ಮೂಕಜ್ಜಿಯ ಕನಸು

ಮೂಕಜ್ಜಿಯ ಕನಸು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ||ಕೆ.ಶಿವರಾಮಕಾರಂತ
ಪ್ರಕಾಶಕರು
ಎಸ್ ಬಿ ಎಸ್ ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್
ಪುಸ್ತಕದ ಬೆಲೆ
ಬೆಲೆ :೧೦೦ /- ರೂ

ಡಾ| ಕೆ. ಶಿವರಾಮ ಕಾರಂತರ ಮೂಕಜ್ಜಿಯ ಕನಸು ನಾನು ಹೈಸ್ಕೂಲಿನ ದಿನಗಳಿಂದ ಇಲ್ಲಿಯವರೆಗು ಹಲವು ಸಾರಿ ಓದಿರಬಹುದೇನೊ.ಪ್ರತಿಬಾರಿ ಓದುವಾಗಲು ಜೀವನದ ಹಲವು ಮಜಲುಗಳ, ದರ್ಶನವನ್ನು ಮಾಡಿಸುವ ಕಾದಂಬರಿ ಇದು. ಇಲ್ಲಿ ಕನಸು ಅನ್ನುವದಕ್ಕಿಂತ ದರ್ಶನ ಅನ್ನುವುದು ಹೆಚ್ಚು ಸೂಕ್ತವೇನೊ ಅನ್ನಿಸುತ್ತೆ.
ಮಲೆನಾಡಿನ ಕೊಲ್ಲೂರಿನ ಸಮೀಪದ ಮೂಡೂರು ಎಂಬ ಹಳ್ಳಿಯಲ್ಲಿ ನೆಲೆಸಿರುವ ಸಾದಾ ಸೀದ ಜೀವನ ಪ್ರವೃತ್ತಿಯ ವ್ಯಕ್ತಿ ಸುಬ್ಬರಾಯರದು. ಇವರ ಅಜ್ಜಿಯೆ ಮೂಕಜ್ಜಿ, ಅಜ್ಜಿ ಎಂದರೆ ತಾತನ ಅಂದರೆ ತಂದೆಯ ತಂದೆಯ ಚಿಕ್ಕಮ್ಮ. ಹುಟ್ಟಿನಿಂದಲು ಅದೆ ಮನೆಯಲ್ಲಿ ಬೆಳೆದಾಕೆ ಅವರು. ಹತ್ತನೆ ವರ್ಷಕ್ಕೆ ಮದುವೆಯ ಶಾಸ್ತ್ರದ ನಂತರ ಗಂಡನನ್ನು ಕಳೆದುಕೊಂಡ ಆಕೆ ಈಗ ತನ್ನ ಎಂಬತ್ತು ತೊಂಬತ್ತರ ವಯಸಿನಲ್ಲಿ ತಮ್ಮ ಮರಿಮಗ ಸುಬ್ಬರಾಯ ಹಾಗು ಅವನ ಪತ್ನಿ ಸೀತೆಯ ಜೊತೆ ಇರುವರು.
ಕಾರಂತರು ಕತೆಯ ಘಟನೆಗಳ ಮೂಲಕ , ವ್ಯಕ್ತಿಗಳ ಮೂಲಕ ಸಮಾಜದಲ್ಲಿನ್ನ ನಂಭಿಕೆ ಅಪನಂಭಿಕೆ, ಸಂಪ್ರದಾಯ , ದೇವರು , ದೆವ್ವ ಇವುಗಳ ಎಲ್ಲ ವಿಷಯವನ್ನು ವಿಮರ್ಷಿಸುತ್ತ ಸಾಗುತ್ತಾರೆ. ಮೊದಲಿಗೆ ರಾಮಣ್ಣ ಹಾಗು ನಾಗಿ ಎಂಬ ದಂಪತಿಗಳ ಕತೆ. ಮದುವೆಯಾದ ಕೆಲದಿನಕ್ಕೆ ಗಂಡನ ಬಡತನಕ್ಕೊ ಮತ್ತೇನಕ್ಕೊ ಬೇಸರಪಟ್ಟು, ಗಂಡನನ್ನು ತೊರೆದು ಬೇರೆ ವ್ಯಕ್ತಿಯ ಜೊತೆ ಓಡಿಹೋದವಳು ನಾಗಿ, ಎರಡು ಮಕ್ಕಳಾದ ನಂತರ ನಾಗಿಯನ್ನು ಕೈಬಿಡುತ್ತಾನೆ ಅವಳ ಪ್ರಿಯಕರ, ನಂತರ ಗಂಡ ಬಂದು ಹಿಂದಕ್ಕೆ ಕರೆದರು, ಹೋಗದ ಸ್ವಾಭಿಮಾನಿ ನಾಗಿ, ಆದರೆ ಮೂಕಜ್ಜಿ ಅದು ಹೇಗೊ ಅವರಿಬ್ಬರನ್ನು ಪ್ರತ್ಯೇಕವಾಗಿ ಕರೆದು ಮತ್ತೆ ಒಂದುಗೂಡಿಸುತ್ತಾಳೆ, ಅದು ಅವರು ತೊರೆದ ಇಪ್ಪತ್ತು ವರುಷಗಳ ನಂತರ. ತಾನು ಮಾಡಿದ್ದು ಸರಿಯೊ ತಪ್ಪೊ ಎನ್ನುತ್ತ ಪ್ರಶ್ನಿಸುತ್ತಾಳೆ ಸುಬ್ಬರಾಯನನ್ನು. ಸುಭ್ರಾಯನ ಮನಸ್ಸು ಮಾತ್ರ ಯಾವುದು ಸರಿ ಯಾವುದು ತಪ್ಪು ಎಂದು ನಿರ್ದರಿಸಲಾಗದ, ಅದೊಂದು ಗಂಭೀರ ವಿಷಯ ಎಂದು ಸಹ ಬಿಂತಿಸದ ಮನಸ್ಸು.

