""ಬನ್ನಿ ತಗೊಂಡು ಬಂಗಾರದಂಗ ಇರೂಣು""

""ಬನ್ನಿ ತಗೊಂಡು ಬಂಗಾರದಂಗ ಇರೂಣು""

ಉತ್ತರ ಕರ್ನಾಟಕದ ದಸರೆಯ ಆಚರಣೆಯಲ್ಲಿ “ಬನ್ನಿ”ಗೆ ತನ್ನದೆ ಹಿರಿದಾದ ಅರ್ಥವಿದೆ, ದಸರೆಯಲ್ಲಿ “ಬನ್ನಿ” ಕೆವಲ ಪತ್ರೆಯಲ್ಲ, ಅದು “ಬಂಗಾರ” ಹೀಗಾಗಿ ದಸರೆಯ ಹಬ್ಬ ನಮಗಲ್ಲಿ “ಬನ್ನಿ ಹಬ್ಬ”.

“ಬನ್ನಿ ತಗೊಂಡು ಬಂಗಾರದಂಗ 

ಇರೂಣು”, “ಬಂಗಾರ ತಗೊಂಡು ಬಂಗಾರದಂಗ ಇರೂಣು” ಬರಿ ಮಾತುಗಳಲ್ಲ, ಶತ್ರುಗಳು ಎದುರಾದರೂ ಆವತ್ತು ನಕ್ಕೊತ “ಬನ್ನಿ ತಗೊಂಡು ಬಂಗಾರದಂಗ ಇರೂಣು”, ಇದರಿಂದಾಗಿ ಅನೇಕ ಒಡೆದ, ಮುರುಟಿದ ಮನಸ್ಸುಗಳು ಒಂದಾದ ಸಾಕ್ಷ್ಯಗಳು ಅನೇಕ, ಒಡೆದ ಮನಸ್ಸುಗಳನ್ನು ಒಂದಾಗಿಸುವ, ಮುರಿದ ಸಂಭಂದಗಳನ್ನು ಬೇರೆಸುವ ಈ ಹಬ್ಬ ಒಂದು ರೀತಿಯಲ್ಲಿ “ವಿಜಯದಶಮಿ”ಯೇ ಸರಿ, ಎಕೆಂದರೆ ಕ್ಷಮೆ ಕೇಳಿದವನು ಮತ್ತು ಕ್ಷಮಿಸಿದವನು ಇಬ್ಬರೂ ಗೆದ್ದ ದಿನ, ಹಾಗೆಯೇ ಹೋಸ ಗೆಳೆತನ ಮತ್ತು ಸಂಭಂದಕ್ಕೆ ಮೊದಲದಿನ.

ನವರಾತ್ರಿಯ ಮೊದಲ ದಿನದಿನದಿಂದಲೆ ಪ್ರತಿದಿನ ಬೆಳೆಗ್ಗೆ ಬನ್ನಿ ಮಂಟಪ(ಬನ್ನಿ ಗಿಡ)ಕ್ಕೆ ಹೋಗಿ ಪೂಜಿಸಿ, ಮಂಟಪ ಸುತ್ತು ಹಾಕಿ ಬರುತ್ತಾರೆ, ಮನೆಗಳಲ್ಲಿ ನವಧಾನ್ಯಗಳ ಸಸಿ ನೆಟ್ಟು, ಬಿಂದಿಗೆಯಲ್ಲಿ ನೀರು ತುಂಬಿ ಪೂಜಿಸುತ್ತಾರೆ, ಇದಕ್ಕೆ ಘಟ್ಟ ಹಾಕುವುದು ಎನ್ನುತ್ತಾರೆ, ಈ ಒಂಬತ್ತು ದಿನಗಳು ಪ್ರತಿದಿನವೂ ದೇವಿ ಪಾರಾಯಣ.

