ನಿಮಿಷ ತಡವಾಗಿ ಹೋಗುತ್ತಾನೆ, ತನ್ನ ತಪ್ಪಿಗೆ ನೇರವಾಗಿ ತನ್ನ ಮೇಲಾಧಿಕಾರಿ ಕಡೆಗೆ ಹೋಗಿ, ಬಸ್ಸು ಕೆಟ್ಟಿದ್ದರಿಂದ ತಡವಾಯಿತು ಎಂದು ಹೇಳಿ ಕ್ಷಮೆ ಕೇಳುತ್ತಾನೆ, ತಾವೇಕೆ ಒಂದು ಸ್ಕೂಟರ್ ಖರೀದಿಸಬಾರದು ಎಂಬ ಮೇಲಾಧಿಕಾರಿಯ ಸಲಹೆಗೆÉ, ‘ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಇನ್ನೂ ಸಿಕ್ಕಿಲ್ಲ’ ಎಂದು ಉತ್ತರಿಸುತ್ತಾನೆ. ತಂದೆ ಪ್ರಧಾನಿಯಾಗಿದ್ದರೂ, ಅದನ್ನು ದುರುಪಯೋಗಪಡಿಸಿಕೊಳ್ಳದೇ, ಅವರ ಮಗ ತೋರಿದ ವಿನೀತತೆ, ಪ್ರಾಮಾಣಿಕತೆ ಶಾಸ್ತ್ರೀಜಿಯವರ ಸಂಸ್ಕಾರ ವಾಹಕತೆಗೆ ಸಾಕ್ಷಿ.
ಶಾಸ್ತ್ರಿಯವರು ಮಂತ್ರಿಯಾಗಿದ್ದಾಗ, ಅವರ ಮನೆಗೆ ಆಪ್ತ ಸ್ನೇಹಿತನೊಬ್ಬ ತನ್ನ ಮಗಳ ಮದುವೆಗಾಗಿ ಹಣ ಸಹಾಯ ಕೇಳಿಕೊಂಡು ಬಂದ, ಶಾಸ್ತ್ರಿಯವರ ಬಳಿಯಲ್ಲೂ ಅಷ್ಟು ಹಣವಿರಲಿಲ್ಲಾ, ಬಲು ಖೇದದಿಂದ `ದಯಮಾಡಿ ಕ್ಷಮಿಸು ನನ್ನ ಬಳಿ ಅಷ್ಟು ಹಣವಿಲ್ಲಾ’ ಎಂದು ಹೇಳಿದರು. ಇದನ್ನು ನೋಡಿ ಮನಸು ಕರಗಿದ ಅವರ ಪತ್ನಿ, ಕೂಡಲೇ ಒಳ ಹೋಗಿ ತಮ್ಮ ಬಳಿಯಿದ್ದ ಹಣವನ್ನು ತಂದು ಕೊಟ್ಟರು. ಚಕಿತರಾದ ಶಾಸ್ತ್ರೀಜಿ ಆ ಹಣ ಎಲ್ಲಿಂದ ಬಂತು ಎಂದು ಪತ್ನಿಗೆ ಕೇಳಿದರು. ಆಕೆ ತಾವು ಕೊಡುವ ತಿಂಗಳ ಖರ್ಚಿನಲ್ಲಿ ಒಂದು ರೂಪಾಯಿ ಉಳಿಯುತ್ತದೆ ಅದನ್ನೇ ಕೂಡಿಟ್ಟಿದ್ದೆ ಎಂದು ಹೇಳಿದರು. ನಂತರ ಶಾಸ್ತ್ರೀಜಿ ಮಾಡಿದ್ದೇನು ಗೊತ್ತೆ? ಕೂಡಲೇ ಸರ್ಕಾರಕ್ಕೊಂದು ಪತ್ರ ಬರೆದು ‘ನೀವು ಕೊಡುವ ಸಂಬಳ ನನಗೆ ಸಾಕಾಗಿ ಇನ್ನೂ ಉಳಿಯುತ್ತದೆ, ಆದ್ದರಿಂದ ಕೊಡುವ ಸಂಬಳ ಕಡಿಮೆ ಮಾಡಿ’ ಎಂದು ಕೋರುತ್ತಾರೆ. ಕಾಶಿಯ ಸಮೀಪವೇ ಜನಿಸಿದ ಲಾಲ್ ಬಹಾದ್ದೂರರು ಇನ್ನೊಬ್ಬ ಸತ್ಯ ಹರಿಶ್ಚಂದ್ರ ಎನಿಸುವುದಿಲ್ಲವೇ.
