ಜಿಜ್ಞಾಸೆಯಲ್ಲಿ ಪತ್ರಿಕೋದ್ಯಮ

ಜಿಜ್ಞಾಸೆಯಲ್ಲಿ ಪತ್ರಿಕೋದ್ಯಮ

ಪತ್ರಿಕೋದ್ಯಮ ಸಾಮಾಜಿಕ ಕ್ಷೇತ್ರವೋ, ವಾಣಿಜ್ಯ ಕ್ಷೇತ್ರವೋ ಎಂಬ ಜಿಜ್ಞಾಸೆ ಇತ್ತೀಚೆಗೆ ಹುಟ್ಟಿಕೊಂಡಿದೆ. ಈ ಮೊದಲು ಪತ್ರಿಕೆಗಳೆಂದರೆ ಸಾಮಾಜಿಕ ಬದ್ಧತೆ ಎಂಬ ಮಾತು ಸಾಮಾನ್ಯವಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ಪತ್ರಿಕೋದ್ಯ ವಾಣಿಜ್ಯೀಕರಣಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಶೇ.50ರಷ್ಟು ಸುದ್ದಿಗಳು ಲಾಭದಾಯಕ ದೃಷ್ಟಿಯಿಂದ ಪರಾಮರ್ಶೆಗೊಳಪಡುತ್ತಿವೆ. ಶೇ.30ರಷ್ಟು ಸುದ್ದಿಗಳು ಓದುಗಳನ್ನು ಗುರಿಯಾಗಿಟ್ಟುಕೊಂಡು ಪ್ರಕಟಗೊಳ್ಳುತ್ತವೆ. ಬಾಕಿ ಉಳಿದ ಶೇ.20ರಷ್ಟು ಸುದ್ದಿಗಳು ಮಾತ್ರ ಸಾಮಾಜಿಕ ಕಳಕಳಿ ಹೊಂದಿರುತ್ತವೆ ಎಂದು ಹಿರಿಯ ಪತ್ರಕರ್ತರೊಬ್ಬರು ಇತ್ತೀಚೆಗೆ ಸಮಾರಂಭವೊಂದರಲ್ಲಿ ಹೇಳಿದರು. ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಬಹುತೇಕ ಲಾಭವನ್ನೇ ಗುರಿಯಾಗಿಟ್ಟುಕೊಂಡು ಸುದ್ದಿಯ ಬೆನ್ನು ಹತ್ತಿವೆ.

24 7 ಚಾನೆಲ್‍ಗಳಂತು ಒಂದು ಸಂಸಾರದ ಕೋಳಿ ಜಗಳವನ್ನು ಬಿದಿ ಜಗಳ ಮಾಡಿ ಇಡೀ ದಿನ ಅದರ ಮೇಲ್ಲೂಂದು ಸಂವಾದ ನಡೆಸುವುದು. ಕಪಟ ಸ್ವಾಮಿಯ ರಾಸಲೀಲೆ ಕುರಿತು ಮೂರು ದಿನ ನಿರಂತರವಾಗಿ ಪ್ರಸಾರ ಮಾಡಿ ಟಿಆರ್‍ಪಿ ಹೆಚ್ಚಾಗಿದೆಯೇ ಎಂದು ಇಣಕುವುದು ಈಗೀನ ಸಾಮಾನ್ಯ ಸ್ಥಿತಿ, ದೃಶ್ಯ ಮಾಧ್ಯಮಕ್ಕೆ ಬರುವವರಿಗೆ ಇರಬೇಕಾದ ಮೊದಲ ಅರ್ಹತೆಯೆಂದರೆ ಹಸಿಬಿಸಿ ವಿಷಯಗಳನ್ನು ಅತೀ ಶೀಘ್ರವಾಗಿ ಕಚೇರಿ ತಲುಪಿಸುವ ಆತುರತೆ.

