ದರಕಡಿತ ಮಾರಾಟ, ಜೋಕೆ!
ಹಬ್ಬಗಳು ಬಂದಾಗೆಲ್ಲ, ನಮ್ಮ ಕಣ್ ಸೆಳೆಯುತ್ತವೆ "ದರಕಡಿತ ಮಾರಾಟ"ದ ಫಲಕಗಳು ಹಾಗೂ ಜಾಹೀರಾತುಗಳು. ಅವನ್ನು ನೋಡಿದ್ದೇ ತಡ, ನಮ್ಮಲ್ಲೊಂದು ಆಸೆ ಹುಟ್ಟಿಕೊಳ್ಳುತ್ತದೆ, "ಅಲ್ಲಿ ಕಡಿಮೆ ಬೆಲೆಗೆ ಏನಾದರೂ ಸಿಕ್ಕಿದರೆ ....." ಈ ಆಸೆಯೇ ಗ್ರಾಹಕರ ಶೋಷಣೆಗೆ ಮಾರಾಟಗಾರರ ಗಾಳ.
- "ಶೇಕಡಾ ೫೦ ದರಕಡಿತ ಮಾರಾಟ" ಎಂಬ ದೊಡ್ಡಕ್ಷರಗಳ ಜಾಹೀರಾತು. ಅದರ ಕೆಳಗೆ "ಆಯ್ದ ವಸ್ತುಗಳಿಗೆ ಮಾತ್ರ" ಎಂದು ಸಣ್ಣಕ್ಷರಗಳಲ್ಲಿ ಬರೆದಿರುತ್ತಾರೆ. ಅಂಗಡಿಗೆ ಹೋಗಿ ನೋಡಿದಾಗಲೇ ನಾವು ಬೇಸ್ತು ಬೀಳುತ್ತೇವೆ. ಮೂರ್ನಾಲ್ಕು ವರುಷ ಹಳೆಯದಾದ, ಬಣ್ಣಗೆಟ್ಟ, ಸರಿಯಾಗಿ ಕೆಲಸ ಮಾಡದ ವಸ್ತುಗಳಿಗೆ ಮಾತ್ರ ಶೇಕಡಾ ೫೦ ದರಕಡಿತ ಎನ್ನುತ್ತಾನೆ ಮಾರಾಟಗಾರ.
- "ಶೇಕಡಾ ೮೦ರ ತನಕ ದರಕಡಿತ ಮಾರಾಟ" ಎಂಬ ಜಾಹೀರಾತು ಗ್ರಾಹಕರ ದಾರಿ ತಪ್ಪಿಸುವ ಇನ್ನೊಂದು ತಂತ್ರ. ಕೆಲವೇ ಕಳಪೆ ವಸ್ತುಗಳಿಗೆ ಮಾತ್ರ ಶೇಕಡಾ ೮೦ ದರಕಡಿತ, ಉಳಿದವಕ್ಕೆ ಶೇಕಡಾ ೧೦ ಮಾತ್ರ!
- "ಒಂದು ಖರೀದಿಸಿದರೆ ಇನ್ನೊಂದು ಉಚಿತ" ಮತ್ತು "ರೂಪಾಯಿ ೫೦೦ ಖರೀದಿಗೆ ಉಚಿತ ಬಹುಮಾನ" - ಇವೂ ಗ್ರಾಹಕರನ್ನು ಹೊಂಡಕ್ಕೆ ಬೀಳಿಸುವ ತಂತ್ರಗಳು. ರೂಪಾಯಿ ೯೯೫ರ ಒಂದು ಷರಟು ಖರೀದಿಸಿದ್ದಕ್ಕೆ ಇನ್ನೊಂದು ಷರಟು ಉಚಿತ ಸಿಕ್ಕರೂ, ಸರಾಸರಿ ರೂಪಾಯಿ ೫೦೦ ಬೆಲೆ ತೆತ್ತಂತೆ, ಅಲ್ಲವೇ? ಹಾಗೆಯೇ, ಈ ಉಚಿತ ಬಹುಮಾನ ಒಂದು ಪೆನ್, ಬಾಚಣಿಗೆ, ಕ್ಲಿಪ್ ಅಥವಾ ಕರ್ಚೀಫ್ ಆಗಿರಬಹುದು!
ಇಂತಹ ದಾರಿ ತಪ್ಪಿಸುವ ಮಾರಾಟ ತಂತ್ರಗಳ ವಿರುದ್ಧ ಜಾಗೃತ ಬಳಕೆದಾರರು ಕೋರ್ಟ್ ಮೆಟ್ಟಲೇರಿದ ಹಲವಾರು ನಿದರ್ಶನಗಳಿವೆ. ಇಂತಹ ತಂತ್ರಗಳು "ಅಪ್ರಾಮಾಣಿಕ ವಾಣಿಜ್ಯ ವ್ಯವಹಾರ"ಗಳೆಂದು ಬಳಕೆದಾರರ ಕೋರ್ಟುಗಳು ಅನೇಕ ಪ್ರಕರಣಗಳಲ್ಲಿ ತೀರ್ಪು ನೀಡಿವೆ.
