ಸರ್ಕಲ್

ಸರ್ಕಲ್

ಅಲ್ಲೊಂದು ಸರ್ಕಲ್ ಇತ್ತು. ಅದು ಬರಿ ಸರ್ಕಲ್ ಆಗಿರಲಿಲ್ಲ. ಸುತ್ತಲೂ ಕಲ್ಲಿನ ಗೋಡೆ ಕಟ್ಟಿಸಿಕೊಂಡು ಮಧ್ಯದಲ್ಲಿ ಮಣ್ಣನ್ನು ತುಂಬಿಕೊಂಡು ಅದರ ತುಂಬ ಸಣ್ಣ ಸಣ್ಣ ಗಿಡಗಳು, ಹುಲ್ಲಿನ ಹಾಸಿಗೆ ಆಸರೆಯಾಗಿದ್ದ ಪುಟ್ಟದಾದ, ಚೊಕ್ಕದಾದ, ಸುಂದರವಾದ, ಪುಟ್ಟ ಸರ್ಕಲ್ ಅದಾಗಿತ್ತು.


ಅಲ್ಲಿ ಹೆಚ್ಚು ವಾಹನ ದಟ್ಟಣೆ ಇರಲಿಲ್ಲ. ಆದ್ದರಿಂದ ಆ ಸರ್ಕಲ್ ನ ಕಲ್ಲುಗಳು ಇನ್ನೂ ತನ್ನ ಅಸಲಿ!! ಬಣ್ಣವನ್ನು ಉಳಿಸಿಕೊಂಡಿತ್ತು. ಅಸಲಿ ಅಂದರೆ ಪೂರ ಅಸಲಿಯಲ್ಲ...ಅಂಥಹ ಚಂದ್ರನಲ್ಲೇ ಕಪ್ಪು ಕಲೆಗಳು ಇರುತ್ತವಂತೆ! ಇನ್ನು ಆ ಸರ್ಕಲ್ ನಲ್ಲಿ ಇಲ್ಲದಿದ್ದರೆ ಹೇಗೆ ಅಲ್ಲವೇ??...ಹಾಗಾಗಿ ಅಲ್ಲಲ್ಲಿ ಸ್ವಲ್ಪ ಕಪ್ಪಾಗಿತ್ತು. ಅದು ಬಿಟ್ಟರೆ ಹೆಚ್ಚೇನೂ ಕೊಳಕಾಗಿರಲಿಲ್ಲ. ಮಳೆ ಬಂದಾಗ!! ಇಲ್ಲವಾದರೆ ಪ್ರತಿದಿನ ಸರ್ಕಲ್ ನಲ್ಲಿದ್ದ ಗಿಡಗಳಿಗೆ ನೀರು ಹಾಯಿಸಲು ಬರುತ್ತಿದ್ದ ಪಾಲಿಕೆಯವರು ಬಿಡುತ್ತಿದ್ದ ನೀರು ಗಿಡವನ್ನು ತೋಯಿಸಿ...ಅಲ್ಲಿಂದ ಮಣ್ಣನ್ನು ಕಲ್ಲಿನ ಮೇಲೆ ಹರಿಯಲು ಬಿಟ್ಟಾಗ ಮಾತ್ರ ಸ್ವಲ್ಪ ಗಲೀಜಾಗುತ್ತಿತ್ತು. 


ಆದರೆ ಅದೆಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಅಲ್ಲಿ ತಳವೂರಿತ್ತು ಆ ಸರ್ಕಲ್. ಮೊದಲೇ ಹೇಳಿದಂತೆ ಅಲ್ಲಿ ಹೆಚ್ಚಾಗಿ ವಾಹನ ದಟ್ಟಣೆ ಇರಲಿಲ್ಲ. ಆ ಸರ್ಕಲ್ ಅಕ್ಕ ಪಕ್ಕದಲ್ಲಿ ಏನೇನು ಇತ್ತೆಂದರೆ, ಒಂದು ಉದ್ಯಾನವನ, ಒಂದು ಕಾಲೇಜ್ ಇಷ್ಟು ಮಾತ್ರ ಇತ್ತು. ಹಾಗೆಯೆ ಅಲ್ಲೆಲ್ಲ ಬರೀ ಹಸಿರು ತುಂಬಿತ್ತು. ಎತ್ತರೆತ್ತರದ ಮರಗಳು ವರ್ಷಗಳಿಂದ ಅಲ್ಲೇ ಬೀಡು ಬಿಟ್ಟಿದ್ದವು. ತಮ್ಮ ಕೈಲಿ ಸಾಧ್ಯವಾದಷ್ಟು ಸೂರ್ಯನ ಬೆಳಕನ್ನು ರಸ್ತೆಗೆ ತಾಕದಂತೆ ನೋಡಿಕೊಳ್ಳುತ್ತಿದ್ದವು ಆ ಮರಗಳು.


