ಮೊಬೈಲ್ ಬಳಕೆಯ ವ್ಯಾಪಕತೆಯ ಲಾಭ ಗಿಟ್ಟಿಸಲು..
ಮೊಬೈಲ್ ಬಳಕೆಯ ವ್ಯಾಪಕತೆಯ ಲಾಭ ಗಿಟ್ಟಿಸಲು..
ಜಗತ್ತಿನಲ್ಲಿ ಏನಿಲ್ಲವೆಂದರೂ ಐದುನೂರು ಕೋಟಿ ಮೊಬೈಲ್ ಬಳಕೆದಾರರಿದ್ದಾರೆ.ಇಷ್ಟು ವ್ಯಾಪಕ ಬಳಕೆಯ ಲಾಭವನ್ನು ಪಡೆಯಲು ಪ್ರಯತ್ನಗಳು ನಡೆದಿವೆ.ಮೊಬೈಲ್ ಮೂಲಕ ಔಷಧವು ಅಸಲಿಯೋ,ನಕಲಿಯೋ ಎನ್ನುವುದನ್ನು ಕಿರುಸಂದೇಶ ಕಳುಹಿಸಿ,ತಿಳಿದುಕೊಳ್ಳಲಾಗುವಂತಹ ಸೇವೆಗಳು,ಮೊಬೈಲ್ ಜನಪ್ರಿಯತೆಯ ಲಾಭ ಪಡೆದು,ಜನಸೇವೆಗೆ ಅನುಕೂಲ ಕಲ್ಪಿಸುತ್ತದೆ.ಹಾಗೆಯೇ ಅಸಂಘಟಿತ ನೌಕರರಿಗೆ ನೌಕರಿ ಲಭ್ಯತೆ ಮತ್ತು ಖಾತರಿ ನೀಡಲು ಮೊಬೈಲ್ ಮೂಲಕ ನೋಂದಾವಣಾ ಸೇವೆಯಂತಹ ಜನಸಾಮಾನ್ಯರಿಗೆ ಉಪಯುಕ್ತವಾಗಬಲ್ಲ ಸೇವೆಗಳು ಇದೀಗ ಬಡವರ ಬಾಳಿನ ನೋವುಅನ್ನು ಕಡಿಮೆ ಮಾಡುತ್ತಿವೆ.ಹಣ ಪಾವತಿಗೆ ಮೊಬೈಲ್ ಬಳಕೆ ಸಾಧ್ಯವಾದ ನಂತರ,ಜನರು ತಮ್ಮ ಸಂಬಳವನ್ನು ಮೊಬೈಲ್ ಮೂಲಕವೇ ಪಡೆದು,ಖರೀದಿ ಮತ್ತು ಮತ್ತೊಬ್ಬನಿಗೆ ಹಣ ಪಾವತಿಗೆ ಮೊಬೈಲ್ ಮೂಲಕವೇ ಸಾಧ್ಯವಾಗಿ,ಹೊಸ ಶಕೆಯೇ ಆರಂಭವಾಗಿದೆ.ಸಮುದಾಯದಲ್ಲಿ ಆರೋಗ್ಯ,ಕೃಷಿ,ಹೈನುಗಾರಿಕೆ,ಪಶುಪಾಲನೆ ಇತ್ಯಾದಿ ವಿಷಯಗಳ ಬಗ್ಗೆ ತಿಳುವಳಿಕೆ ಇದ್ದವರಿಗೆ ಮೊಬೈಲ್ ಒದಗಿಸಿ,ಅವರ ತಿಳುವಳಿಕೆಯ ಲಾಭವನ್ನು ಇತರರೂ ಪಡೆಯಲು ನೆರವಾಗುವ ಜ್ಞಾನಸಮುದಾಯಗಳು ಬೆಳೆಯುತ್ತಿವೆ.ಇನ್ನು ಕೃಷಿಕರು ಮಾರುಕಟ್ತೆ ದರ,ಕೃಷಿಯ ಬಗೆಗೆ ಸಲಹೆ ಸೂಚನೆಯನ್ನು ಪಡೆಯಲು ನೆರವಾಗುವ ಸೇವೆಗಳು ಹಳ್ಳಿಗಾಡಿನ ಜನರಿಗೆ ವರದಾನವಾಗಿವೆ.