ಸತ್ಯಾಸತ್ಯತೆ, ಸಾಮಾಜಿಕ ಕಾಳಜಿ ಎಲ್ಲವೂ ಇಲ್ಲಿ ನಗಣ್ಯ. ಪಕ್ಕದ ಮನೆಯ ಗಂಡ ಹೆಂಡತಿ ಜಗಳವನ್ನು ಯಾವುದೋ ಸಂಘಟನೆಯ ನೆರವಿನಿಂದ ಬೀದಿಗೆ ತಂದು ನಿಲ್ಲಿಸಿ ಅಮೋಘ ದೃಶ್ಯಗಳನ್ನು ಸೃಷ್ಟಿಸುವ ಸಾಮಥ್ರ್ಯ ಇದ್ದರೆ ಟಿವಿ ಚಾನೆಲ್‍ಗಳಿಗೆ ಉತ್ತಮ ವರದಿಗಾರರಾಗಲೂ ಸಾಧ್ಯ. ಇದು ಯಾವುದೋ ಒಂದು ಚಾನೆಲ್‍ನ ಧೋರಣೆಯಲ್ಲ, ಬಹುತೇಕ ಚಾಲ್ತಿಯಲ್ಲಿರುವ ಎಲ್ಲ ಮಾಧ್ಯಮಗಳ ಹಣೆ ಬರಹವೂ ಇದೇ ಆಗಿದೆ. ಗಂಡನಿಗೆ ಹೆಂಡತಿ ಜಾಡಿಸಿದರೆ ಅದು ಮುಕ್ಕಾಲು ಗಂಟೆ ಪ್ರಸಾರ ಮಾಡುವ ಅರ್ಹತೆ ಇರುವ ಟೆಪ್. ಇದೇ ಪರಿಸ್ಥಿತಿ ಮುಂದುವರಿದರೆ ಮಾಧ್ಯಮಗಳಿಗೆ ನೆಲೆ ಉಳಿಯುತ್ತದೆಯೇ ಇದು ಈಗ ಕಾಡುತ್ತಿರುವ ಪ್ರಶ್ನೆ.

ಸದ್ಯದ ಪರಿಸ್ಥಿತಿಯಲ್ಲಿ ಪತ್ರಿಕೆಗಳು ಕಾಲು ಭಾಗದಷ್ಟು ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡಿವೆ ಎನ್ನಬಹುದಾದರೂ, ಪ್ರಸಾರ ಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನ ಗಳಿಸಲು ಕೆಲವು ಸಂದರ್ಭದಲ್ಲಿ ಆರೋಗ್ಯಕರ ಮಾರ್ಗವನ್ನು ಮೀರಿರುವ ಉದಾಹರಣೆಯೂ ಇದೆ.

ಇನ್ನೂ ಸಮೂಹ ಮಾಧ್ಯಮಗಳ ಅಂಕಿ ಅಂಶಗಳನ್ನು ವಿಶ್ಲೇಷಿಸುದಾದರೆ ದೇಶದಲ್ಲಿ ಈವರೆಗೆ 82,237 ಪತ್ರಿಕೆಗಳು ನೋಂದಣಿಯಾಗಿವೆ. 515 ಟಿವಿ ಚಾನೆಗಳು ಚಾಲ್ತಿಯಲ್ಲಿವೆ. ಜೊತೆಗೆ ಸುಮಾರು 121 ಮಿಲಿಯನ್ ಜನ ಇಂಟರ್‍ನೆಟ್‍ನಲ್ಲಿ ಪರಸ್ಪರ ಸಂಪರ್ಕದಲ್ಲಿರುವ ಮೂಲಕ ಹೊಸ ಮಾಧ್ಯಮ ಮಾರ್ಗವನ್ನು ಹುಟ್ಟು ಹಾಕಿದ್ದಾರೆ. ಟ್ರಾಯ್‍ನ ಅಂಕಿ ಅಂಶಗಳಂತೆ ದೇಶದಲ್ಲಿ 968 ಮಿಲಿಯನ್ ಜನ ಮೊಬೈಲ್ ಬಳಕೆಯ ಮೂಲಕ ಸಂಪರ್ಕ ಪಡೆದಿದ್ದಾರೆ. ಈ ಮೂಲಕ ದೇಶದಲ್ಲಿ ಸಮೂಹ ಮಾಧ್ಯಮ ಕ್ರಾಂತಿಯೇ ಆಗಿದೆ.

