ಆಯುಧ ಪೂಜೆ ಹಾಗೂ ವಿಜಯದಶಮಿ
ಆಶ್ವಯುಜ ಮಾಸ ಶುಕ್ಲ ಪಕ್ಷ ಪಾಡ್ಯದಿ0ದ ಶುರುವಾಗುವ ಹಬ್ಬವೇ ನವರಾತ್ರಿ/ದಸರಾ. ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳೂ ವಿಶೇಷ ಸ್ಥಾನ ಪಡೆದುಕೊಂಡಿದೆ. ಈ ಹತ್ತು ದಿನಗಳಲ್ಲಿ ಸ್ನಾನ-ಜಪ-ದಾನಗಳು ಪ್ರಧಾನ ಪಾತ್ರ ವಹಿಸುತ್ತದೆ
"ಆಯುಧ ಪೂಜೆ" ದಸರಾದಲ್ಲಿ ಆಚರಿಸಲ್ಪಡುವ ಒಂದು ಮುಖ್ಯ ಹಬ್ಬ. ಒಂಭತ್ತನೇ ದಿವಸ ಅoದರೆ ನವಮಿಯಂದು ಈ ಹಬ್ಬವನ್ನು ಆಚರಿಸಲ್ಪಡುತ್ತದೆ. ಇದಕ್ಕೆ ಇರುವ ಮತ್ತೊ೦ದು ಹೆಸರು "ಮಹಾನವಮಿ".
ಪಾಂಡವರು ಅಜ್ಞಾತವಾಸವನ್ನು ಮುಗಿಸಿ ಮರಳಿ ಬರುವಾಗ "ಶಮೀ ವೃಕ್ಷ"ದಲ್ಲಿ ಇಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ದಿವಸವಾದ್ದರಿಂದ ಇದಕ್ಕೆ "ಆಯುಧ ಪೂಜೆ" ಎಂಬ ಹೆಸರು ಬಂದಿತು.
ಇದೆ ಪ್ರತೀಕದಂತೆ ರಾಜ ಮಹಾರಾಜರುಗಳು ತಮ್ಮನ್ನು ಸಂರಕ್ಷಿಸುತ್ತಿದ್ದ ಶಸ್ತ್ರಗಳನ್ನು, ಆಯುಧಗಳನ್ನು ಪೂಜೆ ಸಲ್ಲಿಸುತ್ತಿದ್ದರು.
ಪ್ರಸ್ತುತ ಕಾಲದಲ್ಲಿ ಜನಸಾಮಾನ್ಯರು ತಾವು ದಿನಬಳಕೆಯಲ್ಲಿ ಬಳಸುವ ವಸ್ತುಗಳು, ಯಂತ್ರಗಳು, ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ.
ಇದೆ ಸಂದರ್ಭದಲ್ಲಿ "ಶಮೀ ವೃಕ್ಷ"ಕ್ಕೂ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಲ್ಲಿದೆ.
ಆಯುಧ ಪ್ರಾರ್ಥನ -
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ |
ಛುರಿಕೆ ರಕ್ಷಮಾಂ ನಿತ್ಯಂ ಶಾಂತಿಂ ಯಚ್ಚ ನಮೋಸ್ತು ತೇ |
ವಿಜಯ ದಶಮಿ
ಆಶ್ವಯುಜ ಮಾಸ ಶುಕ್ಲ ಪಕ್ಷ ದಶಮಿಯಂದು ಆಚರಿಸುವ ಹಬ್ಬಕ್ಕೆ "ವಿಜಯ ದಶಮಿ" ಎಂದು ಕರೆಯುತ್ತಾರೆ.
ಇದೇ ದಿವಸ ಶ್ರೀಹರಿಯ ಆಜ್ಞೆಯಂತೆ "ವಾಯುದೇವರು" "ಮಧ್ವಾಚಾರ್ಯ"ರಾಗಿ ಅವತರಿಸಿದ ದಿವವಾದ್ದರಿಂದ ಈ ದಿನವನ್ನು "ಮಧ್ವ ಜಯಂತಿ" ಎಂದೂ ಕರೆಯುತ್ತಾರೆ.