ರಿಯಾಯಿತಿಯ ಆಸೆಗೆ ಬಲಿಯಾಗಿ, ಬಾಳ್ವಿಕೆ ಬಾರದ ಅಥವಾ ಕಳಪೆ ವಸ್ತುಗಳನ್ನು ಖರೀದಿಸುವುದು ಜಾಣತನವಲ್ಲ. ಅದೇ ರೀತಿ, "ದರ ಕಡಿಮೆ" ಎಂಬ ಕಾರಣಕ್ಕಾಗಿ ಅನಗತ್ಯ ವಸ್ತುಗಳನ್ನು ಖರೀದಿಸುವುದೂ ಸರಿಯಲ್ಲ.
ಈಗೊಂದು ಪ್ರಶ್ನೆ: ಸಾಚಾ ದರಕಡಿತ ಮಾರಾಟ ಸಾಧ್ಯವಿಲ್ಲವೇ? ಸಾಧ್ಯವಿದೆ. ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಮಾಡುವ ವರ್ತಕರಿಗೆ, ಉತ್ಪಾದಕರಿಂದ ಕಡಿಮೆ ಬೆಲೆಗೆ ವಸ್ತುಗಳು ಸಿಕ್ಕಿದಾಗ, ಅವನ್ನು ಕಡಿಮೆ ಬೆಲೆಗೆ ಮಾರಲು ಖಂಡಿತ ಸಾಧ್ಯವಿದೆ. ಅದಲ್ಲದೆ, ಖಾದಿ ಭಂಡಾರ, ಕರ್ನಾಟಕ ರೇಷ್ಮೆ ಉದ್ಯಮ ನಿಗಮ, ಪ್ರಿಯದರ್ಶಿನಿ ಹ್ಯಾಂಡ್‍ಲೂಮ್, ನ್ಯಾಷನಲ್ ಟೆಕ್ಸಟೈಲ್ ಕಾರ್ಪೊರೇಷನ್ ಮೊದಲಾದ ಸರಕಾರಿ ಪ್ರಾಯೋಜಿತ ಸಂಸ್ಥೆಗಳ ದರಕಡಿತ ಮಾರಾಟವನ್ನು ನಂಬಬಹುದು.
ಗ್ರಾಹಕರಿಗೆ ಆಸೆ ಹುಟ್ಟಿಸುವ ಇನ್ನೊಂದು ತಂತ್ರ "ವಿನಿಮಯ ಯೋಜನೆ" ಅಂದರೆ "ಎಕ್ಸ್ ಚೇಂಜ್ ಆಫರ್". ಗ್ರಾಹಕರಿಗೆ ಹೊಸ ವಸ್ತು ಮಾರಿ, ವ್ಯಾಪಾರಿಗಳು ಹಳೆಯ ವಸ್ತು ಸ್ವೀಕರಿಸುತ್ತಾರೆ; ಹೊಸವಸ್ತುವಿನ ಬೆಲೆಯಲ್ಲಿ ಸ್ವಲ್ಪ ಕಡಿತ ಮಾಡಿ ಮಾರುತ್ತಾರೆ. ಈ ಹಳೆಯ ಟಿವಿ, ಫ್ರಿಜ್, ಮಿಕ್ಸರ್, ಗ್ಯಾಸ್ ಸ್ಟವ್ ಇವನ್ನೆಲ್ಲ ವ್ಯಾಪಾರಿಗಳು ಅನಂತರ ಏನು ಮಾಡುತ್ತಾರೆ? ಒಂದು ವಿಷಯವಂತೂ ನಿಜ: ಹಳೆಯ ವಸ್ತುಗಳನ್ನು "ಗುಜರಿ" ಎಂದು ಎಸೆಯೋದಿಲ್ಲ. ಬದಲಾಗಿ, ಅವನ್ನು ರಿಪೇರಿ ಮಾಡಿ ಕಡಿಮೆ ಬೆಲೆಗೆ ಪುನಃ ಮಾರುತ್ತಾರೆ. ಯಾಕೆಂದರೆ, ಈ "ಸೆಕೆಂಡ್ ಹ್ಯಾಂಡ್ ಐಟಂ"ಗಳಿಗಾಗಿ ಕಾದಿರುವ ಗ್ರಾಹಕರೂ ಇರುತ್ತಾರೆ.
ಆದ್ದರಿಂದ, ಖರೀದಿಸುವಾಗ ಎಚ್ಚರ. ನಿರಂತರ ಎಚ್ಚರವೇ ಬಳಕೆದಾರರಿಗೆ ರಕ್ಷಣೆ.