ಜೈ ಜವಾನ್ ಜೈ ಕಿಸಾನ್
ಪ್ರಧಾನಿಯಾಗಿ ಸತತ ಹದಿನೆಂಟು ವರ್ಷ ಆಳಿದ ನೆಹರು, ತಮ್ಮ ನಂತರ ಯಾರು? ಎಂಬ ಪ್ರಶ್ನೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡು ದೇಹ ತ್ಯಜಿಸಿದರು. ನೆಹರು ನಂತರ ಆ ಸ್ಥಾನ ತುಂಬಬಲ್ಲ ಸಮರ್ಥ ನಾಯಕನಿಗೆ ತಲಾಷೆ ನಡೆದು, ಆ ಸ್ಥಾನಕ್ಕೆ ಶಾಸ್ತ್ರೀಜಿ ಯೋಗ್ಯರೆಂದು ಆರಿಸಲಾಯಿತು. ಅವರ ಹಾದಿ ಸುಗಮವಾಗಿರಲಿಲ್ಲಾ, 1962 ರಲ್ಲಿ ಚೀನಾದೊಂದಿಗಿನ ಯುದ್ಧದಲ್ಲಿ ಭಾರತ ಅನುಭವಿಸಿದ ಹಿನ್ನೆಡೆಯ ನೆನಪು ಹಸಿಯಾಗಿರುವಾಗಲೇ 1965ರಲ್ಲಿ ಜಮ್ಮು ಕಾಶ್ಮೀರ ವಿಷಯವಾಗಿ ಪಾಕಿಸ್ತಾನ ಮತ್ತೆ ಕಾಲು ಕೆರೆದಿತ್ತು, ರಾತ್ರಿ ಇಂತಹ ಆಘಾತಕಾರಿ ಸುದ್ದಿ ತೆಗೆದುಕೊಂಡು ನಂ. 10 ಜನಪಥ್ ಕ್ಕೆ ಬಂದ ಸೇನಾಧಿಕಾರಿಗಳಿಗೆ, ವೈರಿಗಳನ್ನು ಶಸ್ತ್ರಗಳಿಂದಲೇ ಎದುರುಗೊಳ್ಳಿರಿ ಎಂದು ಆದೇಶ ಹೊರಡಿಸಿ, ಸೇನಾ ಕಾರ್ಯಾಚರಣೆಗಳಿಗೆ ಕಮಾಂಡರುಗಳಿಗೆ ಸ್ವಂತಂತ್ರ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಕೊಟ್ಟರು. ಯುದ್ಧದಿಂದ ಆರ್ಥಿಕ ಹೊರೆ, ಹೊರ ದೇಶಗಳಿಂದ ಆರ್ಥಿಕ ದಿಗ್ಭಂಧನ, ಕಡಿಮೆ ಆಹಾರ ಉತ್ಪಾದನೆ ಮುಂತಾದ ಸಮಸ್ಯೆಗಳ ಕುರಿತಾಗಿ ವಿರೋಧಿಗಳು ಗುಲ್ಲೆಬ್ಬಿಸಿದರೆ, ಇಡೀ ದೇಶಕ್ಕೆ ಒಪ್ಪತ್ತು ಊಟ ಮಾಡುವಂತೆ ಕರೆಕೊಟ್ಟು ಅದನ್ನು ಅವರು ಅಕ್ಷರಶಃ ಪಾಲಿಸಿದರು.
ರೈತರೇ ಹೆಚ್ಚು ಹೆಚ್ಚು ಧಾನ್ಯ ಬೆಳೆಯಿರಿ, ನಮ್ಮ ಆಹಾರ ನಮ್ಮಲ್ಲೇ ಉತ್ಪಾದನೆಯಾಗಲಿ ಎಂದು ಹಸಿರು ಕ್ರಾಂತಿಗೆ ಶ್ರೀಕಾರ ಹಾಕಿದರು. ಸೈನಿಕರೇ ದೇಶದ ಸಮಗ್ರತೆಯ ಮೇಲೆ ಆಕ್ರಮಣ ಮಾಡಿದವರ ಬಿಡಬೇಡಿ, ಅನ್ನದಾತ ರೈತರೇ ಬೇರೆ ದೇಶದ ಮುಂದೆ ಆಹಾರಕ್ಕಾಗಿ ಬಿಕ್ಷೆ ಬೇಡದಂತೆ ಮಾಡಿ, ಹೆಚ್ಚು ಆಹಾರ ಧಾನ್ಯ ಉತ್ಪಾದಿಸಿರಿ ‘ಜೈ ಜವಾನ್ ಜೈ ಕಿಸಾನ್’ ಎಂದು ಘೋಸಿಸಿದರು. ಪರಿಣಾಮ ಪಾಕಿಸ್ತಾನದ ವಿರುದ್ಧ ನಮ್ಮ ದೇಶ ವಿರೋಚಿತ ವಿಜಯ ಪತಾಕೆ ಹಾರಿಸಿತು, ನೆಹರು 18 ವರ್ಷಗಳಲ್ಲಿ ಮಾಡದನ್ನು ಶಾಸ್ತ್ರೀ 18 ತಿಂಗಳಲ್ಲೇ ಮಾಡಿ ತೋರಿಸಿದ್ದರು.
