ಅವ್ವ ಕೇಳವ್ವ
ಅವ್ವ ಕೇಳವ್ವ
ನೀ ಕರುಣಿಸವ್ವ ನಗುವರಳಿಸವ್ವ ಜಗದೊಳಗೆ ಜೀವಗಳಿಗೆ
ಸಾಕೆನಿಸದಂತೆ ನರಳಾಟವಿರದ ಅಳುವಿರದೆ ಭಾವಗಳಿಗೆ ||ಪ||
ಕೆಟ್ಟ ಮಕ್ಕಳನು ದೃಷ್ಟಿ ಬೀರಿ ನೀ ದಿಟ್ಟರಾಗಿಸವ್ವ
ನಷ್ಟವಾಗದಂತಿಷ್ಟವಾದ ಸಂತುಷ್ಟಿ ಮೂಡಿಸವ್ವ ||
ಈ ಪೃಥ್ವಿಯಲ್ಲಿ ಕೋಟ್ಯಾನುಕೋಟಿ ಅತ್ಯಾಶೆಯುಳ್ಳ ಮಂದಿ
ಸ್ವಾರ್ಥವನು ಮೀರಿ ಪರಮಾರ್ಥಕೆಂದು ದುಡಿಯುವರೆ ಜಗದಿ ಹೊಂದಿ ||೧||
ಹಸಿವಾಗಬೇಕು ವಶವಾಗಬೇಕು ಸುಜ್ಞಾನಕೆಂದು ಮನಸು
ಉಸಿರಾಗಬೇಕು ಹಸಿರಾಗಬೇಕು ಸಂಮೃದ್ಧಿಯಿಂದ ಕನಸು ||
ಕಲಿತಿರಲು ಬೇಕು ಕಲಿಯಾಗಬೇಕು ಹುಲಿಯಂತೆ ಬಾಳಬೇಕು
ಕೊಳೆ ಕಳೆದುಕೊಂಡು ನಳನಳಿಸಿಕೊಂಡು ಗೆಲುವೆಂದು ಹೇಳಬೇಕು ||೨||
ಈ ಮಾತ ನೀನು ಕೇಳವ್ವ ತಾಯಿ ನೀಡವ್ವ ಜಗಕೆ ಶಾಂತಿ
ನೀ ಸ್ವಚ್ಚಗೊಳಿಸಿ ಚೆನ್ನಾಗಿ ಬೆಳೆಸಿ ನೀಗವ್ವ ಹುಸಿಯ ಭ್ರಾಂತಿ ||
ಒಂದಾಗಿ ಬದುಕಿ ಈ ಜೀವಜಾಲ ಮಾದರಿಗಳಾಗುವಂತೆ
ಇಂದೊಲಿದು ಹರಸು ಕರುಣೆಯಲಿ ನಡೆಸು ನಿನ್ನಿಚ್ಚೆ ತಪ್ಪದಂತೆ ||೩||
- ಸದಾನಂದ
Rating