ಆ ಸರ್ಕಲ್ ಗೆ ಈ ವಾತಾವರಣವೆಲ್ಲ ಬಹಳ ಇಷ್ಟವಾಗಿತ್ತು. ಅದರ ಇಷ್ಟಕ್ಕೆ ಬರೀ ವಾತಾವರಣಗಳೇ ಕಾರಣವಾಗಿರಲಿಲ್ಲ. 


ಪ್ರತಿದಿನ ಆ ಸರ್ಕಲ್ ಬಳಿ ಇದ್ದ ಉದ್ಯಾನವನದ ಬಳಿ ಬರುತ್ತಿದ್ದ, ಹೆಂಗಸರು, ಗಂಡಸರು, ಮಕ್ಕಳು, ವೃದ್ಧರು, ಸ್ನೇಹಿತರು, ಪ್ರೇಮಿಗಳು,ದ್ವೇಷಿಗಳು, ಜಾಗಿಂಗ್ ಮಾಡಲು ಬರುತ್ತಿದ್ದವರು, ಎಷ್ಟೋ ವರ್ಷಗಳಿಂದ ಅದೇ ಉದ್ಯಾನವನದಲ್ಲಿ ಸುತ್ತು ಹಾಕಿದರೂ ಕರಗದ ಹೊಟ್ಟೆ!! ಯಾವತ್ತಾದರೂ ಒಂದು ದಿನ ಕರಗಬಹುದೆಂಬ ಆಶಾಭಾವನೆಯಿಂದ ಬರುತ್ತಿದ್ದವರು ಎಲ್ಲರೂ ಅಲ್ಲಿಂದ ಹೊರಡುವ ಮುನ್ನ ಉದ್ಯಾನವನದ ಆಚೆ ಇದ್ದ ಕಲ್ಲುಬೆಂಚಿನ ಮೇಲೆ ಕುಳಿತು ಸ್ವಲ್ಪ ಹೊತ್ತು ಆ ಸರ್ಕಲ್ ನನ್ನೇ ವೀಕ್ಷಿಸಿ ಹೊರಡುತ್ತಿದ್ದರು.


ಅವರೆಲ್ಲರೂ ಆ ಸರ್ಕಲ್ ನನ್ನೇ ವೀಕ್ಷಿಸುತ್ತಿದ್ದರೋ ಅಥವಾ ಬೇರೇನನ್ನು ವೀಕ್ಷಿಸುತ್ತಿದ್ದರೋ ಆ ಸರ್ಕಲ್ ಗೆ ತಿಳಿದಿರಲಿಲ್ಲ...ಆದರೆ ತನ್ನನ್ನೇ ನೋಡುತ್ತಿದ್ದಾರೆಂಬ ಭ್ರಮೆಯಲ್ಲೇ ಕಾಲ ತಳ್ಳುತ್ತಿತ್ತು.ಅಲ್ಲಿ ನಡೆಯುತ್ತಿದ್ದ ಹಲವು ಘಟನೆಗಳಿಗೆ ಆ ಸರ್ಕಲ್ ಸಾಕ್ಷಿಯಾಗಿ ನಿಂತಿತ್ತು.


ಅದೆಷ್ಟೋ ಸಂಬಂಧಗಳ ಬೆಸುಗೆಗೆ ಮೂಕ ಸಾಕ್ಷಿಯಂತೆ ನಿಂತಿತ್ತು ಆ ಸರ್ಕಲ್, ಈಗಲೂ ನಿಂತಿದೆ. ಪಕ್ಕದಲ್ಲೇ ಇರುವ ಕಾಲೇಜ್ ಹುಡುಗ ಹುಡುಗಿಯರ, ಪ್ರೇಮಿಗಳ ನೆಚ್ಚಿನ ತಾಣವಾಗಿತ್ತು ಆ ಸರ್ಕಲ್. ಉದ್ಯಾನವನಕ್ಕೆ ಬರುತ್ತಿದ್ದ ಎಷ್ಟೋ ಮಕ್ಕಳನ್ನು ಅವರ ಪೋಷಕರು ಆ ಸರ್ಕಲ್ಲಿನ ಕಟ್ಟೆಯ ಮೇಲೆ ಕೂಡಿಸಿ ಆಟ ಆಡಿಸುತ್ತಿದ್ದರು. ಇನ್ನೂ ಕೆಲವರು ಅದೊಂದು ಸ್ಮಾರಕವೆಂಬಂತೆ ಅದರ ಬಳಿ ನಿಂತು ಫೋಟೋ ಸಹ ತೆಗೆಸಿಕೊಳ್ಳುತ್ತಿದ್ದರು. ಇದೆಲ್ಲದರಿಂದ ಆ ಸರ್ಕಲ್ ಗೆ ಅಪಾರ ಹೆಮ್ಮೆ ಆಗುತ್ತಿತ್ತು.