ಸ್ವಂತ ಗ್ರಹವಿಲ್ಲದ ಗ್ರಹಮಂತ್ರಿ, ಮೌಲ್ಯಕ್ಕೆ ಮಿಡಿವ ಹೃದಯ
ಅವರಿಗೆ ಇರಲಿಕ್ಕೊಂದು ಸ್ವಂತ ಮನೆ ಇರಲಿಲ್ಲಾ, ಅಲಹಾಬಾದನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಮುಂದೆ ಮನೆಯ ಮಾಲಿಕ ಅದನ್ನು ಬೇರೆಯವರಿಗೆ ಬಾಡಿಗೆ ನೀಡಿದ. ಅವರು ದೇಶದ ಗ್ರಹಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ಜನ ಅವರಿಗೆ ಗ್ರಹವಿಲ್ಲದ ಗ್ರಹಮಂತ್ರಿ ಎನ್ನುತ್ತಿದ್ದರು. ಮುಂದೆ ಅವರು ಆ ಹುದ್ದೆಗೆ ರಾಜೀನಾಮೆ ಕೊಟ್ಟಾಗ, ಅಂದೇ ಮನೆ ಖಾಲಿ ಮಾಡಲು ತೀರ್ಮಾನಿಸಿದಾಗ ಸ್ವಂತಕ್ಕಲ್ಲ, ಬಾಡಿಗೆ ಮನೆಯೂ ಇರಲಿಲ್ಲ. 1956 ರಲ್ಲಿ ತಮಿಳುನಾಡಿನಲ್ಲಿ ಅರಿಯಾಲೂರು ಬಳಿ, ಘೋರ ರೇಲ್ವೆ ಅಪಘಾತ ಸಂಭವಿಸಿ 144 ಜನ ಮೃತ ಪಟ್ಟರು, ಅದಕ್ಕಿಂತ ಮೊದಲು ಆಂಧ್ರದ ಮೆಹಬೂಬ್ ನಗರದ ಬಳಿ ಸಂಭವಿಸಿದ ಅಪಘಾತದಲ್ಲಿ 112 ಜನ ಅಸುನೀಗಿದ್ದರು. ಆಗ ರೇಲ್ವೆ ಮಂತ್ರಿಯಾಗಿದ್ದ ಶಾಸ್ತ್ರೀಜಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಕಾಲಿಕ ಸಾವು, ದೇಶಕ್ಕೆ ಭರಿಸಲಾಗದ ನಷ್ಟ
ಪಾಕಿಸ್ತಾನವನ್ನು ಸಮರ್ಥವಾಗಿ ಸದೆಬಡೆದು ಮರಳಿ ನಮ್ಮ ಭಾಗ ಪಡೆದ ಶಾಸ್ತ್ರೀಜಿಯವರು ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು, ತಾಷ್ಕೆಂಟಿನಲ್ಲಿ ಪಾಕಿಸ್ತಾನಕ್ಕೆ ಶಾಂತಿ ಹಸ್ತ ಚಾಚಬೇಕಾಗಿ ಬಂತು. ವಿಧಿಯಾಟವೇ ಬೇರೆಯಿತ್ತು. ಒಪ್ಪಂದದ ನಂತರ, ತಾಷ್ಕೆಂಟನಲ್ಲಿ ಜನೇವರಿ 11, 1966ರಲ್ಲಿ ಶಾಸ್ತ್ರೀಜಿ ಅಕಾಲಿಕವಾಗಿ ನಮ್ಮನ್ನಗಲಿದರು.
ಚಿಕ್ಕ ದೇಹ ದೊಡ್ಡ ಆದರ್ಶ, ಮೆದು ದನಿ ಉಗ್ರ ರಾಷ್ಟ್ರ ಭಕ್ತಿ, ಬಡತನದ ತಾಂಡವದಲ್ಲೂ ಮೊಗದ ತುಂಬಾ ನಗು. ದೇಶದ ಪ್ರಧಾನಿಯಾದರೂ ಸರಳತೆ ನಿಸ್ಪ್ರಹತೆ ಬಿಡದ ವ್ಯಕಿತ್ವ, ಪ್ರಾಮಾಣಿಕತೆಯನ್ನೇ ಜೀವಾಳವಾಗಿಸಿಕೊಂಡು ಬದುಕಿದ, ಯಾವಾಗಲೂ ಗುನುಗುತ್ತಿದ್ದ ‘ಓ ನಾನಕ್ ನನ್ನನ್ನು ಸದಾ ಹುಲ್ಲಿನಂತಿರಿಸು’ ಎಂಬ ವಾಕ್ಯದಂತೆ ಬದುಕಿದ ಶಾಸ್ತ್ರೀಜಿಯವರ ಆದರ್ಶ ಸರ್ವರಿಗೂ ಅನುಕರಣೀಯ.
Comments
ಲಾಲ್ ಬಹದೂರ್ ಅವರ ಬಗ್ಗೆ