ಕೆಲವು ನ್ಯಾನೋ ಕಥೆಗಳು...

ಕೆಲವು ನ್ಯಾನೋ ಕಥೆಗಳು...

ಅಭಿಪ್ರಾಯ

ಶಿಷ್ಯ: ಗುರುಗಳೇ ಈಗ ದೇಶದಲ್ಲಿ ಎಲ್ಲೆಲ್ಲೂ ಧರ್ಮ-ಧರ್ಮಗಳ ನಡುವೆ ಬರೀ ಗಲಭೆ, ದೊಂದಿ ನಡೆಯುತ್ತಿದೆ. ಈ ವಿಚಾರವಾಗಿ ತಮ್ಮ ಅಭಿಪ್ರಾಯವೇನು

ಗುರುಗಳು: ಧರ್ಮ ಧರ್ಮದ ನಡುವೆ ಎಂದೂ ಜಗಳ ನಡೆದಿಲ್ಲ. ಅದು ಅಧರ್ಮ ಅಧರ್ಮದ ನಡುವಿನ ಕಲಹ. ನಿನ್ನಭಿಪ್ರಾಯವನ್ನು ಮೊದಲು ತಿದ್ದಿಕೋ..



ತಳ ನೀತಿ

ಹಸಿವನ್ನು ತಾಳದ ಆಕೆ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಳು. ಆಕೆಯನ್ನು ನೋಡಿದ್ದೇ ಗುರುಗಳು ಶಿಷ್ಯನ ಕಿವಿಯಲ್ಲಿ ಏನೋ ಪಿಸುಗುಟ್ಟಿದರು.

ಓಡಿಹೋದ ಶಿಷ್ಯ ತುಂಡು ಬಟ್ಟೆ ತಂದು ಆಕೆಯ ಮುಖ ಮುಚ್ಚಿದ…



ಅಕ್ಕಿ – ಅನ್ನ

ಪಟ್ಟಣದ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಾ ತಿಂದ ರೈತನೋರ್ವ ಹೆಚ್ಚು ಹಣ ತೆತ್ತು ಬರುವಾಗ ಹೀಗೆ ಅಂದುಕೊಂಡ

“ಅಕ್ಕಿಯನ್ನು ಮಾರುವ ಬದಲು, ನಾನು ಅನ್ನವನ್ನೇ ಮಾರಬಹುದಾಗಿತ್ತಲ್ಲವೇ?”



ಗಾಳಿ

‘ಈ’ ಜಾತಿಯವರಿಗೆ ದೇವಸ್ಥಾನ ಮತ್ತು ಹೋಟೆಲ್ ಒಳಗೆ ಪ್ರವೇಶವಿಲ್ಲ ಎಂದು ತೀರ್ಪಿತ್ತ ಊರ ಯಜಮಾನ ಸಮಾಧಾನಗೊಂಡು ಸಾವಧಾನದಿಂದ ಉಸಿರೆಳೆದುಕೊಂಡ

ಅವನು ಎಳೆದುಕೊಂಡ ಗಾಳಿ ಆ ‘ಈ’ ಜಾತಿಯವರ ಬೆನ್ನು ತಾಕಿ ಬಂದಿತ್ತು.

ಇಲ್ಲಿಗೆ ಬರುವಷ್ಟರಲ್ಲಿ ಅವರೂ ಎಳೆದು ಬಿಟ್ಟಿದ್ದ ಗಾಳಿ ಕೂಡಿಕೊಂಡಿದ್ದು ಆತನಿಗೆ ಗೊತ್ತೇ ಆಗಲಿಲ್ಲ….!

ಧರ್ಮ

ಕೆಲವರನ್ನು ಭಯತ್ಪಾದಕರೆಂಬ ಶಂಕೆ ವ್ಯಕ್ತವಾಗಿ ಬಂಧಿಸಲಾಯಿತು…

ಒಬ್ಬ: ಅವರು ‘ಆ’ ಧರ್ಮದವರು…

ಮತ್ತೊಬ್ಬ: ಅವರು ‘ಆ’ ಧರ್ಮವನ್ನು ಅರ್ಥ ಮಾಡಿಕೊಳ್ಳದವರು…!