ದೇಶದಲ್ಲಿ ಹಿಂದೊಮ್ಮೆ ಪತ್ರಿಕೆಗಳು ಮಾತ್ರ ಸಂವಹನ ಮಾರ್ಗಗಳಾಗಿದ್ದವು. 1959ರ ಆಗಸ್ಟ್‍ನಲ್ಲಿ ಮೊದಲ ಬಾರಿಗೆ ಟ್ರಾನ್ಸ್‍ಮಿಷನ್ ಸೇವೆ ದಿಲ್ಲಿಯಲ್ಲಿ ಆರಂಭವಾಯಿತು. 1965 ಆಕಾಶವಾಣಿ, 1976ರಲ್ಲಿ ಸಾರ್ವತ್ರಿಕ ಟಿವಿ ಪ್ರಸಾರ ಮುಂಬೈನಲ್ಲಿ ಆರಂಭವಾಯಿತು. 1982ರಲ್ಲಿ ದೂರದರ್ಶನ ದೇಶಾದ್ಯಂತ ವಿಸ್ತರಣೆಗೊಳ್ಳುವ ಮೂಲಕ ಜನರಿಗೆ ಅಂದಿನ ಸುದ್ದಿಯನ್ನು ಅಂದೇ ತಿಳಿಸುವ ವ್ಯವಸ್ಥೆ ಜಾರಿಗೆ ಬಂತು 1991ರಲ್ಲಿ ಆಗಿನ ಪಿ.ವಿ.ನರಸಿಂಹರಾವ್ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ ತೋರಿಸುವ ಮೂಲಕ ದೇಶದಲ್ಲಿ ವಿದೇಶಿ ಚಾನೆಲ್‍ಗಳು ಎಎಚಾಲೂ ಆದವು. ಈಗ 515 ಟಿವಿ ಚಾನೆಲ್‍ಗಳಿವೆ, ಅವುಗಳಲ್ಲಿ 150ಕ್ಕೂ ಹೆಚ್ಚು ಪೇ ಚಾನೆಲ್‍ಗಳು.

ಮೊಬೈಲ್ ಬಳಕೆಯೂ ಅದೇ ರೀತಿ ಬೆಳವಣಿಗೆ ಕಂಡಿದೆ 1995ರ ಆಗಸ್ಟ್ 15ರಂದು ದಿಲ್ಲಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುವ ಮೊಬೈಲ್ ಸೇವೆ ಆರಂಭವಾಯಿತು. ಅನಂತರದ ಮೂರೇ ವರ್ಷದಲ್ಲಿ ಮೊಬೈಲ್ ಸಾಮಾನ್ಯರ ಅಗತ್ಯ ವಸ್ತುವಾಯಿತು. ಇಂದು ದೇಶದಲ್ಲಿ 344 ಲಕ್ಷ ಕೋಟಿ ಬಂಡವಾಳ ಮೊಬೈಲ್ ಕ್ಷೇತ್ರದ ಮೇಲಿದೆ. ಜಗತ್ತಿನಲ್ಲೆ ಮೊಬೈಲ್ ಬಳಕೆಯಲ್ಲಿ ಭಾರತ ಎರಡನೆ ಸ್ಥಾನದಲ್ಲಿದೆ.

ಈಗಾಗಲೇ ಸುದ್ದಿ ಸೇವೆ ಮೊಬೈಲ್ ಬಳಕೆದಾರರಿಗೆ ದೊರೆಯುತ್ತಿದೆ, ಮುಂದಿನ ದಿನಗಳಲ್ಲಿ ಉಚಿತವಾಗಿ ಸುದ್ದಿ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ. ಆಗಾದರೆ ಈಗಿರುವ ಟಿವಿ ಮತ್ತು ಪತ್ರಿಕೆಗಳ ಭವಿಶ್ಯವೆನು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಹಿಂದೊಮ್ಮೆ ಟಿವಿ ಚಾನೆಲ್‍ಗಳು ಲಗ್ಗೆಯಿಟ್ಟಾಗ ಇದೇ ಆತಂಕ ಎದುರಾಗಿತ್ತು. ಆದರೆ, ಅದೆಲ್ಲವನ್ನೂ ಮೀರಿ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ.

ಕಳೆದ 2010-11ನೆ ಸಾಲಿನಲ್ಲಿ ಹೊಸದಾಗಿ 4,853 ಪತ್ರಿಕೆಗಳು ಆರ್‍ಎನ್‍ಐನಲ್ಲಿ ನೋಂದಣಿಯಾಗಿವೆ. ಇದು ಕಳೆದ ವರ್ಷಕ್ಕಿಂತಲೂ ಶೇ.6.25ರಷ್ಟು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಒಟ್ಟು 82,237 ಪತ್ರಿಕೆಗಳಲ್ಲಿ ಹಿಂದಿ ಭಾಷೆಯಲ್ಲಿ 322,793 ಪತ್ರಿಕೆಗಳು ಪ್ರಕಟಗೊಳ್ಳುತ್ತಿವೆ.