ಹಿಂದೂ ಪುರಾಣಗಳ ಪ್ರಕಾರ ವಿಜಯ ದಶಮಿಯ ಮಹತ್ವಗಳು ಈ ಕೆಳಕಂಡಂತೆ ಇವೆ
೧) ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಹನುಮಂತ ಮತ್ತು ಸುಗ್ರೀವರ ನೇತೃತ್ವದ ವಾನರ ಸೈನ್ಯದೊಂದಿಗೆ ಲಂಕೆಗೆ ಹೋಗಿ ಸೀತಾಮಾತೆಯ ರೂಪದಲ್ಲಿದ್ದ ವೇದವತಿಯನ್ನು ಅಪಹರಿಸಿದ್ದ ರಾವಣನನ್ನು ಸಂಹರಿಸಿದ ದಿವಸ. ಇದರ ಪ್ರತೀಕವಾಗಿ ಇಂದೂ ಸಹ ವಿಜಯ ದಶಮಿಯಂದು ಹಲವೆಡೆ ರಾವಣ, ಕುಂಭಕರ್ಣ ಹಾಗು ಮೇಘನಾಥನ ಪ್ರತಿಕೃತಿಗಳನ್ನು ದಹಿಸಿ ಸಂಭ್ರಮಿಸುತ್ತಾರೆ.
೨) ದುರ್ಗಾದೇವಿ/ಚಾಮುಂಡೇಶ್ವರಿ ಇದೇ ದಿವಸ ಮಹಿಷಾಸುರನನ್ನು ಸಂಹರಿಸಿದ ದಿವಸ. ಮಹಿಷನ ರೂಪದಲ್ಲಿದ್ದ ಅಸುರನು ಒಮ್ಮೆ ದೇವಲೋಕಕ್ಕೆ ನುಗ್ಗಿ ಸ್ವರ್ಗಾಧಿಪತಿಯನ್ನು ಮತ್ತು ಇತರೆ ದೇವತೆಗಳಿಗೆ ತೊಂದರೆ ನೀಡುತ್ತಿದ್ದಾಗ ಲಕ್ಷ್ಮಿ ದೇವಿಯು ದುರ್ಗಾದೇವಿ/ ಚಾಮುಂಡೇಶ್ವರಿಯ ಅವತಾರವೆತ್ತಿ ಒಂಭತ್ತು ದಿವಸಗಳ ಕಾಲ ಅವನ ಜೊತೆ ಸೆಣಸಿ ಹತ್ತನೇ ದಿವಸ ಆ ಮಹಿಷನನ್ನು ಮತ್ತು ಅವನ ಜೊತೆ ಇತರ ಅಸುರನನ್ನು ಸಂಹರಿಸಿದ ದಿವಸ. ಆದ್ದರಿಂದ ಈ ದಿವಸವನ್ನು "ವಿಜಯ ದಶಮಿ" ಎಂದು ಆಚರಿಸುತ್ತಾರೆ.
೩) ಅಜ್ಞಾತವಾಸದ ಬಳಿಕ ಪಾಂಡವರು ತಾವು "ಶಮೀ ವೃಕ್ಷ" ದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಮರಳಿ ಪಡೆದು, ವಿರಾಟನಗರದ ಮೇಲೆ ದಂಡೆತ್ತಿ ಬಂದ ಕೌರವರ ವಿರುದ್ಧ ಜಯಗಳಿಸಿದ ದಿವಸ.
ಇದೇ ಸಂದರ್ಭದಲ್ಲಿ ಶಮೀ ವೃಕ್ಷ/ ಬನ್ನಿ ವೃಕ್ಷವನ್ನು ವಿಶೇಷವಾಗಿ ಪೂಜಿಸಲ್ಪಡುತ್ತದೆ. ಶಮೀ ವೃಕ್ಷದ ಎಲೆಗಳನ್ನು ಸಂಪತ್ತಿನ ಪ್ರತೀಕವಾಗಿ ಹಂಚಿಕೊಳ್ಳುತ್ತಾರೆ. ಇದರ ಹಿನ್ನಲೆ ನಮ್ಮನ್ನು ತ್ರೇತಾಯುಗಕ್ಕೆ ಕರೆದೊಯ್ಯುತ್ತದೆ.
