"ಹರ್ನಾಳ್ಗಿ' ಮಾಸ್ತರ್ ಕಥಿ
ನಾನು ಒನ್ನೇತ್ತ-ಬಿನ್ನೇತ್ ಎಲ್ಲ ಓದಿದ್ದು ಗೊಂಡಬಾಳಾಗ. (ಇದೇನ ಧೊಡ್ಡ ನ್ಯುಯಾರ್ಕ, ಲಂಡನ್? ಎಲ್ಯದಂತ ಕೇಳ್ತೀರಿ ಹೌದಲ್ಲೊ?) ಇದು ಕೊಪ್ಪಳ ಜಿಲ್ಲಾದಾಗ ಜಿಲ್ಲಾದೂರಿಂದ ೧೦ ಕಿ ಮೀ ದೂರದಾಗದ. ಇದು ಒಂದು ದೀಪ!(ನಾವು ಸಣ್ಣವರಿದ್ದಾಗ "ದ್ವೀಪ' ಅನ್ನೊದಕ್ಕ ಹೀಂಗ ಅಂತದ್ವಿ). ಯಾಕಂದ್ರ ನಮ್ಮೂರಿನ ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳು ಬಂದ ಅಗ್ಯಾವ. ತುಂಗಭದ್ರಾ ಡ್ಯಾಂನ ಹಿನ್ನೀರು ಈ ಕೆಲ್ಸ ಮಾಡ್ಯದ. ಅಲ್ಲಿಂದ ಡೊಂಬ್ರಳ್ಳಿ,ಕಾತರಕಿಗೆಲ್ಲ ಬ್ಯಾಸಗ್ಯಾಗ ನೀರು ಇಳಿದ ಮ್ಯಾಲೆ ಅಷ್ಟ ಹೋಗಬೇಕು.
ನಮಗೊಬ್ಬ ಮಾಸ್ತರ್ ಇದ್ರು. ಅವರು ಮುಸುಲ್ಮಾನ್ ಧರ್ಮದವರು. ಊರಾಗ ಇರೊ ಮೊಸುದ್ಯಾಗ ನಮಾಜ್ ಮಾಡ್ತಿದ್ರು. ಈಗೆಲ್ ಮೈಕನಾಗ "ಅಲ್ಲಾಹೊ...' ಅಂತಾ ಕೂಗ್ತಾರಲ್ಲ ಹಂಗ ಅವರು ಆಗ ಮೈಕ್ ಇಲ್ಲದನ ಇಡೀ ಊರಿಗೆ ಕೇಳಂಗ ಕೂಗ್ತಿದ್ರು. (ನಮ್ಮೂರಾಗ ಆಗ ಕರೆಂಟ ಇರ್ಲಿಲ್ಲ, ಇನ್ನ ಮೈಕಿನ ಸುದ್ಯಂತೂ ಧೂರನ ಉಳಿತು. ) ಅವರು ಹನುಮಂತ್ರಾಯನ ಗುಡ್ಯಾಗಿನ ಇಯತ್ತೆಕ್ಕ ಮಾಸ್ತರ್. ನಮ್ಮ ಸಾಲಿಗೆ ಸ್ವಂತ ಜಾಗ ಇಲ್ಲದ್ದಕ್ಕ ಆ ಗುಡ್ಯಾಗೊಂದಷ್ಟು ಈ ಗಿಡದ್ ಕೆಳಗೊಂದಿಷ್ಟು ತರಗತಿಗಳನ್ನ ನಡಸ್ತಿದ್ರು. ಅವರು ಮಗ್ಗಿ ಕಲ್ಸೊದ್ರಾಗ ಎತ್ತಿದ ಕೈ! ಮುಂದಿಂದ-ಹಿಂದಿಂದ-ನಡುವಿಂದ ಹೆಂಗ ಕೇಳೀದ್ರೂ ಹೇಳ್ಳಿಕ್ಕೆ ಬರ್ತಿದ್ವು -ಆಗ ನಮಗೆ. ಮುಂಜಾನಿಂದ ಸಂಜಿವರಿಗೆ ಮಗ್ಗಿ ಕಲಿಯೊದ ನಮ್ಮ ಕೆಲಸ. ಯಾರ್ನರ ಒಬ್ರನ್ನ "ಹಿರೇಮಣಿ' ಮಾಡಿ ತರಗತಿಯನ್ನ ಅವನ ಇನ್ ಚಾರ್ಜ ಬಿಟ್ಟು ಅವರು ರಾಶಿ ಮಾಡೊ ಕಣದ ಹತ್ರ ಇಲ್ಲ ತ್ವಾಟ-ಪಟ್ಟಿ ಮ್ಯಾಲೆ ಜ್ವಾಳ, ಕಾಯಿಪಲ್ಲೆ ಎತ್ತದಕ್ಕ ಹೋಗ್ತಿದ್ರು. ಮೊಸುದಿ "ಪುಜಾರಿ' ಹೈಸಿಯತ್ತಿನಿಂದ ಅವರಿಗೆ ಈ ಹಕ್ಕು ಪ್ರಾಪ್ತಿಯಾಗಿತ್ತು!(ಇದು ಈಗ್ಗೆ ಅನ್ಯ ಧರ್ಮ ಸಹಿಷ್ಣುತೆಗೆ ಒಂದು ಮಾದರಿಯಾದೀತಲ್ಲವೆ?)