ಆಯುಧ ಪೂಜೆ ನನಗೆ ಮೊದಲಿನಿಂದಲೂ ಇಷ್ಟದ ದಿನ ಎಕೆಂದರೆ, ಆವತ್ತು ರೈತರು ತಮ್ಮ ನೇಗಿಲು, ಎತ್ತು, ಚಕ್ಕಡಿ, ಹಾರಿ, ಗುದ್ದಲಿ, ಕುಡುಗೋಲು ಪೂಜಿಸಿದರೆ, ವ್ಯಾಪಾರಸ್ಥರು ತಮ್ಮ ತಕ್ಕಡಿ, ತೂಕದಕಲ್ಲು ಪೂಜಿಸುತ್ತಾರೆ, ಹಾಗೆಯೇ ಮಹಿಳೆಯರು ಮನೆಯಲ್ಲಿರುವ ಕೈ ಹಾರಿ, ಒಳ್ಳು, ಒನಕೆ, ಕುಡುಗೋಲು, ಈಳಿಗೆ ಮನೆ ಪೂಜಿಸುತ್ತಾರೆ, ತಾಯಂದಿರು ಅವುಗಳ ಜೊತೆಗೆಲ್ಲ ನಮ್ಮ ಪಾಟಿ-ಪುಸ್ತಕಗಳನ್ನು ಇಡುತ್ತಿದ್ದರು, (ನನಗೇಕೆ ಖುಶಿಯೆಂದರೆ ಅವಗಳನ್ನೊದುವುದರಿಂದ ಒಂದು ದಿನ ಮುಕ್ತಿ ಸಿಗುತ್ತಿತ್ತಲ್ಲ ಅದಕ್ಕೆ). ನಮ್ಮ ಕಡೆ ಇದಕ್ಕೆ ‘ಖಂಡೆ ಪೂಜೆ’ ಎಂತಲೂ ಕರೆಯುತ್ತಾರೆ, ಇದರೊಂದಿಗೆ ನಂಟಿರುವ ಇನ್ನೊಂದು ನೆನಪೆಂದರೆ ತುಂಬಾ ಸಣ್ಣವರಿದ್ದಾಗ ಬಹುಶ: ಬಾಲವಾಡಿ ಅಥವಾ ೧ನೇ ಅಥವಾ ೨ನೇಯತ್ತಾ ಇದ್ದಾಗ ಪಾಟಿಯ ಮೇಲೆ ಸರಸ್ವತಿಯ ಚಿತ್ರ ಬರೆಯಿಸಿಕೊಂಡು ಶಾಲೆಗೆ ಒಯ್ದು ಅಲ್ಲಿ ಸರಸ್ವತಿ ಪೂಜೆಗೆ ನಮ್ಮ ಪಾಟಿಗಳನ್ನು ಸಾಲಾಗಿ ಗೋಡೆಗೆ ಒರಗಿಸಿ ಪೂಜಿಸುತ್ತಿದ್ದುದು.

ಮರುದಿನ ವಿಜಯದಶಮಿ, ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಬನ್ನಿ ಮಂಟಪಕ್ಕೆ ಹೋಗಿ ಪೂಜಿಸಿ “ಬಂಗಾರ” ಮನೆಗೊಯ್ಯುವುದು, ಆ ದಿನ ಮನೆಯಲ್ಲಿ ಹಬ್ಬದೂಟ ಗೋದಿ ಹುಗ್ಗಿ, ಹೋಳಿಗೆ, ಕರಗಡಬು ಇತ್ಯಾದಿ… (ಅssssss…ಬ್), ಸಂಜೆಗೆ ಮೊದಲು ಊರದೇವರಿಗೆ ಬನ್ನಿ ಮುಡಿಸಿ, ಮನೆಯಲ್ಲಿ ತಂದೆ-ತಾಯಿ-ಹಿರಿಯರಿಗೆಲ್ಲ ಬನ್ನಿ-ಬಂಗಾರ ಕೊಟ್ಟು “ಬಂಗಾರ ತಗೊಂಡು ಬಂಗಾರದಂಗ ಇರೂಣು” ಅನ್ನುವ ಗಿಳಿವಿಂಡು ಕಾರ್ಯಕ್ರಮ ಶುರು. ಗುಂಪುಗಳಲ್ಲಿ ಗೆಳೆಯರೆಲ್ಲ ಮನೆ-ಮನೆಗೆ ಭೇಟಿ ನಿಡುತ್ತಾ ಬಂಗಾರ ತಗೊ ಕಾಕಾ, ಚಿಗವ್ವ, ದೊಡ್ಡಪ್ಪ, ಮಾಮಾ, ಅಕ್ಕಾ, ತಂಗಿ, ತಮ್ಮಣ್ಣಾ, ಅಜ್ಜಾ, ಅನ್ನುತ್ತಾ, ‘ಜಲ್ದಿ ಹಿಡಿಬೇ ಯಮ್ಮಾ ಗಟ್ಟಿ ಬಂಗಾರ’ ಎನ್ನುತ್ತಾ ಹಿರಿಯರಿಗೆಲ್ಲ ಅಡ್ಡ ಬಿಳುತ್ತಾ, ಆಶಿರ್ವಾದ ಕೇಳಿದ್ದೆ ಕೇಳಿದ್ದು.

