ಕಥೆ: ಅವನು ಮತ್ತು ಅವಳು

ಕಥೆ: ಅವನು ಮತ್ತು ಅವಳು

 

    ಆತನದೂ ಆಕೆಯದೂ ಅದೇನೋ ವಿಚಿತ್ರ ಬಗೆಯ ಸಂಬಂಧ. ಅದು ಸ್ನೇಹಕ್ಕಿಂತಲೂ ಹೆಚ್ಚಿನ ಸಲುಗೆಯದು ಆದರೆ   ಪ್ರೇಮದ ಸ್ಥಿತಿಯನ್ನು ಅದಿನ್ನೂ ಮುಟ್ಟದಿರುವಂತಹದ್ದು. ಅತ್ತಲಾಗೆ ಸ್ನೇಹವೂ ಅಲ್ಲ ಇತ್ತಲಾಗೆ ಪ್ರೇಮವೂ ಅಲ್ಲ ಎನ್ನುವ ಅವೆರಡರ ನಡುವಿನ ಸ್ಥಿತಿ. ಹಾಗಂತ ಇವರಿಬ್ಬರೂ ಪರಿಚಯವಾದದ್ದು ಇತ್ತೀಚಿಗಂತೂ ಅಲ್ಲ. ಕಾಲೇಜಿನಲ್ಲೇ ಡಿಗ್ರಿ ಓದುವಾಗಲೇ ಭೇಟಿಯಾಗಿ ಈಗ ಒಂದೇ ಕಂಪನಿಯಲ್ಲಿ ಕೆಲಸ ಮಾಡುವವರೆಗೆ ಇವರಿಬ್ಬರ ಸಂಬಂಧ ಮುಂದುವರಿದುಕೊಂಡು ಬಂದಿತ್ತು. ಅವನು ಸ್ವಲ್ಪವೇ ಅನುಕೂಲಕರ ಕುಟುಂಬದಿಂದ ಬಂದಂತವನು. ಅವಳು ಸಾಕಷ್ಟು ಅನುಕೂಲಕರ ಕುಟುಂಬದಲ್ಲಿ ಹುಟ್ಟಿ ಬೆಳೆದಂತವಳು. ಅವನು ಓದು ಬರಹದಲ್ಲಿ ಬುದ್ಧಿವಂತ, ಅವಳು ಓದು ಬರಹದಲ್ಲಿ ಅವನಷ್ಟು ಬುದ್ದಿವಂತಳಲ್ಲ. ಅವನು ಓದುತ್ತಿರುವ ಉದ್ದೇಶ  ಹೊಟ್ಟೆಪಾಡಿಗಾಗಿ ನೌಕರಿ ಹುಡಿಯುವ ಸಲುವಾಗಿ, ಆದರೆ ಅವಳ ಓದಿನಲ್ಲಿ  ಆ ತರಹದ ಉದ್ದೇಶವಿಲ್ಲ. ಹೀಗೆಲ್ಲ ಅವರಿಬ್ಬರಲ್ಲಿ ಒಬ್ಬರಿಗೊಬ್ಬರಿಗೆ  ತಾಳೆಯಾಗದಿದ್ದರೂ, ಅವರಿಬ್ಬರನ್ನು ಬೆಸೆದದ್ದು ಅವನ ತಾಳ್ಮೆ  ಹಾಗೂ ಅವಳ ಉತ್ಸಾಹ ಮತ್ತು ಚಾಂಚಲ್ಯ  !!