ಬೇಡಿದವರು

ಮೊನ್ನೆ ವಿಜಯ ಮಲ್ಯ ಎಂಬಾತ ದೇವಸ್ಥಾನ ಒಂದಕ್ಕೆ ಚಿನ್ನದ ಬಾಗಿಲು ಕೊಡಲು ಹೋದಾಗ ದೇವಸ್ಥಾನದ ಆವರಣ ಸ್ವಚ್ಛವಾಗಿತ್ತಂತೆ.

ಕಾರಣವೇನೆಂದರೆ ‘ಇಷ್ಟು ದಿನ ಬೇಡುತ್ತಿದ್ದ ಭಿಕ್ಷುಕರನ್ನು ಹೊಡೆದು ಓಡಿಸಿದ್ದರು’

ಬೇಡದವನ ಬಳಿ ಹೋಗುವಾಗ ಬೇಡಿದವರೇ ಬೇಡವಾದರು…

ಅದೇ ಮಲ್ಯ ದೇವಸ್ಥಾನಕ್ಕೆ ಬರುವುದು ಒಂದು ಘಂಟೆ ತಡವಾಯಿತಂತೆ. ನಡೆದು ಬರುವ ವಿಜಯಮಲ್ಯನ ಕಾಲನ್ನು ಕಿಂಗ್ ಫಿಷರ್ ಕುಡಿದ ನಮ್ಮ ಸಿದ್ಧ ಹಿಡಿದುಕೊಂಡಿದ್ದ. ಸಿದ್ಧನ ಜುಟ್ಟಿನ ಜೊತೆಗೆ ಆಕೆಯ ಹೆಂಡತಿಯ ತಾಳಿಯನ್ನೂ ಹಿಡಿದುಕೊಂಡಿದ್ದ ಸಾಲ ಕೊಟ್ಟ ಊರ ಗೌಡ…



ಹಾಲು – ತುಪ್ಪ

ಎಳೆ ಕಂದನನ್ನು ತಬ್ಬಿಕೊಂಡು ಭಿಕ್ಷೆ ಬೇಡುತ್ತಿದ್ದ ಅಮ್ಮ ಅಂದಳು “ಮಗುವೇ, ಭಿಕ್ಷೆ ಬೇಡಿಯಾದರೂ ನಿನಗೆ ಹಾಲು ತುಪ್ಪ ತಿನ್ನಿಸಿ ಸಾಕುವೆ”

ಆಕೆ ಬೇಡಿದ್ದು ದೇವರಿಗೆ ಕೇಳಿಸಲೇ ಇಲ್ಲ.

ಆತ ಕ್ಷೀರಾಭಿಷೇಕ, ತುಪ್ಪಾಭಿಷೇಕದಲ್ಲಿ ಮಗ್ನ.

ಮಗುವಿಗೆ ಬೇಕಾಗಿದ್ದ ಅದೇ ಹಾಲು, ತುಪ್ಪ ಆಲ್ಲಿ ಹರಿಯುತ್ತಿತ್ತು ದೇವಸ್ಥಾನದ ಮೂಲೆಗಿಂಡಿಗೆ



ಜಗಜ್ಜಾಹೀರು

ಜಗಳದ ಮಧ್ಯೆ ಆಕೆ “ನೀನು ಗಂಡಸೇ ಅಲ್ಲ” ಎಂದು ಗಂಡನನ್ನು ಒಂದಷ್ಟು ಜನಗಳಿಗೆ ಕೇಳುವಂತೆ ಜೋರಾಗಿ ಬೈದಳು. ಮುನಿಸಿಕೊಂಡ ಆಕೆ ಬೇಸರ ಕಳೆಯಲು ಟೀವಿ ಹಚ್ಚಿದಳು..