ಹಾಗೆಯೆ ಸುಬ್ಬರಾಯರ ಗೆಳೆಯ ಜನಾರ್ದನ ಹೆಣ್ಣುಗಳನ್ನು ನಂಬಿಸುತ್ತ ಮೋಸ ಮಾಡುತ್ತ ಹೋಗುವ ವ್ಯಕ್ತಿತ್ವ, ಸುಬ್ಬರಾಯರ ತಮ್ಮ ನಾರಾಯಣ ಮಾತ್ರ ಅಣ್ಣನಂತೆ ಹಳ್ಳಿಯಲ್ಲಿರದೆ, ಪಟ್ಟಣದಲ್ಲಿದು ಓದಿ ಅಲ್ಲಿಯದೆ ಹೆಣ್ಣನ್ನು ಮೆಚ್ಚು ಮದುವೆಯಾದವನು, ಅವನ ಹೆಂಡತಿಗು, ಸುಬ್ಬರಾಯನ ಹೆಂಡತಿ ಸೀತೆಗು ಅಜಗಜಾಂತರ ಹೋಲಿಕೆಯೆ ಇಲ್ಲದ ಸ್ವಭಾವ. ಹಾಗೆಯೆ ಅವನ ಮೈದುನನಾದ ಅನಂತರಾಯರು ಮಾತ್ರ, ತಾನು ವೇದಾಂತಿಯಂತೆ ತೋರಿಸಿಕೊಳ್ಳುತ್ತಾ , ತನಗೆ ಸಂಸಾರ ಇಷ್ಟವಿಲ್ಲ ಸನ್ಯಾಸತ್ವ ಶ್ರೇಷ್ಟ ಎಂದೆಲ್ಲ ಅಜ್ಜಿಯ ಜೊತೆ ತನ್ನ ಹೆಚ್ಚುಗಾರಿಕೆಯನ್ನು ತೋರಿಸುತ್ತಲೆ, ಕಡೆಯಲ್ಲಿ ತನ್ನ ಪ್ರಕೃತಿ ವಿರೋದವಾದ ಅಸಹಜ ಆಸೆಯನು ಅಜ್ಜಿ ಎತ್ತಿ ತೋರಿಸಿದಾಗ ಬೆಚ್ಚಿ ನಿಲ್ಲುತ್ತಾರೆ.

