ಬ್ರಷ್ಟಾಚಾರ ಎನ್ನೋದು ಇಶ್ಯೂನೇ ಅಲ್ಲಾ!!!
ಯಾರ್ಯಾರು 1975 ರ ತುರ್ತು ಪರಿಸ್ಥಿಯನ್ನು ಕಣ್ಣಾರೆ ಕಂಡು ಅದರ ವಿರುದ್ಧವಾಗಿ ಹೋರಾಡಿದ್ದರು ,ಆನಂತರ ರಾಜಕೀಯದ ಸೋಂಕಿಲ್ಲದೆ ಇನ್ನೂ ಬದುಕಿದ್ದಾರೆ, ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದಾರೆ, ಅವರಿಗೆ ಮಾತ್ರ ಈ ಬರಹದ ಭಾವನೆಗಳು ಅರ್ಥವಾಗಬಹುದು.
1975 ಜೂನ್ 26 ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಹೇರಿದ್ದರು. ಜುಲೈ ನಾಲ್ಕರಂದು ಹಲವಾರು ಸಾಮಾಜಿಕ ಸಂಸ್ಥೆಗಳನ್ನು ನಿಷೇಧಿಸಿದ್ದರು. ವ್ಯಕ್ತಿಯ ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸಿದ್ದರು.
ಇಂಡಿಯಾ ಅಂದರೆ ಇಂದಿರಾ ಹಾಗೂ ಇಂದಿರಾ ಎಂದರೆ ಇಂಡಿಯ , ಎನ್ನುವ ಸ್ಥಿತಿ. ವಿರೋಧ ಪಕ್ಷದಲ್ಲಿದ್ದ ಬಹುಪಾಲು ರಾಜಕೀಯ ನಾಯಕರನ್ನು ಸೆರೆಮನೆಯೊಳಗೆ ತಳ್ಳಲಾಗಿತ್ತು. ಆರ್.ಎಸ್.ಎಸ್. ನ ಸಾವಿರಾರು ಜನ ಕಾರ್ಯಕರ್ತರನ್ನೂ ಜೈಲಿಗೆ ಹಾಕಲಾಗಿತ್ತು. ಅಂದು ಲೋಕ ನಾಯಕ ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ರಚನೆ ಯಾಯ್ತು. ರಸ್ತೆ ಗಿಳಿದು ಹೋರಾಟ ಆರಂಭವಾಗಿ, ಜೈಲ್ ಬರೋ ಕಾರ್ಯಕ್ರಮವು ದಿನ ದಿನಕ್ಕೆ ಹೆಚ್ಚುತ್ತಾ ಹೋಯ್ತು. ಬಯಲೇ ಜೈಲಾಯ್ತು. ಜೈಲಿನಲ್ಲಿ ಜಾಗವೇ ಇಲ್ಲದ ಪರಿಸ್ಥಿತಿ. ಆಗ ಸರ್ಕಾರದ ವಿರುದ್ಧ ಹೋರಾಡಿದ ಹಲವಾರು ದೇಶಭಕ್ತರಿಗೆ ಪೋಲೀಸ್ ರಿಂದ ಕಿರುಕುಳ. ಕೊಲೆ ಮಾಡಿದ ಕೈದಿಗೆ ಶಿಕ್ಷಿಸುವಂತೆ ಏರೋಪ್ಲೈನ್ ಶಿಕ್ಷೆ!! ಹಾಗೆಂದರೇನು? ಎಂದು ಇಂದಿನ ಯುವಕರು ಆಶ್ಚರ್ಯ ಪಡಬಹುದು.