    ಅವಳಿಗೆ ಏನಾದರೂ ಓದು ಬರಹದಲ್ಲಿ ಅರ್ಥವಾಗದಿದ್ದರೆ ನೇರವಾಗಿ ಬರುವುದು ಅವನಲ್ಲಿ. ಕೆಲಸದಲ್ಲಿ ಏನೇ ಅರ್ಥ ವಾಗದಿದ್ದರೂ ಅವನೇ ಪರಿಹಾರ ಸೂಚಿಸಬೇಕು. ಅವಳ ಕೆಲಸವನ್ನ ಅವಳು ಸ್ವಂತವಾಗಿ ಮಾಡಿದ್ದಕ್ಕಿಂತ ಇವನು ಮಾಡಿದ್ದೆ ಜಾಸ್ತಿ. ಅವನೂ ಅಷ್ಟೆ ಅವನಿಗೆ ನಿರಾಸೆ,ಬೇಸರ,ಜಿಗುಪ್ಸೆ  ಎಂದೆನಿಸಿದಾಗಲೆಲ್ಲ ಅವಳ ಹತ್ತಿರ ಒಂದೆರಡು ಮಾತನಾಡಿದರೆ ಸಾಕು , ಅವಳ ಉತ್ಸಾಹದ ಚಿಲುಮೆಯ ಪ್ರೋಕ್ಷಣೆಯಾಗಿ ಅವನಲ್ಲಿ ಹೊಸ ಶಕ್ತಿಯ ಸಂಚಯವಾಗುತ್ತಿತ್ತು.  ಕಾಲೇಜು ಮುಗಿದ ಮೇಲೆ ಅವನು ಬೇರೆ ದಾರಿಯಿಲ್ಲದೆ ಹೊಟ್ಟೆ ಪಾಡಿಗಾಗಿ ಈ ಕೆಲಸಕ್ಕೆ ಸೇರಿದ್ದ. ಅವಳು ಕೆಲಸ ಸಿಕ್ಕೆದೆಯಲ್ಲ ಅಂತ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಹೀಗೆ ಒಂದೆರಡು ವರ್ಷ ಸಾಗಿರುವಾಗಲೇ ಅವಳು ಮನೆಯವರ ಒತ್ತಾಯಕ್ಕೋ ಅಧವಾ ಹೊಸದನ್ನು ಕಲಿಯುವ ಉತ್ಸಾಹಕ್ಕೋ ಏನೋ  ಉನ್ನತ ವ್ಯಾಸಂಗ ಅಂತ ಅಮೆರಿಕಾಕ್ಕೆ ಹಾರಿದಳು. ಇವನು ಹೊಟ್ಟೆಪಾಡಿಗೆ ಬೇರೆ ದಾರಿಯಿಲ್ಲ ಅದೇ ಕಂಪನಿಯಲ್ಲಿ ಮುಂದುವರಿದ.
    ಅವಳು ಅಮೆರಿಕಾಕ್ಕೆ ಹೋದಮೇಲೆ ಅವರಿಬ್ಬರ ಸಂಬಂಧ ಮಾಸತೊಡಗಿತೆಂದೇ ಹೇಳಬೇಕು. ಫೋನು, ಇಂಟರ್ನೆಟ್ ಇವೆಲ್ಲಾ ಇದ್ದರೂ ಅದೇನೋ ಸಂಕೊಚವೋ, ಅಹಂಕಾರವೋ, ಸ್ವಾಭಿಮಾನವೋ  ಒಂದೂ ತಿಳಿಯದಾಗಿ ಅವೂ ಅವರ ಉಪಯೋಗಕ್ಕೆ ಬರಲಿಲ್ಲ. ಮೊದಲೂ ದಿನವೂ ಒಬ್ಬರಿಗೊಬ್ಬರು ಅಂಟಿಕೊಂಡಂತೆ ಇರುತ್ತಿದ್ದವರು ಈಗ ಮನುಷ್ಯ ಸ್ವಾಭಾವಿಕ ಕೆಲವು ಗುಣಗಳಿಂದ ಒಬ್ಬರಿಗೊಬ್ಬರು ದೂರವಾಗತೊಡಗಿದ್ದರು. ಮೊದ ಮೊದಲು ಇಬ್ಬರು ದೂರವಾದಾಗ ಎಲ್ಲಾದರೊಮ್ಮೆ  ಫೋನಿನಲ್ಲಿ ಮಾತನಾಡಿದ್ದು ಬಿಟ್ಟರೆ ಇತ್ತಿಚಲಾಗಿ ಒಬ್ಬರನ್ನೊಬ್ಬರು ಮರೆತಂತೆ ಇದ್ದುಬಿಟ್ಟಿದ್ದರು. ಅತ್ತ ಅವಳು ಅಮೆರಿಕಾದಲ್ಲೇ ಕಲಿಕೆ  ಮುಗಿಸಿ ಅಲ್ಲಿಯೇ ಸಧ್ಯಕ್ಕೆ ಯಾವುದೋ ನೌಕರಿ ಹಿಡಿದಿದ್ದರೆ,  ಇತ್ತ ಇವನು ಅದೇ ಕಂಪನಿಗೆ ಜೋತು ಬಿದ್ದಿದ್ದ.
       ಹೀಗೆ ಕಾಲಚಕ್ರ ತಿರುಗುತ್ತಿರಲು, ಒಂದು ದಿನ ಎಂದಿನಂತೆ ಆಫೀಸಿಗೆ ಹೋಗುವಾಗ ದಾರಿಮಧ್ಯದಲ್ಲಿ ಯಾರೋ ಅವನನ್ನು ಕರೆದ ಅನುಭವ. ಹಿಂತಿರುಗಿ ನೋಡಿ, ಯಾರಿದು ಅಂತ ಸ್ವಲ್ಪ ಯೋಚಿಸಿ ನೋಡಿದರೆ ಅದು ಅವಳು. ಈಗ ಅವಳ ಮುಖದಲ್ಲಿ ಮೊದಲಿಗಿಂತಲೂ ಸ್ವಲ್ಪ ಕಳೆ.  ನೋಡಲು ಮೈಕಟ್ಟಿನಲ್ಲಿ ಅಲ್ಪ ಸ್ವಲ್ಪ ಬದಲಾವಣೆ.  ಅವನು ಅವಳನ್ನು ನೋಡಿ ತನ್ನಲ್ಲೇ ವಿಶ್ಲೇಷಿಸುವ ಹೊತ್ತಿಗಾಗಲೇ ಅವಳು ತನ್ನ ಕಾರಿನಿಂದ ಇಳಿದು ಅವನ ಹತ್ತಿರಕ್ಕೆ ಬಂದಾಗಿತ್ತು. “ಏನೋ ನೋಡೋಕೆ ಇದ್ದ ಹಾಗೆ ಇದ್ದೀಯಲ್ಲೋ , ನಿನ್ನ ಗುರುತು ಹಿಡಿಯಲಿಕ್ಕೆ ಏನೂ ತೊಂದರೆಯೇ ಆಗಲಿಲ್ಲ ನೋಡು, ನಿನ್ನನ್ನು ನೋಡಿದರೆ ನನ್ನ ಗುರುತೇ ಸಿಗಲಿಲ್ಲ ಅನಿಸುತ್ತೆ. ಅಷ್ಟೊಂದು ಚೇಂಜ್ ಆಗಿದ್ದಿನ  ನಾನು ?” ಹೀಗೆ ಪಟ ಪಟನೆ ಅವಳ ಬಾಯಿಂದ ಮಾತುಗಳು ಜೋರಾಗಿ ಬೀಸುವ ಗಾಳಿಗೆ ಮಾವಿನ ಹಣ್ಣಿನಂತೆ ಉದುರಿದವು.  