ಪ್ರಸರಣ ಸಂಖ್ಯೆಯಲ್ಲೂ ಹಿಂದಿ ಪತ್ರಿಕೆಗಳು ಮೊದಲನೆ ಸ್ಥಾನದಲ್ಲಿವೆ. ಕಳೆದ ವರ್ಷ 30,88,16,563 ಪತ್ರಿಕೆಗಳು  ಮಾರಾಟವಾಗಿದ್ದರೆ ಈ ವರ್ಷ ಅದು 32,92,04,841ಕ್ಕೇರಿದೆ. ಹಿಂದಿ ಪತ್ರಿಕೆಗಳು 15,54,94,770, ಇಂಗ್ಲಿಷ್ 5,53,70,184, ಉರ್ದು ಪತ್ರಿಕೆಗಳು 2,16,39,230 ಪ್ರಸಾರ ಸಂಖ್ಯೆಯನ್ನು ಹೊಂದಿವೆ.

ಹಿಂದಿಯಲ್ಲಿ 7,910, ಇಂಗ್ಲಿಷ್‍ನಲ್ಲಿ 1406, ಉರ್ದುವಿನಲ್ಲಿ 938, ಗುಜರಾತಿಯಲ್ಲಿ 761, ತೆಲುಗಿನಲ್ಲಿ 603, ಮರಾಠಿಯಲ್ಲಿ 521, ಬೆಂಗಾಲಿಯಲ್ಲಿ 472, ತಮಿಳಿನಲ್ಲಿ 272, ಒರಿಯಾದಲ್ಲಿ 245, ಕನ್ನಡದಲ್ಲಿ 200, ಮಲೆಯಾಳಂನಲ್ಲಿ 192 ಪತ್ರಿಕೆಗಳು ಪ್ರರಟವಾಗುತ್ತಿವೆ.

ದೇಶದಲ್ಲಿ 2011ನೆ ಸಾಲಿನ ಜನಗಣತಿಯಂತೆ 1.21 ಬಿಲಿಯನ್ ಜನರಿದ್ದಾರೆ, ಅವರಲ್ಲಿ 778 ಮಿಲಿಯನ್ ಜನ ಅಕ್ಷರಸ್ಥರಿದ್ದಾರೆ. ಇವರಲ್ಲಿ ಆನ್‍ಲೈನ್ ಸಂಪರ್ಕ ಮಾಧ್ಯಮವನ್ನು ಅಲವಂಭಿಸಿರುವವ ಸಂಖ್ಯೆ ಶೇ.8.2ರಷ್ಟು ಅಂದರೆ 63 ಮಿಲಿಯನ್ ಜನ.

ಒಟ್ಟಾರೆ ದೇಶದ ನಾಲ್ಕನೆ ಅಂಗವೆಂದು ಪರಿಗಣಿಸಿರುವ ಮಾಧ್ಯಮ ಕ್ಷೇತ್ರ ಯಾವುದೇ ಅಪಾಯವಿಲ್ಲದೆ ಚಿರಾಯುವಾಗಿರುತ್ತದೆ ಎಂಬುದು ಈ ಅಂಕಿಅಂಶಗಳು ಸಾಬೀತು ಪಡಿಸುತ್ತವೆ. ಆದರೆ ಇಷ್ಟಕ್ಕೆ ಸಮಾಧಾನ ಪಟ್ಟುಕೊಂಡು ನೆಮ್ಮದಿಯಾಗಿರುವ ಹಾಗಿಲ್ಲ. ಮೊಬೈಲ್‍ಗಳು, ಟಿವಿ ಚಾನೆಲ್‍ಗಳು, ಇಂಟರ್‍ನೆಟ್‍ಗಳು ಸೀಮಿತ ಸುದ್ದಿಗಳಿಗೆ ಮೀಸಲಾಗಿರುವುದರಿಂದ ಪತ್ರಿಕೋದ್ಯಮಕ್ಕೆ ಇನ್ನೂ ಹಾನಿ ತಟ್ಟಿಲ್ಲ. ಒಂದು ವೇಳೆ ಸಾಮಾಜಿಕ ತಾಣಗಳಲ್ಲೂ ಸಮಗ್ರ ಸುದ್ದಿ ದೊರೆಯುವುದಾದರೆ ಪತ್ರಿಕೆಗಳು ಇಕ್ಕಟ್ಟಿಗೆ ಸಿಲುಕುವುದರಲ್ಲಿ ಅನುಮಾನವಿಲ್ಲ.

ಒಂದು ಕಾಲಕ್ಕೆ ಪತ್ರಕರ್ತ, ಕವಿ ಎಂದರೆ ಹೊಟ್ಟೆ ಪಾಟಿಗೆ ಏನು ಮಾಡಿಕೊಳ್ಳುತ್ತಾನೆ ಎಂದು ಹೆಣ್ಣು ಕೊಡುವವರು ಪ್ರಶ್ನಿಸುವ ಕಾಲವಿತ್ತು. ಪಾಟಿ ಚೀಲ, ಕುರುಚಲು ಗಡ್ಡದ ಪತ್ರಕರ್ತ ಈಗ ಬದಲಾಗಿದ್ದಾನೆ. ಟಿವಿಯೊಂದರ ಆ್ಯಂಕರ್ 40 ಲಕ್ಷ ರೂ.ಗಳ ಬೆಂಚ್ ಕಾರು ಖರೀದಿಸಿ, ಸರ್ಕಾರದಿಂದ ಗನ್‍ಮೆನ್ ಪಡೆದು ವಿಜೃಂಭಿಸುತ್ತಿದ್ದಾನೆ ಎಂದರೆ ಪತ್ರಿಕೋದ್ಯಮ ಯಾವ ಸ್ಥಿತಿಗೆ ತಲುಪಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

ಆದರೆ, ಎಲ್ಲ ಪತ್ರಕರ್ತರೂ ಇದೇ ರೀತಿ ಇರುತ್ತಾರೆ ಎಂದೆನಿಲ್ಲ. ಇಂದಿಗೂ ಮನೆ ಬಾಡಿಗೆ ಕಟ್ಟಲು ಪರದಾಟುವ, ಮಕ್ಕಳ ಶಾಲಾ ಶುಲ್ಕಕ್ಕೆ ಸಾಲ ಮಾಡುವ ಪ್ರಾಮಾಣಿಕ ಪತ್ರಕರ್ತರಿದ್ದಾರೆ. ತಿಂಗಳ ವೇನ ನಂಬಿಕೊಂಡು ವೃತ್ತಿ ದ್ರೊಹ ಬಗೆಯದ ಪತ್ರಕರ್ತರು ಒಂದೆಡೆಯಾದರೆ, ದೀಪವನ್ನು ಸುತ್ತವ ಪತಂಗದಂತೆ ಹಣದ ಬೆನ್ನು ಹತ್ತಿ ಐಶರಾಮಿ ಬದುಕಿಗೆ ಅಂಟಿಕೊಂಡಿರುವ ವರ್ಗ ಇನ್ನೊಂದೆಡೆಯಿದೆ.

ಐಶರಾಮಿ ಬದುಕಿಗೆ ಅಂಟಿಕೊಂಡ ವರ್ಗಕ್ಕೆ ಸಾಮಾಜಿಕ ಕಾಳಜಿಯಾಗಲಿ, ಸ್ವಸ್ತ್ಯ ಸಮಾಜವಾಗಲಿ ಬೇಕಿಲ್ಲ. ಜನ ಟಿವಿ ನೋಡಬೇಕು, ಟಿಆರ್‍ಪಿ ಹೆಚ್ಚಾಗಬೇಕು, ಅದರಿಂದ ಲಾಭವಾಗಬೇಕು ಈ ಧೋರಣೆ ಸಾಮಾನ್ಯವಾಗಿದೆ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳಿಗೂ ಈಗಿನ ಪರಿಸ್ಥಿತಿಯಲ್ಲಿ ಒಂದೊಂದು ಚಾನೆಲ್ ಇದೆ. ಇತ್ತೀಚೆಗೆ ಯಾವುದೋ ಒಂದು ಜಾತಿ ಸಮಾವೇಶದಲ್ಲಿ ಆ ಸಮುದಾಯದ ಮುಖಂಡರೊಬ್ಬರು ಹೇಳುತ್ತಿದ್ದನ್ನು ಕೇಳಿ ನನಗೆ ಮತ್ತಷ್ಟು ದುಗುಡವಾಯಿತು.