ಇಂದಿನ ಜನರು ಕಂಡ ಅಯೋಧ್ಯ ಚಳುವಳಿಯಲ್ಲಿ ತುರ್ತು ಪರಿಸ್ಥಿತಿಗೆ ಹೋಲಿಸಿದರೆ ಪೋಲೀಸರ ದೌರ್ಜನ್ಯವು ಅಷ್ಟಾಗಿ ಕಾಣಿಸಲಿಲ್ಲ. ಸಾವು ನೋವುಗಳ ವಿಷಯ ಬೇರೆ. ಹಾಗೆ ನೋಡಿದರೆ ಬಲು ದೊಡ್ದ ಪ್ರಮಾಣದಲ್ಲಿ ಆಂಧೋಳನ ರೂಪದಲ್ಲಿ ನಡೆದದ್ದು ಅಯೋಧ್ಯ ಚಳುವಳಿ. ಈ ಬರಹದ ಉದ್ಧೇಶ ತುರ್ತು ಪರಿಸ್ಥಿತಿ ಮತ್ತು ನಂತರದ ಪರಿಣಾಮಗಳ ಬಗ್ಗೆ ಒಂದು ಚಿಂತನ-ಮಂಥನ ಮಾಡುವುದು ಅಷ್ಟೆ. ಇದೆಲ್ಲಾ ಪೀಠಿಕೆ ಯಾಕೆಂದರೆ 1975 ಕ್ಕೆಂತ ಮುಂಚೆ ರಾಜಕಾರಣಿಗಳು ಬ್ರಷ್ಟರು ಎಂದರೆ ಅದು ಕಾಂಗ್ರೆಸ್ ಗೆ ಮಾತ್ರ ಅನ್ವಯಿಸುತ್ತಿತ್ತು. ಅದು ಅಧಿಕಾರದ ರುಚಿ ಕಂಡ ಪಕ್ಷ. ಸಂಸ್ಥಾ ಕಾಂಗ್ರೆಸ್ ಆಗಲೀ, ಭಾರತೀಯ ಜನಸಂಘವಾಗಲೀ, ಕಮ್ಯುನಿಸ್ಟ್ ಪಕ್ಷಕ್ಕಾಗಲೀ ಸರ್ಕಾರ ನಡೆಸುವ ಅವಕಾಶ ಇರದಿದ್ದ ಕಾಲ. ಹಾಗಾಗಿ ಕಾಂಗ್ರೆಸ್ ಗೆ ಹೊರತಾದ ರಾಜಕಾರಣಿಗಳಿಗೆ ಬ್ರಷ್ಟಾಚಾರ ವೆಸಗಲು ಅವಕಾಶವಿಲ್ಲದಿದ್ದರಿಂದ ಇರಬಹುದು ಅವರೆಲ್ಲಾ ಶುದ್ಧ ಹಸ್ತರು. ರಾಜಕಾರಣದಲ್ಲಿ ಮುರಾರ್ಜಿ ದೇಸಾಯಿ, ಲಾಲ್ ಬಹದ್ದುರ್ ಶಾಸ್ತ್ರಿ, ಜಗನ್ನಾಥರಾವ್ ಜೋಷಿ, ಆಟಲ್ ಬಿಹಾರಿ ವಾಜಪೇಯಿ ಅಂಥಹ ಧೀಮಂತ ವ್ಯಕ್ತಿಗಳಿದ್ದರೂ ಶಾಸ್ತ್ರಿಗಳ ಹೊರತಾಗಿ ಉಳಿದವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಗಾವುದ ದೂರವಿದ್ದವರು. ವಾಜಪೇಯಿಯವರ ಭಾಷಣವೆಂದರೆ ಲಕ್ಷ ಲಕ್ಷ ಜನರು ಬಿಸಿಲು ಮಳೆ ಎನ್ನದೆ ಕಾದಿರುತ್ತಿದ್ದ ಕಾಲ. ಕಾರಣ ಅವರ ವ್ಯಕ್ತಿತ್ವ ಹಾಗಿತ್ತು. ಅಂದೂ ಬ್ರಷ್ಟಾಚಾರವಿತ್ತು. ಅದು ಕೇವಲ ಕಾಂಗ್ರೆಸ್ ರಾಜಕಾರಣಿಗಳಿಂದ ಮತ್ತು ಅಧಿಕಾರಿಗಳಿಂದ. ಅಧಿಕಾರಿಗಳೂ ಗುಟ್ಟಾಗಿ ಬ್ರಷ್ಟಾಚಾರ ಮಾಡಬೇಕಿದ್ದ ಕಾಲ.
ಆದರೆ ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್ಸೇತರ ಪಕ್ಷಗಳಿಗೆ ಅಧಿಕಾರದ ರುಚಿ ಲಭ್ಯವಾಗುತ್ತಾ ಬಂದಂತೆ ಬ್ರಷ್ಟಾಚಾರದ ಪ್ರಮಾಣ ಎಲ್ಲಾ ಪಕ್ಷಗಳಲ್ಲೂ ವಿಪರೀತವಾಗಿ ವ್ಯಾಪಿಸಿತು. ಗುಟ್ಟಾಗಿದ್ದ ಬ್ರಷ್ಟಾಚಾರವು ರಾಜಕಾರಣಿಗಳು ರಾಜಾರೋಷವಾಗಿ ನಡೆಸುವಂತಾಯ್ತು.