ಅವನಿನ್ನೂ ಆಶ್ಚರ್ಯದಿಂದ ಹಾಗೆ ನಿಂತಿದ್ದ. ಅವಳೇ ಮುಂದುವರಿಸಿದಳು “ಮತ್ತೆ ನನ್ನನ್ನೆಲ್ಲ  ಮರೆತಂತೆ ಇದೆ,  ಒಂದು ಫೋನ್ ಸಹ ಮಾಡಲಿಲ್ಲ. ನಾವು ಮಾಡುತ್ತಿದ್ದ ಆ ಚೇಷ್ಟೆಗಳು, ನಾನು ನಿನ್ನನ್ನು ಹೇಗೆಲ್ಲಾ ಗೇಲಿ ಮಾಡುತ್ತಿದ್ದೆ ನೆನಪಿದೆಯ. ಕಾಲೇಜಿನಲ್ಲಿ ಓದುವಾಗ ನೀನು ಮಾಡುತ್ತಿದ್ದ ಸಹಾಯ ಮರೆಯಲು ಸಾಧ್ಯವೇ?  ಮತ್ತೆ ಹೇಗೆ ನಡೀತಾ ಇದೆ ನಿನ್ನ ಕೆಲಸ ಎಲ್ಲಾ ?”  ಇಷ್ಟು ಹೊತ್ತು ಅವಳು ಹೇಳುತ್ತಿರುವುದನ್ನು ಕೇಳುತ್ತಲೇ ನಿಂತಿದ್ದ ಆತ ಮುಂದುವರಿಸಿದ
“ನನ್ನ ಜೀವನದಲ್ಲಿ ಹೊಸದು ಏನೂ ಇಲ್ಲ. ಮೊದಲು ಹೇಗಿದ್ದೆನೂ ಇಗಲೂ ಹಾಗೆ. ಅದೇ ಕೆಲಸ, ಒಂದು ಪ್ರೊಮೋಶನ್ ಸಹ ಸಿಕ್ಕಿಲ್ಲ. ಕೆಲಸದಲ್ಲೂ ಆಸಕ್ತಿ ಹೊರಟು  ಹೋಗುತ್ತಿದೆ. ಬೇರೆಯೂ ಎಲ್ಲೂ ಸರಿಯಾದ ಕೆಲಸ ಸಿಕ್ಕಿಲ್ಲ ಹಾಗಾಗಿ ಹಳೆಯ ಆಲದ ಮರವೇ ಗತಿ ಅಂತ ಇಲ್ಲೇ ಜೋತು ಬಿದ್ದಿದ್ದೀನಿ ನೋಡು . ಅದು ಬಿಟ್ಟರೆ ಅಷ್ಟೆ ಮತ್ತೇನೂ ಹೇಳಲಿಕ್ಕೆ ತೋಚುತ್ತಿಲ್ಲ. ಮತ್ತೆ ನಿಂದು ಏನು ಕಥೆ ? ಅಮೇರಿಕಾದಲ್ಲಿ ಓದಿ ಅಲ್ಲೇ ಸೆಟಲ್ ಅಂತ ಕಾಣ್ಸುತ್ತೆ “.
 