ಹಿಂದೆ ತ್ರೇತಾಯುಗದಲ್ಲಿ ಅಯೋಧ್ಯನಗರದಲ್ಲಿ "ಕೌಸ್ತ "ಎಂಬ ಬ್ರಾಹ್ಮಣ ವಿದ್ಯಾರ್ಥಿಯು "ವರಂತನು" ಎಂಬ ಗುರುವಿನ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದನು. ವಿದ್ಯಾಭ್ಯಾಸ ಮುಗಿದ ಬಳಿಕ ಕೌಸ್ತನು ಗುರುವಿನ ಬಳಿ ಬಂದು ಗುರುಗಳೇ ನಾನು ಗುರುದಕ್ಷಿಣೆ ನೀಡಬೇಕು ಎಂದಿದ್ದೇನೆ. ತಾವು ತಮಗೆ ಏನು ಬೇಕು ಎಂದು ತಿಳಿಸಿದರೆ ಅದನ್ನು ತಂದು ಅರ್ಪಿಸುವೆ ಎಂದನು.
ಮೊದಲಿಗೆ ಗುರುಗಳು ನಾನು ಯಾವುದೇ ದಕ್ಷಿಣೆಯನ್ನು ಅಪೇಕ್ಷಿಸದೆ ನಿನಗೆ ವಿದ್ಯಾಭ್ಯಾಸ ನೀಡಿದ್ದೇನೆ. ನನಗೆ ಏನೂ ಬೇಡ ಎಂದರು. ಆದರೆ ಕೌಸ್ತನು ಇಲ್ಲ ತಾವು ಸ್ವೀಕರಿಸಲೇ ಬೇಕು ಎಂದು ಪಟ್ಟು ಹಿಡಿದಾಗ ಅವನಿಗೆ ಬುದ್ಧಿ ಕಲಿಸಲು ಗುರುಗಳು ತನಗೆ ೧೪೦ ಬಂಗಾರದ ನಾಣ್ಯಗಳನ್ನು ನೀಡಬೇಕು ಎಂದು ಕೇಳಿದರು. ತಾವು ಕಲಿಸಿದ ೧೪೦ ವಿಷಯಗಳಿಗೆ ಒಂದೊಂದು ಬಂಗಾರದ ನಾಣ್ಯ ಎಂದು ತಿಳಿಸಿದರು.
ಇದನ್ನು ನಿರೀಕ್ಷಿಸಿರದ ಕೌಸ್ತನು ಕಂಗಾಲಾಗಿ ಶ್ರೀರಾಮಚಂದ್ರನ ಬಳಿ ಬಂದು ನಡೆದ ಸಂಗತಿಯನ್ನು ವಿವರಿಸಿ ತನಗೆ ೧೪೦ ನಾಣ್ಯಗಳು ಬೇಕೆಂದು ಕೇಳಿದನು. ಆಗ ಶ್ರೀರಾಮಚಂದ್ರನು ತನಗೆ ಪ್ರಿಯವಾದ ಶಮೀ ವೃಕ್ಷದ ಬಳಿ ಕೌಸ್ತನಿಗೆ ನಿಂತಿರಲು ಹೇಳಿದನು. ಕೌಸ್ತನು ಮೂರು ದಿವಸಗಳ ಕಾಲ ಅಲ್ಲೇ ನಿಂತಿದ್ದನು. ನಂತರ ಶ್ರೀರಾಮಚಂದ್ರನು ಸಂಪತ್ತಿನ ಅಧಿಪತಿ ಕುಬೇರನಿಗೆ ತಿಳಿಸಿ ಆ ಶಮೀ ವೃಕ್ಷದ ಎಲೆಗಳನ್ನು ಬಂಗಾರದ ನಾಣ್ಯಗಳಾಗಿ ಪರಿವರ್ತಿಸಿದನು.
ಇದರಿಂದ ಸಂತಸಗೊಂಡ ಕೌಸ್ತನು ಗುರುಗಳು ಕೇಳಿದಷ್ಟು ನಾಣ್ಯಗಳನ್ನು ಅವರಿಗೆ ಕೊಟ್ಟು ಮಿಕ್ಕ ನಾಣ್ಯಗಳನ್ನು ದಾನ ಮಾಡಿದನು.
