ಕವಿಕಾಯಚೂಡಾಮಣಿ - ಒಂದು ನೆನಪು

ಕವಿಕಾಯಚೂಡಾಮಣಿ - ಒಂದು ನೆನಪು

ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಗೆ ಬರುತ್ತಿದ್ದ ಒಬ್ಬ ಮಾವನವರು ನನಗೆ ಹೇಗೆ ಮಾವನವರು ಎಂಬುದೇ ಮರೆತುಹೋಗಿದೆ. ದೂರದ ಸಂಬಂಧಿ. ಸಂಬಂಧದಲ್ಲಿ ಮಾವ ಎಂಬುದಕ್ಕಿಂತ ಅವರು ನನ್ನೊಡನೆ ನಡೆದುಕೊಳ್ಳುತ್ತಿದ್ದ ರೀತಿಗೆ ಅವರನ್ನು ಮಾವ ಎಂದು ಕರೆಯತೊಡಗಿದೆ ಎಂದು ಕಾಣುತ್ತದೆ. ಅದಕ್ಕೆ ಯಾರೂ ಅಕ್ಷೇಪಣೆ ಎತ್ತಿರಲಿಲ್ಲ. ಅವರ ಹೆಸರು ಅರಳೆ ಪುಟ್ಟಣ್ಣ ಎಂದು ಎಲ್ಲರೂ ಕರೆಯುತ್ತಿದ್ದುದು. ಆದರೆ ತನ್ನ ಹೆಸರು ಅರಳಿ ಪುಟ್ಣಣ್ಣ ಎಂದು ಎಲ್ಲರನ್ನೂ ಸದಾ ತಿದ್ದುತ್ತಿದ್ದರು. ಅಜಾನುಬಾಹುವಾಗಿದ್ದ ಅವರೊಡನೆ ಯಾರೂ ಜಗಳವಾಡುವ ಧೈರ್ಯ ಮಾಡುತ್ತಿರಲಿಲ್ಲ.
ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ ಹಳೆಗನ್ನಡ ಪದ್ಯ ಉರು ಹೊಡೆಯುವುದನ್ನು ಕೇಳಿ ಅವರು ನನಗೆ ಹೇಳಿದ ವಿಷಯವಿದು. ನೆನಪಿದ್ದಷ್ಟು ವಿವರಿಸುತ್ತೇನೆ.
ಸುಮಾರು ಹದಿಮೂರನೇ ಶತಮಾನದಲ್ಲಿ ರಚಿಸಲಾಯಿತೆನ್ನಲಾದ ಒಂದು ವಿಶಿಷ್ಟ ಕನ್ನಡ ಕೃತಿ ಕವಿಕಾಯಚೂಡಾಮಣಿ. ಕುಗ್ರಾಮವೊಂದರಲ್ಲಿ ಒಂಟಿಯಾಗಿ ವಾಸವಾಗಿರುವ ಒಬ್ಬ ಕುರುಡು ಅಜ್ಜಿಯ ವಿಶಾಲವಾದ ಮನೆಯ ಅಟ್ಟದಲ್ಲಿ ಕವಿಕಾಯಚೂಡಾಮಣಿ ಸಿಕ್ಕತು. ಕಾಗದದ ಮೇಲೆ ಮೂಲದಿಂದ ಮಾಡಿಕೊಂಡ ಪ್ರತಿಯಾಗಿದ್ದು, ಲಭ್ಯವಿರುವ ಏಕಮಾತ್ರ ಪ್ರತಿ. ಸುಮಾರು ೭೦೦ಕ್ಕೂ ಹೆಚ್ಚು ಪದ್ಯಗಳಿದೆ ಎಂದು ಊಹಿಸಲಾಗಿರುವ ಈ ಕೃತಿಯ ಕೇವಲ ೧೦೬ ಪದ್ಯಗಳು ಈಗ ಲಭ್ಯವಿದೆ. ಹೆಚ್ಚು ಜನ ಕನ್ನಡ ವಿದ್ವಾಂಸರಿಗೇ ಇನ್ನೂ ಈ ಕೃತಿಯ ಬಗ್ಗೆ, ಅದರ ಕರ್ತೃವಿನ ಬಗ್ಗೆ ಗೊತ್ತಿರುವಂತಿಲ್ಲ. ಗೊತ್ತಿರುವವರೂ ಈ ಕೃತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಂತೆ ತೋರುವುದಿಲ್ಲ. ಅದಕ್ಕೆ ಬಹುಶಃ ಎರಡು ಕಾರಣಗಳಿವೆ. ಒಂದು - ಕವಿಕಾಯಚೂಡಾಮಣಿ ಯಾವುದೇ ಪುರಾಣವನ್ನಾಗಲಿ, ಹಿಂದಿನ ಕವಿಯ ಬಗ್ಗೆಯಾಗಲಿ ಅಥವಾ ಕಾವ್ಯದ ಪುರ್ನಸೃಷ್ಠಿಯಾಗಲಿ ಅಲ್ಲ. ಎರಡದನೆಯದಾಗಿ - ಕವಿಕಾಯಚೂಡಾಮಣಿ ಕನ್ನಡದಲ್ಲಿದ್ದರೂ ಕೂಡ ಕನ್ನಡ ನಾಡು ನುಡಿ ಬಗ್ಗೆ ಒಂದು ಚೂರೂ ಪ್ರಸ್ತಾಪ ಮಾಡುವುದಿಲ್ಲ.

