ಪುಟ್ಟನ ಕನಸಲಿ ಇಂದ್ರನ ಚಂದ್ರನು

ಪುಟ್ಟನ ಕನಸಲಿ ಇಂದ್ರನ ಚಂದ್ರನು

ಕವನ

 

ವಾಲ್ಮೀಕಿ ಋಷಿಯ ಜಯಂತಿ ನೆನೆಪಲಿ

ಹರಿದಾಸ ಅದ್ಭುತ ಕೀರ್ತನ ಸುಧೆಯಲಿ

ಹುದುಗಿದ ಹುಡುಗರು ಬಾಯನು ತೆರೆದು

ಆಲಿಸೊ ಪರಿಯನು ನೋಡಿದ ದಾಸರು

ಬಾಲಸೂರ್ಯನೆ ಹಣ್ಣೆಂದು ತಿಳಿಯುವ

ಬಾಲಕ ಹನುಮನ ಸಾಹಸ ಕಥೆಯನು

ಉಕ್ಕಿದ ಉತ್ಸಾಹದಿ ಹೇಳಿದ ಪರಿಯು

ಹೊಕ್ಕಿತು ಪುಟ್ಟನ ಮನಸಿನ ಆಳಕೆ     || 1 ||

 

ಪಾಠದ ಸಮಯದಿ ಊಟದ ಹೊತ್ತಲು

ಕಾಟವ ಕೊಢುವ ಹನುಮನ ಸಾಹಸ

ಕಿಟಿಕಿಯಲಿಣುಕುವ ಚಂದ್ರನ ನೋಡುತ

ಮಲಗುವ ಮೊದಲು ಸಾಹಸ ಹನುಮನ

ಧ್ಯಾನದಿ ಮಲಗಿದ ಪುಟ್ಟನು ಕನಸಲಿ

ತಾನೆ ಹನುಮನು ದೂರದ ಚಂದ್ರನು

ತನಗೇ ಇಲ್ಲದಿರೆ ಇಂದ್ರನಿಗೇಕೆ

ಹಿಡಿದೇ ತರುವೆನು ಚಂದ್ರನ ಮನೆಗೆ

ಆಡಲು ಕೊಡುವೆನು ಮಿತ್ರರಿಗೆಲ್ಲಾ

ಹಾರಿದ ಪುಟ್ಟನು ಚಂದ್ರನ ಲೋಕಕೆ    || 2 ||

 

ಹಿಡಿದನು ಚಂದ್ರನ ಎರಡೂ ಕೈಯಲು

ಪುಟ್ಟನ ಹಿಡಿತಕೆ ಹೆದರಿದ ಚಂದ್ರನ

ರಮಿಸಿದ ಪುಟ್ಟನು ಏನೂ ಮಾಡೆನು

ನನ್ನಯ ಮನೆಯಲೆ ಇಡುವೆನು ನಿನ್ನನು

ಆಟವ ಆಡುತ ಮೋಜನು ಮಾಡುವ

ಮಿತ್ರರಿಗೆಲ್ಲಾ ಪರಿಚಯ ಮಾಡುವೆ

ನಿನಗೂ ಹೇಗೂ ಅಮ್ಮನೇ ಇಲ್ಲ

ನನ್ನಯ ಅಮ್ಮನೇ ನಿನಗೂ ಅಮ್ಮ

ರುಚಿರುಚಿ ತಿಂಡಿಯ ಕೊಡುವಳು ಅಮ್ಮ

ಒಪ್ಪಿದ ಚಂದ್ರನು ಅಮ್ಮನ ಆಸೆಗೆ    || 3 ||

 

ಇಂದ್ರನು ಬಿಡುವನೆ ನಮ್ಮನು ಸುಮ್ಮನೆ

ಹನುಮನ ಪಾಡದು ತಿಳಿಯದೆ ನಿನಗೆ

ಹಾರುವ ಅವಸರ ಗದೆಯನು ಮರೆತನು

ಅದಕೇ ಹೊಡೆದನು ಇಂದ್ರನು ಅಂದು

ಮರೆಯದೆ ತಂದಿಹೆ ಗದೆಯನು ನೋಡು

ಎದುರಲಿ ಬರಲಿ ನಿಮ್ಮಯ ಇಂದ್ರನು

ಗದೆಯನು ಬೀಸಿದ ವೀರಾವೇಶದಿ

ವಿಧಿಯೇ ಇಲ್ಲದೆ ಹೊರಟನು ಚಂದ್ರನು

ಪುಟ್ಟನ ಜೊತೆಯಲಿ ಮನೆಗೇ ಬಂದನು   || 4 ||

 