ಟಿವಿಗಳು ಅಭಿಪ್ರಾಯ ರೂಢಿಗೊಳಿಸುವ ಪ್ರಬಲ ಮಾಧ್ಯಮಗಳಾಗಿವೆ. ಹಾಹಾಗಿ ನಮ್ಮ ಜನಾಂಗಕ್ಕಾಗಿ ಪ್ರತ್ಯೇಕ ಚಾನೆಲ್ ಸ್ಥಾಪಿಸುವ ಅಗತ್ಯವಿದೆ ಎಂಬುದು ಆ ಮುಖಂಡರ ಮಾತು ಕೇಳಿ ತಲೆಸುತ್ತಿ ಬಿಳುವುದೊಂದೆ ಬಾಕಿ. ಈಗ ಪಕ್ಷಕ್ಕೊಂದು ಚಾನೆಲ್, ನಾಳೆ ಜಾತಿಗೊಂದು ಚಾನೆಲ್, ಅನಂತರ ಉಪ ಪಂಗಡಗಳಿಗೊಂದು ಚಾನೆಲ್ ಹುಟ್ಟಿಕೊಳ್ಳುವ ದಿನ ದೂರವಿಲ್ಲ. ಏಕೆಂದರೆ ಟಿವಿ ಮಾಧ್ಯಮ ಸಮಾಜದಲ್ಲಿ ಘನತೆ ತಂದುಕೊಡುವುದಲ್ಲದೆ, ಸುಲಭವಾಗಿ ದುಡ್ಡನ್ನು ಗಳಿಸಿಕೊಡುತ್ತದೆ. ಪ್ರಸ್ತುತ ಸುಮಾರು 270 ಬಿಲಿಯನ್ ಬಂಡವಾಳ ದೇಶದ ಟಿವಿ ಚಾನೆಲ್‍ಗಳ ಮೇಲಿದೆ.

ಪತ್ರಿಕೆಗಳ ಸ್ಥಾಪನೆಯೂ ವ್ಯವಹಾರಿಕವಾಗಿದೆ. ಒಂದು ಪತ್ರಿಕೆ ಆರಂಭಿಸಿ ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಂಡು ನಂತರ ಆ ಪತ್ರಿಕೆಯನ್ನು ಮಾರಾಟ ಮಾಡಿರುವ ಉದಾಹರಣೆಯಿದೆ. ಅದೇ ರೀತಿ ಪತ್ರಿಕೆಗಳನ್ನು ಹುಟ್ಟು ಹಾಕಿ ಬೆಳೆಸಿ ಲಾಭಕ್ಕೆ ಮಾರಾಟ ಮಾಡಿಕೊಳ್ಳುವ ವ್ಯವಹಾರ ರಾಜ್ಯದಲ್ಲಿ ಹೆಚ್ಚಾಗುತ್ತಿದೆ.

ಮಾಧ್ಯಮಗಳ ಗಟ್ಟಿ ಮನಸ್ಸು ಮಾಡಿ ಸಾಮಾಜಿಕ ಕಾಳಜಿಯ ಪರ ನಿಂತರೆ ಸ್ವಸ್ತ ಸಮಾಜ ನಿರ್ಮಾಣ ಕಷ್ಟ ಸಾಧ್ಯವೆನ್ನಲ್ಲ. ಆದರೆ, ಅಂತಹ ವಾತಾರವಣ ಸಾಧ್ಯವಿಲ್ಲ. ಟವಿಗಳು ಟಿಆರ್‍ಪಿಗೆ ಹಪಾಹಪಿಸಿದರೆ, ಪತ್ರಿಕೆಗಳು ಜಾಹಿರಾತಿಗೆ ದುಡಿಯುತ್ತಿವೆ.

Comments

Submitted by H A Patil Fri, 10/05/2012 - 11:51

ಮಾನ್ಯರೆ ವಂದನೆಗಳು " ಜಿಜ್ಞಾಸೆಯಲ್ಲಿ ಪತ್ರಿಕೋದ್ಯಮ " ಲೇಖನ ಚೆನ್ನಾಗಿ ಅಂಕಿ ಅಂಶಗಳ ಸಮೇತ ಮೂಡಿ ಬಂದಿದೆ. ತಾವು ವ್ಯಕ್ತ ಪಡಿಸಿದ ಅಭಿಪ್ರಾಯಗಳು ಸತ್ಯಸ್ಯ ಸತ್ಯ, ಅದರೆ ಕನ್ನಡ ಪತ್ರಿಕೋದ್ಯಮದ ಬಗ್ಗೆ, ಪತ್ರಿಕೆಗಳ ಬಗ್ಗೆ ಇನ್ನೂ ವಿಶದವಾಗಿ ಬರೆಯ ಬಹುದಿತ್ತು ಎಂದು ನನ್ನ ಅನಿಸಿಕೆ. ಉತ್ತಮ ಲೇಖನ ನೀಡಿದ್ದೀರಿ ಧನ್ಯವಾದಗಳು.