ಆ ಸರ್ಕಲ್ ನಲ್ಲಿ ಹೊಸದಾಗಿ ಒಂದು ಪ್ರೇಮಕಥೆ ಶುರುವಾಗಿತ್ತು!!. ಪ್ರತಿದಿನ ಜಾಗಿಂಗ್ ಮುಗಿದ ತಕ್ಷಣ ಸ್ವಲ್ಪ ಹೊತ್ತು ಕಲ್ಲು ಬೆಂಚಿನ ಮೇಲೆ ಕುಳಿತು ಅವನು, ಸರ್ಕಲ್ ನ ಆ ಬದಿ ಇದ್ದ ಇನ್ನೊಂದು ಬೆಂಚಿನ ಮೇಲೆ ಕುಳಿತಿದ್ದ ಅವಳನ್ನು ಪ್ರತಿದಿನ ಬಹಳ ದಿನದಿಂದ ನೋಡುತ್ತಿದ್ದ. ಅವರ ಮಾತುಕತೆ ಬರೀ ಕಣ್ಣಿನಲ್ಲೇ ಸಾಗಿತ್ತು. 


ಸರ್ಕಲ್ ನ ಆ ಬದಿ ಹೋಗಿ ಅವಳನ್ನು ಮಾತಾಡಿಸೋಣ ಎಂದುಕೊಂಡರೆ ಅವಳ ಜೊತೆ ಅವಳಪ್ಪನೂ ಅಂಗರಕ್ಷಕನಂತೆ ಜಾಗಿಂಗ್ ಗೆ ಬರುತ್ತಿದ್ದ. ಹಾಗಾಗಿ ಬರೀ ಕಣ್ಸನ್ನೆ,ಮುಗುಳ್ನಗೆಯಲ್ಲೇ ಇವರ ಮಾತುಕತೆ ನಡೆಯುತ್ತಿತ್ತು. ಇದನ್ನು ಗಮನಿಸುತ್ತಿದ್ದ ಸರ್ಕಲ್ ತನ್ನೊಳಗೆ ತಾನೇ ನಗುತ್ತಿತ್ತು. 


ಆ ಸರ್ಕಲ್ ಗೆ ನಾಯಿಗಳನ್ನು ಕಂಡರೆ ಆಗುತ್ತಿರಲಿಲ್ಲ. ಯಾಕೆಂದರೆ ಪ್ರತಿದಿನ ಬಂದು ಸರ್ಕಲ್ ನ ಬಳಿ ಬಂದು ನಾಯಿಗಳು ಕಾಲೆತ್ತುತ್ತಿದ್ದವು!!. ಆಗ ಆ ಸರ್ಕಲ್ ಮುಖ ಕಿವುಚಿಕೊಳ್ಳುತ್ತಿದ್ದದ್ದು ಆ ನಾಯಿಗಳಿಗೆ ಕಾಣುತ್ತಿರಲಿಲ್ಲ. ಹಗಲೊತ್ತಿನಲ್ಲಿ ಕಾಲೆತ್ತಿದ ನಾಯಿಗಳು ರಾತ್ರಿ ಸರ್ಕಲ್ ಮೇಲೆ ಹತ್ತಿ ಗಲೀಜು ಮಾಡುತ್ತಿದ್ದವು.


