ಮಾಡು ತಾಯಿ ನೀ ಸಂಹಾರ

ಮಾಡು ತಾಯಿ ನೀ ಸಂಹಾರ

ಮಾಡು ತಾಯಿ ನೀ ಸಂಹಾರ

 

ಹಳ್ಳಿಯಿಂದಲಾ ದಿಲ್ಲಿಯ ತನಕ ಶುಂಭ ನಿಶುಂಭರ ಸರಕಾರ

ಮಾಡು ತಾಯಿ ನೀ ಸಂಹಾರ ||ಪ||

 

ಪಂಚಾಯತಿ ಪುರಸಭೆ ಮೆಂಬರುಗಳ ಆದಾಯವ ನೀ ನೋಡಿಹೆಯಾ ?

ಜಿಲ್ಲಾ ಮಟ್ಟಕು ಮೇಲಿನ ಮಂದಿಯ ಊಹೆಯಾದರೂ ಮಾಡಿಹೆಯಾ ?

ಸರಕಾರಗಳೆನ್ನುವ ಉಧ್ಯಮದಲಿ ಹೂಡಿಕೆದಾರರ ನೀ ನೋಡು

ರಕ್ತಬೀಜರಂತುದಿಸಿದ ಮಂದಿಯ ಈ ಜಗದಿಂದಲೇ ಹೊರದೂಡು   ||೧||

 

ಕೊಳ್ಳೆಗೆ ಶಾಲೆ ದೇವಸ್ಥಾನಗಳೆನ್ನುವ ಭೇದವದಿರದವರು

ಎಲ್ಲೆಡೆ ಒಂದೇ ರೀತಿಯ ಸುಲಿಗೆಯ ಮಾಡುತ ಜೀವನ ಕಳೆವವರು

ಎದೆಸೀಳಿದರೊಂದಕ್ಷರವಿಲ್ಲದ ದಡ್ಡ ಶಿಖಾಮಣಿ ನಾಯಕರು

ಪುಂಡರ ಪಡೆ ಕಟ್ಟುತ ಊರೊಳಗೆ ಚಂಡ ಮುಂಡರಂತಿರುವವರು ||೨||

 

ಪಾಪಿಗಳಿಗೆ ರಕ್ಷಣೆ ನೀಡುವರು ಪಾಪದವರ ಋಣ ಹಿಂಡುವರು

ಮಾಡಬಾರದ ಕಾರ್ಯಕೆ ಬಡವರ ದುಡಿಸಿ ಕೆಡಿಸಿ ಹೆಣ ಕೆಡಗುವರು

ಹಣ ಗಳಿಕೆ ಏನಾದರು ಸರಿಯದು ಎನ್ನುತ ಐಶಾರಾಮದೊಳು

ಇರುವರ ಮದವಡಗಿಸು ನೀ ಬಂದು ಉರುಳಿಸು ಕಾಲದ ಪಾಶದೊಳು ||೩||

 

 

ನೆಲವನು ಜನರನು ವಂಚನೆ ಮಾಡಿ ಮಾಳಿಗೆ ಮನೆಗಳ ಕಟ್ಟಿದರೆ

ಅದು ಸುಖ ಕೊಡದೆಂದರಿವರು ಮುಂದೆ  ಇಂದಿವರನು ನೀ ಮೆಟ್ಟಿದರೆ 

ಕಪಟದ ನಯ ವಂಚಕ ನಾಯಕರನು ಬಿಡಬೇಡ ನೀ ಹಿಡಿ ಕೊಲ್ಲು

ದುರ್ಮತಿ ಹೊಂದಿದ ದುರ್ಜನರಿಂದ ಬಸವಳಿಯದೆ ಮಾತೆಯೆ ಗೆಲ್ಲು ||೪||

 

                                                                                                          - ಸದಾನಂದ

Rating
No votes yet

Comments

Submitted by lpitnal@gmail.com Sat, 10/20/2012 - 09:12

ಸದಾ ಸಮರ್ಥ ರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಕವನ ಇಂದಿನ ದಿನಮಾನದ ದಿನಗಳಿಗೆ ಹಿಡಿದ ಕನ್ನಡಿಯಾಗಿದೆ. ತಮ್ಮ ಆಶಯ ಪೂರ್ತಿಯಾಗಲೆಂದು ಪ್ರಾರ್ಥಣೆ

Submitted by sada samartha Sat, 10/20/2012 - 23:59

In reply to by lpitnal@gmail.com

ಕೆಲವೊಮ್ಮೆ ಪ್ರಾರ್ಥನೆಗಳು ಫಲಿಸುವುದುಂಟು. ಲಕ್ಷ್ಮೀಕಾಂತ ಇಟ್ನಾಳರವರಿಗೆ ಅಭಿಪ್ರಾಯ ತಿಳಿಸಿದ್ದಕ್ಕೆ ವಂದನೆಗಳು. - ಸದಾನಂದ