ಪ್ರೀತಿಯು ಎಂದರೆ ಮೇಣದ ಮನೆಯಂತೆ - ಲಕ್ಷ್ಮೀಕಾಂತ ಇಟ್ನಾಳ

ಪ್ರೀತಿಯು ಎಂದರೆ ಮೇಣದ ಮನೆಯಂತೆ - ಲಕ್ಷ್ಮೀಕಾಂತ ಇಟ್ನಾಳ

    ಪ್ರೀತಿಯು ಎಂದರೆ ಮೇಣದ ಮನೆಯಂತೆ
      ( ಮೂಲ: ಉರ್ದುವಿನಿಂದ ಅನುವಾದಿತ)
                              -     ಲಕ್ಷ್ಮೀಕಾಂತ ಇಟ್ನಾಳ
ಪ್ರೀತಿಯು ಎಂದರೆ ಮೇಣದ ಮನೆಯಂತೆ  ಸಂಶಯದ ಕಾವಿನಲಿ ಕರಗದಿರಲೆಂದಳು
ಆಡುಬಾಯಿಗಳಿಗೆ ಕಿವಿಗಳಿರುವಲ್ಲಿ ಸಂಶಯದ ಮನದಲ್ಲಿ ಪ್ರೇಮವರಳದು ಎಂದೆ

ಇಷ್ಟಪಟ್ಟು  ಬಯಸಿ ನಾನಿರುವೆನೆಂದಳು ಪ್ರೀತಿಯಲಿ ಎಳ್ಳಷ್ಟೂ ಕಡಿಮೆಯಿರದಷ್ಟು
ಪ್ರೀತಿಯೇನೆಂದು ಅರಿತಿರುವೆ ನಿನ್ನಿಂದ ನಾನಂದೆ ಅದ ಹೊರತೇನು ಬರದು ನನಗೆಂದೆ

ಅಂಜುವುದು ವಿರಹಕೆ ಮನಸು  ನಿನ್ನಿಂದ ಅಗಲಿಕೆಯ ಕಲ್ಪನೆಗೂ ನಿಲುಕದೀ ಮನಸೆಂದು
ಬಾಧಿಸಿದೆ ಅದೇ ನೋವು ನನಗೂ ನಾನೆಂದೆ  ಅಹುದು ಪ್ರೀತಿಯ ಜೊತೆಗೆ ವಿರಹವೂ ಇಹುದು

ನಾನಿಲ್ಲದೇ ಬದುಕುವೆಯಾ ಕೇಳಿದಳು  ನನಗೆ ನನ ಮಾತು ಆ ನೆನಪು ಕಣ್ಣುಗಳ ಮರೆಯುವೆಯಾ
ವಿಚಾರವೆಂದೂ ಹೊಳೆದಿಲ್ಲವೆನಗೆಂದೆ ಕ್ಷಣದ ಮರೆವದು ಕೂಡ ಉಸಿರು ನಿಲ್ಲುವುದು

ಅದು ಹೇಗೆ ನನಮೇಲೆ ಈ ಕುರುಡು ಪ್ರೇಮ ಸಾಮಾನ್ಯ ಹೆಣ್ಣಲ್ಲಿ ಕಂಡಿರುವೆಯೇನು
ಕಣ್ಣುಗಳ ನನ್ನಲ್ಲಿ ನಿನ್ನನ್ನು ಹುಡುಕೆಂದೆ ತಂತಾನೇ ತಿಳಿಯುವುದು ಏಕೆ ಈ ಭ್ರಮೆಯೆಂದು

ತಲ್ಲೀಣ ಪ್ರೀತಿಯಲಿ ನನ್ನ ನೀ ನೊಡುತಿರೆ  ಬೆಲೆಕಟ್ಟದ ಹಾಗೆ ನನ್ನ ನಾ ಕಂಡಿಹೆನು  
ದರುಶನವೇ ಪರಮ ಕೊಡುಗೆ ನಾ ಹೇಳುವೆ ನೋಡಿದಾಗೊಮ್ಮೆ ಜೀವನ ಸನ್ನಿಧಿಯ ಕಾಣುವೆ