ಒಮ್ಮೆ ಜಾಗಿಂಗ್ ಮುಗಿಸಿಕೊಂಡು ಬಂದು ತನ್ನ ಮಾಮೂಲಿ ಜಾಗದಲ್ಲಿ ಕುಳಿತ ಇವನು, ಸರ್ಕಲ್ ನ ಆ ಬದಿಯಲ್ಲಿ ಅವಳಿಗಾಗಿ ಹುಡುಕುತ್ತಿದ್ದ...ಅಷ್ಟರಲ್ಲಿ ಅವಳು ಬಂದಳು. ಹಿಂದೆ ಅವರಪ್ಪ ಕಾಣಲಿಲ್ಲ..ಇವನ ಮನಸಿನಲ್ಲಿ ಸಂತೋಷದ ಬಲೂನ್ ಗಾಳಿ ತುಂಬಿಕೊಳ್ಳುತ್ತಿದ್ದ ಹಾಗೆ....ಅವಳ ಪಕ್ಕದಲ್ಲಿ ಇವನ ವಯಸ್ಸಿನವನೇ ಇನ್ನೊಬ್ಬ ಹುಡುಗ ಅವಳನ್ನು ಮಾತಾಡಿಸುತ್ತಿದ್ದ. ಅವಳೂ ಅವನೊಡನೆ ನಗು ನಗುತ್ತಾ ಮಾತಾಡುತ್ತ ಇವನ ಕಡೆ ನೋಡದೆ ಹಾಗೆ ಹೊರಟು ಹೋದಳು. ಇವನ ಸಂತೋಷದ ಬಲೂನ್ ಗಾಳಿ ಕಳೆದುಕೊಂಡು ನಿಸ್ತೇಜವಾಯಿತು.


ಒಂದು ದಿನ ಬೆಳ್ಳಂ ಬೆಳಿಗ್ಗೆ ಸರ್ಕಲ್ ನಲ್ಲಿ ಇದ್ದಕ್ಕಿದ್ದಂತೆ ಜನಸಂದಣಿ ಹೆಚ್ಚಾಗಿತ್ತು. ಎಲ್ಲೆಡೆ ಗೌಜು ಗದ್ದಲ ಶುರುವಾಗಿತ್ತು. ಸ್ವಲ್ಪದರಲ್ಲೇ ಗಲಾಟೆ ಜೋರಾಯಿತು. ಪೊಲೀಸರು ಬಂದರು....ನೆರೆದಿದ್ದ ಜನರೊಡನೆ ಏನೇನೋ ಮಾತಾಡುತ್ತಿದ್ದರು. ಸ್ವಲ್ಪ ಹೊತ್ತಾದಮೇಲೆ ಎಲ್ಲರೂ ಹೊರಟು ಹೋದರು. ನಂತರ ಆ ಇಡೀ ದಿನ ಅಲ್ಲಿ ಯಾರೊಬ್ಬರೂ ಬರಲಿಲ್ಲ. ಅಲ್ಲೇನು ನಡೆಯುತ್ತಿದೆ ಎಂದು ಆ ಸರ್ಕಲ್ ಗೆ ಗೊತ್ತಾಗಲಿಲ್ಲ...


ಅಂದು ರಾತ್ರಿ ಸರ್ಕಲ್ ಗಾಢ ನಿದ್ರೆಯಲ್ಲಿದ್ದಾಗ ಜೋರಾಗಿ ಏನೋ ಸದ್ದಾಗುತ್ತಿರುವಂತೆ ಭಾಸವಾಗಿ ಎಚ್ಚೆತ್ತು ನೋಡಿದರೆ ಆ ಸರ್ಕಲ್ ನ ಅಕ್ಕ ಪಕ್ಕದಲ್ಲಿದ್ದ ಮರಗಳೆಲ್ಲ ನೆಲಕ್ಕೆ ಉರುಳಿದ್ದವು!!!...ಉದ್ಯಾನವನದ ಸಮೀಪ ಇದ್ದ ಮರಗಳನ್ನೂಕತ್ತರಿಸುತ್ತಿದ್ದರು. ಅಲ್ಲಿದ್ದ ಕಲ್ಲಿನ ಬೆಂಚುಗಳೆಲ್ಲ ಮಾಯವಾಗಿದ್ದವು. ಏನೋ ಅವಘಡ ಸಂಭವಿಸುತ್ತಿದೆ ಎಂದು ಭಾವಿಸಿದ ಆ ಸರ್ಕಲ್ ಜೋರಾಗಿ ಕಿರುಚಲು ಶುರು ಮಾಡಿತು. ಆದರೆ ಆ ಗರಗಸದ ಸದ್ದಿನಲ್ಲಿ ಸರ್ಕಲ್ ನ ಸದ್ದು ಯಾರಿಗೂ ಕೇಳಿಸಲೇ ಇಲ್ಲ.