ಮತ್ತೆ ಮಂಜುನಾಥನೆಂಬ ದೈವಭಕ್ತನೊಬ್ಬ ತಾನು ಮೂಡುರಿನ ಹತ್ತಿರವೆ ಇರುವ ಹಿಂಡೂಗಾನ ಎಂಬಲ್ಲಿಯ ದೈವಶಕ್ತಿ ಹಿಂಡುಗಾನ ಅಮ್ಮನವರ ಭಕ್ತ, ಅವನು ಅಮ್ಮನವರ ಜಾತ್ರೆ ನೆರವೇರಿಸಿ ಮುಗಿಸಿದಾಗ ಊರಿನಲ್ಲಿ ದಾರಾಕಾರ ಮಳೆ ಪ್ರಾರಂಬವಾಗುತ್ತದೆ. ಅವನು ಜಾತ್ರೆಗಾಗಿ ಹಾಕಿಸಿದ ಎಲ್ಲ ಚಪ್ಪರವು ಹಾರಿ ಹೋಗುತ್ತದೆ, ಅವನ ಜಂಬದ ಮಾತಿಗೆ ಅಜ್ಜಿ ಉತ್ತರಿಸುತ್ತಾಳೆ
'ಪ್ರಕೃತಿಯ ಎದುರಿಗೆ ಯಾರ ಠೇಂಕಾರವು ನಡೆಯಲ್ಲ' ಎಂದು . ಅಜ್ಜಿಯ ವಿಶ್ಲೇಷಣೆಗಳೆ ಅಮೋಘ ಕೆಲವೊಮ್ಮೆ ಆಕೆಯ ತರ್ಕ ಸುಬ್ಬರಾಯನಿಗು ಸಿಲುಕದಂತದು.

ಸುತ್ತ ಮುತ್ತಲಿನ ಕಾಡಿನಲ್ಲಿ ಸಂಚರಿಸುತ್ತ ಅಲ್ಲಿನ ಹಾಡಿಗಳು, ಗುಹೆಗಳು , ಕಾಡು ಜನ, ಹಿಂದೊಮ್ಮೆ ಮೂಡೂರಿನಲ್ಲಿ ಇರಬಹುದಾಗಿದ್ದ ನಾಗರಿಕತೆ, ಇತಿಹಾಸ ಎಲ್ಲವನ್ನು ಕೆದಕುತ್ತ ಸಾಗುವ ಅಜ್ಜಿ ಮೊಮ್ಮಗ ಆ ಮೂಲಕ ನಮ್ಮ ಮನದಲ್ಲಿನ ಹಲವು ಸಂಘರ್ಷಗಳು , ಅನುಮಾನಗಳು , ವೈಚಾರಿಕತೆಯ ಪ್ರಶ್ನೆಗಳು ಎಲ್ಲಕ್ಕು ಉತ್ತರಿಸುತ್ತ ಸಾಗುತ್ತಾರೆ. ಅಜ್ಜಿ ಮೊಮ್ಮಗ ಸುಬ್ಬರಾಯ, ಸುಬ್ಬರಾಯರ ಪತ್ನಿ ಸೀತೆ, ಸೀತೆಯೆ ಮಕ್ಕಳು ಎಲ್ಲ ಪಾತ್ರಗಳು ಮನವನ್ನು ತುಂಬುತ್ತ ಹೋಗುತ್ತವೆ.

