ವ್ಯೂಹ(ಪತ್ತೇದಾರಿ ಕಾದಂಬರಿ)-ಭಾಗ-9-(ಕೊನೆಯ ಭಾಗ ಸಂಪೂರ್ಣ)

ವ್ಯೂಹ(ಪತ್ತೇದಾರಿ ಕಾದಂಬರಿ)-ಭಾಗ-9-(ಕೊನೆಯ ಭಾಗ ಸಂಪೂರ್ಣ)

ರಘು ಕೊಲೆಗಾರನನ್ನು ಸ್ಟೇಷನ್ ಗೆ ಕರೆ ತಂದು ವಿಚಾರಿಸಿದಾಗ ಆ ವ್ಯಕ್ತಿ ಮನು ಎಂದು ತಿಳಿಯಿತು.ಕೊಲೆಗೆ ಕಾರಣ ಏನೆಂದು ವಿಚಾರಿಸಿದಾಗ ಮನು ಬಾಯಿ ಬಿಡಲಿಲ್ಲ.ಆದ ಕಾರಣ ರಘು ತನ್ನ ಪೋಲಿಸ್ ವರಸೆಯನ್ನು ಬಳಸಿಕೊಂಡು ಮನುವಿನ ಬಾಯಿ ಬಿಡಿಸಬೇಕಾಯಿತು.ಮನುವಿನಿಂದ ತಿಳಿದ ವಿಷಯಗಳು ಏನೆಂದರೆ,ಮನು ಮತ್ತು ಸುಜಾತಳ ಹಾಸ್ಟೆಲಿನ ವಾರ್ಡನ್ ಇಬ್ಬರೂ ಸೇರಿ ವೈಶ್ಯಾವಾಟಿಕೆ ನಡೆಸುತ್ತಿದ್ದರು.ಇದಲ್ಲದೆ ಅವರಿಬ್ಬರೂ ಮಾದಕ ವಸ್ತುಗಳ ಸಾಗಾಣಿಕೆಯಲ್ಲಿ ತೊಡಗಿಕೊಂಡು ಯುವ ಜನತೆಯ ಹಾದಿ ತಪ್ಪಿಸುತ್ತಿದ್ದರು.ಸುಜಾತಳ ಹಾಸ್ಟೆಲಿನ ವಾರ್ಡನ್,ಹಾಸ್ಟೆಲಿನ ಯುವತಿಯರನ್ನು ವೈಶ್ಯಾವಾಟಿಕೆಗೆ ನೂಕಿ ಅದರಿಂದ ಆ ಯುವತಿಯರ ಬಾಳನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತಿದ್ದಳು.ಇದರಲ್ಲಿ ಮನುವೂ ಕೂಡ ಪಾಲುದಾರನಾಗಿದ್ದನು.ಒಂದು ಸಲ ಮನು ಮತ್ತು ಸುಜಾತಳ ಹಾಸ್ಟೆಲಿನ ವಾರ್ಡನ್ ಇಬ್ಬರೂ ಸೇರಿ ಸುಜಾತಳನ್ನೂ ಈ ಜಾಲಕ್ಕೆ ಎಳೆಯಲು ಪ್ರಯತ್ನಿಸಿದಾಗ ಅವಳು ವಿನಯನನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾಳೆ.ಇದನ್ನು ಕೇಳಿದ ವಿನಯ್ ಕುಪಿತಗೊಂಡು ಮನುವಿನ ಹತ್ತಿರ ಜಗಳ ತೆಗೆದಿದ್ದಾನೆ.ಈ ಜಗಳ ವಿಕೋಪಕ್ಕೆ ತಿರುಗಿದಾಗ ಮನು ಹಾಸ್ಟೆಲಿನ ರೂಮಿನಿಂದ ಹೊರಗೆ ಹೋಗಿದ್ದಾನೆ.ವಿನಯ ಅಷ್ಟಕ್ಕೇ ಸುಮ್ಮನಿರದೆ ಮನುವನ್ನು ಹಿಂಬಾಲಿಸಿ ಮತ್ತೆ ಜಗಳ ತೆಗೆದಿದ್ದಾನೆ.