ಹಾಗಾದರೆ, ಕವಿಕಾಯಚೂಡಾಮಣಿ ಯಾವುದರ ಬಗ್ಗೆ ಚಿಂತಿಸುತ್ತದೆ ಎಂದು ನಿಮಗೆ ಸಹಜವಾಗಿಯೇ ಕುತೂಹಲವಾಗಬಹುದು. ಅದರ ಬಗ್ಗೆಯೂ ವಿವಾದವಿದೆ. ಕೃತಿಯ ಹೆಸರಿನಲ್ಲಿರುವ "ಕವಿಕಾಯ" ಪದವನ್ನು ಹೇಗೆ ಅರ್ಥೈಸುವದೆಂಬುದೇ ಆ ವಿವಾದ. ಏಕೆಂದರೆ ನೇರವಾಗಿ "ಕವಿಯ ಕಾಯ" ಎಂದು ವಿವರಣೆ ಕೊಡಬಹುದಾದರೂ ಅದರಿಂದ ವಿದ್ವಾಂಸರಿಗೆ ಸಮಾಧಾನವಿಲ್ಲ. ಇಲ್ಲಿ ಕವಿಯ ಕಾಯ ಅನ್ನುವುದಕ್ಕಿಂತ ಕವಿಯ ಕಾವ್ಯದ ಕಾಯ ಅಂದರೆ ಕಾವ್ಯದ ಸ್ವರೂಪದ ಬಗ್ಗೆ ಚಿಂತನೆಯಿದೆ ಎಂದು ಕೆಲವು ವಿದ್ವಾಂಸರು ಹೇಳಿದ್ದಾರೆ. ಆದರೆ ಈ ವಾದಕ್ಕೆ ಪುಷ್ಟಿಕೊಡುವಂಥ ಯಾವುದೇ ಸಾಲುಗಳೂ ಕವಿಕಾಯಚೂಡಾಮಣಿಯಲ್ಲಿ ಇಲ್ಲದಿರುವುದರಿಂದ, ಈ ಕೃತಿ ನಿಜವಾಗಿಯೂ ಕಾವ್ಯದ ಬಗ್ಗೆ ಆಗಿರದೆ, ಕವಿಯ ದೇಹವನ್ನು ಕುರಿತದ್ದು ಎಂದು ಹೇಳಬಹುದು. ಈ ಕೆಳಗಿನ ಸಾಲುಗಳನ್ನು ಸ್ವಲ್ಪ ಗಮನಿಸಿ-

೧) ನೀರಲ್ತುಪಾನಕದಿಂಮತ್ತಿನವಸರಕುಪಕಾರಮಕ್ಕು
೨) ಪುಗೆವುಗುಳುವಾಗರಿವಕ್ಕುಅಕಟಕಟಾಪೊಡೆದಧರಸಂಕಟ
೩) ಚಳಿಕಾಲದೋಳ್ಕಾಲ್ವೊಡೆದಪಕಾಲಪ್ರಾಪ್ತವಾಗಲೊರೆಕವಿಗೆ