ಆ ಹಿರಿಯರ ಆಶಿರ್ವಾದವೇ ಇರಬೇಕು ನಮ್ಮನ್ನೆಲ್ಲ ಇಷ್ಟು ತಣ್ಣಗಿಟ್ಟಿದ್ದು. ಅಂದ ಹಾಗೆ ತಗೋರಿ “ಬನ್ನಿ-ಬಂಗಾರ ತಗೊಂಡು ಬಂಗಾರದಂಗ ಇರೂಣು”

Comments

Submitted by shreekant.mishrikoti Sun, 10/28/2012 - 18:31

>>>“ಬನ್ನಿ ತಗೊಂಡು ಬಂಗಾರದಂಗ ಇರೂಣು”, “ಬಂಗಾರ ತಗೊಂಡು ಬಂಗಾರದಂಗ ಇರೂಣು” ಬರಿ ಮಾತುಗಳಲ್ಲ, ಶತ್ರುಗಳು ಎದುರಾದರೂ ಆವತ್ತು ನಕ್ಕೊತ “ಬನ್ನಿ ತಗೊಂಡು ಬಂಗಾರದಂಗ ಇರೂಣು”, ಇದರಿಂದಾಗಿ ಅನೇಕ ಒಡೆದ, ಮುರುಟಿದ ಮನಸ್ಸುಗಳು ಒಂದಾದ ಸಾಕ್ಷ್ಯಗಳು ಅನೇಕ, ಒಡೆದ ಮನಸ್ಸುಗಳನ್ನು ಒಂದಾಗಿಸುವ, ಮುರಿದ ಸಂಭಂದಗಳನ್ನು ಬೇರೆಸುವ ಈ ಹಬ್ಬ ಒಂದು ರೀತಿಯಲ್ಲಿ “ವಿಜಯದಶಮಿ”ಯೇ ಸರಿ, ಎಕೆಂದರೆ ಕ್ಷಮೆ ಕೇಳಿದವನು ಮತ್ತು ಕ್ಷಮಿಸಿದವನು ಇಬ್ಬರೂ ಗೆದ್ದ ದಿನ, ಹಾಗೆಯೇ ಹೋಸ ಗೆಳೆತನ ಮತ್ತು ಸಂಭಂದಕ್ಕೆ ಮೊದಲದಿನ. ---- ನಿಜ , ಬಾಗಲವಾಡರೆ . ಮರೆತ ವಿಷಯ ನೆನಪಿಸಿದ್ದಕ್ಕೆ ಧನ್ಯವಾದಗಳು. ಆದರೆ ಇತ್ತೀಚೆಗೆ ಸಂಕ್ರಾಂತಿಯ ಎಳ್ಳು-ಬೆಲ್ಲ ಮತ್ತು ಬನ್ನಿ ವಿನಿಮಯ ಕಡಿಮೆಯಾಗುತ್ತಿದ್ದು , ಮುರಿದ ಸಂಬಂಧಗಳ ಮರುಜೋಡಣೆಗೆ ಅವಕಾಶ ಕಡಿಮೆ ಆಗುತ್ತಿರುವುದು ವಿಷಾದನೀಯ.
Submitted by suma kulkarni Mon, 10/29/2012 - 10:38

ನೀವೂ ಬನ್ನಿ ತೆಗೆದುಕೊಳ್ಳಿ, ದಸರಾ ಹಬ್ಬದ ಶುಭಾಷಯಗಳು. ನೀವು ಹೇಳಿರುವುದು ನಿಜ,ಮನಸ ಮುನಿಸನ್ನು ಮರೆಸುವ ನಮ್ಮ ನಾಡ ಹಬ್ಬ ನಿಜಕ್ಕೂ ವೈಭವಾತೀತವೇ. ನಮ್ಮಲ್ಲಿ "ಬನ್ನಿ ಮುಡಿದವರು ಬಳ್ಳಿ ಕಡಿಯಬೇಕು" ಎಂದು ಶ್ಯಾವಿಗೆ ಪಾಯಸ ಕಡ್ಡಾಯವಾಗಿ ಮಾಡುತ್ತಾರೆ. ಬನ್ನಿ ಮರಕ್ಕೆ ಹೋಗಿ ಬನ್ನಿ ತರುವ ಸಹೋದರರನ್ನು, ಸಹೋದರಿಯರು ಆರತಿ ಮಾಡಿ ಒಳಕ್ಕೆ ಕರೆದುಕೊಳ್ಳುವುದು ಕೆಲವಡೆ ವಾಡಿಕೆ ಇದೆ. ದಸರಾ ಹಬ್ಬದ ವೈಶಿಷ್ಟ್ಯದ ಬಗ್ಗೆ ಸರಳ-ಸುಂದರವಾಗಿ ಮಂಡಿಸಿರುವಿರಿ, ಧನ್ಯವಾದಗಳು.