ಗಮಕ ಕಲೆಯ ಪ್ರಸ್ತುತತೆ : - ಸದಾನಂದ

ಗಮಕ ಕಲೆಯ ಪ್ರಸ್ತುತತೆ : - ಸದಾನಂದ

ಗಮಕ ಕಲೆಯ ಪ್ರಸ್ತುತತೆ :         -    ಸದಾನಂದ

   
 ಸಾಹಿತ್ಯಾಸಕ್ತ ಬಂಧುಗಳೇ,
          ಗಮಕ ಕಲೆಯ ಪ್ರಸ್ತುತತೆ : ಎಂಬ ವಿಷಯದಲ್ಲಿ ಚರ್ಚಿಸುವಾಗ ಮುಖ್ಯವಾಗಿ ಮೊದಲು ಪ್ರಸ್ತುತತೆ ಎಂಬ ಪದವನ್ನು ಗ್ರಹಿಸಬೇಕಾಗುತ್ತದೆ. ಯಾವುದು ಪ್ರಸ್ತುತತೆ ? ಯಾವುದು ಅಪ್ರಸ್ತುತ ? ಇದರ ಆಯ್ಕೆಗೆ ಮಾನ ದಂಡಗಳೇನು ? ಗುಣ ಸತ್ವ ಮೌಲ್ಯಗಳೇ ? ಜನಾಭಿಪ್ರಾಯವೇ ? ಹೆಚ್ಚು ಚಲಾವಣೆಯಲ್ಲಿದ್ದುದು ಪ್ರಸ್ತುತವೆಂದೂ, ಬಹುಜನ ಹೆಚ್ಚು ಸುಲಭವಾಗಿ ಮೆಚ್ಚದ್ದನ್ನು ಅಪ್ರಸ್ತುತವೆಂದೂ ಕರೆದು ಬಿಡೋಣವೇ ? ಅದು ಹೇಗೆ ಸರಿ ? ರೋಗಿಗೆ ಔಷಧ ಅವಶ್ಯವಾದದ್ದು. ರೋಗವು ಪ್ರಸ್ತುತವಾದರೆ ಔಷಧಿಯ ಪ್ರಸ್ತುತತೆ ಅನಿವಾರ್ಯ. ರೋಗಿಗೆ ಪ್ರಿಯವೆನಿಸದಿದ್ದರೂ ಅದು ಅವಶ್ಯ ಬೇಕು. ಸಮಾಜದಲ್ಲೂ ಕೆಲವು ಸಂಗತಿಗಳು ಹಾಗೆಯೇ ಅನ್ವಯವಾಗುವಂತದ್ದು. ಇದರಲ್ಲಿ ಜನಾಕರ್ಷಣೆ ಅಥವಾ ಜನಾಭಿಪ್ರಾಯವೇ ಪ್ರಧಾನವಾಗುವುದಿಲ್ಲ. ಗುಣಮೌಲ್ಯವುಳ್ಳದ್ದು ತನ್ನ ಮೌಲ್ಯಗಳಿಂದಾಗಿಯೇ ಸಾರ್ವಕಾಲಿಕÀ ಮಹತ್ವವನ್ನು ಗಳಿಸುತ್ತದೆ. ಅವು ಎಲ್ಲ ಕಾಲದಲ್ಲೂ ಪ್ರಸ್ತುತವೇ. ಜನರು ಹಸಿವು ದುಃಖ ಭೀತಿಗಳಿಂದ ಕಂಗಾಲಾಗಿರುವಾಗ ಕಾವ್ಯಗಳು ಬೇಕಾಗುವುದಿಲ್ಲ. ಅಂತೆಯೇ ಉನ್ಮಾದದ ಮೋಜು ಮಸ್ತಿಗಳಿಗೂ ಇವು ಬೇಡ. ಸಮಚಿತ್ತನಾಗಿ ಜಗತ್ತನ್ನು ಅರಿಯಲು ಹೊರಟವನಿಗೆ ಕಾವ್ಯಗಳೂ ಭಿನ್ನ ಭಿನ್ನ ಸನ್ನಿವೇಶಗಳೂ ಚಿತ್ರಣಕ್ರಮವೂ ಅತ್ಯಂತ ಪ್ರಸ್ತುತವೆನಿಸುತ್ತದೆ.
           ನಮ್ಮ ಮಹಾಕಾವ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಈ ಕಲೆ ವಹಿಸುತ್ತಿರುವ ಪಾತ್ರ ಬಹು ಮಹತ್ವದ್ದಾಗಿದೆ. ಬಹಳ ಹಿಂದೆ ಜನ ಅನಕ್ಷರಸ್ಥರಿದ್ದರು. ಅವರು ಕಾವ್ಯಗಳನ್ನು ಸ್ವತಃ ಓದಲು ಅಶಕ್ತರಾಗಿದ್ದರು. ಹಾಗಾಗಿ ಗಮಕಕಲೆ ಅಗತ್ಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಅಕ್ಷರಸ್ಥರಾಗಿದ್ದಾರೆ. ಎಲ್ಲ ಕಾವ್ಯಗಳ ಮುದ್ರಿತ ಪ್ರತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೂ ಗಮಕ ಕಲೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿ ಮಹತ್ವದ ಪಾತ್ರವನ್ನು ನಿರ್ವಹಿಸಬೇಕಿದೆ. ಕಾರಣವಿಷ್ಟೇ, ಈಗಿನ ಅಕ್ಷರಸ್ಥರನೇಕರಿಗೆ ಕನ್ನಡ ಮತ್ತು ಸಂಸ್ಕøತಗಳನ್ನು ಓದಲುಬಾರದು. ಕನ್ನಡವನ್ನು ಮಾತಾಡಲು ಮಾತ್ರವೇ ಕಲಿತವರು ಸಂಸ್ಕøತಿಯ ಸಾರವನ್ನು ಅರಿಯಬೇಕಾದರೆ ನಮ್ಮ ಅಮೂಲ್ಯ ಕಾವ್ಯಗಳನ್ನು ಕೇಳಿಯಾದರೂ ತಿಳಿಯಬೇಕಿದೆ. ಇದು ಗಮಕ ಕಲೆಯಿಂದ ಮಾತ್ರವೇ ಸಾಧ್ಯವಾಗಬೇಕಾದ ಕಾರ್ಯ. ಕನ್ನಡವನ್ನು ಓದಲು ಕಲಿತವರೆಲ್ಲರೂ ಕಾವ್ಯಗಳನ್ನು ಓದಿ ಅರ್ಥೈಸಿಕೊಳ್ಳುತ್ತಾರೆಂದು ಹೇಳುವಂತಿಲ್ಲ. ಇಂತಹವರಿಗೆ ಗಮಕಕಲೆ ಒಂದು ಸಾಧನ. ಇಂದಿನ ಓದಿನ ಬಗ್ಗೆ ಕವಿ ಬೇಂದ್ರೆಯವರು ಹೀಗೆ ಹೇಳುತ್ತಾರೆ. (80ರದಶಕದ ಮಾತು)  “ಕುರುಡೋದು ಎಂಬ ನಾಣ್ಣುಡಿಯಿದೆ. ಆದರೆ ಕಿವುಡೋದು ಎಂಬ ಮಾತು ರೂಢಿಯಾಗುವುದಗತ್ಯ. ಇಂಗ್ಲೀಷ್ ಶಾಲೆಗಳಲ್ಲಿ ಪ್ರಚಾರಕ್ಕೆ ಬರುತ್ತಿರುವ ಸೈಲೆಂಟ್ ರೀಡಿಂಗ್ ಕಣ್ಣೋದಿಗೆ ಸರಿಹೋಗುವ ಮಾತು. ಕಿವಿಯಿಂದೀಂಟಿಸುವ ಪ್ರಯತ್ನವು ಕವಿ ಗಮಕಿಗಳದಾದರೆ ಕಣ್ಣಿಂದೋದಿಸುವ ಪ್ರಯತ್ನವು ಶಿಕ್ಷಣಕರ್ತರದು. ಸಾವಕಾಶವಾಗಿ ಚಿತ್ರಗಳನ್ನು ಕಿವಿಯಿಂದ ನೋಡಿಸುವ ಪ್ರಯತ್ನವನ್ನೂ ಅವರು ಮಾಡಬಹುದೇನೋ. ಇನ್ನೊಂದು ರೀತಿಯಿದೆ. ಆ ರೀತಿಯಲ್ಲಿ ಶಬ್ಧ ಸೌಂದರ್ಯವನ್ನು ಮರೆಮಾಡಿ, ಸಾಧ್ಯವಿದ್ದರೆ ಕೆಡಿಸಿ, ಅರ್ಥಗಾಂಭೀರ್ಯವು ಎದ್ದು ಕಾಣುವಂತೆ ಕವಿತೆಯನ್ನು ಹೇಳಬೇಕಾಗಬಹುದು. ಗದ್ಯದ ಕೂಡ ಸಮಾನ ಹಕ್ಕಿನ ಬಲದಿಂದ ಏರಾಟವಾಡುವ ಪದ್ಯ ಮಾರ್ಗವಿದು. ರಾಗದ ದಾವಣಿಗೆ ಕಟ್ಟಿ ಸಾಹಿತ್ಯವನ್ನೆಳೆದೊಯ್ಯುವ ರಾಗ ರಸ ಮಾರ್ಗವು ಇನ್ನೊಂದು. ಇಲ್ಲಿ ಸಂಗೀತ ಸಾಹಿತ್ಯಗಳು ಪರಸ್ಪರ ಕೊರಳೊಳಗಿನ ಗುದ್ದಿ. ಅನ್ಯೂನ್ಯ ಪೂರಕಗಳಲ್ಲ. ಮಾರಕಗಳು. ಇಂತಹವರ ಹಾಡು ಕೇಳಿಯೇ ಸಾಹಿತ್ಯ ಸಂಗೀತಗಳು ಕೂಡಬಾರದು ಎಂದು ಕೆಲವರು ಹೇಳುತ್ತಿರಬೇಕು. ಮಧ್ಯಮ ಮಾರ್ಗವೊಂದಿರಲೇಬೇಕು. ಆ ಮಾರ್ಗವೇ ನಮ್ಮ ಕನ್ನಡ ಕವಿ ಗಮಕಿಗಳು ಅನುಸರಿಸಿದುದು. ಇಲ್ಲಿ ಸಂಗೀತ - ಸಾಹಿತ್ಯಗಳು ಪರಸ್ಪರ ಪೂರಕಗಳು. ಸರಸ್ವತಿಯ ಸ್ತನದ್ವಂದ್ವಗಳು.” ವರಕವಿಯ ಈ ಮಾತುಗಳು ಎಷ್ಟೊಂದು ಅರ್ಥಗರ್ಭಿತವಾಗಿದೆ. ನಿಜ ನಮ್ಮವರಿಗೆ ಕಾವ್ಯಗಳನ್ನು ಓದಲು ಬರುವುದಿಲ್ಲ. ರಾಷ್ಟ್ರಕವಿ ಕುವೆಂಪುರವರು ಒಂದುಕಡೆ ಹೀಗೆ ಹೇಳುತ್ತಾರೆ. “ ಸರಿಯಾಗಿ ಓದಲು ಬಾರದಿದ್ದರೆ ಕಾವ್ಯದ ಅರ್ಥ-ಸ್ವಾರಸ್ಯಗಳು ಓದುಗರಿಗೆ ದೊರಕುವುದೇ ಇಲ್ಲ. ಕವನಗಳಾಗಲೀ ನಾಟಕಗಳಾಗಲೀ ಬರಿಯ ಭಾವಗಳು ಮಾತ್ರವೇ ಅಲ್ಲ. ಭಾವ-ಲಯಬದ್ಧವಾದ ಭಾಷೆಯಲ್ಲಿ ಮೈವೆತ್ತ ರಸಕಾವ್ಯಗಳು. ಉತ್ತಮ ಗಮಕಿಗಳು ಕನ್ನಡ ಕಾವ್ಯಗಳನ್ನು ಓದಿದರೆ ವಾಣಿಯ ವೈಖರಿಯೇ ಭಾವದ ಮಹಿಮೆಯನ್ನೂ ಪದಗಳ ಅರ್ಥವನ್ನೂ ಎಲ್ಲರಿಗೂ ತಿಳಿಸಿಬಿಡುವುದು.” ಗಮಕ ಮತ್ತು ಗಮಕಿಗಳ ಕುರಿತಾದ ತಜ್ಞರ ಮಾತುಗಳನ್ನು ಒಮ್ಮೆ ಗಮನಿಸಿದರೆ :
             ಡಾ|| ಎಂ.ಚಿದಾನಂದ ಮೂರ್ತಿಯವರ ಅಭಿಪ್ರಾಯದಲ್ಲಿ “ಗಮಕಿಯು ಕಾವ್ಯಕ್ಕೂ ಮತ್ತು ಸಹೃದಯರಿಗೂ ಮಧ್ಯವರ್ತಿಯಾದವನು. ಸಮಾಜದಲ್ಲಿ ಗಮಕಿಗೆ ಕವಿಯಷ್ಟು ಪ್ರಮುಖ ಸ್ಥಾನವಿರದಿದ್ದರೂ ಕವಿಯ ನಂತರದ ಪ್ರಮುಖ ಸ್ಥಾನ ಆತನಿಗೇ ಮೀಸಲು.”
             ಪ್ರೋ|| ಜಿ.ವೆಂಕಟ ಸುಬ್ಬಯ್ಯ : “ಒಬ್ಬ ಕವಿಯ ಕಾವ್ಯವನ್ನು ಗಮಕಿಯು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆಂಬುದು ಅವನ ವಾಚನದಲ್ಲಿ ವ್ಯಕ್ತವಾಗುತ್ತದೆ. ಕವಿಯ ಅರ್ಥಕ್ಕೆ ಎಷ್ಟೆಷ್ಟು ಹತ್ತಿರ ಗಮಕಿ ಸುಳಿಯಬಲ್ಲನೋ ಅಷ್ಟಷ್ಟು ಅವನ ಗಮಕವು ಸಾರ್ಥಕವಾಗುತ್ತದೆ. ಪ್ರಯೋಜನಕರವಾಗುತ್ತದೆ.”
             ಎಂ.ವಿ.ಸೀತಾರಾಮಯ್ಯ : “ಛಂದೋಲಯ, ಅರ್ಥಯತಿ, ಶಬ್ಧಾರ್ಥಗುಣ, ಇವುಗಳ ಸಮನ್ವಯ ಸಿದ್ಧಿಯಿಂದ ಕೂಡಿದ ಕಾವ್ಯದ ವಾಚಿಕ ನಿರೂಪಣೆಯೇ ಗಮಕ. ಈ ಗಮಕಕ್ಕೆ ಸಂಗೀತ ರಾಗಗಳ ಬಳಕೆ ಪರಿಣಾಮಕಾರೀ ಸಾಧನವಾದರೂ ಗಮಕದಲ್ಲಿ ಶಬ್ಧೋಚ್ಚಾರಣಾಪ್ರಕ್ರಿಯೆಗೇ ಪ್ರಾಮುಖ್ಯ.”
               ರಾ. ನರಸಿಂಹಾಚಾರ್ಯ : “ಗಮಕಿಗಿರಬೇಕಾದ ಮುಖ್ಯ ಲಕ್ಷಣಗಳು ರಾಗ-ಸಾಹಿತ್ಯ-ಭಾವ ಈ ಮೂರು ಕಲೆಗಳಲ್ಲಿಯೂ ಸಮಾನತೆಯನ್ನು ಸಾಧಿಸಿದವನೇ ಉತ್ತಮ ಗಮಕಿಯಾಗಬಲ್ಲನು.”