 “ಹಾಗೇನಿಲ್ಲ ಅಮೆರಿಕವೂ ಯಾಕೋ ಬೇಜಾರ ಅಂತ ಅನಿಸೋಕ್ಕೆ ಶುರುವಾಯಿತು. ಅದಕ್ಕೆ ಇಲ್ಲಿಗೆ ಬಂದುಬಿಟ್ಟೆ”
 
 “ಮತ್ತೆ ಇಲ್ಲೇನು ಮಾಡ್ತಿಯ ಮತ್ತೆ ನೀನು ಓದಿರೋದಕ್ಕೆ ಇಲ್ಲಿ ಕೆಲಸ ಸಿಗುತ್ತಾ ?”
 
“ನಿಜ ಹೇಳ ಬೇಕೆಂದರೆ ಈಗ ನೀನು ಕೆಲಸ ಮಾಡ್ತಾ ಇದ್ದಿಯಲ್ಲ ಕಂಪನಿ, ಅಂದರೆ ನಾನೂ ಅಲ್ಲೇ ಕೆಲಸ ಮಾಡ್ತಾ ಇದ್ದೆ ಅನ್ನು. ಅಲ್ಲೇ ನನಗೆ  ಎಂ.ಡಿ. ಯಾಗಿ ಕೆಲಸ ಸಿಕ್ತು . ಈಗ ಒಂಥರಾ ಇಲ್ಲಿನ ಕಂಪನಿ ವ್ಯವಹಾರ ಎಲ್ಲಾ ನೋಡ್ಕೊಳೋದು ನಾನೇ. ಅದಕ್ಕೆ ಅಮೆರಿಕ ಸಹವಾಸನೆ ಸಾಕು ಇಲ್ಲೇ ಆರಾಮಾಗಿ ಇರೋಣ ಅಂತ ಬಂದ್ಬಿಟ್ಟೆ ನೋಡು ” 
 
 ಅವನ ಮುಖ ಒಮ್ಮೆಲೇ ಕಳೆಗುಂದಿದಂತೆ ಆದರೂ ಒಮ್ಮೆಲೇ ಮುಖದ ಮಾಂಸಖಂಡಗೆಳೆಲ್ಲಾ ಹಿಗ್ಗಿ ದೊಡ್ಡದಾದ ನಗೆಯೊಂದನ್ನು ಆತನ ಮುಖ ವ್ಯಕ್ತಪಡಿಸಿತು. ಆ ನಗುವಿನಲ್ಲಿ ಆಶ್ಚರ್ಯದ ಭಾವವಿರಲಿಲ್ಲ, ನಗೆಯ ಸಂತೋಷವಿರಲಿಲ್ಲ  ಬದಲಾಗಿ ಏನೋ ಒಂದು ತರಹದ ಅವ್ಯಕ್ತ ಭಾವ ಅದರಲ್ಲಿ ಅಡಗಿತ್ತು. ಆಕೆಗೆ ಅದೇನೆಂದು ಅರ್ಥವಾಗಲಿಲ್ಲ.
  
“ಇದೇನಿದು ಆಶ್ಚರ್ಯ, ನನಗಂತೂ ಇದಕ್ಕಿಂತಲೂ ಸಂತೋಷದ ವಿಷಯ ಬೇರೆ ಇಲ್ಲವಪ್ಪ, ನಮ್ಮವರೊಬ್ಬರು ಇಷ್ಟು ದೊಡ್ಡ ಸ್ಥಾನಕ್ಕೆ ಏರಿರುವುದು ಇದಕ್ಕಿಂತ ಭಾಗ್ಯ ಬೇಕೆ ? ”  ಆದರೆ ಆತನ ಆ ಮಾತಿನಲ್ಲಿ ಕನಿಷ್ಠ  ಗೆಳೆತನದ ಸಲುಗೆಯೂ  ವ್ಯಕ್ತ ವಾಗಿರಲಿಲ್ಲ. ಅವನು ಹೇಳುತ್ತಿದ್ದ ಶಬ್ಧಕ್ಕೂ ಅವನ ಮುಖದ ಭಾವಕ್ಕೂ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಬದಲಾಗಿ ಅವನ ಆಡುತ್ತಿದ್ದ ಮಾತಿನ ದಾಟಿಯು ವಿನಮ್ರ ಸೇವಕನು ತನ್ನ ಒಡೆಯನಿಗೆ ಭಿನ್ನವಿಸುವಂತೆ ಇತ್ತು.  
 
