ದೇವ-ಭೂಮಿಯ ಭವ್ಯಸಂಗಮ
ನನ್ನ ಜೀವನವೊಂದು ದೇವರಿತ್ತ ವರವೆಂದು ನಾನು ಭಾವಿಸುತ್ತೇನೆ. ಹಲವಾರು ಕಾರಣಗಳನ್ನು ನಾನಿದಕ್ಕೆ ಕೊಡಬಲ್ಲೆ. ಈಗಿನ ದಿನಗಳಲ್ಲಿ ನಾವು ಬಯಸುವ ಪರಿಸರದಲ್ಲಿಯೇ ಕೆಲಸ ಸಿಗುವುದು ಮತ್ತು ಕೆಲಸವನ್ನು ಮನದಣಿಯೇ ಆಸ್ವಾದಿಸುವುದು ಪೂರ್ವಜನ್ಮದ ಸುಕೃತವಿದ್ದಲ್ಲಿ ಮಾತ್ರ ಸಾಧ್ಯವೆಂಬುದು ನನ್ನ ಅಚಲವಾದ ನಂಬಿಕೆ. ೯೦ ಪ್ರತಿಶತ ಮಂದಿಗೆ ಇದು ಅನುಭವಕ್ಕೆ ಬಂದಿರಬಹುದು. ಉದಾಹರಣೆಗೆ: ಸಮುದ್ರದೊಂದಿಗೆ ಸ್ನೇಹ ಮಾಡಲಿಚ್ಚಿಸಿದವನಿಗೆ ನೌಕಾಪಡೆಯಲ್ಲಿ ಸೈನಿಕನ ಕೆಲಸವೇನೋ ಸಿಕ್ಕರೂ ದೆಹಲಿಯಲ್ಲಿ ಕೇಂದ್ರಕಚೇರಿಯಲ್ಲಿ ಪೋಸ್ಟಿಂಗ್ ಆದರೇನು ಮಾಡುವುದು? ಪರ್ವತಾರೋಹಣದಲ್ಲಿ ಆಸಕ್ತಿಯಿರುವ ವ್ಯಕ್ತಿಗೆ ಗುರಗಾಂವಿನಲ್ಲೆಲ್ಲೋ ಸಾಫ್ಟ್ವೇರ್ ಇಂಜಿನಿಯರ್ರಾಗಿ ಕೆಲಸ ಸಿಕ್ಕರೆ ಹೇಗಿರುವುದು? ಈ ಮಟ್ಟಿಗೆ ನಾನು ಸಂತಸದಿಂದಿರುವ ವ್ಯಕ್ತಿ. ನನಗೆ ಪರ್ವತಗಳು, ವೇಗವಾಗಿ ಹರಿಯುವ ನದಿ, ರುದ್ರರಮಣೀಯವೆನಿಸುವ ಪ್ರಕೃತಿ ಇವೆಲ್ಲವೂ ಅತ್ಯಂತ ಪ್ರೀತಿ. (ಯಾರಿಗಿಷ್ಟವಿಲ್ಲ ಹೇಳಿ) ದೇವರ ದಯೆಯಿಂದ ನಾನು ದೇವಭೂಮಿಯೆಂದೇ ಪ್ರಖ್ಯಾತವಾದ ಉತ್ತರಾಂಚಲದಲ್ಲಿ ವರ್ಷಕ್ಕೆ ಹಲವಾರು ಬಾರಿ ಕೆಲಸದ ಮೇಲೆ ಸಂಚರಿಸುತ್ತೇನೆ.