            ಗಮಕದಿಂದಾಗುವ ಪ್ರಯೋಜನಗಳು : ಕಾವ್ಯಗಳು ವ್ಯಕ್ತಿಯನ್ನು ಸುವಿಚಾರಿಯನ್ನಾಗಿ ಮಾಡುತ್ತವೆ. ಸದಾಲೋಚನೆಗಳಿಗೆ ತೊಡಗಿಸುತ್ತದೆ. ಸತ್ಕಾರ್ಯಗಳಲ್ಲಿ ಪ್ರವೃತ್ತಿಯೂ ಅಸತ್ಕಾರ್ಯಗಳಲ್ಲಿ ನಿವೃತ್ತಿಯೂ ಉಂಟಾಗುವಂತೆ ಮಾಡುವುದು ಕಾವ್ಯದ ಪರಮ ಪ್ರಯೋಜನ. ಕುಮಾರವ್ಯಾಸ ಹೇಳುವಂತೆ ವೇದಪಾರಾಯಣದ ಫಲ, ಗಂಗಾದಿತೀರ್ಥಸ್ನಾನ ಫಲ, ತಪಸ್ಸಿನ ಫಲ, ಕನ್ಯಾದಾನಫಲ, ಯಾಗಗಳ ಫಲಗಳ ಬಗ್ಗೆ ನಮಗೆ ಸ್ಪಷ್ಟತೆಯಿಲ್ಲವಾದರೂ ಒಂದಂತೂ ನಿಜ. ಕಾವ್ಯಗಳ ಅಧ್ಯಯನ, ಆಸ್ವಾದನೆ ಮಾಡಿರುವ ವ್ಯಕ್ತಿಗಳ ನಡೆ ನುಡಿಗಳು ಅವುಗಳನ್ನು ಮಾಡದವನ ನಡೆ ನುಡಿಗಳಿಗಿಂತ ಮೇಲ್ಮಟ್ಟದಲ್ಲಿರುತ್ತವೆ. ಸಾಂದರ್ಭಿಕ ಜಾಣ್ಮೆ, ಪ್ರತ್ಯುತ್ಪನ್ನ ಮತಿ, ಸಮುಚಿತ ಉದಾಹರಣೆಗಳು, ಆದರ್ಶಗಳ ಪರಿಕಲ್ಪನೆ ಇವೆಲ್ಲವುಗಳ ಮಿಳಿತದಿಂದ ಕಾವ್ಯಗಳು ವ್ಯಕ್ತಿಗಳನ್ನು ಸುಸಂಸ್ಕøತರನ್ನಾಗಿಸುವ ಸಾಧನ. ಬೌದ್ಧಿಕತೆಗೆ ಒರೆಗಲ್ಲು. ಇಂದಿನ ಸಮಾಜದ ಅಗತ್ಯ ಇದೇ ಆಗಿದೆ. ಎಲ್ಲೆಡೆ ಭ್ರಷ್ಟಾಚಾರ, ಅಪ್ರಾಮಾಣಿಕತೆ, ಗೂಂಡಾಗಿರಿ, ಕೃತಘ್ನತೆ, ವಚನಭ್ರಷ್ಟತೆ, ಸ್ವಜನ ಪಕ್ಷಪಾತಗಳು ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಒಂದು ಸುಂದರ ಸಮಾಜದ ನಿರ್ಮಾಣ ಮಾಡುವಲ್ಲಿ ಗಮಕಕಲೆ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಶಕ್ತಿಯನ್ನು ಹೊಂದಿದೆ. ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂಬ ಕವಿವಾಣಿ ಸುಳ್ಳಲ್ಲ. ಮೈಯಲ್ಲಿ ಮಿಂಚನ್ನು ಸುಳಿಸುವ ಶಕ್ತಿ  ಕುಮಾರವ್ಯಾಸನೊಬ್ಬನಲ್ಲೇ ಅಲ್ಲ ಕನ್ನಡದ ಅನೇಕ ಕಾವ್ಯಗಳಲ್ಲಿ ಅಂತಹದೇ ಶಕ್ತಿ ಹುದುಗಿದೆ. ಕನ್ನಡದ ಜಾಣ ಜಾಣೆಯರದನ್ನು ಕಾಣಬೇಕಿದೆ.
•    ಮನದ ದುಃಖ ತುಮುಲಗಳಿಂದ ಬಿಡುಗಡೆ ಪಡೆಯಲು ನವೋತ್ಸಾಹವನ್ನು  ಪಡೆದುಕೊಳ್ಳಲು ಜೀವನೋಲ್ಲಾಸ ಪ್ರೇರಣೆಯನ್ನು ನೀಡಬಲ್ಲದು.
•    ಹಿಂದೆ ವರಪರೀಕ್ಷೆಗೆ ಜೈಮಿನಿ ಭಾರತವನ್ನು ಓದಿಸುತ್ತಿದ್ದರಂತೆ. ಒಂದೂ ತಪ್ಪಿಲ್ಲದೆ ಜೈಮಿನಿ ಭಾರತದ ಪದ್ಯಗಳನ್ನು ಓದುವವನಿಗೆ ಜಾಣನೆಂಬ ಬೇರೆ ಪ್ರಮಾಣಪತ್ರದ ಅವಶ್ಯಕತೆ ಇರಲಿಲ್ಲವಂತೆ. ಅದು ಇಂದಿಗೂ ಸತ್ಯವೇ. ಇಂದು ಸರಳವಾದ ಕುಮಾರವ್ಯಾಸ ಭಾರತವನ್ನು ಓದುವುದು ಅನೇಕರಿಗೆ ಬಲುಕಷ್ಟ.
•    ಗಮಕವಾಚನವು ಸುತ್ತಲ ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ.
•    ವಿವಿಧ ಕಾವ್ಯಗಳನ್ನೂ, ಛಂದಸ್ಸುಗಳನ್ನೂ, ಬಲ್ಲ ಗಮಕಿಯು ಸುತ್ತಲಿನ ಸಮಾಜದ ಗೌರವಾದರಗಳಿಗೆ ಪಾತ್ರನಾಗುತ್ತಾನೆ. ಸ್ವಯಂ ರಚನಾ ಸಾಮಥ್ರ್ಯವುಳ್ಳವರು ತಮ್ಮ ಕವಿತಾ ಶಕ್ತಿಯಿಂದ ಬದುಕಿದ್ದಾಗ ರಾಜಮರ್ಯಾದೆಯಲ್ಲದೆ ಮುಂದೆ ಅಮರಸ್ಥಾನವನ್ನು ಗಳಿಸುತ್ತಾರೆ.
•    ಬಾಲ್ಯದಲ್ಲಿ ಕಾವ್ಯಗಳಪ್ರೀತಿ, ಅರಿವು ಬೆಳೆಸಿಕೊಂಡವರು ಮುಂದೆ ಕವಿ, ಸಾಹಿತಿ, ವಾಗ್ಮಿ ಮುಂತಾಗಿ ಸಾರಸ್ವತ ಲೋಕದಲ್ಲಿ ವಿಹರಿಸುತ್ತಾರೆ. ವಿಶಿಷ್ಟ ವರ್ಚಸ್ಸಿಗೆ ಇದು ಕಾರಣವಾಗಬಲ್ಲುದು.
•    ಮಹಾಕವಿಗಳ ಮಹಾಕಾವ್ಯಗಳ ಶ್ರವಣವು ಸುಂದರ ಜಗತ್ತನ್ನು ಕಾಣಿಸಬಲ್ಲುದು. ‘ಸತ್ಯಂ ಶಿವಂ ಸುಂದರಂ’ ಎಂಬಂತೆ ಜಗದ ನೈಜ ಸೌಂದರ್ಯಾನುಭೂತಿಯನ್ನು ಹೊಂದಲು ಸಾಧ್ಯವಾಗಬಹುದು.