ಅಂದಿನಿಂದ ಶಮೀ/ಬನ್ನಿ ಎಲೆಗಳನ್ನು ಸಂಪತ್ತಿನ ಪ್ರತೀಕವಾಗಿ ಪೂಜಿಸುತ್ತಾರೆ.
"ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ/
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯವಾದಿನೀ"
ಸರ್ವರಿಗೂ ನವರಾತ್ರಿ, ದುರ್ಗಾಷ್ಟಮಿ, ಆಯುಧಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು
ಚಿತ್ರ ಕೃಪೆ - ಅಂತರ್ಜಾಲ
File attachments
Rating
Comments
ಜಯಂತ ರಾಮಾಚಾರ ರವರಿಗೆ ವಂದನೆಗಳು
ಜಯಂತ ರಾಮಾಚಾರ ರವರಿಗೆ ವಂದನೆಗಳು
' ಆಯಧ ಪೂಜೆ ಮತ್ತು ವಿಜಯ ದಶಮಿ ' ಒಂದು ಸಕಾಲಿಕ ಅರ್ಥಪೂರ್ಣ ಲೇಖನ, ಬರಹ ಖುಷಿ ನೀಡಿತು, ಧನ್ಯವಾದಗಳು.
In reply to ಜಯಂತ ರಾಮಾಚಾರ ರವರಿಗೆ ವಂದನೆಗಳು by H A Patil
ಪಾಟೀಲರೇ ತಮ್ಮ ಮೆಚ್ಚುಗೆಗೆ ಅನ೦ತ
ಪಾಟೀಲರೇ ತಮ್ಮ ಮೆಚ್ಚುಗೆಗೆ ಅನ೦ತ ಧನ್ಯವಾದಗಳು. ನವರಾತ್ರಿಯ ಶುಭಾಶಯಗಳು. :)
ಉತ್ತಮ ಲೇಖನ ... ನನಗೆ ಗೊತ್ತಿರುವ
ಉತ್ತಮ ಲೇಖನ ... ನನಗೆ ಗೊತ್ತಿರುವ ಮಟ್ಟಿಗೆ ಆ ಶಿಷ್ಯನ ಹೆಸರು ಕೌತ್ಸ ... ಹಾಗು ಅವನು ಹೋಗುವುದು ರಘುಮಹಾರಾಜನ ಬಳಿಗೆ ಶ್ರೀರಾಮನ ಬಳಿಗಲ್ಲ .... ಆ ವೇಳೆಗೆ ರಘು ಮಹರಾಜನು ಒಂದು ಯಾಗವನ್ನು ಮಾಡಿ ತನ್ನ ಸಮಸ್ತ ಸಂಪತ್ತನ್ನೂ ದಾನ ಮಾಡಿರುತ್ತಾನೆ. ಆ ಸಮಯದಲ್ಲಿ ತನ್ನಲ್ಲಿ ಗುರುದಕ್ಷಿಣೆಯನ್ನು (೧೪ ಕೋಟಿ ಚಿನ್ನದ ನಾಣ್ಯಗಳು) ಬೇಡಿಬಂದ ಕೌತ್ಸನಿಗೆ ಸ್ವಲ್ಪ ಸಮಯಕೊಡುವಂತೆ ವಿನಂತಿಸುವನು. ನಂತರ ಹಣವನ್ನು ತರುವ ದಾರಿಯನ್ನು ಯೋಚಿಸಿ ಕುಬೇರನ ಮೇಲೆ ಯುದ್ಧಮಾಡುವ ನಿರ್ಧಾರಕ್ಕೆ ಬರುತ್ತಾನೆ. ಇದನ್ನು ತಿಳಿದ ಕುಬೇರನು ಯುದ್ಧವು ಬೇಡವೆಂದು ಹಣವನ್ನು ತಾನೆ ತಾನಾಗಿ ನೀಡುವನು.
In reply to ಉತ್ತಮ ಲೇಖನ ... ನನಗೆ ಗೊತ್ತಿರುವ by keshavHSK
Keshav avare nimma
Keshav avare nimma mecchugege dhanyavaadagalu. Naanu ee ghataneyannu Bahala hinde ello odidda nenapu. Haagaagi hesaru adalu badalaagirabahudu. Innu puraanada ghatanegalannu varnisuvaaga lekhakarinda lekhakarige badalaaguva saadhyategalive.