ದೆಹಲಿಯಿಂದ ಹೊರಟರೆ ರೂರ್ಕಿಯಿಂದ ಉತ್ತರಾಂಚಲ ಪ್ರಾರಂಭವಾಗುವುದು. ಹರಿದ್ವಾರದೊಳಗೆ ಸುತ್ತಾಡಿ ಹೃಷಿಕೇಶವನ್ನು ಎರಡನೆಯ ಮಗ್ಗುಲನ್ನು ಮುಟ್ಟಿದರೆ ಆಯ್ತು! ನಿರಂತರವಾಗಿ ಸಾವಿರಾರು ಬೆಟ್ಟಗಳೇ ಬೆಟ್ಟಗಳು. ಅದೂ ಅಂಥಾ ಇಂಥಾ ಬೆಟ್ಟಗಳಲ್ಲ. ಕೆಳಗೆ ನಿಂತು ತುದಿಯನ್ನು ತಲೆಯೆತ್ತಿ ನೋಡಿದರೂ ಸಾಕು ತಲೆತಿರುಗುವಂತಹ ಅನುಭವವನ್ನುಂಟು ಮಾಡುತ್ತವೆ. ಕೆಳಗೆ ೧೫೦೦೦ ಅಡಿಗಳಕೆಳಗೆ ನೋಡಿದರೆ ಕಿರುಬೆರಳಿನ ಗಾತ್ರದಲ್ಲಿ ಕಾಣುತ್ತಿರುವ ನದಿ! ನದಿಯ ವೇಗವಾದರೂ ಎಷ್ಟು? ಸುಮಾರು ೩೦೦ಕಿಮೀಗೂ ಅಧಿಕ! ಇದರ ಹರಿಯುವಿಕೆಯ ಶಬ್ದ ೨೦೦೦೦ ಅಡಿಯ ಮೇಲೆ ಇರುವ ಪರ್ವತದ ತುದಿಗೂ ಮೊರೆಯುವಷ್ಟು ಕೇಳುತ್ತಿರುತ್ತದೆ. ಜಲಪಾತದ ಪ್ರೇಮಿಗಳಿಗಂತೂ ಉತ್ತರಾಂಚಲವು ಹೇಳಿ ಮಾಡಿಸಿದ ಸ್ಥಳ. ೩೦೦ ಕಿ.ಮೀ ಅಂತರದಲ್ಲಿ ಸಾವಿರಕ್ಕೂ ಹೆಚ್ಚು ಜಲಪಾತಗಳು ಭೋರ್ಗೆರೆಯುವುದನ್ನು ನೋಡಬಹುದು. ಹಾಗೆಯೇ ಮುಂದುವರೆದರೆ ಮುಂದೆಲ್ಲೋ ೫೦೦ ಕಿಲೋಮೀಟರಿನ ನಂತರ ಇರುವ ಹಿಮಾಚ್ಛಾದಿತ ಪರ್ವತಗಳ ಮುದನೀಡುವ ದರ್ಶನ! ಈ ಸಾಲಿನಲ್ಲಿಯೇ ಜಗದ್ವಿಖ್ಯಾತವಾದ ನೀಲಕಂಠಪರ್ವತ, ನಂದಾದೇವಿ ಪರ್ವತ, ನರನಾರಾಯಣ ಪರ್ವತ, ಕೇದಾರೇಶ್ವರ ಹಾಗೆಯೇ ಮುಂದುವರೆಯುತ್ತಾ ಹೋಗುವ ಧೈರ್ಯ (ಹಾಗೆಯೇ ಪ್ರಾಣ) ಇದ್ದಲ್ಲಿ ಕೈಲಾಸಪರ್ವತ ಹಾಗೂ ಎವರೆಸ್ಟ್ ಇವುಗಳ ದರ್ಶನ ಸಹ ಲಭ್ಯ. ಇದನ್ನೆಲ್ಲ ನಾನು ಉತ್ಪ್ರೇಕ್ಷೆಯಿಂದ ಹೇಳುತ್ತಿಲ್ಲ. ಕಣ್ಣಾರೆ ನೋಡಿದವರಿಗೆ ಮಾತ್ರ ಈ ಪರಿಯ ಸೌಂದರ್ಯದ ಪರಾಕಾಷ್ಠೆಯು ಅನುಭವಕ್ಕೆ ಬಂದೀತು. ಸಮಯ ಸಿಕ್ಕಾಗ ನಾನು ದರ್ಶಿಸಿದ, ಆನಂದಿಸಿದ ಸ್ಥಳಗಳ ವಿವರಣೆಯನ್ನು ಕೊಡುತ್ತೇನೆ. ಈ ದಿನ ಒಂದಿಷ್ಟು ಸಮಯ ಸಿಕ್ಕಿದೆ. ಹೃಷಿಕೇಶದಿಂದ ೧೨೫ ಕಿಲೋಮೀಟರು ದೂರದಲ್ಲಿರುವ ದೇವಪ್ರಯಾಗದ ಬಗ್ಗೆ ಒಂದಿಷ್ಟು ನೋಡೋಣ.