---------------
ಪ್ರತಿದಿನ ಒಂದು ಸೆಕೆಂಡು!
ಸೀಸರ್ ಕುರಿಯಾಮ ಎನ್ನುವಾತ ಕಳೆದ ಒಂದೂವರೆ ವರ್ಷದಿಂದ ಒಂದು ಹೊಸ ಯೋಜನೆ ಅನುಷ್ಠಾನಕ್ಕೆ ತಂದಿದ್ದಾನೆ.ಅದರ ಪ್ರಕಾರ,ಆತ ಪ್ರತಿದಿನ ತನ್ನ ಜೀವನ ಅಮೂಲ್ಯ,ಪ್ರಮುಖ ಕ್ಷಣದ ಒಂದು ಸೆಕೆಂಡ್ ವೀಡಿಯೋ ಹಿಡಿದು,ಅದನ್ನು ಜನರ ಜತೆ ವೆಬ್ಸೈಟ್ ಮೂಲಕ ಹಂಚಿಕೊಳ್ಳುತ್ತಿದ್ದಾನೆ.ಇದು ತನ್ನ ಜೀವನದ ಅಮೂಲ್ಯ ಕ್ಷಣಗಳನ್ನು ಒಂದೆಡೆ ದಾಖಲಿಸಲು ಅನುವು ನೀಡಿದೆ ಎಂದಾತ ಈಗ ಸಮಾಧಾನದಿಂದ ಹೇಳುತ್ತಿದ್ದಾನೆ.
-----------------------------------
ಟ್ವಿಟರಿನ ಸಿಇಓ ಕೊಸ್ಟೊಲೋ
ಟ್ವಿಟರಿನ ಸಿಇಓ ಬಗ್ಗೆ ಹೆಚ್ಚು ಜನ ಅರಿತಿಲ್ಲ.ಫೇಸ್ಬುಕ್ ಸಿಇಓ ಜ್ಯುಕರ್ಬರ್ಗ್,ಆಪಲ್ನ ಸ್ಟೀವ್ ಜಾಬ್ ಅಂತೆ ಈತ ಸುದ್ದಿಯಲಿಲ್ಲ.ಟ್ವಿಟರ್ ಸುಮಾರು ಹತ್ತು ಬಿಲಿಯನ್ ದಶಲಕ್ಷ ಡಾಲರು ಬೆಲೆ ಬರುವಂತಾಗಲು ಈತನ ಕಾಣಿಕೆ ಕಡಿಮೆಯೇನಲ್ಲ.ಟ್ವಿಟರ್ ಸಾವಿರದೈನೂರು ಜನರಿಗೆ ಉದ್ಯೋಗ ನೀಡಿದೆ.ಟ್ವಿಟರ್ ಇನ್ನೂ ಸಾರ್ವಜನಿಕರಿಗೆ ತನ್ನ ಶೇರುಗಳನ್ನು ಮಾರಿಲ್ಲ.ಟ್ವಿಟರ್ ತನ್ನ ಇಂಜಿನಿಯರುಗಳು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳಿಗೆ ಅವರಿಗೇ ಹಕ್ಕುಸ್ವಾಮ್ಯವನ್ನು ನೀಡುವ ಹೊಸ ಹಾದಿ ತುಳಿಯುವಲ್ಲಿ ಸಿಇಓ ಡಿಕ್ ಕೊಸ್ಟೊಲೋವಿನ ಪಾತ್ರ ಕಡಿಮೆಯೇನಿಲ್ಲ.ಡಿಕ್ ಬಹು ಚುರುಕಿನಿಂದ ನಿರ್ಣಯ ತೆಗೆದುಕೊಳ್ಳಬಲ್ಲರು.ಕೆಲವೊಮ್ಮೆ ಇವರ ಸಹೋದ್ಯೋಗಿಗಳಿಗೆ,ಇವರು ಇತರ ಅನಿಸಿಕೆಗಳಿಗೆ ಬೆಲೆ ನೀಡದಿರುವ ಭಾವನೆ ಬರುವಷ್ಟು,ಆತ ಬೇಗ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.ಟ್ವಿಟರಿನ ಮೊದಲ ದಿನಗಳಲ್ಲಿ ಹಲವು ತಾಣಗಳು ಅಥವಾ ತಂತ್ರಾಂಶಗಳ ಮೂಲಕ ಟ್ವಿಟರನ್ನು ಸಂಪರ್ಕಿಸಲಾಗುತ್ತಿತ್ತು.ಈಗ ಅವುಗಳಲ್ಲಿ ಹಲವಕ್ಕೆ ಕೊಸ್ಟೊಲೋ ಬೈ ಹೇಳಿರುವ ನಿರ್ಣಯ ಬಹು ವಿವಾಸ್ಪದವೆನಿಸಿದೆ.ಎರಡುಸಾವಿರದ ಆರನೆಯ ಇಸವಿಯಲ್ಲಿ ಟ್ವಿಟರ್ ಆರಂಭವಾಗಿ,ಈಗದು ಆರುವರ್ಷಗಳಲ್ಲಿ ಬಹು ದೊಡ್ಡದಾಗಿ ಬೆಳೆದಿದೆ.
----------------------
ಸಮುದಾಯಗಳ ಮೇಲೆ ಯಾರ ಪ್ರಭಾವ ಹೆಚ್ಚು?
ಸಮುದಾಯಗಳ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಯಾರು ಇತರರನ್ನು ಹೆಚ್ಚು ಪ್ರಭಾವ ಬೀರುತಾರೆ ಎಂದು ತಿಳಿದರೆ,ಅದು ಕೆಲವರಿಗೆ ಹೆಚ್ಚು ಪ್ರಯೋಜನಕಾರಿಯಾಗಬಹುದು.ಈಗ ಮಾರ್ಶಲ್ ಕಿಕ್ಪ್ಯಾಟ್ರಿಕ್ ಅನ್ನುವಾತ ಇಂತಹ ಶೋಧ ಸೇವೆಯನ್ನು ಅಭಿವೃದ್ಧಿ ಪಡಿಸಿದ್ದಾನೆ.ಆತನ ವೆಬ್ಸೇವೆಯು ಒಂದು ಸಾಮಾಜಿಕ ತಾಣದಲ್ಲಿ ಯಾವಾತ ಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿದ್ದಾನೆ ಎನ್ನುವುದನ್ನು ಲೆಕ್ಕ ಹಾಕಬಲ್ಲುದು.ಸಾಮಾನ್ಯವಾಗಿ,ಓರ್ವನನ್ನು ಹೆಚ್ಚು ಜನರು ಹಿಂಬಾಲಿಸಿದರೆ,ಆತನ ಸಂದೇಶಗಳಿಗೆ ಹೆಚ್ಚು ಪ್ರತಿಕ್ರಿಯೆಗಳು ಬಂದರೆ,ಆತನ ಪ್ರಭಾವ ಹೆಚ್ಚು ಎನ್ನುವುದು ಸ್ಪಷ್ಟ.ಈ ಸೇವೆಯನ್ನು ಮಾರ್ಶಲ್ ಇದೀಗ,ನಿಗದಿತ ದರ ವಿಧಿಸಿ,ಕಂಪೆನಿಗಳಿಗೆ ನೀಡಲಾರಂಭಿಸಿದ್ದಾನೆ.
