ತಾಯಿ ಭಾರತಾಂಬೆ

ತಾಯಿ ಭಾರತಾಂಬೆ

ಕವನ

 

ತಾಯಿ ಭಾರತಾಂಬೆ


ನಮ್ಮ ದೇಶವಿದುವೆ ನಮಗೆ ತಾಯಿ ಭಾರತಾಂಬೆ ಭಾರತಾಂಬೆಯು |
ತಾಯಿ ಭಾರತಾಂಬೆಯೆಂದು ಹೆಮ್ಮೆಯಿಂದ ನುಡಿವೆವು ||ಪ||

ಕರುಣೆ ಸಮತೆ ನ್ಯಾಯ ತೋರ್ದ ರಾಮನಂಥ ರಾಜರು |
ರಾಮನಂಥ ರಾಜರಿಂದ ಶಾಂತಿ ಧಾಮವೆನಿಸಲು ||1||
ಶೌರ್ಯ ಧೈರ್ಯ ವೀರ್ಯವಂತ ಶಕ್ತ ರಾಜರಿಂದಲೇ |
ಶಕ್ತ ರಾಜರಿಂದಲೇ ಸಶಕ್ತ ದೇಶ ವಾಗಿದೆ ||2||

ಇರುವ ಗಿರಿಗಳೆಡೆಗಳಿಂದ ಹರಿದು ಬರುವ ನದಿಗಳು |
ಹರಿದು ಬರುವ ನದಿಗಳಿಂದ ಹಸಿರ ನಾಡು ಧರೆಯೊಳು ||3||
ತಪವ ಗೈದ ಋಷಿಗಳೆಲ್ಲ ಲೋಕಹಿತಕೆ ದುಡಿದರು |
 ಲೋಕಹಿತಕೆ ದುಡಿದು ಸಾಗಿ ದಾರಿ ದೀಪವಾದರು ||4||

ಹಿಂದು ಕ್ರೈಸ್ತ ಮುಸಲ್ಮಾನರೆಲ್ಲ ಧರ್ಮದವರಿಗೆ |
ಎಲ್ಲ ಧರ್ಮದವರಿಗೆ ತಂಪು ನೆರಳು ನೀಡಿದೆ ||5||
ದಾಳಿಗೆಂದು ನುಗ್ಗಿ ಬರುವ ಶತೃಪಡೆಯ ಗೆಲ್ಲುವ |
ಶತೃಪಡೆಯ ಗೆಲ್ಲುವ ನಮ್ಮ ವೀರ ಸೈನಿಕ ||6||

ಅಂದಿಗಿಂದಿಗೆಂದಿಗೆಮಗೆ ಒಂದೆ ದೇಶಭಾವವು |
ಒಂದೆ ದೇಶಭಾವವು ಒಂದೆ ನ್ಯಾಯ ನಮ್ಮದು ||7||
ಭವ್ಯ ಹಿರಿಮೆ ತೋರಲಿಂದು ಭರದಿ ನಾವು ಸಾಗುವಾ |
ಭರದಿ ನಾವು ಸಾಗಿ ವಿಜ್ಞಾನ ದೀಪವುರಿಸುವಾ ||8||

ವಿಶ್ವಕೋಶ ವಿಶ್ವಭಾಷೆಯೆಲ್ಲ ನಮ್ಮೊಳಡಗಿದೆ |
ಎಲ್ಲ ನಮ್ಮೊಳಡಗಿದೆ ಕಂಡುಕೊಳ್ಳಬೇಕಿದೆ ||9||
ಸಾಧನೆಯನು ತೋರ್ದರೆಲ್ಲ ಸಾಮರಸ್ಯದಿಂದ ಬದುಕಿ |
ಸಾಮರಸ್ಯದಿಂದ ಬದುಕಿ ಅದುವೆ ನಮ್ಮ ಸಂಸ್ಕೃತಿ  ||10|| 
 
                                                                 - ಸದಾನಂದ

Comments