ಈಗಿನ ಮುಖ್ಯ ವಿಷಯ ಏನೆಂದರೆ ಅವರಿಗೆ "ಹರ್ನಾಳಿಗಿ' ಮಾಸ್ತರ್ ಅಂತ ಹಾಕೆ ಹೆಸರು ಬಂತು ಎನ್ನುವುದು. ಅಹಮದ್ ನೋ ಹಮೀದ್ ನೊ ಹೋಗಿ ಹರ್ನಾಳಿಗಿ ಅಗ್ಯದಂತ ತಿಳಕೊಬ್ಯಾಡ್ರಿ . ಅಥವಾ ಅದು ಅವರ ಅಡ್ಡಹೆಸರೂ ಅಲ್ಲ. ಅವರು ನೆಹರು ಶರ್ಟ ತರಹದ ತುಂಬು ತೋಳಿನ ಉದ್ದನೆ ಕುರ್ತಾ ಅದರ ಜೊತೆಗೆ ಬಿಳೀ ಬಣ್ಣದ ಪಾಯ್ಜಾಮ ಹಾಕ್ಕತಿದ್ರು. ಪಾಯ್ಜಾಮದ ಕಾಲುಗಳು ಎಷ್ಟು ಧೊಡ್ಡವಿರ್ತಿದ್ವು ಅಂದ್ರ "ಹರ್ನಾಳ್ಗಿ'ಯಷ್ಟು* ಧೊಡ್ಡವರ್ತಿದ್ವು. ಅದಕ್ಕ ಅವರಿಗೆ ಎಲ್ಲರೂ ಹರ್ನಾಳ್ಗಿ ಮಾಸ್ತರ್ ಅಂತ ಕರೀತಿದ್ರು. ಅವರ ಖರೆ ಹೆಸರು ಈಗಲೂ ಯಾರಿಗೂ ಗೊತ್ತಿಲ್ಲ! ಅವರಿಗೆ ಇನ್ನೊಂದು ಹೆಸರು ಕೂಡ ಇತ್ತು. ಅದೂ ಅಷ್ಟೇ ಚಾಲ್ತಿನಾಗಿತ್ತು. ಅದೇನಂದ್ರ "ಡುಮ್ಮನ್ ಮಾಸ್ತ್ರು' ಅಂತ. ಹೆಸರ ಸೂಚಿಸುವಂಗ ಅವರು ಸ್ವಲ್ಪ ಡುಮ್ಮಕ ಇದ್ರು. ಅದಕ್ಕ ಆ ಹೆಸರು ಬಂದಿತ್ತು. ಇದನ್ನೆಲ್ಲ ಈಗ ನೆನಪು ಮಾಡಿಕೊಂಡ್ರ ಆಗಿನ ಆ ಆರ್ದ್ರತೆ, ಹಳ್ಳಿಗಳಲ್ಲಿ ಕೊಂಕು ಹೆಸರುಗಳನ್ನೂ ಅತ್ಯಂತ ಸಹಜವಾಗಿ ತಮ್ಮವನ್ನಾಗಿ ಮಾಡಿಕೊಳ್ಳುವ ಗುಣ ಕಣ್ಮುಂದೆ ಬರ್ತದ.
ಈಗ ಆ ಮಾಸ್ತರ್ ರೂ ಇಲ್ಲ, ಆ ಹರ್ನಾಳ್ಗಿ ಮನೆಗಳೂ ಇಲ್ಲ. ಬರೀ ನೆನಪಷ್ಟೆ!
*(ಹರ್ನಾಳ್ಗಿ=(ನೀರು) ಹರಿಯುವ ನಳಿಕೆ(?) ಮಣ್ಣಿನ ಮೇಲ್-ಮುದ್ದೆ ಇರುವ ಮನೆಗಳ ಮೇಲೆ ಮಳೆಗಾಲದಲ್ಲಿ ಬಿದ್ದ ನೀರು ಹರಿದು ಹೋಗಲು ಅಲ್ಲಲ್ಲಿ ಮನೆಯ ಮೇಲ್ಛಾವಣಿಯಿಂದ ಹೊರಚಾಚಿದಂತೆ ಇಟ್ಟಿರುವ ಮಣ್ಣಿನಿಂದ ಮಾಡಿದ ಸುಮಾರು ೨-೨ವರೆ ಅಡಿ ಉದ್ದದ, ಕಾಲಡಿ ಅಗಲದ ಬಾಯಿಯ ಕೊಳವೆ).
Comments
ಭಾಳ್ ಚಂದ್ ಬರ್ದಿರ್ರೀ ಅಪ್ಪಾರ.
ಭಾಳ್ ಚಂದ್ ಬರ್ದಿರ್ರೀ ಅಪ್ಪಾರ.
In reply to ಭಾಳ್ ಚಂದ್ ಬರ್ದಿರ್ರೀ ಅಪ್ಪಾರ. by ಶ್ರೀಕಾಂತ
ಈ ಲೇಖನ ಮತ್ತು ಇತರ ನನ್ನ
ಈ ಲೇಖನ ಮತ್ತು ಇತರ ನನ್ನ ಸಂಗ್ರಹದಲ್ಲಿರುವ 'ಆಡಿಯೊ' ಫೈಲಗಳಿಗಾಗಿ: http://bit.ly/kannad...