ಮರುದಿನ ಬೆಳಿಗ್ಗೆ ಕಣ್ಣು ಬಿಟ್ಟ ಸರ್ಕಲ್ ಗೆ ದೊಡ್ಡ ಆಘಾತ ಕಾಡಿತು. ರಸ್ತೆಯ ಮೇಲೆ ದೊಡ್ಡ ದೊಡ್ಡ ಯಂತ್ರಗಳು ಬಂದಿದ್ದವು. ಮರಗಳಿಲ್ಲದೆ ಆ ಸುತ್ತಲ ಪ್ರದೇಶ ಬಟಾ ಬಯಲಾದಂತೆ ಆಗಿತ್ತು. ಪ್ರತಿದಿನ ಉದ್ಯಾನವನಕ್ಕೆ ಬರುತ್ತಿದ್ದವರು ಯಾರೂ ಅಂದು ಕಾಣಿಸಲಿಲ್ಲ. ಆದರೆ ಅವನು ಮಾತ್ರ ಎಂದಿನಂತೆ ಜಾಗಿಂಗ್ ಗೆಂದು ಬಂದು ಸರ್ಕಲ್ ನ ಆ ಬದಿ ಅವಳಿಗಾಗಿ ಸ್ವಲ್ಪ ಹೊತ್ತು ಕಾದು ಅಲ್ಲೇ ಸರ್ಕಲ್ ಕಟ್ಟೆ ಮೇಲೆ ಕುಳಿತಿದ್ದ. ಅವಳು ಬರಲೇ ಇಲ್ಲ.


ಸ್ವಲ್ಪ ಹೊತ್ತಿನ ನಂತರ ಆ ಯಂತ್ರದ ಸಹಾಯದಿಂದ ರಸ್ತೆಯ ಅಕ್ಕ ಪಕ್ಕ ಎಲ್ಲ ಅಗೆಯಲು ಶುರು ಮಾಡಿದರು. ದೊಡ್ಡ ದೊಡ್ಡ ಕಬ್ಬಿಣದ ತಡೆಗೋಡೆಗಳನ್ನು ತಂದು ನಿಲ್ಲಿಸಿದರು. ಇನ್ನೂ ಸ್ವಲ್ಪ ಕಬ್ಬಿಣದ ಸರಕುಗಳನ್ನು ತಂದು ಆ ಸರ್ಕಲ್ ಮೇಲೆ ಸುರಿದರು. ಸರ್ಕಲ್ ಆ ಭಾರದಿಂದ ಕಣ್ಣೀರು ಹಾಕುತ್ತಿದ್ದರು ಯಾರೂ ಅದನ್ನು ಸಮಾಧಾನ ಪಡಿಸಲು ಹೋಗಲಿಲ್ಲ.


ಮರುದಿನ ಬೆಳಿಗ್ಗೆ ಆ ಸರ್ಕಲ್ ಗೆ ಇನ್ನೊಂದು ಆಘಾತ ಕಾದಿತ್ತು. ಸರ್ಕಲ್ ನ ಅರ್ಧ ಭಾಗ ಕಾಣಿಸಲೇ ಇಲ್ಲ. ಅಲ್ಲೆಲ್ಲ ಬೋಳು ಬೋಳಾಗಿದೆ. ಏನಾಯಿತು ಎಂದು ಆಲೋಚಿಸುವಷ್ಟರಲ್ಲಿ ಇನ್ನುಳಿದ ಅರ್ಧ ಭಾಗವನ್ನು ಕಬಳಿಸಲು ಯಂತ್ರವೊಂದರ ದೊಡ್ಡಬಾಯಿ ತನ್ನ ಬಳಿ ಬರುತ್ತಿದೆ ಎಂದು ಗೊತ್ತಾಗಿ ಬೇಡ....ಬೇಡ...ಎಂದು ಅಂಗಲಾಚುತ್ತಿತ್ತು. ಆದರೆ ಕ್ಷಣಮಾತ್ರದಲ್ಲಿ ಎಲ್ಲವೂ ಮುಗಿದು ಹೋಗಿತ್ತು.....