ಪ್ರಯಾಗವೆಂದರೆ "ಸಂಗಮ" ಎಂದರ್ಥ. ಎರಡು ನದಿಗಳು ಸಂಗಮಿಸುವ ಸ್ಥಳವನ್ನು ಪ್ರಯಾಗವೆಂದು ಕರೆಯುತ್ತಾರೆ. ಪ್ರತಿಯಿಂದು ಸಂಗಮಕ್ಕೂ ಒಂದೊಂದು ಆಕರ್ಷಕ ಹೆಸರು ಇರುತ್ತದೆ. (ಸಾಧಾರಣವಾಗಿ ನಮಗೆಲ್ಲ ಪರಿಚಯವಿರುವುದು ಅಲಹಾಬಾದ್ ಸಂಗಮ. ಇದಕ್ಕೆ ತ್ರಿವೇಣೀಸಂಗಮವೆಂದು ಹೆಸರು. ಪ್ರಯಾಗರಾಜ್ ಎಂದೂ ಇದನ್ನು ಹೆಸರಿಸುತ್ತಾರೆ.) ದಕ್ಷಿಣದಲ್ಲಿ ಪ್ರಯಾಗದರ್ಶನ ಅತ್ಯಂತ ದುರ್ಲಭವಾದರೆ ಉತ್ತರಾಂಚಲದಲ್ಲಿ ಹೆಜ್ಜೆ ಹೆಜ್ಜೆಗೂ ದರ್ಶನ. ಇರಲಿ, ಈಗ ದೇವಪ್ರಯಾಗದ ಬಗ್ಗೆ ಬರೆಯಬೇಕಿದೆ. ಹೃಷಿಕೇಶದ ನಂತರ ೫೮ನೇ ನಂಬರಿನ ರಾಷ್ಟ್ರೀಯ ಹೆದ್ದಾರಿಯು ಎರಡು ಭಾಗವಾಗುತ್ತದೆ. ಒಂದು ಟೆಹರಿ ಎನ್ನುವ ಜಾಗಕ್ಕೆ ಕರೆದೊಯ್ದರೆ ಇನ್ನೊಂದು ಶ್ರೀನಗರ(ಕಾಶ್ಮೀರದ ಶ್ರೀನಗರವಲ್ಲ) ಎನ್ನುವ ಊರಿಗೆ ಕರೆದೊಯ್ಯುತ್ತದೆ. ಟೆಹರಿಯ ದಾರಿಗುಂಟ ನಡೆದರೆ ನಿಮ್ಮ ಎದುರಾಗಿ ಭಾಗೀರಥಿಯು ಕಿವಿ ಗಡಚಿಕ್ಕುವ ಶಬ್ದ್ರಮಾಡುತ್ತಾ ಹರಿದುಬಂದು ನಿಮ್ಮ ಪಕ್ಕದಿಂದ ನಿಮ್ಮನ್ನು ದಾಟಿ ಓಡಿ ಹೋಗುತ್ತಾಳೆ. ಹಾಗೆಯೆ ಮುಂದುವರೆಯುವ ಸಾಹಸ ಮಾಡಿದರೆ ಭಾಗೀರಥಿ ಹಾಗು ಯಮುನೆಯರ ಉಗಮಸ್ಥಳಗಳಾದ ಯಮುನೋತ್ರಿ ಹಾಗು ಗೋಮುಖವನ್ನು ದರ್ಶಿಸಬಹುದು. (ಸುಮಾರು ೨೦೦ ಕಿ.ಮೀ ತರುವಾಯ) ಇತ್ತ ಶ್ರೀನಗರದ ದಾರಿಯನ್ನು ಹಿಡಿದರೆ ಗಂಗೆಯನ್ನು ನೋಡುತ್ತಾ ದೇವಪ್ರಯಾಗಕ್ಕೆ ಬರುತ್ತೀರಿ. ಇಲ್ಲಿಯೇ ಇರುವುದು ಅಮೋಘವಾದ ಸಂಗಮ. ದೇವಪ್ರಯಾಗದ ಒಂದು ಬದಿಯಿಂದ ಭಾಗೀರಥಿಯು ಕೆಂಬಣ್ಣದಿಂದ ಧಾವಿಸಿದರೆ ಇನ್ನೊಂದು ಬದಿಯಿಂದ ಅಲಕನಂದೆಯು ನೀಲಿಬಣ್ಣದಿಂದ ತುಯ್ದಾಡುತ್ತಾ ಬರುತ್ತಾಳೆ. ಇದ್ದಕ್ಕಿದ್ದಂತೆ ಈರ್ವರೂ ಅತ್ಯಂತ ಸಡಗರದಿಂದ ಒಬ್ಬರನ್ನೊಬ್ಬರು ಆಲಿಂಗಿಸಿಕೊಳ್ಳುತ್ತಾರೆ. ಇಲ್ಲಿಂದ ಮುಂದೆ ಎರಡೂ ನದಿಗಳ ಸಂಗಮಪೂರ್ವದ ಹೆಸರು ಮಾಯವಾಗಿ "ಗಂಗಾ" ಎನ್ನುವ ನಾಮಕರಣವಾಗುವುದು. ಆದರೆ ಸುಮಾರು ದೂರದವರೆಗೆ ಎರಡೂ ನದಿಗಳು ತಮ್ಮ ಬಣ್ಣವನ್ನೇ ಬಿಟ್ಟುಕೊಡುವುದಿಲ್ಲ. ಸಂಗಮಿಸಿದ ನಂತರ ಒಂದೂವರೆ ಮೈಲು ದೂರದವರೆಗೆ ನದಿಯಲ್ಲಿ ಎರಡುಬಗೆಯ ನೀರನ್ನು ನೋಡಬಹುದು. ಅರ್ಧ ನೀಲಿವರ್ಣ ಇನ್ನರ್ಥ ಕೆಂಬಣ್ಣ! ೧೨೫೦೦ ಅಡಿಯಷ್ಟು ಕೆಳಗಿಳಿದು ನೋಡಿದರೆ ಈ ಎರಡೂ ನದಿಗಳ ರಭಸದ ಅರಿವಾಗುವುದಿರಲಿ, ದಂಡೆಯಮೇಲೆ ನಿಲ್ಲುವುದಕ್ಕೂ ಹೆದರಿಕೆಯಾಗುವುದು! ಸಂಗಮದ ಸ್ಥಳಕ್ಕೂ ಕೊಂಚವೇ ಮೊದಲು ಭಾಗೀರಥಿಯಲ್ಲಿ ಗೌತಮಕುಂಡವೂ, ಅಲಕನಂದೆಯಲ್ಲಿ ಅಗಸ್ತ್ಯಕುಂಡವೂ ಇದ್ದರೆ ಸಂಗಮವಾಗುವ ಸ್ಥಳದಲ್ಲಿ ಸುದರ್ಶನಕುಂಡವಿದೆ. (ಕಣ್ಣಿಗೆ ಕಾಣಿಸುವುದಿಲ್ಲ) ಸುದರ್ಶನದಲ್ಲಿ ಶ್ರೀವಿಷ್ಣುವಿನ ಸನ್ನಿಧಾನವಿರುವುದರಿಂದ ಈ ಸಂಗಮದಲ್ಲಿ ಸಕಲದೇವತಾಪರಿವಾರವೇ ನೆರೆದಿರುತ್ತದೆಂದು ಪುರಾಣಗಳು ಹೇಳುತ್ತವೆ. ಈ ಸಂಗಮದ ದಂಡೆಯ ಮೇಲೆ ಆದಿಶಂಕರರು ಸ್ಥಾಪಿಸಿದ ಶ್ರೀರಘುನಾಥನ ದೇವಳವಿದೆ. ಚಳಿಗಾಲದಲ್ಲಿ ಬದರೀನಾಥದ ಅರ್ಚಕ ಸಮೂಹ ಇಲ್ಲಿ ಬೀಡು ಬಿಡುತ್ತದೆ. ಇಲ್ಲಿ ಶ್ರಾದ್ಧಕರ್ಮವನ್ನು ಮಾಡುವುದು ಅತ್ಯಂತ ಶ್ರೇಷ್ಠವೆಂದು ಭಾವಿಸಿರುವ ಭಕ್ತ ಸಮೂಹ ಇಲ್ಲಿ ಯಾವಾಗಲೂ ನೆರೆದಿದ್ದರೆ, ಇತ್ತೀಚೆಗೆ ನ್ಯಾಶನಲ್ ಜಿಯಾಗ್ರಫ್ಹಿ ಹಾಗು ಡಿಸ್ಕವರಿ ಚಾನೆಲ್ಲುಗಳ ಪ್ರಭಾವದಿಂದ ರಿವರ್ ರ್ಯಾಫ್ಟಿಂಗ್ ಮಾಡುವ ಸಾಹಸಿಗಳ ಜಾತ್ರೆ ನಡೆದಿರುತ್ತದೆ. ಒಟ್ಟಿನಲ್ಲಿ ಎಲ್ಲರಿಗೂ ಸಂತಸ ನೀಡುವ ಸ್ಥಳ.
ಇಲ್ಲಿ ದೇವಪ್ರಯಾಗದ ಫೋಟೋ ಸಹ ಇದೆ. ಇದನ್ನು ಕಡಿಮೆ ನೀರಿನ ಪ್ರವಾಹವಿದ್ದಾಗ ತೆಗೆದದ್ದು. ಈ ಪ್ರಯಾಗದ ನಂತರ ಇನ್ನೊಂದು ಆಕರ್ಷಕವಾದ ಮತ್ತು ಪೂಚಂತೇ ಅವರ ಅಭಿಮಾನಿಗಳಿಗೆ ಗೊತ್ತಿರುವ ಪ್ರಯಾಗ ಬರುತ್ತದೆ. ಅದರ ಬಗ್ಗೆ ಇನ್ನೊಮ್ಮೆ.