“ಗಂಡನಿಗೇ ‘ಅದು’ ಇಲ್ಲ” ಎಂಬ ವಾರ್ತೆ… ಇವಳಿಗಿಂತ ಹೆಚ್ಚು ನಾಚಿಕೆಗೆಟ್ಟ ಮಾಧ್ಯಮಗಳು…



ಅಕ್ಕ ತಂಗಿ – ಅಣ್ಣ ತಮ್ಮ

ಮೈ ಕೈ ಕಾಣುವಂತೆ ತುಂಡು ಬಟ್ಟೆ ಧರಿಸಿ ಬಂದಿದ್ದ ಆಕೆಯನ್ನು ಆತ ದುರುಗುಟ್ಟಿಕೊಂಡು ನೋಡುತ್ತಿದ್ದ…

ಆಕೆ: ನಿನಗೆ ಅಕ್ಕ ತಂಗಿಯರಿಲ್ಲವೇ?

ಆತ: ನಿನಗೆ ಅಣ್ಣ ತಮ್ಮಂದಿರಿಲ್ಲವೇ??!



ಸರಿ – ತಪ್ಪು

ಕೈಯಿಂದ ಜಾರಿದ ಆ ಫೋಟೋ ಕೆಳಕ್ಕೆ ಬೀಳುತ್ತಿತ್ತು. ಕಾಲಿನಿಂದಲಾದರೂ ತಡೆಯಬಹುದಾಗಿತ್ತು.

ಸರಿಯೋ ತಪ್ಪೋ ಎಂದು ಯೋಚಿಸುವಷ್ಟರಲ್ಲಿ ಅದು ನೆಲಕ್ಕಪ್ಪಳಿಸಿ ಹೊಡೆದೇ ಹೋಯಿತು..

-

ಎರಡು ಪ್ರಶ್ನೆ....

ಆತ ಆಶ್ರಮಕ್ಕೆ ಬಂದು ಸ್ವಾಮೀಜಿಗೆ ಗದರಿಸಿದ: "ನಾನ್ಯಾರು ಗೊತ್ತೇ?"
ಸ್ವಾಮೀಜಿ ಶಾಂತಚಿತ್ತರಾಗಿ ಹೇಳಿದರು: ಗೊತ್ತಿಲ್ಲ, ಅದಿರಲಿ ನಿನಗೇನಾದರು ಗೊತ್ತೆ "ನಾನಾರೆಂದು?"
--

ಹೆಸರು...

ಅವರಿಬ್ಬರೂ ಓಡಿಹೋಗಿ ಮದುವೆಯಾದರು. ಬೇರೆ ಬೇರೆ ಜಾತಿಯಾದುದರಿಂದ ಹುಡುಗಿಯನ್ನು ಹೆತ್ತವರೇ ಕೊಂದುಬಿಟ್ಟರು. ಮಾಧ್ಯಮದವರು ಅದಕ್ಕೆ ನೀಡಿದ ಹೆಸರು "ಮರ್ಯಾದಾ ಹತ್ಯಾ!"
--

ಸಹಪಂಕ್ತಿ...

ಇಬ್ಬರ ನಡುವೆ ವಾದ ವಿವಾದ ನಡೆಯುತ್ತಿತ್ತು. ಒಬ್ಬ ಸಹಪಂಕ್ತಿ ಭೋಜನ ಸರಿ ಎಂದ ಮತ್ತೊಬ್ಬ ತಪ್ಪು ಎಂದ. ಇಬ್ಬರು ಕುಳಿತಿದ್ದದ್ದು ಮಾತ್ರ "ಸಹಪಂಕ್ತಿ ಕೇಶ ಮುಂಡನಕ್ಕೆ!"
ಇವರಿಗಿಂತ ಮುಂಚೆ ಹತ್ತಾರು ಜನಕ್ಕೆ ಒಂದೇ ಕತ್ತರಿ ಬಾಚಣಿಗೆ ಉಪಯೋಗಿಸಿದ್ದ ಕ್ಷೌರಿಕ ಮಾತ್ರ ನಗುತ್ತಿದ್ದ. ಅಷ್ಟರಲ್ಲಿ ಮುಂದಿನ ಹೋಟೇಲಿನಲ್ಲಿ ಎಲ್ಲರಿಗೂ ಸೇರಿ ನಾಲ್ಕು ಲೋಟದಲ್ಲಿ ಟೀ ತರಿಸಲಾಯಿತು.
--

ಭಾರತರತ್ನ...