•    ಮುಖ್ಯವಾಗಿ ಶಾಂತಿ, ದಯೆ, ವಿಚಾರಪರತೆ, ಉದಾರತೆಗಳಂತಹ ಉನ್ನತ ಮೌಲ್ಯಗಳ ಅರಿವು ಬರುವುದಲ್ಲದೆ ತನ್ನ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಕರ್ತವ್ಯದ ಅರಿವು ಮೂಡುತ್ತದೆ.
             ಇದು ಸ್ಪರ್ಧಾಯುಗ. ಎಲ್ಲ ರಂಗಗಳಲ್ಲೂ ಪೈಪೋಟಿ ಇದೆ. ಕಲಾಕ್ಷೇತ್ರವೂ ಇದಕ್ಕೆ ಹೊರತಲ್ಲ. ವಿವಿಧ ಕಲೆಗಳ ನಡುವಿನ ಪೈಪೋಟಿ ಒಂದೆಡೆಯಾದರೆ, ದೂರದರ್ಶನದಂತಹ ಪ್ರಭಾವಿ ಮಾಧ್ಯಮದ ಜತೆ ಸೆಣಸಾಡುವ ಅನಿವಾರ್ಯತೆ ಇನ್ನೊಂದೆಡೆ. ಇವೆಲ್ಲದರ ನಡುವೆಯೂ ಗಮಕ ಕಲೆಯೆಡೆಗೆ ಅಭಿಮಾನಿಗಳನ್ನು ಗೆಲ್ಲಬೇಕಾದರೆ ಗಮಕಿಗಳೂ ವ್ಯಾಖ್ಯಾನಕಾರರೂ ತಮ್ಮತಮ್ಮ ಕ್ಷೇತ್ರಗಳಲ್ಲಿ ಉತ್ತಮ ಪರಿಣತಿಯನ್ನು ಪಡೆದಿರಬೇಕಾಗುತ್ತದೆ. ಸಿದ್ಧತೆಯಿಲ್ಲದೆ ಸಮರ್ಪಕವಲ್ಲದೆ ಕಾರ್ಯಕ್ರಮಗಳನ್ನು ನೀಡುವ ಗಮಕಿಗಳೂ ಹಾಗು ವ್ಯಾಖ್ಯಾನಕಾರರೂ ತಾವು ಪ್ರಸ್ತುತ ಪಡಿಸಿದ ಕಾರ್ಯಕ್ರಮದ ಯಶಸ್ಸನ್ನು ಮಾತ್ರವಲ್ಲದೆ ಗಮಕಕಲೆಯ ಜನಪ್ರೀಯತೆಯನ್ನೂ ಫಣಕ್ಕೊಡ್ಡುತ್ತಾರೆ. ವಿದ್ವಾಂಸರುಗಳು ಗಮಕ ಶಬ್ಧದ ಅರ್ಥವನ್ನು ವಿವೇಚಿಸಿ ಪುಷ್ಟೀಕರಿಸಿ ಹೇಳುವ ವಿವರಣೆಯಂತೆ “ಗಮಕಿಗಳು ಭಾವಸೂಚಕರಾಗಿದ್ದರು. ಈ ಭಾವಸೂಚನೆಗೆ ಅವರು ಕೈಗೊಳ್ಳುತ್ತಿದ್ದ ಸಾಧನಗಳು ಕೆಲವು. ಅವುಗಳಲ್ಲಿ ಮುಖ್ಯವಾದವು 1) ವ್ಯಕ್ತ ವರ್ಣೋಚ್ಚಾರಣೆ   2) ಸುಶ್ರಾವ್ಯತೆ   3) ಪದವಿಭಾಗ ನಿರ್ಧಾರ   4) ಛಂದೋನ್ವಯ   5) ಉಚಿತ ಸಂಗೀತ   ಇವು ಒಂದೊಂದೂ ಕವಿಯ ಭಾವವನ್ನು ಸ್ಪಷ್ಟಪಡಿಸುವಲ್ಲಿ ಶಕ್ಯವಾಗಿರುವಾಗ ಇವೆಲ್ಲವೂ ಸಮತಾನದಲ್ಲಿ ಸೇರಿದರೆ ಸೃಷ್ಟಿಯಾಗುವ ರಸ ವೈವಿಧ್ಯವನ್ನು ಯಾರುತಾನೆ ಮೆಚ್ಚಲಾರರು ?
              ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸಾಹಿತ್ಯದೇವಿಯ ಅಡಿದಾವರೆಯೇ ಗಮಕವೆನ್ನುತ್ತಾರೆ. ಈ ಗಮಕದ ಕಾಲಿಲ್ಲದಿದ್ದರೆ ಸಾಹಿತ್ಯದೇವಿಗೆ ಚಲನೆಯಿಲ್ಲ. ಗಮನವಿಲ್ಲ. ಕವಿಯ ಹೃದಯಾಂತರಾಳದಿಂದೆದ್ದ ಕಾವ್ಯವು ಅದೆಷ್ಟು ಉತ್ತಮವಾಗಿದ್ದರೂ ಜೀವವಿಲ್ಲದ ದೇಹದಂತೆ. ಗಮಕ ಸಂಜೀವಿನಿಯ ಸ್ಪರ್ಷವಾದಾಗಲೇ ಆ ಕಾವ್ಯದ ಭಾವ-ರಸ ಲಹರಿಗಳು ಜೀವಿತವಾಗಿ ಜಗತ್ತಿನ ಜನಾಂಗದ ಹೃದಯ ವೀಣೆಯನ್ನು ಮಿಡಿಸುವುದು. ರಾಘವಾಂಕನು ತನ್ನ ಹರಿಶ್ಚಂದ್ರಕಾವ್ಯದಲ್ಲಿ “ವಿಮಳಪದನ್ಯಾಸ ನಡೆ” ಎಂದು ಗಮಕದ ಸರಳವಾದ ಅರ್ಥವನ್ನು ವಿವರಿಸಿದ್ದಾನೆ. ಒಟ್ಟಿನಲ್ಲಿ ಗಮಕವು“ವಿದ್ಯಾ ಪರಿಣತರಲಂಕಾರ”ವೂ ಹೌದೇ ಹೌದು. ಕವಿ ಮುದ್ದಣನ ಮಾತು “ಪದ್ಯಂ ವದ್ಯಂ ಗದ್ಯಂ ಹೃದ್ಯಂ” ತಿಮಲಾಚಾರ್ಯನೆಂಬ ಕವಿಯ ಮಾತಿನ ತಾತ್ಪರ್ಯ ಹೀಗಿದೆ - “ಕ್ರೂರವಾದ ಆನೆ, ಕಾಡುಗಿಚ್ಚು, ಕಾಡು, ಬರಸಿಡಿಲು, ಬಳ್ಳಿಮಿಂಚು ಇಂಥವೆಲ್ಲವೂ ಅವುಗಳ ಕಡುಪಿನಿಂದಾಗಿ ಅವನ್ನು ನೋಡುವವರಿಗೆ ಉದ್ವೇಗವನ್ನು ಉಂಟುಮಾಡುವವು. ಆದರೆ ಅವುಗಳ ವರ್ಣನೆಗಳು ಕಾವ್ಯದಲ್ಲಿ ಬಂದಾಗ ಅವು ಸೊಗಸನ್ನಾಂತು ಸಹೃದಯರ ಹೃದಯಕ್ಕೆ ಆನಂದವನ್ನು ಉಂಟುಮಾಡುವುವು.” ಹೀಗೆ ಲೋಕ ಪರಿಚಯವನ್ನು ಕಾವ್ಯದ ಮೂಲಕ ಮಾಡುವಲ್ಲಿ ಕವಿ ಮತ್ತು ಗಮಕಿಗಳು ಪ್ರಸ್ತುತರಾಗುತ್ತಾರೆ. ಗಮಕಿಯಿಂದಾಗಿ ಕವಿ ಮುಖ್ಯನಾಗುತ್ತಾನೆ. ಕವಿ ನಿಸ್ಸಾರ ಅಹಮದ್ದರ ನಿತ್ಯೋತ್ಸವ ಕವಿತೆಯನ್ನು ಬರೆದು ಎಷ್ಟೋ ವರ್ಷಗಳ ನಂತರ ಹಾಡುಗಾರರು ರಾಗ ಸಂಯೋಜಿಸಿ ಹಾಡಿದಮೇಲೆ ಹಾಡು ಜನಪ್ರಿಯವಾಯಿತು. ಕವಿಯ ಪರಿಚಯವಾಯಿತು. ಗಮಕಿಗಳು ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಆಯ್ದುಕೊಳ್ಳುವ ಕಾವ್ಯಭಾಗಗಳು ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡುವಂತಿರಬೇಕು. ಹಿರಿಯ ಗಮಕಿ ಶ್ರೀಯುತ ಹೊಸಹಳ್ಳಿ ಕೇಶವಮೂರ್ತಿಗಳ ಅಭಿಪ್ರಾಯದಂತೆ “ಮಹಾಕಾವ್ಯಗಳೆಂದರೆ ಚಿನ್ನದ ಗಣಿಯಿದ್ದಂತೆ. ಅದರಲ್ಲಿರುವ ಚಿನ್ನದ ಅಂಶಗಳನ್ನು ಹೆಕ್ಕಿ ತೆಗೆಯ ಬೇಕಾದವರು ಗಮಕ ಕಾರ್ಯಕ್ರಮ ನೀಡುವ ಕಲಾವಿದರು. ಉತ್ತಮ ಸಂದೇಶಗಳಿಲ್ಲದ ಶುಷ್ಕಭಾಗಗಳನ್ನು ಆಯ್ದುಕೊಂಡರೆ ಗಮಕ ಕಾರ್ಯಕ್ರಮ ತನ್ಮೂಲಕ ಗಮಕಕಲೆ ಜನಪ್ರೀಯತೆಯನ್ನು ಕಳೆದುಕೊಳ್ಳುತ್ತದೆ. ಗಮಕಿಗಳು ಅಥವಾ ವ್ಯಾಖ್ಯಾನಕಾರರು ತಾವು ಪ್ರಸ್ತುತ ಪಡಿಸಲಿರುವ ಕಾವ್ಯಭಾಗವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಇಲ್ಲವಾದಲ್ಲಿ ಭಾವಪೂರ್ಣವಾಗಿ ವಾಚಿಸಲಾಗಲೀ ವ್ಯಾಖ್ಯಾನಿಸಲಾಗಲೀ ಸಾಧ್ಯವಿಲ್ಲ.” ಹಲವಾರು ವರ್ಷಗಳಿಂದ ಗಮಕಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಹಿರಿಯರ ಮಾತು ಅಕ್ಷರಷಃ ಸತ್ಯವೆಂದು ನಮಗೂ ಅನ್ನಿಸುತ್ತದಲ್ಲವೇ ?
ಗಮಕಕಲೆಯ ಕುರಿತಾಗಿ ಪೂರ್ವಾಲೋಚನಾ ಚರ್ಚೆಯಿಂದ ಮನದಟ್ಟಾಗುವುದು.                    
•    ಗಮಕವು ಒಂದು ಪ್ರಾಚೀನ ಕಲೆ. ಇಂದಿಗೂ ಅದು ಪ್ರಸ್ತುತವೇ ಹೌದು ಈ ಕುರಿತು ಅನುಮಾನ ಬೇಡ. ಎಂದಿನಿಂದಲೂ ಜನಮಾನಸಕ್ಕೆ ಸಂಸ್ಕಾರ ತುಂಬುವ ಕಾರ್ಯವನ್ನು ಇದು ಮಾಡಿದೆ.  :
•    ಗಮಕವು ಒಂದು ಪಂಡಿತಕಲೆ. ಪಾಂಡಿತ್ಯ ಮತ್ತು ಕಲಾವಂತಿಕೆ ಎರಡರ ಸಮಪಾಕವಾಗಿ ಬರುವುದರಿಂದ ಇದು ಸಮಾಜಕ್ಕೆ ಎಂದೆಂದಿಗೂ ಬಹುಪ್ರಿಯವಾಗಿ ಬೇಕಾಗಿದೆ. ಆದರೆ ಮನೋರಂಜನೆಯನ್ನೇ ಗುರಿಯಾಗಿಟ್ಟುಕೊಂಡ ಮಾಧ್ಯಮಗಳಿರುವಾಗ ಅವು ಅತಿ ಸುಲಭವಾಗಿ ಜನಗಳ ಕೈಗೆಟುಕುತ್ತಿರುವಾಗ ಅತ್ತಲೇ ಜನ ಮುಗಿಬೀಳುವುದು ಸಹಜ :

             ಇಂದು ವಿಶ್ವವಿದ್ಯಾನಿಲಯದ ಹಂತದಲ್ಲೂ ಹಳಗನ್ನಡ ಕಾವ್ಯಗಳನ್ನು ಆಸಕ್ತಿಯಿಂದ ಓದುವ ವಿದ್ಯಾರ್ಥಿಗಳಂತಿರಲಿ, ಉಪನ್ಯಾಸಕರನ್ನೂ ಕಾಣುವುದು ಕಷ್ಟವಾಗಿದೆ. ನವೋದಯದ ಕಾಲದ ಮುನ್ನ (20ನೇ ಶತಮಾನದ ಪೂರ್ವಾರ್ಧ) ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಕನ್ನಡ ಕಾವ್ಯಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದ ಮಹಮಹೋಪಾಧ್ಯಾಯರ ಉಪನ್ಯಾಸಗಳನ್ನು ಕೇಳುವ ಭಾಗ್ಯ ದೊರೆಯುತಿತ್ತು. ಇಂದು? ತಪ್ಪು ತಪ್ಪಾಗಿ ಕಾವ್ಯಗಳನ್ನು ಓದುವ ಉಪನ್ಯಾಸಕರು ಪದ ವಿಭಾಗಮಾಡಲು ತಿಳಿಯದೆ ಗೈಡುಗಳ ಮೊರೆಹೋಗಿ ಬಚಾವಾಗುತ್ತಾರಂತೆ. ಅಂದಮೇಲೆ ವಿದ್ಯಾರ್ಥಿಗಳೋ ಅಸಂಬದ್ಧವಾಗಿ ಪದಗಳನ್ನು ಹೆಣೆದು ತಮಾಷೆಯ ಸಂಗತಿಯಂತೆ ಬಳಸಿ ಆಡುವುದನ್ನು ಕಂಡು ಬೇಸರಗೊಂಡಿದ್ದಿದೆ. ಜನಪ್ರಿಯವೆನಿಸಿರುವ ಚಿತ್ರಗೀತೆಗಳು ಅತ್ಯಂತ ಸರಳವಾಗಿ ದ್ವಂದ್ವಾರ್ಥಕವಾಗಿ ಜನರ ಕೀಳು ಅಭಿರುಚಿಗೆ ಪೂರಕವಾಗಿರುವಾಗ ಒಬ್ಬ ಗಮಕಿಯು ಸಮಾಜಕ್ಕೆ ಹೆಚ್ಚು ಪ್ರಸ್ತುತನಾಗುತ್ತಾನೆ.