ಹಾಗೆ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಿರುಗಿ,ಕಡೆಗೆ ವಿನಯ ಈ ವಿಷಯವನ್ನು ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ತರುವದಾಗಿ ಹೆದರಿಸಿದಾಗ ಮನು ಕೋಪಗೊಂಡು ಅಲ್ಲಿಯೇ ಇದ್ದ ಒಂದು ಕಬ್ಬಿಣದ ರಾಡನ್ನು ತೆಗೆದು ತಲೆಗೆ ಬಲವಾಗಿ ಹೊಡೆದು ವಿನಯನ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಅತ್ಯಂತ ವ್ಯವಸ್ಥಿತವಾಗಿ ಕೊಲೆಯ ಸಾಕ್ಷ್ಯಗಳನ್ನೆಲ್ಲ ನಾಶಪಡಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.ಹಾಗೆಯೇ ಈ ದಂಧೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಭಾಗಿಯಾಗಿದ್ದರಿಂದ ಅಲ್ಲಿನ ಇನಸ್ಪೆಕ್ತರ್ ನಿಂದ ಹಿಡಿದು ಎಲ್ಲರಿಗೂ ಲಂಚ ತಿನ್ನಿಸಿ ಈ ಕೊಲೆಯ ಕೇಸನ್ನು ಮುಚ್ಚಿ  ಹಾಕುವ ಪ್ರಯತ್ನ ಮಾಡಲಾಗಿತ್ತು.ಆದರೆ ರಘು ಈ ತನಿಖೆಯನ್ನು ಕೈಗೆತ್ತಿಕೊಂಡು ವಿಚಾರಣೆ ಪ್ರಾರಂಭಿಸಿದಾಗ ಕೊಲೆಗಾರರಿಗೆ ಭಯ ಪ್ರಾರಂಭವಾಗಿ,ತನಿಖೆಯ ಪ್ರತಿ ಹಂತದಲ್ಲೂ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡತೊಡಗಿದರು.ರಘುವಿನ ಮೇಲೆ ಹಲ್ಲೆ ಮಾಡಿಸಿದ್ದು,ಸುಜಾತಳ ಕೊಲೆ ಮಾಡಿದ್ದು ಮತ್ತು ರಘುವನ್ನು ಅಪಹರಿಸಿದ ವ್ಯಕ್ತಿಯನ್ನು ಕೊಂದಿದ್ದು ಕೂಡ ತಾನೇ ಎಂದು ಮನು ಒಪ್ಪಿಕೊಂಡನು.ರಘು ಅವನ ಹೇಳಿಕೆಗಳನ್ನೆಲ್ಲ ದಾಖಲಿಸಿ ಅವನ ಹತ್ತಿರ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡನು.ಹಾಗೆಯೇ ರಂಗರಾವ್ ಅವರಿಗೆ ಕರೆ ಮಾಡಿ ಕೊಲೆಗಾರ ಸಿಕ್ಕ ವಿಷಯ ವನ್ನು ತಿಳಿಸಿ ಈ ಜಾಲದಲ್ಲಿ ಭಾಗಿಯಾದ ಉಳಿದವರನ್ನು ಬಂಧಿಸಲು ವಾರಂಟ್ ದೊರೆಯುವಂತೆ ಸಹಾಯ ಮಾಡಲು ಕೇಳಿಕೊಂಡನು.ಅದರಂತೆ ವಾರಂಟ್ ಜಾರಿಗೊಳಸಿ ಎಲ್ಲ ಅಪರಾಧಿಗಳನ್ನು ಬಂಧಿಸಲಾಯಿತು.
(ಮುಗಿಯಿತು)
*******************************************************************************