ಕರ್ನಾಟಕದ ವಿಚಾರಕ್ಕೆ ಬಂದರಂತೂ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಮೈತ್ರಿ ಸರ್ಕಾರದಿಂದ ತೀವ್ರವಾದ ಬ್ರಷ್ಟಾಚಾರವು ಇದೀಗ ಎಲ್ಲರಲ್ಲೂ ವ್ಯಾಪಿಸಿ ಬ್ರಷ್ಟಾಚಾರದಿಂದ ಮುಕ್ತರಾದ ರಾಜಕಾರಣಿಗಳು ನಮ್ಮ ರಾಜ್ಯದಲ್ಲಿದ್ದಾರೆಯೇ? ಎಂದು ಅನುಮಾನಿಸುವ ಹಂತಕ್ಕೆ ಬಂದು ನಿಂತಿದೆ...ಅಲ್ಲಲ್ಲಾ ಮುಂದುವರೆದಿದೆ.
ನಾವೆಲ್ಲಾ ಕಾಣುವಂತೆ ಏನೂ ಇಲ್ಲದಿದ್ದ ರಾಜಕಾರಣಿಯೊಬ್ಬ ನೋಡು ನೋಡುತ್ತಿದ್ದಂತೆ ಮೂರ್ನಾಲ್ಕು ವರ್ಷ ರಾಜಕಾರಣ ಮಾಡಿ ಈಗ ಸಾವಿರಾರು ಕೋಟಿ ರೂಪಾಯಿ ಆಸ್ಥಿಯ ಒಡೆಯ. ತಿಯೇಟರ್ ಗಳು, ಕಾರ್ಖಾನೆಗಳು, ಬೃಹತ್ ಪ್ರಮಾಣದ ಲಾಡ್ಜ್ ಗಳು, ವಸತಿ ಸಮುಚ್ಚಯಗಳು, ಸಾವಿರಾರು ಎಕರೆ ಪ್ಲಾಂಟೇಶನ್ ... ಇತ್ಯಾದಿ..ಇತ್ಯಾದಿ...ಸಂಪತ್ತಿನ ಒಡೆಯರು. ಏನ್ ಸ್ವಾಮಿ ಇದೆಲ್ಲಾ?!!
1947 ಕ್ಕೆ ಮುಂಚೆ ಬ್ರಿಟಿಶರು ಮಾತ್ರ ನಮ್ಮನ್ನಾಳುವ ಒಡೆಯರು. ಆಗ ಅವರು ಆಡಿದ್ದೇ ಆಟ. ಈಗ..... ನಮ್ಮನ್ನಾಳುವವರು ನೆನಪಿರಲಿ ಪ್ರತೀ ತಾಲ್ಲೂಕಿಗೆ ಒಬ್ಬ ಶಾಸಕರು ಮಾತ್ರವಲ್ಲಾ, ಜಿಲ್ಲಾ ಪರಿಷತ್, ಪಂಚಾಯ್ತಿ ಸದಸ್ಯರುಗಳು, ಮುಂತಾದ ಹತ್ತಾರು ಜನರು ಪ್ರತೀ ತಾಲೂಕಿನಲ್ಲಿದ್ದಾರೆ. ದೇಶ ಸೇವೆಯ ಹೆಸರಲ್ಲಿ ದೇಶವನ್ನು ಲೂಟಿಮಾಡುತ್ತಿದ್ದಾರೆ. ಈ ರಾಜಕಾರಣಿಗೆ ಅವನ ಆದಾಯಕ್ಕಿಂತ ಸಾವಿರ ಪಟ್ಟು ಆಸ್ಥಿ ಇದೆ, ಎಂಬ ವಿಚಾರ ಸರ್ಕಾರಕ್ಕೆ ಗೊತ್ತಿದ್ದರೂ ಸರ್ಕಾರವೂ ಬಾಯ್ಮುಚ್ಚಿ ಕೂತಿದೆ. ಬ್ರಷ್ಟ ರಾಜಕಾರಣಿಯು ದೇಶದ ಸಂಪತ್ತನ್ನು ಮತ್ತಷ್ಟು ಲೂಟಿಮಾಡುತ್ತಾ ರಾಜಾರೋಷವಾಗಿ ಪೋಲೀಸರ ರಕ್ಷಣೆಯಲ್ಲೇ ಓಡಾಡುತ್ತಾರೆ!! ಬ್ರಷ್ಟ ರಾಜಕಾರಣಿಗೆ ಸೆಲ್ಯೂಟ್ ಹೊಡೆಯುವ ಧೈನ್ಯ ಪರಿಸ್ಥಿತಿ ಸರ್ಕಾರೀ ಅಧಿಕಾರಿಗಳಿಗೆ!!