ಉಬ್ಬಿದ ಎದೆಯಲಿ ಗದೆಯನು ಹಿಡಿದು

ಮಿತ್ರರರಿಗೆಲ್ಲಾ ತೋರಿದ ಚಂದ್ರನ

ನಾನೇ ತಂದಿಹೆ ಮನೆಯಲೆ ಇರುವನು

ಆಡುವ ಸಮಯದಿ ಹೊರಗಡೆ ಬಿಡುವೆನು

ಅಮ್ಮನ ಹೊರತು ಯಾರಿಗು ತಿಳಿಯದು

ಪುಟ್ಟನ ಮಿತ್ರನ ವೇಷದಿ ಚಂದ್ರನು

ಬೀದಿಯಲಿಳಿದನು ಆಟವ ಆಡಲು    || 5 ||

 

ಹುಣ್ಣಿಮೆ ರಾತ್ರಿಯ ತಂಪಿನ ಬೆಳಕನು

ಚೆಲ್ಲುವ ಚಂದ್ರನೆ ಬಾನಲಿ ಇರದಿರೆ

ಇಂದ್ರನ ಸಭೆಯಲಿ ಚಂದ್ರನ ಚರ್ಚೆಯು

ತಡಬಡ ಮಾಡುವ ಇಂದ್ರನ ನೋಡಿದ

ಬೃಹಸ್ಪತಿ ಸಭೆಯನು ದೂಡಿದ ಮುಂದಕೆ

ದಿಕ್ಪಾಲಕ ಸಭೆಯನು ತುರ್ತಲಿ ಕರೆದನು

ಸುಳಿವನೆ ಕೊಡದೆ ಅಡಗಿದ ಚಂದ್ರನ

ಹುಡುಕುವ ಕೆಲಸವ ವಹಿಸಿದ ವಾಯುಗೆ   || 6 ||

 

ಪುಟ್ಟನ ಮನೆಯ ಬಳಿಯಲೆ ಸುಳಿಯಲು

ಚಂದ್ರನ ಸುಳಿವನು ನೀಡಿದ ಇಂದ್ರಗೆ

ಇಂದ್ರನ ಸೇನೆಯು ಪುಟ್ಟನ ಮನೆಯಲಿ

ಚಂದ್ರನು ದೈನ್ಯದಿ ಪುಟ್ಟನ ನೋಡಿದ

ಕಳಿಸೆನು ನಿನ್ನನು ಇಂದ್ರನ ಜೊತೆಯಲಿ

ಅಭಯವ ನೀಡಿದ ಚಂದ್ರನ ನೋಡುತ  || 7 ||

 

ಕರೆದನು ಮಿತ್ರರ ಮನೆಯಲಿ ಸೇರಲು

ಚಂದ್ರನ ಬಿಡುಗಡೆ ಕೂಡದು ಎಂದರು

ಯುದ್ಧವ ಮಾಡುವ ಇಂದ್ರನ ಜೊತೆಗೆ

ಪುಟ್ಟನೆ ನಮ್ಮಯ ಸೇನೆಯ ನಾಯಕ

ಮೂಗನು ಅರಳಿಸಿ ಕಾಲನು ಝಾಡಿಸಿ

ಗದೆಯನು ಬೀಸಿದ ಜೋರಲಿ ಪುಟ್ಟನು  || 8 ||

 

ಪಟ್ಟನೆ ಕೊಟ್ಟಳು ಏಟನು ಅಮ್ಮನು

ದಿಗ್ಗನೆ ಕುಳಿತನು ನಿದ್ದೆಯ ಪುಟ್ಟನು

ಕಣ್ಣನು ಉಜ್ಜುತ ಅಮ್ಮನ ನೋಡಲು

ಅಮ್ಮನು ತಂದಿಹ ಹಾಲಿನ ಲೋಟವು

ಕೆಳಗಡೆ ಬಿದ್ದಿದೆ ಬೀಸಿದ ರಭಸಕೆ

ಅಕ್ಕನು ಛೇಡಿಸೆ ಏನದು ಕನಸಲಿ

ಅಮ್ಮನ ಕೋಪವು ಇಳಿಯಲಿ ಮೊದಲು

ಭರ್ಜರಿ ಕನಸದು ನಂತರ ಹೇಳುವೆ

ಓಡಿದ ಪುಟ್ಟ ಶಾಲೆಯ ತಯಾರಿಗೆ   || 9 ||

 

ಕನ್ನಡ ತಾಯಿಯ ಕಣ್ಮಣಿಗಳೆ ನಮನ

ಹರಿಕಥೆ ಕೇಳುವ ಮಕ್ಕಳ ಮನಸಿನ

ಪುಟ್ಟನ ಸಾಹಸ ಚಂದ್ರನ ವಿಜಯದ

ರಂಜಿತ ಕನಸಿನ ಜಯಪ್ರಕಾಶಿತ ಕವನ    || 10 ||