-------------------------
ನಾಲ್ಕು-ಜಿ ಸೇವೆ ಆರಂಭಿಸಲು ಟೆಲಿಕಾಂ ಸೂಚನೆ
ನಾಲ್ಕನೇ ತಲೆಮಾರಿನ ತಂತ್ರಜ್ಞಾನ ಆಧಾರಿತ ಟೆಲಿಕಾಂ ಸೇವೆಯನ್ನು ಆರಂಭಿಸಲು ಏರ್ಸೆಲ್(8),ಏರ್ಟೆಲ್(4),ಇನ್ಫೋಟೆಲ್ ಬ್ರಾಡ್ಬ್ಯಾಂಡ್(22),ತ್ರಿಕೋನಾ ಡಿಜಿಟಲ್(5),ಅಗೆರ್(1),ಕ್ವಾಲಕೋಮ್(1) ವೃತ್ತಗಳಲ್ಲಿ ಲೈಸೆನ್ಸ್ ಪಡೆದಿವೆ.ಸೇವೆ ಆರಂಭಿಸಲು ಐದು ವರ್ಷಗಳ ಸಮಯವಕಾಶವೇನೋ ಕಂಪೆನಿಗಳಿಗೆ ಲಭ್ಯವಿವೆ.ಇದುವರೆಗೆ ಏರ್ಟೆಲ್ ಕೊಲ್ಕತ್ತ ಮತ್ತು ಬೆಂಗಳೂರಲ್ಲಿ ಬಿಟ್ಟರೆ,ಬೇರೆ ಯಾವ ಕಂಪೆನಿಯೂ 4ಜಿ ಸೇವೆಯನ್ನು ಆರಂಬಿಸಿಲ್ಲ.ಹರಾಜಿನ ಮೂಲಕ ಹಂಚಿಕೆಯಾದ ಸ್ಪೆಕ್ಟ್ರಮ್ ಅನ್ನು ಬಳಸಲು ಆರಂಭಿಸುವವರೆಗೆ ಸ್ಪೆಕ್ಟ್ರಂ ಬಳಕೆಶುಲ್ಕವು ಜಾರಿಗೆ ಬಾರದೆ,ಟೆಲಿಕಾಂ ಇಲಾಖೆಯು ನಷ್ಟ ಅನುಭವಿಸುತ್ತದೆ.ಕಲ್ಲಿದ್ದಲು ಗಣಿಗಳ ಲೈಸೆನ್ಸ್ ಪಡೆದ ಕಂಪೆನಿಗಳು ಗಣಿಗಾರಿಕೆ ಆರಂಭಿಸದೆ ಸರಕಾರಕ್ಕಾದ ನಷ್ಟವು ಈಗ ಸುದ್ದಿ ಮಾಡಿರುವ ಹಿನ್ನೆಲೆಯಲ್ಲಿ,ಟೆಲಿಕಾಂ ಇಲಾಖೆಯು,ಕಂಪೆನಿಗಳಿಗೆ ಬಿಸಿ ಮುಟ್ಟಿಸಿ,ಆದಾಯ ಖೋತಾವಾಗುವ ಬಗ್ಗೆ ಕ್ರಮ ಕೈಗೊಂಡಿದೆ.
--------------------------
ಮೂರು ದಿನ ಪ್ರೊಫೆಸರ್ ಮತ್ತೆ ಮೂರು ದಿನ ಇಂಜಿನಿಯರ್
ಈ ಕಿರುಬರಹ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಮತಿ ಪವಾರ್ ಅವರಿಗೆ ಖುಷಿ ಕೊಟ್ಟಿದೆ.ಸೂರ್ಯನಾರಾಯಣ ಅವರು ತಾವು ಕೆಲಸ ಮಾಡುವ ಕಂಪೆನಿ ಟೆಕ್ಸ್ಮೋಟೊ,ಹಾಗೂ ಇದರಲ್ಲಿ ತಾವು ವಿದ್ಯುನ್ಮಂಡಲಗಳ ವಿನ್ಯಾಸದ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.ಅವರ ಮೊಬೈಲ್ ಸಂಖ್ಯೆ 9945569606.