ಹಿಂಡುಗಾಗ ಹಳ್ಳಿಗೆ ಮಂಜುನಾಥನ ಬಲವಂತದಿಂದ ಜಾತ್ರೆಗೆ ಹೋದಾಗ ಅಲ್ಲಿ ಅಜ್ಜಿಯೆ ಬಾಲ್ಯ ಗೆಳತಿ ಮತ್ತೊಬ್ಬ ಮುದುಕಿ ತಿಪ್ಪಕ್ಕನಿಂದ ಸುಬ್ಬರಾಯನಿಗೆ ತನ್ನ ಅಜ್ಜಿಯ ಬಾಲ್ಯ, ಬೆಳವಣಿಗೆ ಆಕೆ ಪಟ್ಟ ಪಾಡು, ಮೈಮೇಲೆ ಹಿಂಡುಗಾನ ಅಮ್ಮ ಬರುತ್ತಿದ್ದದ್ದು, ಯಾಕೆ ಆಕೆಯನ್ನು ಮೂಕಜ್ಜಿ ಎಂದು ಕರೆಯುತ್ತ ಇದ್ದರು ಎಲ್ಲ ತಿಳಿಯುತ್ತದೆ, ಹಾಗೆ ಮೂಕಜ್ಜಿ , ಮುಂದೆ ತಿಪ್ಪಕ್ಕನ ಸಾವನ್ನು ಮೊದಲೆ ಅರಿತು, ಅಲ್ಲಿಗೆ ಬಂದು ತಿಪ್ಪಕ್ಕ ಸಾಯುವ ಸಮಯಕ್ಕೆ ಪಕ್ಕದಲ್ಲಿದ್ದು ದೈರ್ಯ ತುಂಬುವಾಗ ಎಲ್ಲರಿಗು ಅಜ್ಜಿಯ ಬಗ್ಗೆ ಅವಳ ಶಕ್ತಿಯ ಬಗ್ಗೆ ಆಶ್ಚರ್ಯವೆನಿಸುತ್ತದೆ.
ಅಜ್ಜಿಯ ಕೆಲವೊಂದು ಮಾತುಗಳು
"ಮರುಳ ಸಾವೊಂದು ಮಾನಕ್ಕಿಂತ ದೊಡ್ಡದೆ?" ,
"ಬಸರಿಕಟ್ಟೆಯಲ್ಲಿ ಹುಟ್ಟಿ ಬೂದಿಕಟ್ಟೆಯಲ್ಲಿ ಸಾಯುವ ನಡುವೆ ಅಶ್ವತ್ಥ ಕಟ್ಟೆ ಅಥವ ಬಾಳ್ ಕಟ್ಟೆಯಲ್ಲಿ ಬದುಕಿದ್ದೇವೆ"
"ದೇವರಿಗೆ ಸುತ್ತು ಬರಲಿಕ್ಕೆ ಆಗುತ್ತದೆಯೆ ಬರುವರು ಬರಲಿ"
"ದೇವರು ಎನ್ನುವುದು ನಾವು ನಂಬಿದರೆ ಉಂಟು"
"ತಪಸ್ಸು ಮಾಡಬೇಕೆಂದರೆ ಮನೆಯಲ್ಲಿಯೆ ಬಾಗಿಲು ಮುಚ್ಚಿ ಮಾಡಬಹುದಲ್ಲ ಕಾಡಿಗೆ ಏಕೆ ಹೋಗಬೇಕು"
"ಹೊಟ್ಟೆಯಲ್ಲಿ ಪಿತ್ಥತುಂಬಿಕೊಂಡರೆ ವಾಂತಿಮಾಡಿದರೆ ಸರಿಯಾಗುತ್ತೆ, ಹಾಗೆ ಮನದಲ್ಲಿ ತುಂಬಿಕೊಳ್ಳದೆ ಮಾತನಾಡಿಬಿಡಬೇಕು"
"ಒಬ್ಬ ರಾಕ್ಷಸನನ್ನು ಕೊಲ್ಲಲ್ಲು ಅವತಾರವೇಕೆ, ಎಲೆ ಒಂದನ್ನು ಉದರಿಸಲು ಮರವೆ ಎದ್ದು ಕುಣಿಯಬೇಕೆ, ಒಬ್ಬಬ್ಬ ದೇವರು ಅವತಾರವನ್ನು ಹೊರಡಿಸುವುದೆ"
"ರಾವಣನ ಕಾಟ ಎಂದು ದೇವತೆಗಳಿಗೆ ದೂರು ಹೋದದ್ದು ಯಾವಗ, ಆಮೇಲೆ ರಾಮ ಅವತಾರವೆತ್ತಿ, ಹದಿನೈದು ವರುಷ ಕಳೆದು ಮದುವೆಯಾಗಿ , ಮತ್ತೆ ವನವಾಸ ಮುಗಿಸಿ , ರಾವಣನನ್ನು ಕೊಲ್ಲುವಾಗ ಮೂವತ್ತ ಐದು ವರುಷಗಳೆ ಕಳೆದವಲ್ಲ, ಅಲ್ಲಿಯವರೆಗು ಕಷ್ಟ ಎಂದು ಹೇಳಿದವರ ಗತಿ ಏನು, ಕರೆದಾಗ ಆಗಲೆ ಬಂದ ಕೊಂದು ಹೋದರೆ ಆಗದೆ"
ಈ ರೀತಿಯ ಮಾತುಗಳೆಲ್ಲ ಅಜ್ಜಿಯ ವೈಚಾರಿಕತೆ ತೋರಿದರೆ, ಹಿಂಡುಗಾನ ಅಮ್ಮನ ವಿಷಯ ಬಂದಾಗ ಮಾತ್ರ ಅಜ್ಜಿಯು ದೇವತೆಯ ಭಕ್ತಳಂತೆ ಮಾತನಾಡುವುದು ಕೊಂಚ ಆಶ್ಚರ್ಯ ಮೂಡಿಸುತ್ತದೆ.

ಕಾರಂತರ ಈ ಪುಸ್ತಕಕ್ಕೆ ಜ್ಞಾನಪೀಠ ದೊರೆತಿರುವುದು ಸಹಜ ನ್ಯಾಯವಾಗಿಯೆ ಇದೆ.