“ನಾನಂತೂ ನಿಮ್ಮ ಕೆಳಗೆ ಕೆಲಸ ಮಾಡುವುದು ಪುಣ್ಯ ಅಂತ ತಿಳ್ಕೊತ್ತಿನಿ. ನನಗೆ ಹೊಟ್ಟೆಕಿಚ್ಚು ಅಂತೆಲ್ಲ ಇಲ್ಲ ನೋಡಿ “ ಎಂದು ಅವನು ಮತ್ತೊಮ್ಮೆ  ವಿನಮ್ರತೆಯಿಂದ ಭಿನ್ನವಿಸಿಕೊಂಡ.
“ಅಯ್ಯೋ ದಯವಿಟ್ಟು ಈ ರೀತಿ ಎಲ್ಲಾ ಮಾತನಾಡಬೇಡಿ. ಎಷ್ಟೊಂದು ವರ್ಷದಿಂದ ನಮ್ಮಿಬ್ಬರ ನಡುವೆ ಗೆಳೆತನಕ್ಕಿಂತಲೂ ವಿಶಿಷ್ಟವಾದ  ಸಂಬಂಧ ಇತ್ತಲ್ಲವೇ. ನಾನು ನಿನ್ನ ಎಂ.ಡಿ ಅಂದ ಮಾತ್ರಕ್ಕೆ  ನೀನು ಮಾತಿನ ದಾಟಿಯನ್ನೇ ಬದಲಿಸುವುದೇ? ದಯವಿಟ್ಟು ನನ್ನನ್ನು ನಿನ್ನ ಮೊದಲಿನ ಸ್ನೇಹಿತೆಯ ಭಾವದಲ್ಲಿ ನೋಡು”
ಆದರೆ ಅವನಿಗೆ ಅವಳು ಹೇಳುತ್ತಿರುವುದು ಅರ್ಥವಾಗುವಂತೆ ತೋರಲಿಲ್ಲ. ಅವನ ಮುಖದಲ್ಲಿ ಅವಳ ಮೇಲೆ  ಒಂದು ತರಹದ ವಿನಮ್ರತೆ ನೆಲೆ ನಿಂತಿತ್ತು. ಅವಳು ಅವನನ್ನು ತನ್ನ ಮೊದಲ ಸ್ನೇಹಿತನಂತೆ  ಕಾಣಲು ಅವನ ಮುಖದಲ್ಲಿ ಹುದುಕಾಡಿದಷ್ಟು ಅವನ ಮುಖ ಮತ್ತಷ್ಟು ವಿನಮ್ರವಾಗುತ್ತ ಹೋಯಿತು. ಅವಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವನಿಗೂ ಅಷ್ಟೆ ಏನು ಮಾಡಬೇಕೆಂದು ತೋಚಲಿಲ್ಲ. ಅವನು ಮತ್ತು ಅವಳ ಸಂಬಂಧ ಈಗ ಮತ್ತೊಂದು ಬಗೆಯ ಅವ್ಯಕ್ತ ಭಾವಕ್ಕೆ ತಿರುಗಿ ನಿಂತಿತ್ತು !!

 

Rating
No votes yet

Comments

Submitted by Prakash Narasimhaiya Tue, 10/30/2012 - 19:44

ಆತ್ಮೀಯ ಭಟ್ಟರೇ,
ನಿಮ್ಮ ಈ ಕಥೇನ ಟಿ ವಿ ಸೀರಿಯಲ್ ನವರಿಗೆ ಕೊಟ್ಟಿದ್ದರೆ ಒಂದುನೂರು ಸೀರಿಯಲ್ ಆರಾಮವಾಗಿ ಮಾಡಿಬಿಡ್ತಾರೆ. ನೋಡಿ ಪ್ರಯತ್ನ ಮಾಡಿ.
ಚಿಕ್ಕದಾಗಿ ಚೊಕ್ಕವಾಗಿ ಬಂದಿದೆ ಕಥೆ. ಧನ್ಯವಾದಗಳು.

Submitted by ನಾಗರಾಜ ಭಟ್ Wed, 10/31/2012 - 18:37

In reply to by Prakash Narasimhaiya

ಧನ್ಯವಾದಗಳು, ಪ್ರಕಾಶ್ ನರಸಿಂಹಯ್ಯ ರವರೆ .. ಖಂಡಿತ ಪ್ರಯತ್ನಿಸೋಣ ಆದ್ರೆ ಕಥೆಯನ್ನ ವ್ಯಥೆ ಮಾಡದಿದ್ರೆ ಅಷ್ಟೇ ಸಾಕು -:)