ತನ್ನ ದೇಶದ ಹೆಮ್ಮೆಯ ಕ್ರಿಕ್ಕೆಟ್ಟಿಗನೊಬ್ಬನಿಗೆ "ಭಾರತ ರತ್ನ" ಪ್ರಶಸ್ತಿ ನೀಡಲಾಯಿತು. ಆತ ಕೋಕ್ ಕುಡಿಯುತ್ತಾ ಜಾಹಿರಾತಿನಲ್ಲಿ ಕಾಣಿಸಿಕೊಂಡ ತಕ್ಷಣವೇ ಅಪ್ಪ ಮುಖ ಅರಳಿಸಿ ನುಡಿದ "ಈತನೇ ಭಾರತರತ್ನ"
ಮಗು ನುಡಿಯಿತು: "ಅಪ್ಪ ಕೋಕಿನಲ್ಲಿ ವಿಷವಿದೆಯಂತೆ"
--
ಧರ್ಮ...

ಆ ಸಂತನನ್ನು ಒಬ್ಬಾತ ಕೇಳಿದ "ಧರ್ಮವೆಂದರೇನು ಗುರುಗಳೇ?"
ಪಕ್ಕದಲ್ಲಿರುವ ಮಗು ಮತ್ತೊಂದು ಮಗುವಿಗೆ ಹೇಳುತ್ತಿತ್ತು - "ನಮ್ಮ ಮನೆಯಲ್ಲಿ ಒಟ್ಟು 50 ನಲ್ಲಿಗಳಿವೆ, ಎಲ್ಲದಕ್ಕೂ ನೀರು ಬರುವುದು ಮಾತ್ರ ಮೇಲಿನ ಟ್ಯಾಂಕ್ ನಿಂದ"
ಸಂತ ನಕ್ಕು ನುಡಿದ - "ಅದೇ ಶ್ರೇಷ್ಟ ಉತ್ತರ, ಯೋಚಿಸು"
--
ಅವರವರ ಭಾವ...

ಮನೆಯವರ ವಿರೋಧದಿಂದ ಬೇಸರವಾಗಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡರು
ಹುಡುಗಿಯ ಕಡೆಯವರು: ಪಾಪಿ ಹುಡುಗ, ನನ್ನ ಮಗಳ ಜೀವ ತಿಂದುಕೊಂಡ
ಹುಡುಗನ ಕಡೆಯವರು: ದರಿದ್ರ ಹುಡುಗಿ, ನನ್ನ ಮಗನ ಜೀವ ನುಂಗಿಕೊಂಡಳು
ಅಲ್ಲಿದ್ದ ಒಂದು ಮಗು: ಪಾಪಿ ಮುಂಡೆ ಮಕ್ಕಳು, ಎರಡು ಜೀವ ತಿಂದುಬಿಟ್ಟರು!
--

ಜ್ಯೋತಿಷಿ...

ಈ ಪೂಜೆ ಮಾಡಿ ನಿಮಗೆ ತಿಂಗಳಲ್ಲಿಯೇ ಕೋಟಿ ಕೋಟಿ ಲಾಭ ಬರುವಂತೆ ಮಾಡಿಕೊಡುತ್ತೇನೆ ಎಂದು ಆ ಜ್ಯೋತಿಷಿ ಹೇಳಿದ
ಆತ: ಮತ್ತೆ ಪೂಜೆ ನಡೆಯಲಿ ಸ್ವಾಮಿ..
ಜ್ಯೋತಿಷಿ: ಪೂಜೆಯ ಖರ್ಚು 500 ಆಗುತ್ತದೆ...