             ‘ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನಗಳಿಗಾಗಿ ಹೋರಾಟ ಮತ್ತು ಅದರ ಫಲಶೃತಿಯಾಗಿ ಕನ್ನಡವು ಶಾಸ್ತ್ರೀಯ ಭಾಷೆಯೆಂದು ಘೋಷಣೆ’ ಇದು ಎಲ್ಲರಿಗೆ ತಿಳಿದ ವಿಷಯ. ಇದು ಕೇವಲ ನಮ್ಮ ಈ ಹೊತ್ತಿನ ಗೆಲುವಲ್ಲ. ಸಾವಿರಾರು ವರ್ಷಗಳಿಂದ ಹರಿದು ಬಂದ ಕನ್ನಡದ ಕಾವ್ಯಧಾರೆಗೆ ಸಂದ ಜಯ. ಕನ್ನಡದ ಈ ಘನಸ್ಥಿಕೆಯನ್ನು ಸುಂದರ ಪದ್ಯಗಳಾದ ಕಾವ್ಯಗಳಿಂದಲೇ ತಿಳಿಯದವನು ಇನ್ನೇನು ಶಾಸನಗಳನ್ನೋದಿ ತಿಳಿಯಬಲ್ಲನೇ ? ಪಂಪನನ್ನರಿಯದ, ಕುಮಾರವ್ಯಾಸ ಜೈಮಿನಿಗಳ ಕುರಿತು ತಿಳಿಯದ, ಹರಿಹರ ರಾಘವಾಂಕರನ್ನರಿತುಕೊಳ್ಳದ ಕನ್ನಡಿಗನ ಕನ್ನಡತನ ಎಷ್ಟರದ್ದು ? ಈ ಮಹಾಕವಿಗಳನ್ನು ಜನಮಾನಸದಲ್ಲಿ ಹಸಿರಾಗಿಟ್ಟವರು ಶತ ಶತಮಾನಗಳಿಂದ ಈ ಕಾವ್ಯಗಳಲ್ಲಿ ತಮ್ಮ ಉಸಿರೂದಿದ ಗಮಕಿಗಳಲ್ಲದೆ ಇನ್ಯಾರು ? ಹಿಂದೆ ಮನೆ ಮನೆಯಲ್ಲಿ ನಿತ್ಯದ ಪದ್ದತಿಯಾಗಿ ಕಾವ್ಯಗಳನ್ನು ಓದುತ್ತಿದ್ದರಂತೆ. ಅದು ಮನೆ ಮನೆಗಳಲ್ಲಿ ಗಮಕಿಗಳಿದ್ದಕಾಲ. ಮಕ್ಕಳಿಗದೆಂಥಹ ಸಂಸ್ಕಾರವನ್ನು ನಮ್ಮ ಹಿರಿಯರು ನೀಡುತ್ತಿದ್ದರು. ಜಾಣ ಮಗುವಿನ ಮುಂದೆ ನಿಧಾನವಾಗಿ ಸ್ಪಷ್ಟವಾಗಿ ಕುಮಾರವ್ಯಾಸ ಭಾರತವನ್ನೊಮ್ಮೆ ಓದಿಬಿಡಿ. ಆ ಮಗು ತನ್ನಷ್ಟಕ್ಕೇ ಭಾರತದ ಕಥೆಯನ್ನು ತನ್ನ ಪುಟ್ಟ ಲೋಕದಲ್ಲಿ ಕಾಣುತ್ತದೆ. ಇದು ಸತ್ಯ.
              ಶಾಲೆಗಳಲ್ಲಿ ಮಕ್ಕಳಿಗೆ ಗಮಕ ಕಮ್ಮಟಗಳನ್ನೇರ್ಪಡಿಸಿ ಮಕ್ಕಳಿಂದ ಸ್ಪರ್ಧಾತ್ಮಕವಾಗಿ ಕಾವ್ಯದ ಭಾಗಗಳನ್ನು ಓದಿಸಿ ಬಾಲ್ಯದಲ್ಲಿಯೇ ರುಚಿ ಹಚ್ಚಿಸಿದರೆ ಮಂದೆ ಜೀವನದ ಅಭಿರುಚಿಯಾಗಿ ವೃದ್ಧಿಸುತ್ತದೆ. ಆ ಬಗ್ಗೆ ನಮ್ಮ ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತಿಸಬೇಕಿದೆ. ಪಂಪನಿಂದ ಇತ್ತೀಚಿನ ಕವಿಕೃತಿಗಳವರೆಗೂ ಎಲ್ಲ ಕನ್ನಡಿಗರಿಗೂ ತಿಳಿಯುವಂತಾಗಬೇಕಿದ್ದುದು ಅತ್ಯಾವಶ್ಯಕ. ಕನ್ನಡಮ್ಮನ ಚೆಲುವು ಹೇಗಿದೆಯೆಂದರೆ “ಜೈನಕವಿಗಳಿಂದ ಕಾವ್ಯ ರತ್ನಮಾಲೆ ಶೋಭಿತೆ, ದಾಸ ಶರಣ ಸಂದೋಹದ ತತ್ವಸಾರ ಭೂಷಿತೆ, ಕನಕಾದಿ ದಾಸರಿಂದ ನಿತ್ಯ ಕರ್ಣರಂಜಿತೆ, ಗದ್ಯ ಪದ್ಯ ಹೃದ್ಯ ಸಾಹಿತ್ಯ ಯುಕ್ತ ರೋಚಿತೇ” ಎಂದು ಸ್ತುತಿಸುವಂತಿದೆ. ಇಲ್ಲಿ ಏನಿಲ್ಲ ? ಎಲ್ಲವೂ ಇದೆ. ಕಾಣುವ ಕಣ್ಣಿದ್ದವನಿಗೆ ಮಾತ್ರ ಇದು ಕಾಣುತ್ತದೆ. ಕಂಡವರು ಇತರರಿಗೆ ಕಾಣಿಸುವ ಕಾರ್ಯವನ್ನು ಮಾಡಬೇಕಿರುವುದು ಹೆಚ್ಚು ಪ್ರಸ್ತುತ. 
             ಕಳೆದ 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ‘ಕರ್ನಾಟಕ ಗಮಕ ಕಲಾ ಪರಿಷತ್ತು’ ಹಿರಿಯ ಗಮಕಿಗಳ ಮಾರ್ಗದರ್ಶನದಲ್ಲಿ ಸಾರ್ಥಕ ಕಾರ್ಯವನ್ನು ಮಾಡುತ್ತಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಪರಿಷತ್ತು ಪ್ರತಿವರ್ಷ ಸರಿ ಸುಮಾರು 400 ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ವಿವಿಧ ಪರೀಕ್ಷೆಗಳನ್ನು ನಡೆಸಿಕೊಂಡು ಬಂದಿದೆ. ಎರಡು ಸಾವಿರಕ್ಕೂ ಮಿಕ್ಕು ಆಜೀವ ಸದಸ್ಯರನ್ನು ಹೊಂದಿರುವುದಲ್ಲದೆ ರಾಜ್ಯಮಟ್ಟದ ಸಮ್ಮೇಳನಗಳೂ, ದತ್ತಿಕಾರ್ಯಕ್ರಮಗಳೂ, ಮನೆ ಮನೆ ಗಮಕ, ಹಲವೆಡೆ ಗಮಕರೂಪಕಗಳನ್ನು ನಡೆಸಿಕೊಂಡು ಬಂದಿದೆ.