ಕಡೆಯ ಸಾಲಿನಲ್ಲಿರುವ "ಒರೆಕವಿ" ಎಂಬ ತುಂಬಾ ವಿಶಿಷ್ಟವಾದ ಪ್ರಯೋಗ ಗಮನಿಸಿ. ಒರೆ ಎಂದರೆ ಪದ, ನುಡಿ ಎಂಬ ಅರ್ಥವಿದೆ. ಅಂದರೆ ನುಡಿಯ ಕವಿ ಎಂದಾಯಿತು. ಹಾಗಾದರೆ ನುಡಿಯಲ್ಲದೆ, ಪದವಲ್ಲದೆ ಬೇರೆ ಪದಾರ್ಥಗಳಲ್ಲೂ ಕವಿತ್ವವನ್ನು ತೋರಬಹುದು ಎಂಬ ಸೂಚ್ಯಭಾವ ಈ ಪ್ರಯೋಗದಲ್ಲಿರುವುದು ವಿಶೇಷವಲ್ಲವೆ? ಇದಕ್ಕೂ ವಿದ್ವಾಂಸರು ಹೆಚ್ಚು ಗಮನ ಕೊಡದೆ ಅದೊಂದು ಸಡಿಲ ಪ್ರಯೋಗ ಎಂದು ಪಕ್ಕಕ್ಕೆ ತಳ್ಳಿಬಿಟ್ಟಿರುವಂತಿದೆ. ಕವಿಕಾಯಚೂಡಾಮಣಿ ಕಾವ್ಯದ ಸ್ವರೂಪದ ಬಗ್ಗೆ ಅಲ್ಲದಿದ್ದರೂ ಕವಿಯ ಭೌತಿಕ ದೇಹದ ಬಗ್ಗೆ ಅಪಾರ ಕಾಳಜಿ ಮತ್ತು ಚಿಂತನೆಯನ್ನು ನಡೆಸುತ್ತದೆ. ವಿದ್ವಾಂಸರು ಕೃತಿಯಲ್ಲಿನ ಚಿಂತನ ಮತ್ತು ಅರ್ಥವನ್ನು "ಕಾವ್ಯ ಸ್ವರೂಪದ ಬಗ್ಗೆ" ಎಂದು ತಿರುಗಿಸುವಲ್ಲಿ ಸಫಲರಾಗಿಲ್ಲದ್ದರಿಂದ, ಕವಿಯ ಭೌತಿಕ ದೇಹವನ್ನು ವಿದ್ವಾಂಸರು ತುಚ್ಛವಾಗಿ ಕಾಣುವ ಪ್ರತೀತಿಯಿರುವುದರಿಂದ ಕವಿಕಾಯಚೂಡಾಮಣಿ ಇನ್ನೂ ಹೆಚ್ಚಿನ ಸಂಶೋಧನೆಗೆ ಒಳಗೊಳ್ಳದೆ ಉಳಿದುಬಿಟ್ಟಿರುವುದು ತುಂಬಾ ವಿಷಾದಕಾರಿ.
ಕವಿಕಾಯಚೂಡಾಮಣಿಯ ಭಾಗಗಳು ಕಳೆದು ಹೋದುದಕ್ಕೆ ಅವರು ಹೇಳಿದ ತುಂಬಾ ಕುತೂಹಲಕಾರಿಯಾದ ಕತೆ: ಪ್ರತಿ ಸಿಕ್ಕಿರುವುದು ಒಂದು ಕುರುಡು ಅಜ್ಜಿಯ ಹತ್ತಿರ ಎಂದು ಹೇಳಿದೆನಷ್ಟೆ. ಕಳೆದು ಹೋದ ಭಾಗದ ಬಗ್ಗೆ ಕಿವಿಯೂ ಕೇಳದ ಅಜ್ಜಿಯನ್ನು ಕೂಗಿ ಕೂಗಿ ಕೇಳಿದಾಗ ಅವಳು ಹೇಳಿದ್ದಿಷ್ಟು. ಒಂದು ದಿನ ಸೂರ್ಯ ನೆತ್ತಿಯ ಮೇಲೆ ಉರಿಯುತ್ತಿದ್ದ ನಡು ಹಗಲಂತೆ. ತನ್ನ ಮನೆಯ ಬೇಲಿಯಾಚೆ ನಿಂತಿದ್ದ ಕತ್ತೆಯೊಂದನ್ನು ತನ್ನ ನೆಚ್ಚಿನ ಹಸು ಅಂದುಕೊಂಡಳಂತೆ. ಹುಲ್ಲು ಅಂದುಕೊಂಡು ಕವಿಕಾಯಚೂಡಾಮಣಿಯ ಹಾಳೆಗಳನ್ನು ಅದಕ್ಕೆ ಹರಿದು ತಿನ್ನಿಸಿಬಿಟ್ಟಳಂತೆ. ಅಂದಿನಿಂದ ಆ ಕತ್ತೆ ದಿನವೂ ನಡುಹಗಲು ಆ ಬೇಲಿ ಪಕ್ಕದಲ್ಲಿ ಬಂದು ನಿಂತು ಒದರುತ್ತದೆಯಂತೆ. ಆದರೆ ಅಟ್ಟದಲ್ಲಿದ್ದ ಕವಿಕಾಯಚೂಡಾಮಣಿ ಹುಲ್ಲಿನ ಮೆದೆಗೆ ಹೇಗೆ ಬಂತು ಎಂಬುದು ಇನ್ನೂ ಬಿಡಿಸಲಾಗದ ರಹಸ್ಯವಾಗಿ ಉಳಿದಿದೆಯಂತೆ.
ಇಷ್ಟು ಹೇಳಿ ಅರಳಿ ಪುಟ್ಟಣ್ಣ ನನ್ನತ್ತ ಕಣ್ಣು ಮಿಟುಕಿಸಿ ತುಂಟನಗೆ ನಕ್ಕದ್ದು ಯಾಕೋ ಮನಸ್ಸಿನಲ್ಲಿ ಬಲವಾಗಿ ಬೇರೂರಿ ಬಿಟ್ಟಿದೆ. ಅವರೀಗ ತೀರಿಕೊಂಡಿರುವುದರಿಂದ ಈ ವಿಷಯದಲ್ಲಿ ಹೆಚ್ಚು ವಿವರಗಳು ಗೊತ್ತುಮಾಡಿಕೊಳ್ಳುವುದು ಸಾಧ್ಯವಿಲ್ಲವಾಗಿದೆ.

Rating
No votes yet