--

ಧರ್ಮ

ಗುರುಗಳು: 'ಧರ್ಮಕ್ಕೆ ವಿರುದ್ಧ ಪದ ಹೇಳಿ'
ವಿದ್ಯಾರ್ಥಿ: 'ನಿಮ್ಮ ಪ್ರಶ್ನೆಯೇ ಧರ್ಮಕ್ಕೆ ವಿರುದ್ಧವಾದದ್ದು'

--

ಅವಸರ

ಗುರುಗಳು: 'ಹೇ ಕತ್ತೆ, ಉತ್ತರ ನಿಧಾನವಾಗಿ ಹೇಳು, ಜೀವನದಲ್ಲಿ ಅವಸರವಿರಬಾರದು'

ವಿದ್ಯಾರ್ಥಿ: 'ವರ್ಷವೆಲ್ಲಾ ಓದಿದ ವಿಚಾರವನ್ನು ಕೇವಲ ಮೂರು ಘಂಟೆಯಲ್ಲಿ, ಬರೆಯಿರಿ ಎಂದು ಹೇಳುವುದೂ ಅವಸರವಲ್ಲವೇ?? ಒತ್ತಡ ಹೇರಿ ನಮ್ಮೆಲ್ಲರ ಜ್ಞಾನ ಸಾಮರ್ಥ್ಯವನ್ನು ಪರೀಕ್ಷಿಸುವ ಅವಸರವೇಕೆ??'

--

ಮೂಢನಂಬಿಕೆ

ಊಟವಾದ ತಕ್ಷಣ ಒಂದು ಬಾಳೆಹಣ್ಣು ತಿನ್ನಬೇಕು ಎಂದು ಅಪ್ಪ ಹೇಳಿದ್ದನ್ನು ಮಗ ಪಾಲಿಸುತ್ತಿದ್ದ.
ಆತನೂ ತನ್ನ ಮಕ್ಕಳಿಗೆ ಅದನ್ನೇ ಹೇಳಿಕೊಟ್ಟಿದ್ದ..
ದಿನ ಕಳೆದಂತೆ ಇವರೆಲ್ಲರೂ ಬಾಳೆಹಣ್ಣು ಸಿಗದಿದ್ದರೆ ಊಟವನ್ನೇ ಮಾಡುತ್ತಿರಲಿಲ್ಲ....!

--

ಸಾವು

ರಾಯರ ಪಕ್ಕದ ಮನೆಯಲ್ಲಿ ಒಂದು ಸಾವಾಗಿತ್ತು. ರಾಯರು ಮನೆ ಮಂದಿಗೆಲ್ಲ ಸಮಾಧಾನ ಮಾಡುತ್ತಿದ್ದರು.
'ಸಾವೆಂಬುದೊಂದು ಅಳಿಸಲಾಗದ ಸತ್ಯ, ಒಪ್ಪಿಕೊಳ್ಳುವ ಗಟ್ಟಿತನ ಬೇಕು, ಸುಮ್ಮನೆ ಅತ್ತರೆ ಏನೂ ಪ್ರಯೋಜವಿಲ್ಲ' ಎನ್ನುವಷ್ಟರಲ್ಲಿ, ಮನೆ ಕೆಲಸದವನು ಓಡೋಡಿ ಬಂದು
'ರಾಯರೇ ನಿಮ್ಮ ಮಗ ಅಪಘಾತದಲ್ಲಿ ತೀರಿಕೊಂಡನಂತೆ' ಎಂದ
ಎಷ್ಟೇ ಕಷ್ಟಪಟ್ಟರೂ ತಡೆದುಕೊಳ್ಳಲಾಗದ ರಾಯರ ಕಣ್ಣಂಚಲ್ಲಿ ಕಣ್ಣೀರು ಜಿನುಗಿತು'

--

ಪ್ರೀತಿ

ಆಕೆ ಆತನನ್ನು ಪ್ರೀತಿಸುತ್ತಿದ್ದಳು. ಆತನಿಗೂ ಅವಳೆಂದರೆ ತುಂಬಾ ಇಷ್ಟ, ಆದರೆ ಸ್ಫುರದ್ರೂಪಿಯಲ್ಲ, ಕಪ್ಪಗಿದ್ದ.
ಆತ ನೋಡಲು ಚೆನ್ನಾಗಿಲ್ಲವೆಂದು ಮತ್ತೊಬ್ಬ ಸುಂದರನಿಗೆ ಮದುವೆ ಮಾಡಿಬಿಟ್ಟರು
'ಹುಟ್ಟಿದ ಮಕ್ಕಳೆಲ್ಲಾ ಕಪ್ಪಗೇ ಇದ್ದವು'

--

ಜಾತಿ...

