ಜಗನ್ಮಾತೆಯಲ್ಲಿ ಪ್ರಾರ್ಥನೆ
ಜಗನ್ಮಾತೆಯಲ್ಲಿ ಪ್ರಾರ್ಥನೆ
ನಮ್ಮನೆಲ್ಲ ಹರಸು ತಾಯಿ ಕರುಣೆಯಿಂದ ನಡೆಸು ತಾಯಿ |
ಹೆಮ್ಮೆ ತಂದ ಮಕ್ಕಳಂತೆ ಧಿವ್ಯ ಶಕ್ತಿ ನೀಡಿ ||ಪ||
ನಾಡಿಗಾಗಿ ದುಡಿಯುವಂತ ಸ್ಪೂರ್ತಿ ನಮಗೆ ದೊರೆಯಲಿ |
ದುಡಿಮೆಯಿಂದಲೆಮಗೆ ಸದಾ ತೃಪ್ತಿ ತುಂಬಿಕೊಳ್ಳಲಿ ||
ಸತ್ಯ ನ್ಯಾಯ ಮೀರದಂತ ಶ್ರದ್ಧೆ ತಾಳ್ಮೆ ಇರಲಿ |
ಅಸತ್ಯ ಅನ್ಯಾಯಗಳನು ಗೆಲುವ ಶಕ್ತಿ ಬರಲಿ ||೧||
ಅಜ್ಞಾನದ ಕತ್ತಲೆಯನು ಕಳೆದು ಕೈಯ ಹಿಡಿದು |
ಉದ್ಧಾರದ ಬೆಳಕ ನೀಡುತೆಮ್ಮನೆಲ್ಲ ಸಾಗಿಸು ||
ಮುಂದೆ ಗುರಿಯ ತೋರಿಸುತ್ತ ಹಿನ್ನೆಲೆ ಗುರುವಾಗಿರು |
ಬಿಟ್ಟ ಬಾಣದಂತೆ ಸಾಗಲೆಮಗೆ ನೀನು ಪ್ರೇರಿಸು ||೨||
ನಮ್ಮ ಕಿವಿಗಳೆಲ್ಲ ಸದಾ ಶುಭ ನುಡಿಗಳ ಕೇಳಲಿ |
ನಮ್ಮ ಕಣ್ಣುಗಳಿಗೆ ಸದಾ ಶಿವನ ನೃತ್ಯ ಕಾಣಲಿ ||
ನಮ್ಮ ದೇಹ ಭಾವದಲ್ಲಿ ಸ್ಥಿರತೆ ತುಂಬಿಕೊಳ್ಳಲಿ |
ನೂರು ಶರದ ಋತುಗಳನ್ನು ನಗುತ ನಾವು ಕಳೆಯಲಿ ||೩||
- ಸದಾನಂದ
Rating