---------------------------------
ಸ್ಟೀವ್ ಜಾಬ್ಸ್ ಅಗಲಿಕೆ:ವರ್ಷಾಚರಣೆ
ಆಪಲ್ ಸಿಇಓ ಆಗಿದ್ದ ಸ್ಟಿವ್ ಜಾಬ್ಸ್ ಅಗಲಿ ಇದೀಗಲೇ ಒಂದು ವರ್ಷ ಕಳೆಯಿತು.ಜನಮನದ ಮೇಲೆ ಹೆನ್ರಿ ಪೋರ್ಡ್,ಎಡಿಸನ್,ಟೆಲ್ಸಾ ಅವರ ಹಾಗೆಯೇ ಪ್ರಭಾವ ಬೀರಿದವರು ಸ್ಟೀವ್ ಜಾಬ್ಸ್ ಅವರು ಬರೇ ಕಂಪ್ಯೂಟರ್ ಅಲ್ಲದೆ ಅನಿಮೇಶನ್,ಸಂಗೀತ,ಟೆಲಿಕಾಮ್ ಇತ್ಯಾದಿ ಕ್ಷೇತ್ರಗಳಲ್ಲೂ ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ.ಆಪಲ್ ಕಂಪೆನಿಯನ್ನು ಸ್ಥಾಪಿಸಿ,ಹೊಸ ತೆರನ ಬಳಕೆದಾರ ಸ್ನೇಹಿ ಕಂಪ್ಯೂಟರ್ ಬಳಕೆಗೆ ನಾಂದಿ ಹೇಳಿ,ತಮ್ಮ ಕಂಪೆನಿಯಿಂದಲೇ ದೂರವಾದವರು ಸ್ಟೀವ್.ಬಳಿಕ ಅನಿಮೇಷನ್ ಬಗ್ಗೆ ಕೆಲಸ ಮಾಡುವಾಗ ಪಿಕ್ಸಾರ್ ಕಂಪೆನಿಯನ್ನು ಆರಂಭಿಸಿದರು.ಮರಳಿ ತವರು ಕಂಪೆನಿ ಸೇರಿ,ಸ್ಟೀವ್ ಅವರು ಐಪೋಡ್ ಮತ್ತು ಐಸ್ಟೋರ್ಸ್ ಮೂಲಕ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ಮೂಡಿಸಿದರು.ಮುಂದೆ ಐಫೋನ್ ಮತ್ತು ಐಪ್ಯಾಡ್ ಮೂಲಕ ಹೊಸ ಶಕೆ ಆರಂಭಿಸಿದ ಸ್ಟೀವ್ ಜಾಬ್ ಬಗ್ಗೆ ಜನರಿಗೆ ಹೆಚ್ಚಿನ ಆಸಕ್ತಿಗೆ ಕಾರಣವೇನು?ಅವರು ಆರಂಭದ ಹಿನ್ನಡೆಗಳಿಂದ ಧೃತಿಗೆಡದೆ ಯಶಸ್ಸನ್ನು ತಮ್ಮದಾಗಿಸಿಕೊಂಡ ವೈಖರಿ,ಜನಮನದ ಮೇಲೆ ಹೆಚ್ಚು ಪ್ರಭಾವ ಬೀರಿರುವುದು ಖಂಡಿತಾ.
-----------------------
UDAYAVANI
EPAPER
------------------------
ಈ ಅಂಕಣ ಬರಹಗಳು http://ashok567.blogspot.comನಲ್ಲೂ ಲಭ್ಯ.
*ಅಶೋಕ್ಕುಮಾರ್ ಎ