ಜಾತಿಯ ಕಾರಣಕ್ಕೆ ಅಲ್ಲೊಂದು ದೊಡ್ಡ ಗಲಭೆ. ಚಾಕು ಚೂರಿಯಿಂದ ಒಬ್ಬರನ್ನೊಬ್ಬರು ಇರಿದುಕೊಂಡು ಸಾವಿರಾರು ಜನ ಸತ್ತರು. ಹೆಣದ ರಾಶಿಯಿಂದ ಬೀದಿ ತುಂಬಿಹೋಗಿತ್ತು. ಕೆಲವರು ವಿಭೂತಿ ಧರಿಸಿದ್ದರೆ, ಹಲವರು ನಾಮ ಬಳಿದುಕೊಂಡಿದ್ದರು, ಒಂದಷ್ಟು ಜನ ಜನಿವಾರವನ್ನೂ ಧರಿಸಿದ್ದರು. ಊರಿನ ಕಕ್ಕಸು ಮನೆ ತೊಳೆಯುವ ಮಾಚನೂ ಅಲ್ಲೆ ಹೆಣವಾಗಿ ಬಿದ್ದಿದ್ದ. ಜಾತಿ ಜಾತಿ ಎಂದುಕೊಂಡು ಮತ್ತೆ ಮತ್ತೆ ಮೊರೆಯುತ್ತಿದ್ದರು.

ಆಶ್ಚರ್ಯವೇನೆಂದರೆ 'ಅವರೆಲ್ಲರ ರಕ್ತದ ಬಣ್ಣ ಮಾತ್ರ ಒಂದೇ ಆಗಿತ್ತು. ಎಲ್ಲಾ ಮರೆತು ಸಾವಿನ ಅಂಗಳದಲ್ಲಿ ಒಟ್ಟಿಗೆ ಕೂಡಿಕೊಳ್ಳುತ್ತಿದ್ದವು'

Comments

Submitted by venkatb83 Mon, 10/29/2012 - 16:14

ಇಟ್ನಾಳ್ ಅವ್ರೆ ಈ ಕ್ಚೀರ ಸಾಗರ ಜಲಪಾತದ ಬಗ್ಗೆ ಈ ಸಂಪದದಲ್ಲಿಯೇ ಹಲವು ಬರಹಗಳು ಬಂದಿವೆ. ಬೇರೆ ಬೇರೆ ಕಡೆ ಹಲವು ಸಾರಿ ಓದಿರುವೆ ನೋಡಿರುವೆ... ಆದರೆ ನಿಮ್ ಬರಹ ಎಲ್ಲಕ್ಕಿಂತ ಆಪ್ತವಾಯಿತು.. ಸರಳ ಮಾಹಿತಿಪೂರ್ಣ ನಿರೂಪಣೆ.. ನಾ ಇನ್ನೇನು ಕೆಲ ದಿನಗಳಲಿ ಅಲ್ಲಿಗೆ ಹೋಗುವವ್ರಿದ್ದೇವೆ...ನಮ್ ಬರಹವೂ ಇಲ್ಲಿಗೆ ಸೇರಲಿದೆ...! ಆ ಪ್ರವಾಸದ ಕೆಲ ಚಿತ್ರಗಳನ್ನು ನೀವ್ ಸೇರಿಸ್ಬಹುದಿತಲ್ಲ... ಬರಹ ಮುದ ನೀಡಿತು.. ನಾವೇ ಅಲ್ಗೆ ಹೋಗ್ ಬಂದಂತೆ ಆಯ್ತು.. ಶುಭವಾಗಲಿ.. ನನ್ನಿ \|
Submitted by venkatb83 Mon, 10/29/2012 - 16:19