              ಶಿವಮೊಗ್ಗ ಜಿಲೆಯ ಹೊಸಹಳ್ಳಿ ಗ್ರಾಮವಂತೂ ‘ಗಮಕಗ್ರಾಮ’ವೆಂಬ ಕೀರ್ತಿಗೆ ಪಾತ್ರವಾಗಿದೆ. ಸುಸಂಸ್ಕøತವಾದ ಈ ಗ್ರಾಮದಲ್ಲಿ ಮನೆಮನೆಗಳಲ್ಲೂ ರಾಮಾಯಣ ಮಹಾಭಾರತ ಸುಪರಿಚಿತ. ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಸ್ಥಳಿಯ ಗಮಕ ಭವನದಲ್ಲಿ ಗಮಕ ಸಪ್ತಾಹ ಹಾಗು ರಾಜ್ಯಮಟ್ಟದ ಗಮಕಸ್ಪರ್ಧೆಗಳನ್ನು ನಡೆಸುತ್ತ ಬಂದಿದ್ದು ನಾಡಿನ ಹೆಸರಾಂತ ಗಮಕಿಗಳ ತವರುಭೂಮಿಯೆನಿಸಿದೆ.
              ಕರ್ನಾಟಕ ಘನ ಸರ್ಕಾರವು ಪ್ರತಿವರ್ಷವೂ ಗಮಕಕಲೆಯಲ್ಲಿ ಅಪಾರಸೇವೆ ಸಲ್ಲಿಸಿದ ಗಮಕವಚನ ಹಾಗೂ ಗಮಕ ಸಾಹಿತ್ಯ ಸಾಧಕರನ್ನು ಗುರ್ತಿಸಿ ‘ಕುಮಾರವ್ಯಾಸ ಪ್ರಶಸ್ತಿ’ಯನ್ನು ಒಂದು ಲಕ್ಷರೂಪಾಯಿ ಹಮ್ಮಿಣಿಯೊಂದಿಗೆ ನೀಡುತ್ತಿದೆ.
              ಸಾಗರದ ಮಲೆನಾಡು ಗಮಕ ಕಲಾಸಂಘವು ಕಳೆದ ಐದಾರು ವರ್ಷಗಳಲ್ಲಿ ಐವತ್ತಕ್ಕೂ ಹೆಚ್ಚು ಹೊಸಬರನ್ನು ಗಮಕ ಕ್ಷೇತ್ರಕ್ಕೆ ತಂದಿದೆ. ಇದರಲ್ಲಿ ತರುಣರು ಬಹುಪಾಲು ತೊಡಗಿರುವುದು ಆಶಾದಾಯಕವಾಗಿದೆ. ಅಲ್ಲದೆ ಈ ಐದಾರು ವರ್ಷಗಳಲ್ಲಿ ಜೈಮಿನಿಭಾರತ. ತೊರವೆ ರಾಮಾಯಣ, ಪಂಪಭಾರತ, ಹರಿಶ್ಚಂದ್ರಕಾವ್ಯ, ದೇವಿ ಭಾಗವತ, ಸಮಗ್ರ ಕುಮಾರವ್ಯಾಸ ಭಾರತ, ಭಾಗವತ ಮುಂತಾದ ಕಾವ್ಯಗಳ ರಸಧಾರೆಯನ್ನು ಕಾವ್ಯಾಸಕ್ತರಿಗೆ ಉಣಬಡಿಸಿದೆ. ನೂರಾರು ಶ್ರೋತೃಗಳು ಆಸಕ್ತಿಯಿಂದ ಕೇಳಲು ಸಿದ್ಧರಾಗಿದ್ದಾರೆ. ಮಲೆನಾಡು ಗಮಕ ಕಲಾಸಂಘದ ಈ ಕಾರ್ಯವು ನಾಡಿಗೆ ಪ್ರೇರಣೆಯಾಗಲಿ. ಊರು ನಗರಗಳಲ್ಲಿ ಇಂತಹ ಪ್ರಯತ್ನಗಳು ನಡೆಯಲಿ.
              ಟಿ.ವಿ.ಗಳಲ್ಲಿ ಬರುವ ಗಮಕಕಾರ್ಯಕ್ರಮಗಳು ಸಾಕಷ್ಟು ಜನಪ್ರಿಯವಾಗಿದೆ. ಅದನ್ನು ಇಷ್ಟಪಡುವ ಶ್ರೋತೃವರ್ಗವಿದೆ. ಈ ಯಶಸ್ಸು ಶ್ರೀಯುತ ಹೊಸಹಳ್ಳಿ ಕೇಶವಮೂರ್ತಿಗಳೂ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಶ್ರೀಯುತ ಮತ್ತೂರು ಕೃಷ್ಣಮೂರ್ತಿಗಳಿಗೆ ವಿಶೇಷವಾಗಿ ಸಲ್ಲಬೇಕು.
              ರಾಜ್ಯದ ಮೂಲೆ ಮೂಲೆಗಳಲ್ಲಿ ಇಂದು ಗಮಕ ಕಾರ್ಯಕ್ರಮಗಳು ಸಾಕಷ್ಟು ನಡೆಯುತ್ತಿರುವುದನ್ನು ವರದಿಗಳಲ್ಲಿ ಕಾಣುತ್ತೇವಾದರೂ ಅದಕ್ಕೆ ನಿರೀಕ್ಷಿತ ಜನ ಸೇರುತ್ತಿಲ್ಲ. ಆದರೆ ಮುಂದೊಂದು ದಿನ ಈ ಕಲೆ ಸರ್ವಮಾನ್ಯವಾಗುವುದರಲ್ಲಿ ಸಂಶಯವಿಲ್ಲ. ವ್ಯರ್ಥ ಕಾಲಹರಣದ ಸೋಗಿನ, ಮೋಜಿನ, ಅಗ್ಗದ ಮನೋರಂಜನೆಗಳು ತಮ್ಮ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತದೆ. ಆಗ ಬೇಕಿದ್ದುದು ಗುಣ, ಸತ್ವ, ಮೌಲ್ಯವುಳ್ಳ ಈ ಪಂಡಿತಕಲೆಯಲ್ಲದೆ ಮತ್ತೊಂದಿಲ್ಲ. ಮತ್ತೊಂದಲ್ಲ. ಇದು ಅತಿಶಯೋಕ್ತಿಯೇನಲ್ಲ. 
               ಈ ಕಲೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಬೇಕಾದರೆ ಮೊದಲಿಗೆ ಶಾಲಾಕಾಲೇಜುಗಳಲ್ಲಿರುವ ಕನ್ನಡ ಅಧ್ಯಾಪಕರು, ಉಪನ್ಯಾಸಕರುಗಳಿಗೆ ಸೂಕ್ತ ತರಬೇತಿ ಮಾರ್ಗದರ್ಶನದ ಅವಶ್ಯಕತೆಯಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಮಕ್ಕಳಿಗೆ ವಿಶೇಷವಾಗಿ ಗಮಕ ಶಿಕ್ಷಣ, ಪ್ರಸಾರ, ಸ್ಪರ್ಧೆಗಳ ಮೂಲಕ ಜಾಗೃತಿಯ ಅಭಿಯಾನವನ್ನು ಪ್ರಾರಂಬಿಸುವ ಮೂಲಕ ಕನ್ನಡದ ಅಭಿಮಾನವನ್ನು ಪುನಃ ಜಾಗೃತಗೊಳಿಸಬಹುದಾಗಿದೆ. ಅಭಿಮಾನಪೂರ್ಣವಾಗಿ ಕನ್ನಡದ ಕೆಲಸವಾದಾಗ ಮಾತ್ರವೇ ಗುರುತಾಗಬಹುದೇ ವಿನಃ ಇಂದಿನ ಈ ವೇಗದ ಜಾಗತಿಕ ಯುಗದಲ್ಲಿ ಗುರುತಿಲ್ಲದೇ ಹೋಗುವ ಅಪಾಯವಿದೆ.