ಸಿಗದೆನಗೆ ಮಿಂಚು ಹುಳುವಂಥ ಶಬ್ದಗಳು ಹುದುಗಿರುವ ಪ್ರೇಮದಾಳವನ್ನರುಹಲು
ಹಿತವಾದ ಕಣ್ಣೋಟದಿ ತುಂಬಿ ತುಳುಕಿದ ಪ್ರೇಮ ನಾನಂದೆ ಮೌನವದು ಮಾತಾಡುತಿಹುದು

ನನ್ನ ಕವನದ ಸಾಲು ನನ್ನ ಹೃದಯಗನ್ನಡಿಯು ನಾನೆಂದೆ ಹೇಳು  ಕಾಣುವೆನೆ ನಾನು
ಹಿತ ಮಾತು ನೇಯುವರು ಕವಿಗಳು ಅಂದಳು ತುಂಬಿಹವು ಮಾತಲ್ಲಿ ಭಾವಗಳ ಸತ್ವಗಳು

ಈ ಮಾತೆಲ್ಲ ಈ ಕತೆಯೆಲ್ಲ ನೆಪವೆಂದೆ ಕೆಲ ಗಳಿಗೆ ನಿನ್ನೊಂದಿಗೆ ಹೀಗಾದರೂ ಕಳೆಯಲೆಂದೆ
ಆ ಮೇಲೆ ಈ ಮೌನ ಮನೋಹರ ನಾಟ್ಯದಲಿ ಕಣ್ಣೋಟವೇ ಮಾತುಗಳು ನಿಶ್ಯಬ್ದವೇ ಶಬ್ದಗಳು

Rating
No votes yet

Comments

Submitted by H A Patil Thu, 10/25/2012 - 19:34

ಲಕ್ಷ್ಮಿಕಾಂತ ಇಟ್ನಾಳ್ ರವರಿಗೆ ವಂದನೆಗಳು
" ಪ್ರೀತಿಯು ಎಂದರೆ ಮೇಣದ ಮನೆಯಂತೆ " ಉರ್ದು ಕವನದ ಅನುವಾದವನ್ನು ಓದಿದೆ, ಕವನ ಬಹಳ ಚೆನ್ನಾಗಿದೆ ಅದರಂತೆ ನಿಮ್ಮ ಅನುವಾದ ಕೂಡ, ಆದರೆ ಉರ್ದುವಿನಲ್ಲಿ ಬರೆದ ಕವಿ ಯಾರೆಂಬುದು ತಿಳಿಯಲಿಲ್ಲ, ಉತ್ತಮ ಕವನವನ್ನು ಓದಿಗೆ ದೊರಕಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

Submitted by lpitnal@gmail.com Sat, 10/27/2012 - 08:05

In reply to by H A Patil

ಧನ್ಯವಾದಗಳು ಆತ್ಮೀಯ ಹನುಮಂತ ಅನಂತ ಪಾಟೀಲರವರಿಗೆ, ಈ ನಜ್ಮ್ ನ್ನು ಯುಟ್ಯೂಬ್ ನಲ್ಲಿ ಕೇಳಿಸಿಕೊಂಡಿದ್ದು, ಬಹಳಷ್ಟು ಕವಿಗಳು ಈ ಹಾಡನ್ನು ಸ್ವಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಹಾಡಿದ ಹಲವಾರು ತುಣುಕುಗಳು ನನಗೆ ನೋಡಲು ಸಿಕ್ಕವು. ಹೀಗಾಗಿ ಈ 'ನಜಮ್' ಯಾರದು ಎನ್ನುವುದು ನನಗಿನ್ನೂ ಸ್ಪಷ್ಟ ಕಲ್ಪನೆಗಳು ಬರದೇ ಇದ್ದುದರಿಂದ ಮೂಲ ಲೇಖಕರ ಹೆಸರು ಹೇಳಲು ಅಶಕ್ಯನಾದೆ. ಆದರೂ ಇದನ್ನು ಮೂಲ ಉರ್ದುವಿನಲ್ಲಿ ಫೈಸಲ್ ಎಂಬ ಕವಿ ಬರೆದಿದ್ದಾರೆ ಎಂದು ನಂಬಬಹುದು. ತಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ ಅನಂತ ವಂದನೆಗಳು.

Submitted by partha1059 Thu, 10/25/2012 - 20:41

ಅರ್ಥವಾಗುತ್ತ ಇದೆ ಅನ್ನಿಸುತ್ತಲೆ ಕಡೆಗೆ ಬರುವಾಗ‌ ಮತ್ತೊಮ್ಮೆ ವಿವರಣೆ ಬೇಕೆನಿಸಿದರೆ ನನ್ನ ತಪ್ಪು ಇರಬಹುದು
ಆದರು ಮೊದಲ‌ ಸಾಲುಗಳು ಇಷ್ಟವಾಯಿತು "ಪ್ರೀತಿ ಮೇಣದ‌ ಮನೆಯ0ತೆ ಕರಗದಿರಲಿ ಸ0ಶಯದ‌ ಕಾವಿನಲ್ಲಿ..."

Submitted by lpitnal@gmail.com Sat, 10/27/2012 - 08:14

In reply to by partha1059

ಗೆಳೆಯ ಪಾರ್ಥರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ನಿಷ್ಕಲ್ಮಷ ಪ್ರತಿಕ್ರಿಯೆ ಹಿಡಿಸಿತು, ಯಾವುದೇ ಕವನ, ಕಾವ್ಯ ವಿರಲಿ ಒಂದೊಂದು ಓದಿಗೆ ಒಂದೊಂದು ಅರ್ಥ ಅನಾವರಣ ಗೊಳ್ಳುತ್ತ ಹೋಗುವ ಸಾಧ್ಯತೆಗಳಿಗೆ ತನ್ನನ್ನು ಈಡುಮಾಡಿಕೊಂಡಿರುತ್ತದೆ. ಅದು ಕಾವ್ಯದ ಶಕ್ತಿ. ನಜಮ್ ಗಳು ಕೂಡ ಹಾಗೆಯೇ, ಈ ಸಂದರ್ಭದಲ್ಲಿ ಇದೇ ನಜಮ್ ಉದಾಹರಣೆ ತೆಗೆದುಕೊಂಡರೆ ಇದನ್ನೇ ಸುಮಾರು ಕವಿಗಳು ತಮ್ಮದೆನ್ನುವಂತೆ ಮಾರ್ಪಾಡಿಸಿ ಪ್ರಸ್ತುತಿ ಪಡಿಸಿದ್ದಾರೆ, ಎಲ್ಲವು ಚನ್ನಾಗಿವೆ ಎಂದೇ ಹೇಳಬೇಕು. ಮೂಲದಲ್ಲಿ ಫೈಸಲ್ ಎಂಬ ಕವಿ ಇದನ್ನು ಬರೆದಿದ್ದಾರೆ, ಮನಸ್ಸಿಗೆ ಹಿಡಿಸಿದ್ದರಿಂದ ಅನುವಾದಿಸಲು ಪ್ರಯತ್ನಿಸಿದೆ, ಏಕೆಂದರೆ ಉರ್ದು ಸಾಹಿತ್ಯದ ವಿಶಾಲ ಅರ್ಥವ್ಯಾಪ್ತಿಗೆ ಶಬ್ದ ಭಂಡಾರಗಳಿಗೆ ನನ್ನಂಥವರಿಗೆ ಸಮಾನ ಅರ್ಥ ಹುಡುಕುವುದು ಕಷ್ಟ ಸಾಧ್ಯವೇ, ತಮ್ಮ ಪ್ರಿತಿಕ್ರಿಯೆಗೆ ಮತ್ತೊಮ್ಮೆ. ಧನ್ಯವಾದಗಳು.