ಇದೆಲ್ಲಾ ಯಾಕೆ ಬರೆದೆ ಎಂದರೆ ಹೀಗಾದರೂ ಸರ್ಕಾರದ ಸಂಬಂಧಿತ ಇಲಾಖೆಗಳು ಸ್ವಲ್ಪ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವತ್ತ ಗಮನಹರಿಸಲು ಯಾರಿಗಾದರೂ ಒಬ್ಬ ಅಧಿಕಾರಿಗೆ ಪ್ರೇರಣೆ ಸಿಕ್ಕರೆ ನಮ್ಮಂತ ಸಾವಿರಾರು ನಾಗರೀಕರಿಗೆ ಸಮಾಧಾನವಾಗುತ್ತೆ.
ಮೊನ್ನೆ ಒಬ್ಬ ಸಾಮಾಜಿಕ ಕಾರ್ಯಕರ್ತರ ಭೇಟಿಯಾಗಿತ್ತು. "ಅಲ್ಲಾ ಸಾರ್ ಬ್ರಿಟಿಷರ ಕಾಲವೇ ಚೆನ್ನಾಗಿತ್ತಲ್ಲವೇ?" ಅವರೂ ಇಷ್ಟೊಂದು ಲೂಟಿ ಹೊಡೆಯುತ್ತಿರಲಿಲ್ಲ ಅಲ್ವಾ? ಎಂದರೆ "ನಮ್ಮ ದೇಶವನ್ನು ಖಾಲಿ ಮಾಡಿರ್ತಾ ಇದ್ರು" ಅಂತಾ ಹೇಳಿದರೇ ಹೊರತೂ ನನ್ನ ಅಂತರಾಳದ ನೋವು ಅವರಿಗೆ ಅರ್ಥವಾಗಲೇ ಇಲ್ಲ. ಅವರು ಹೇಳುತ್ತಾರೆ " ಬ್ರಷ್ಟಾಚಾರ ಈಗ ಒಂದು ಇಸ್ಸ್ಯೂ ನೇ ಅಲ್ಲಾ!!
ನನ್ನ ಮನದೊಳಗೇ ಚಿಂತಿಸುತ್ತೇನೆ " ನಮ್ಮ ಪ್ರಥಮ ಆಧ್ಯತೆ ಏನು?" ಬ್ರಷ್ಟಾಚಾರಿಗಳನ್ನು ನೇಣಿಗೇರಿಸುವುದೇ? ಮತ-ಧರ್ಮದ ಹೆಸರಲ್ಲಿ ಗೊಂದಲ ಮೂಡಿಸುತ್ತಿರುವವರನ್ನು ಜೈಲಿಗಟ್ಟುವುದೇ? ಭಾಷೆಯ ಹೆಸರಲ್ಲಿ ಕಿತ್ತಾಡುವವರನ್ನು ತಡೆಯುವುದೇ? ಮೊದಲ ಆಧ್ಯತೆ ಯಾವುದು?
ನಿಜವಾಗಿ ನನ್ನ ಆಧ್ಯತೆ ರಾಷ್ಟ್ರಭಕ್ತಿಯನ್ನು ಜನರಲ್ಲಿ ಜಾಗೃತಿ ಮೂಡಿಸುವುದೇ ಆಗಿದೆ.ಆದರೆ ಅಷ್ಟರಲ್ಲಿ ಈ ಬ್ರಷ್ಟರಾಜಕಾರಣಿಗಳ ಸ್ಪೀಡ್ ಹೆಚ್ಚಾಗಿ ದೇಶದಲ್ಲಿ ಅಳಿದುಳಿದಿರುವ ಸಂಪತ್ತನ್ನು ಎಲ್ಲಿ ಇನ್ನೂ ಲೂಟಿ ಹೊಡೆದು ಬಿಡುತ್ತಾರೋ ಎಂಬ ಚಿಂತೆ. ನಿಮಗೇ?
Rating