 
ಪ್ರಸ್ತುತ ಕಾಣುತ್ತಿರುವ ಗಮಕದ ಸಾಮಾನ್ಯ ಕೊರತೆಗಳು :
                   
•    ಅಧ್ಯಯನಶೀಲ ಪಂಡಿತ ಕಲಾವಿದರ ಕೊರತೆ. (ವಾಚನ ಮತ್ತು ವ್ಯಾಖ್ಯಾನಗಳಲ್ಲಿ)
•    ಕಲಾವಂತಿಕೆ ಗೌಣವಾಗಿ ಪಾಂಡಿತ್ಯ ಪ್ರದರ್ಶನದ ಸಾಧನವಾದುದು.
•     ಕಾವ್ಯವಾಚನದಲ್ಲಿ ಕವಿಭಾವವನ್ನು ಗ್ರಹಿಸದೇ ರಾಗಗಳನ್ನು ಪ್ರಯೋಗಿಸಿ ರಸಾಭಾಸ ಮಾಡುವುದು.
•     ಕವಿಭಾವವನ್ನು ಗ್ರಹಿಸದೇ ಅನಗತ್ಯ ವ್ಯಾಖ್ಯಾನಮಾಡಿ ವಾಗಾಡಂಬರ ಪ್ರದರ್ಶನಮಾಡಿ ಶ್ರೋತೃವಿನ ಸಹನೆಯನ್ನು ಪರೀಕ್ಷಿಸುವುದು.
•     ಸಮಯ ಮಿತಿಗೊಳಪಡಿಸುವಾಗ ಕಥೆಗೆ ಮತ್ತು ಕಾವ್ಯಕ್ಕೆ ಲೋಪವಾಗದಂತೆ   ಪದ್ಯಗಳನ್ನು ಮೊದಲೇ ಆಯ್ಕೆಮಾಡಿಕೊಳ್ಳದಿರುವುದು.
•     ಮುಖ್ಯವಾಗಿ ಕೇಳುವ ಆಸಕ್ತ ಶ್ರೋತೃವರ್ಗದ ಕೊರತೆ. 
                ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದಾದಷ್ಟು ಕೊರತೆಗಳು ಅಲ್ಲಲ್ಲಿ ಕಾಣಿಸಬಹುದಾದರೂ ಸಮಷ್ಟಿಯಲ್ಲಿ ಕೊರತೆಗಳು ಗೌಣವಾಗಿ ಪರಿಣಾಮ ಮಹತ್ತಾಗಿ ಗೋಚರಿಸುವುದು ಸುಳ್ಳಲ್ಲ. 
               ಕೊನೆಯದಾಗಿ ಒಂದು ಮಾತು ಇದು ನನ್ನದಲ್ಲ. ಪ್ರಕಟಿತ ‘ಕರ್ಣಾಟ ಭಾರತ ಕಥಾ ಮಂಜರಿ’ಯ ಮುನ್ನುಡಿ ತೋರಣ ನಾಂದಿಯಲ್ಲಿ ಕವಿ ಕುವೆಂಪು ಬರೆದಿರುವ ಸಾಲುಗಳು “ಕವಿ ಪ್ರತಿಭೆಯ ಸೂಕ್ಷ್ಮ ಸೌಂದರ್ಯಗಳನ್ನು ಅರಿಯಲು ವಿಮರ್ಶಕರು ಎಷ್ಟರ ಮಟ್ಟಿಗೆ ಅವಶ್ಯಕವೋ ಆ ಪ್ರತಿಭೆಯನ್ನು ಆಸ್ವಾದಿಸಲು ಗಮಕಕಲೆ ಅಷ್ಟೇಮಟ್ಟಿಗೆ ಅವಶ್ಯಕ. ವಿಮರ್ಶಕರು ಗಮಕಿಗಳಾಗಿ, ಗಮಕಿಗಳು ವಿಮರ್ಶಕರಾಗಿ ಅಥವಾ ವಿಮರ್ಶಕರಿಂದ ಗಮಕಿಗಳರಿತು, ಗಮಕಿಗಳಿಂದ ವಿಮರ್ಶಕರನುಭವಿಸಿ, ಒಬ್ಬರಿಗೊಬ್ಬರು ನೆರವಾಗಿ ಕಲೆಯ ಉಪಾಸಕರು ಅನ್ಯೋನ್ಯತೆಯಿಂದ ಸೇವೆಗೆ ಹೊರಟರೆ ಎಂತಹ ಆಶೀರ್ವಾದವಾದೀತು.”
                ನಿಜ. ಗಮಕಕಲೆಯು ಇಂದು ಹೆಚ್ಚು ಪ್ರಸ್ತುತವೆನ್ನುವುದರ ಜೊತೆಗೆ ಅದು ಹಸನಾಗಿ ಬೆಳೆದು ನಾಡಿನಾದ್ಯಂತ ಕಾವ್ಯ ಸೌರಭವನ್ನು ಹರಡುವಂತಾಗಲಿ. ಕನ್ನಡದ ಜಾಣ ಜಾಣೆಯರು ವಿಶ್ವದಲ್ಲಿ ಹೆಗ್ಗುರುತಾಗಬೇಕು. ಆ ದಿನ ಬೇಗ ಬರಲಿ.
               : ಸಿರಿಗನ್ನಡಂ ಗೆಲ್ಗೆ ಬಾಳ್ಗೆ :

                             ಬರೆವಣಿಗೆ :  ಸದಾನಂದ ಶರ್ಮ ಬಿ.
                                   ವ್ಯವಸ್ಥಾಪಕ ನಿರ್ದೇಶಕ
                                   ಪ್ರಜ್ಞಾ ಭಾರತಿ ವಿದ್ಯಾ ಮಂದಿರ (ರಿ.)
                                   ಶಿವಪ್ಪನಾಯಕ ನಗರ - ಸಾಗರ
                                   ದೂ : 9482029149

 

ಚಿತ್ರಗಳನ್ನು ಅಂತರ್ಜಾಲದಿಂದ ಪಡೆದಿದೆ.

Comments

Submitted by H A Patil Wed, 10/24/2012 - 20:27

ಸದಾನಂದರವರಿಗೆ ವಂದನೆಗಳು ' ಗಮಕ ಕಲೆಯ ' ಕುರಿತು ತಾವು ಬರೆದ ವಿಸ್ತೃತವಾದ ಲೇಖನ ಓದಿದೆ,ಈ ಗಮಕ ಕಲೆಯನ್ನು ಸಹ ಕನ್ನಡ ಭಾಷಾ ಕಲಿಕೆಯಲ್ಲಿ ಒಂದು ವಿಷಯವಾಗಿ ಅಳವಡಿಕೆಯಾಗಬೇಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗಮಕ ವಾಚನಗಳಾದರೆ ಅದರ ಜನಪ್ರಿಯತೆ ಇನ್ನೂ ಹೆಚ್ಚ ಬಹುದು, ಗಮಕ ಕಲೆಯ ಕುರಿತು ಉತ್ತಮ ಪರಿಚಯಾತ್ಮಕ ಲೇಖನ ನೀಡಿದ್ದಕ್ಕೆ ಧನ್ಯವಾದಗಳು.
Submitted by sada samartha Wed, 10/24/2012 - 23:29

In reply to by H A Patil

ಎಚ್. ಎ. ಪಾಟೀಲ್ ರವರಿಗೆ ನನ್ನ ಧನ್ಯವಾದಗಳು << ಗಮಕ ಕಲೆಯನ್ನು ಸಹ ಕನ್ನಡ ಭಾಷಾ ಕಲಿಕೆಯಲ್ಲಿ ಒಂದು ವಿಷಯವಾಗಿ ಅಳವಡಿಕೆಯಾಗಬೇಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗಮಕ ವಾಚನಗಳಾದರೆ ಅದರ ಜನಪ್ರಿಯತೆ ಇನ್ನೂ ಹೆಚ್ಚ ಬಹುದು, >> ಎಂಬ ನಿಮ್ಮ ಅಭಿಪ್ರಾಯ ತುಂಬಾ ಸರಿಯಾದುದು. - ಸದಾನಂದ