In reply to by venkatb83

ನಿಮ್ಮೆಲ್ಲ ನ್ಯಾನೋ ಕಥೆಗಳು ಅರ್ಥಪೂರ್ಣವೂ ವಿಚಾರಪೂರ್ಣ ಬರಹಗಳೇ ಸೈ.. ಹಲವು ಬರಹಗಳನ್ನು ಓದಿ ಒಂದೊಂದಾಗಿ ಅವುಗಳಿಗೆ ಪ್ರತಿಕ್ರಿಯಿಸುವುದು ನನ್ನ ಪದ್ಧತಿ ಇವತ್ತು ಹಾಗೆ ಮಾಡುವಾಗ ಇನ್ನೊಬ್ಬ ಸಂಪದಿಗರಾದ ಲಕ್ಚ್ಮಿ ಕಾಂತ ಅವರ ಬರಹದ ಬದಲಾಗಿ ನಿಮ್ ಬರಹಕ್ಕೆ ಅವರ ಬರಹಕ್ಕೆ ಬರೆದ ಪ್ರತಿಕ್ರಿಯೆ ಸೇರಿಸಿದೆ..! ಅಚಾತುರ್ಯ ಗೊತ್ತಾಯ್ತು ಆದ್ರೂ ನಮ್ಮ ಪ್ರತಿಕ್ರಿಯೆ ಅಳಿಸಿಹಾಕುವ ಸೌಲಭ್ಯವಿಲ್ಲ................ ಶುಭವಾಗಲಿ. ನನ್ನಿ \|/
Submitted by Prakash Narasimhaiya Mon, 10/29/2012 - 19:44

In reply to by venkatb83

ಆತ್ಮೀಯ ಮೋಹನ್ ರವರೆ, ಕಥೆಗಳು ಮಾತ್ರಾ ನ್ಯಾನೋ, ಆದರೆ ಅದರಲ್ಲಿ ಅಡಗಿರುವ ಸತ್ಯ ನ್ಯಾನೋ ಅಲ್ಲಾ..........ಚನ್ನಾಗಿದೆ. ಧನ್ಯವಾದಗಳು
Submitted by bhalle Tue, 10/30/2012 - 02:20

ನ್ಯಾನೋ ಕಥೆಗಳ ಸಾರ ಗಟ್ಟಿಯಾಗಿವೆ ... ಒಂದೆರಡು ಕಥೆಗಳಲ್ಲಿ ’ಮಗು’ ಎಂದು ಹೇಳಿರುವ ಮತ್ತು ಬಳಸಿರುವ ರೀತಿ ಅಷ್ಟು ಸರಿ ಹೋಗಲಿಲ್ಲ :-( ’ಸಾವು’ ಕಥೆ ಸೊಗಸಾಗಿದೆ ... ಇನ್ನೊಬ್ಬರಿಗೆ ಹೇಳುವುದು ಸುಲಭ, ಆಚರಿಸುವುದು ಕಷ್ಟ ...
Submitted by Mohan V Kollegal Tue, 10/30/2012 - 13:25

In reply to by bhalle

ನಮಸ್ತೆ ಜೀ... ನಿಮ್ಮ ಪ್ರತಿಕ್ರಿಯೆ ಓದಿದ ನಂತರ 'ಮಗು' ಎಂಬ ಪದಬಳಕೆಯ ಕಥೆಗಳನ್ನು ಮತ್ತೆ ಓದಿದಾಗ ಆ 'ತೂಕ'ದ ಮಾತುಗಳಿಗೆ ಸರಿಬರಲಿಲ್ಲವೆಂದು ತಿಳಿಯಿತು... ಸಲಹೆಗೆ ವಂದನೆಗಳು... ಮಂದೆ ತಿದ್ದಿಕೊಳ್ಳುತ್ತೇನೆ... ವಂದನೆಗಳು...