ಈಗ ಅಲ್ಲಿ ಒಂದು ಸರ್ಕಲ್ ಇತ್ತು ಎಂಬ ಕುರುಹು ಸಹ ಇಲ್ಲದಂತೆ ಆಗಿ ಹೋಗಿದೆ...ಇಷ್ಟು ದಿವಸ ಅಲ್ಲಿ ಬರುತ್ತಿದ್ದ ಯಾರೊಬ್ಬರಿಂದಲೂ ಆ ಸರ್ಕಲ್ ನ ಉಳಿಸಲು ಆಗಲಿಲ್ಲ....


ಅವನು ಮಾತ್ರ ಈಗಲೂ ಪ್ರತಿದಿನ ಅಲ್ಲಿ ಬಂದು ವಿಶಾಲವಾದ ಆ ರಸ್ತೆಯ ಒಂದು ಬದಿಯಲ್ಲಿ ನಿಂತು ಇನ್ನೊಂದು ಬದಿಯಲ್ಲಿ...ಮುಂಚೆ ಇದ್ದ ಕಲ್ಲಿನ ಬೆಂಚಿನ ಜಾಗದಲ್ಲಿ ಈಗ ಏನೂ ಇಲ್ಲದ ಖಾಲಿ ರಸ್ತೆಯನ್ನು ನೋಡುತ್ತಾ ನಿಲ್ಲುತ್ತಿದ್ದ....ಆದರೆ ಅವಳು ಮಾತ್ರ ಮತ್ತೆ ಯಾವತ್ತೂ ಅಲ್ಲಿ ಕಾಣಿಸಲಿಲ್ಲ.....

Rating
No votes yet

Comments

Submitted by venkatb83 Mon, 10/29/2012 - 16:30

ಇದು ನನಗ್ಯಾಕೋ ನಾ ದಿನವೂ ಓಡಾಡುವ ರಸ್ತೆಯಲ್ಲಿನ ಆಯ ಆಯ ಎಸ್ಸಿ(iisc) ಅಂಚೆ ಕಚೇರಿ ತಿರುವು ಮತ್ತು ಸರ್ಕಲ್ ಮಾರಮ್ಮ ದೇವಸ್ಥಾನದ ಸರ್ಕಲ್ ಕಥೆ ವ್ಯಥೆ ನೆನಪಿಸಿತು..
ಬರಹದಲ್ಲಿ ಹೇಳಿದಂತೆ ಈಗೀಗ ಎಲ್ಲವೂ ಕಣ್ಣ ಮುಂದೆಯೇ ನಡೆಯುತ್ತಿದೆ..
ಪ್ರತಿಭಟಿಸುವವರನ್ನ ಹತ್ತಿಕ್ಕುವ ಹಲವು ವಿಧಾನಗಳು ಬಳಕೆಯಲ್ಲಿವೆ...!!!
ಯಾರ್ಗೆಳನ ನಮ್ ಪ್ರಾಬ್ಲಮ್ಮು????
ನಾ ಅಲ್ಲ ಹೇಳಿದ್ದು-
ಸರ್ಕಲಗಳು..!!

ಶುಭವಾಗಲಿ..

\|

Submitted by Jayanth Ramachar Tue, 10/30/2012 - 07:41

In reply to by venkatb83

ವೆ೦ಕಟೇಶ್ ಅವರೇ ಅದೊ೦ದೇ ಸರ್ಕಲ್ ಅಲ್ಲ. ಇ೦ದು ಬೆ೦ಗಳೂರಿನ‌ ಬಹುತೇಕ‌ ಸರ್ಕಲ್ ಗಳ‌ ಕಥೆ ಇದೆ ಆಗಿದೆ. ಹಿ೦ದೊಮ್ಮೆ ಮಕ್ಕಳಕೂಟ‌ ಸರ್ಕಲ್ ಇದೆ ಪರಿಸ್ಥಿತಿಯಲ್ಲಿ ಇದ್ದಿತ್ತು. ಈಗ‌ ಅಲ್ಲಿ ಸರ್ಕಲ್ ಇತ್ತು ಎ೦ಬ‌ ಕುರುಹೇ ಇಲ್ಲ.

Submitted by bhalle Tue, 10/30/2012 - 02:15

ಸರ್ಕಲ್ ಕಥೆ ಚೆನ್ನಿದೆ ... ನಾನು ಓದುವ ಕಾಲಕ್ಕೆ ಓಡಾಡುತ್ತಿದ್ದ ’ರಿಚ್ಮಂಡ್ ಸರ್ಕಲ್’, ’ಮೇಖ್ರಿ ಸರ್ಕಲ್’ ಇತ್ಯಾದಿಯ ನೆನಪುಗಳು ಹಾದುಹೋದವು !