ಬರುತ್ತಿರಲಿ ಪ್ರಭುಗಳು....
ಎಲ್ಲಿಂದಲೊ ಬಂತು ಸುದ್ದಿ,
ಬರ್‍ತಾರಂತೆ ಪ್ರಭುಗಳು,
ಓಟು, ಸೀಟೂ ಕೇಳಿಕೊಂಡು,
ಬರ್‍ತಾರಂತೆ ಪ್ರಭುಗಳು!
ತಣ್ಣಗಿದ್ದ ಸಣ್ಣ ಹಳ್ಳಿ, ಬಣ್ಣ ಬಳ್ಕೊಂಡು ನಿಂತ್ಕೊಳ್ಳುತ್ತೆ,
ಎಲ್ಲರ್ ಬಾಯಲ್ಲೂ ಒಂದೇ ಮಾತು, ಪ್ರಭುಗಳು ಬರ್‍ತಾರಂತೆ!
ಧೂಳು ತುಂಬಿದ್ ದಾರಿಯೆಲ್ಲ ಡಾಂಬಾರು ಮೆತ್ಕೊಂಡು ಮೆರೀತಾವೆ,
ಇಸ್ಕೂಲ್ಗ್‍ಹೋಗೊ ಹಳ್ಳಿ ಹೈಕ್ಳು, ಓದು ಪಾಠ ಮರೀತಾವೆ!
ಹಳ್ಳಿ ತುಂಬ ಹೊಸ ಮಂದಿ, ನಗ್ತಾರೆ ಗುರ್ತಿರೋರಂತೆ,
ಕೈಕೈ ಮುಗಿದು ಮಾತ್ನಾಡಿಸ್ತಾರೆ, ಪ್ರಭುಗಳ ಚೇಲಗಳಂತೆ!
ಒಡ್ಡರ ಓಣಿ, ಊರಿನ ಬಾವಿ, ಎಲ್ಲ ಕಡೆ ಒಂದೇ ಮಾತು,
ಗುಂಪು ಗುಂಪಾಗಿ ನಿಂತ್ಕೊತಾರೆ, ಪಕ್ಕದೂರಿನ್ ಸಂತೆ ಮರೆತು!
ಅಂತೂ ಇಂತು, ಅವತ್ತೆ ಬಂದ್ರು, ಹತ್ತಾರ್ ಕಾರಲ್ಲಿ ಪ್ರಭುಗಳು,
ಕಾದೂ ಕಾದೂ ಸುಸ್ತಾಗಿದ್ರು ಹಾದಿ ತುಂಬ ಜನಗಳು!
ಮುಕ್ಕಾಲ್ ಗಂಟೆ ಮಾತ್ನಾಡಿದ್ರು ಸರ್ಕಾರದ್ ಯೋಜನೆ ಮೇಲೆ,
ಜನಗಳಿಗೇನೂ ಗೊತ್ತಾಗ್ದಿದ್ರೂ, ಬಿತ್ತು ಚಪ್ಪಾಳೆ ಮೇಲಿಂದ ಮೇಲೆ!
ಕುಡಿದು, ಕುಣಿದು ಮಲಗಿದ್ ಜನಕ್ಕೆ ಸ್ವರ್ಗಕ್ಕೆ ಮೂರೇ ಗೇಣು,
ದುಡಿದು, ದಣಿದು ಸೊರಗಿದ್ ಜನಕ್ಕೆ ಬೇಡ್ವೆ ಇಂಥ ಮೋಜು?
ಹತ್ತೇ ದಿನದಲ್ಲಿ ಕಿತ್ಕೊಂಡ್‍ಹೋಯ್ತು ರಸ್ತೆಗಂಟ್ಸಿದ್ದ ಟಾರು,
ಒಮ್ಮಿಂದೊಮ್ಮೆಗೆ ತಣ್ಣಗಾಯ್ತು, ಹುಚ್ಚೆದ್ದು ಕುಣೀತಿದ್ದ ಊರು!
ಜೀವಮಾನವೆಲ್ಲ ಕಾದ್ರೂ, ಎಲ್ಲಿ ಬರ್ತಾನೇ ಆ ದ್ಯಾವ್ರು?
ದ್ಯಾವ್ರ್‍ಇಗಿಂತ ಪ್ರಭುಗಳೆ ವಾಸಿ, ಬರ್ತಾರೆ ಐದುವರ್ಷಕ್ಕಾದ್ರು!
ಬರುತ್ತಿರಲಿ ಪ್ರಭುಗಳು, ಬರುತ್ತಿರಲಿ ಪ್ರಭುಗಳು,
ಐದು ವರ್ಷಕ್ಕೊಮ್ಮೆಯಾದ್ರೂ ಬರುತ್ತಿರಲಿ ಪ್ರಭುಗಳು!
(ಗಿರೀಶ್ ಜಮದಗ್ನಿ)