ಎಲ್ಲ ಸಂಪದ ಓದುಗರಿಗೆ ನನ್ನ ಕಿರು ಕಾದಂಬರಿಯನ್ನು ಓದಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.ಈವತ್ತಿಗೆ ಈ ಕಾದಂಬರಿ ಮುಗಿಯಿತು.ಇಲ್ಲಿ ಈ ಕಾದಂಬರಿಯನ್ನು ಬರೆಯಲು ಪ್ರೇರೇಪಿಸಿದ ಕೆಲವು ಘಟನೆಗಳನ್ನು ತಿಳಿಸಲು ಬಯಸುತ್ತೇನೆ.

ನಾನು ಕಾಲೇಜಿನಲ್ಲಿ ಇಂಜಿನೀಯರಿಂಗ್ ಓದುವಾಗ ನನ್ನ ಕೆಲವು ಸಹಪಾಠಿಗಳು(ಉತ್ತರ ಭಾರತದವರು) ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ ಎಂಬುದಾಗಿ ನಾನು ಕೇಳ್ಪಟ್ಟಿದ್ದೆ.ಹಾಗೆಯೇ ಅವರು ವೇಶ್ಯಾವಾಟಿಕೆಯ ದಂಧೆಯಲ್ಲಿ ತೊಡಗಿದ್ದಾರೆ ಎಂಬುದಾಗಿಯೂ ಕೂಡ ಕೇಳ್ಪಟ್ಟಿದ್ದೆ.ಅಂದರೆ ಈ ಎರಡೂ ಸಾಮಾಜಿಕ ಪಿಡುಗುಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಯುವ ಜನತೆಯನ್ನು ಹಾದಿ ತಪ್ಪಿಸುತ್ತಿದೆ ಎಂಬುದು ತಿಳಿದಾಗ ನನಗೆ ತುಂಬಾ ಬೇಸರವಾಯಿತು.ಇದು ಕಾಲೇಜಿನ ಆಡಳಿತ ಮಂಡಳಿಯವರಿಗೆ ಗೊತ್ತಿದ್ದರೂ ಕೂಡ ಅವರು ಜಾಣ ಕುರುಡುತನ ವಹಿಸಿದ್ದುದು ಒಂದು ವಿಪರ್ಯಾಸ.ಈಗಲೂ ಕೂಡ ಪತ್ರಿಕೆಗಳಲ್ಲಿ,ಸುದ್ದಿ ಮಾಧ್ಯಮಗಳಲ್ಲಿ ಕಾಲೇಜು ಯುವತಿಯರ ವೇಶ್ಯಾವಾಟಿಕೆಯ ಬಗ್ಗೆ ನೋಡಿರುತ್ತೇವೆ,ಕೇಳಿರುತ್ತೇವೆ.ಈ ಎಲ್ಲ ಘಟನೆ ಗಳನ್ನೂ ಆಧರಿಸಿ ನನ್ನ ಕಾದಂಬರಿಯನ್ನು ರೂಪಿಸಿದ್ದೇನೆ.ಇನ್ನಾದರು ಕಾಲೇಜು ಆಡಳಿತ ಮಂಡಳಿಗಳು ಮತ್ತು ಪೋಲಿಸ್ ಇಲಾಖೆ ಈ ವಿಷಯಗಳ ಬಗ್ಗೆ ಗಮನ ಹರಿಸಿ ಯುವ ಜನತೆಯ ಭವಿಷ್ಯವನ್ನು ಕಾಪಾಡಬೇಕಾಗಿದೆ.ಇದಲ್ಲದೆ ನನ್ನ ಕಾದಂಬರಿಯಲ್ಲಿ ಲಂಚಾವತಾರದ ಸ್ವರೂಪ ಮತ್ತು ಪೋಲಿಸ್ ಇಲಾಖೆಯಲ್ಲಿನ ಕರ್ತವ್ಯಲೋಪಗಳನ್ನು ತಿಳಿಸಲು ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.

ಇದು ನನ್ನ ಮೊದಲನೆಯ ಕಾದಂಬರಿ.ಇದರಿಂದ ಕೆಲವು ಕಡೆಗಳಲ್ಲಿ ಕಥೆಯ ನಿರೂಪಣೆಯಲ್ಲಿ ತಪ್ಪುಗಳಾಗಿವೆ.ದಯವಿಟ್ಟು ಆ ತಪ್ಪುಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ ನನ್ನ ಬರವಣಿಗೆಯ ಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

**************************************************

ಅಧ್ಯಾಯ-8-ಕ್ಕೆ ಲಿಂಕ್

http://sampada.net/%E0%B2%B5%E0%B3%8D%E0%B2%AF%E0%B3%82%E0%B2%B9%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AF-8