ಪಕ್ಷಿ ಮತ್ತು ಸಿದ್ಧ...

ಪಕ್ಷಿ ಮತ್ತು ಸಿದ್ಧ...

ಕವನ

ಕಾಳನು ಹೆಕ್ಕಿ ಕುಕ್ಕಿ ಮೆಲ್ಲಗೆ ಮೆಲ್ಲಿ
ಪಟಪಟನೆ ಅದುರಿತು ರೆಕ್ಕೆ ಚೆಲ್ಲಿ
ಬಿಚ್ಚದೇ ಮುಚ್ಚಿದರೆ ಬೆವರು
ಹೊತ್ತು ಹಾರಾಡಿದರೆ ತುತ್ತು
ಎಲ್ಲಿದೆ ನೀರು ತನ್ನನ್ನು ಅದ್ದಲು
ಗಹ್ಯ ಲೋಕದಲ್ಲೊಮ್ಮೆ ಮೀಯಲು

ದೂರದಲ್ಲಿ ನೆಲ ಅಗೆದ ಸಿದ್ಧನಿಗೂ
ಅದೇ ಚಿಂತೆ
ಅಗೆದರೂ ಬಗೆದರೂ ಕಾಣದೊರತೆ
ಹ್ಯಾಪೆ ಮೊಗದಲ್ಲಿ ಬೀಡಿ ಕಚ್ಚಿ
ದಾಡಿ ಬಿಟ್ಟಿದ್ದಾನೆ
ಮುಖ ತೊಳೆಯನು
ಹಲ್ಬಿಟ್ಟರೆ ಹಲ್ಕಟ್ ವಾಸನೆ
ಅಲ್ಲಿ ಇಲ್ಲಿ ಗಲ್ಲಿ ಗೋರಿ
ಸಂಜೆಗೊಂದಷ್ಟು ಹೆಂಡ ಹೀರಿ
ಮುಂಜಾನೆ ದಿಬ್ಬ ಏರಿ
ಸೂರ್ಯನನ್ನು ನೋಡಿ ನಕ್ಕುಬಿಡುತ್ತಾನೆ

ಮಳೆಗಾಲದಲ್ಲಿ ಮೈ ಅದ್ದಲು
ರೆಕ್ಕೆ ಬಿಚ್ಚಲ್ಲ
ಸುಯ್ ಎನ್ನುವ ಗಾಳಿಗೊದರಿ ಮೈ
ಬೆನ್ನು ಕೆರೆಯುತ್ತದೆ ಕೊಕ್ಕಿನ ಕೈ
ಈಚಲು ಪೀಚಲು ಹತ್ತಿ
ಆಲ ಹಣ್ಣು ಮೇಯ್ದು
ಪಿಕ್ಕೆಯೊಂದಿಗೆ ಬೀಜವುದುರಿಸಿ
ಒಂದಂಕುರವಿಟ್ಟ ಜೀವ ಮೊಳೆಯುತ್ತದೆ

ಅವ ಸಿದ್ಧನೂ ಅಷ್ಟೆ, ಹೊಲ
ಉತ್ತುತ್ತಾನೆ ಅದೇನೋ ಬಿತ್ತುತ್ತಾನೆ
ಸಂಜೆ ಮಳೆಗೆ ನೆಂದು ನಿಂದು
ಏಳಕ್ಕೆ ಬಾಗಿಲು ಮುಚ್ಚಿ
ಹೆಂಡತಿ ತಬ್ಬಿ ಬಟ್ಟೆ ಒಣಗಿಸಿಬಿಡುತ್ತಾನೆ!
ಅವಳದು ಬಿರುಗಾಳಿ ಮೊಗ
ಸಣ್ಣ ದಿಣ್ಣೆಯ ಮೈದಾನದೆದೆ
ಉಗುರ ಸಂದುಗಳಲ್ಲಿ ತಲೆ ಹೇನು
ಹಲ್ಲಿನ ಗಿಂಡಿಯಲ್ಲಿ ಕಳೆದ ವಾರದ ಮೀನು
ಬಿಸಿಲಿನಲ್ಲೊಣಗಿದ  ಮುದ್ದೆಯ ಕರಿ
ಆದರೂ ಅವಳೇ ಅವನಿಗೆ ವಿಶ್ವ ಸುಂದ್ರಿ

ನೆತ್ತಿ ಕಚ್ಚಿ ಬೆನ್ನ ಮೇಲೆ ಕುಳಿತು
ಸ್ಖಲಿಸಿಬಿಟ್ಟರೆ ಗಂಡು ಪಕ್ಕಿ
ಉದುರುತ್ತದೆ ನಾಲ್ಕು ತತ್ತಿ
ಹಾವು ಬರಬಹುದು ಮರ ಹತ್ತಿ
ಅದಕ್ಕೆ ಜೀವನೋಪಾಯ
ಹಕ್ಕಿಗಿಲ್ಲವಪಾಯ, ಬಯಸಿದ್ದಲ್ಲವದು
ಸಿದ್ಧನ ಮಕ್ಕಳು ಹಾಗೆ
ಊರ ನೂರು ದಾರಿಯಲ್ಲೆಲ್ಲೋ
ಕುಳಿತ್ತಿರುತ್ತವೆ
ದುಡಿದುಣ್ಣುತ್ತವೆ, ಹಡೆವ
ಕಾಲ ಬಂದಾಗ ಹಡೆಯುತ್ತವೆ

ರೀತಿ ರಿವಾಜುಗಳೊಡಮೂಡಲ್ಲ
ಯಂತ್ರ ಸಾಕು ತಂತ್ರ ಅವರಿಗೆ ಸಲ್ಲ
ಮನಸ್ಸಿಗೆ ಕಾಡದ ದೊಂದಿ
ಸಮತೆಯ ಹಾದಿಯಲ್ಲಿರುವ ಮಂದಿ
ಹರಿವ ನದಿ ತಟದಲ್ಲಿದ್ದರು
ಗೊಡವೆಗೆ ಹೋಗದೆ ದಾಟರು
ಮುರುಟದ ಮನಸ್ಸುಗಳವು
ಗಿಳಿಯಂತೆ, ಕಾಗೆ ಗೂಗೆ
ಬಕ ಪಕ್ಷಿಯಂತೆ, ನಮ್ಮ ಸಿದ್ಧನಂತೆ
ಬಗೆದು ಒಗೆಯದ ಕೌಪೀನದೊಳಗೆ
ಚಂದವಿರುತ್ತದೆ ಬದುಕು ನಡೆಸುವ ಬಗೆ

ನಾವು ನೀವೇ ಅದೇನೇನೋ
ಸಾಧಿಸಲು ಹೋಗಿ
ಜಗವನ್ನೇ ಮಸೆದು
ಮನಸ್ಸದು ಸವೆದು, ಹೌದು
ಸವೆದು ಸವೆದು ಸಾಯುತ್ತಿರುವುದು