ಬುದ್ಧ - ಅಪ್ರಬುದ್ಧ - ಲಕ್ಷ್ಮೀಕಾಂತ ಇಟ್ನಾಳ
ಮಧ್ಯರಾತ್ರಿ ಎದ್ದು ಸದ್ದು ಮಾಡದೇ
ರಾಜಕುವರನೊಬ್ಬ ಬಾಗಿಲನು ತೆರೆದು
ಅರಮನೆಯ ತೊರೆದು ತಿರುಗಿ ನೋಡದೆಯೇ
ನಡೆದ ಜಗದ ಸತ್ಯಕೆ ಹಾತೊರೆದು
ನಮ್ಮೊಂದಿಗಿಹುದು ಚಿರ ಚೇತನವಿಂದೂ
ಬುದ್ಧನಾಗಿ!
ಕಿರೀಟ ಕಿತ್ತೆಸೆದ ಕೌಶಿಕ
ಹೊರಟ ವಿರಾಗಿ ಮಹಾತಪಸಿಗೆ
ನಂಬಿದ ಜನಕೆ ಕಟ್ಟಿ ತ್ರಿಶಂಕು
ಮಂಡಿಯೂರಿದ ಮೇನಕೆ ಮೋಹಕೆ!
ದಿಕ್ಕು ದಿಕ್ಕುಗಳ ಕುಕ್ಕುತ ಮುಕ್ಕುವ
ದಾಪುಗಾಲುಗಳ ದಾಂಡಿಗ ಮನಸಿನ
ಬುದ್ಧನ ನಗುವನು ನಿಲುಕದ ನೀಚರು
ಬದುಕನೆ ಬಗೆವ ಮಾರೀಚರು
ತುತ್ತುಕೂಳಿಗೂ ಹಲುಬುತಲಿರುವ
ತುತ್ತಿನ ಚೀಲದ ಎಲುಬನೂ ಬಿಡದ
ತೆಕ್ಕೆಯ ಮುಕ್ಕಿ ನೆಕ್ಕುವ ತಲುಬಿನ
ವಾಮನ ಹೆಜ್ಜೆಯ ತೋಳಗಳು
ಭ್ರಾಂತಿ ವಾಂಛೆಗಳ ಸಾಚಾ ವೇಷ
ಮೇನಕೆ ಭಿತ್ತಿ ತಲೆಯೊಳ ಸೂಸಿ
ಪರ ಚರ ಸೊತ್ತಿಗೆ ಚಾಚುವ ಮೂತಿ
ಧರಾಶಾಯಿಯದು ಹಸಿರಿನ ಛಾತಿ
ಬೇಲಿಯ ಮೇಯುವ ಕಬಳಿಕೆ ಸಂಚು
ಕುಲಬುಡ ಕಡಿವ ಕಾವಿನ ಹೊಂಚು
ಮುಖವಾಡಗಳ ಸೋಗಿನ ಚುಂಚು
ಮೂರಾಬಟ್ಟೆ ಬದುಕಿನ ಅಂಚು
ನೆತ್ತಿಗೇರಿದ ನಶೆಯಮಲಿನಲಿ
ಮಾನಿನಿ ಮೋಹದ ಸೆರಗಲಿ ಕರಗಿ
ಹೆರವರ ಅನ್ನಕೂ ಕಣ್ಣಿಟ್ಟವರ
ಗೋಸುಂಬೆ ವೇಷದ ಗಿಡಮಂಗಗಳು
ಬುದ್ಧನಿಗೆದುರು ಅರಮನೆಯೆಡೆಗೆ
ಬಿತ್ತುತ ನವ ಮನ್ವಂತರ ವ್ಯಾಖ್ಯಾನ
ಅವರೋಹಣವೋ ಆರೋಹಣವೋ
ಮಂದೆಗೆ ನಿತ್ಯವದೇ ವರ್ತಮಾನ
ಕಾಲವೂ ಕಾದಿದೆ ಅಹಲ್ಯೆಯಾಗಿ
ದಾರಿಯ ಕಣ್ಣು ಶಬರಿಯ ತೆರದಿ
ತುತ್ತಿನ ಕನಸನು ಸಾಕ್ಷೀಭವಿಸಲು
ಬದುಕದು ಮಲಗಿದೆ ಕಣ್ದೆರೆದು
ಒಲವಿನ ಓಘ ಗೊಂದಲ ಗೂಡು
ಪಾಪದ ನಾಲಿಗೆ ಒಪ್ಪದೆ ತೆಪ್ಪಗೆ
ಒಡ್ಡುತ ಅನುದಿನ ಅಗ್ನಿ ಪರೀಕ್ಷೆಗೆ
ಕೋಲಾಟ ಮೇಲಾಟ ಕಾಲೆಳೆವಾಟ
ಮಿಥ್ಯದ ಬೆನ್ನನು ಹತ್ತಿರುವವರು
ನಾಳಿನ ಪುಟದಲಿ ಹೆಸರಿರದವರು
ಅನ್ಯರ ತನ್ನರ ತರಿಯುವ ತಪಸಿನ
ನೆನ್ನೆಯ ನನ್ನಿಯು ಅಪ್ರಬುದ್ಧ!
Comments
ಲಕ್ಮಿಕಾಂತ ಇಟ್ನಾಳ ರವರಿಗೆ
ಲಕ್ಮಿಕಾಂತ ಇಟ್ನಾಳ ರವರಿಗೆ ವಂದನೆಗಳು
" ಬುದ್ಧ ಅಪ್ರಬುದ್ಧ " ಆಳವಾದ ಒಳ ನೋಟಗಳುಳ್ಳ ಒಂದು ಸಶಕ್ತ ಕವನ. ಬುದ್ಧ ಆತ ಸಾಗಿದ ದಾರಿ ಅರಸಿದ ಸತ್ಯ, ಆತನ ಸಾರ್ವಕಾಲಿಕ ಪ್ರಸ್ತುತತೆ ಕುರಿತು ಬಹಳ ಅದ್ಭುತ ವಾಗಿ ಕಟ್ಟಿಕೊಟ್ಟಿದ್ದೀರಿ,ಮೇನಕೆ, ಅಹಲ್ಯೆ ಮತ್ತು ಶಬರಿಯರ ಪಾತ್ರಗಳ ಸಾರವನ್ನು ರೂಪಕಗಳಾಗಿ ಬಹಳ ಸಮರ್ಥವಾಗಿ ಗಳಿಸಿ ಕೊಂಡಿದ್ದೀರಿ, ಧನ್ಯವಾದಗಳು.
In reply to ಲಕ್ಮಿಕಾಂತ ಇಟ್ನಾಳ ರವರಿಗೆ by H A Patil
ಬುದ್ಧ ಅಪ್ರಬುದ್ಧ
ಪ್ರಿಯ ಪಾಟೀಲರವರೇ, ಲಕ್ಷ್ಮೀಕಾಂತ ಇಟ್ನಾಳ ರ ಶುಭ ಮುಂಜಾವು. ಕವನಕ್ಕೆ ಸಮರ್ಥವಾದ ಟಿಪ್ಪಣಿಗೆ ಧನ್ಯವಾದಗಳು ಸರ್.