ಕವನ ಎಂಬ ನಾಚಿಕೆಯ ಬಾಲಕಿ

Submitted by partha1059 on Wed, 10/31/2012 - 21:01

 

ಕವನ ಎಂಬ ನಾಚಿಕೆಯ ಬಾಲಕಿ 
---------------
 
ಕವನ ಎಂಬ ನಾಚಿಕೆಯ ಬಾಲಕಿ ಆಕೆ 
ಮಾತನಾಡಳು  ಬಲು ಸಂಕೋಚದವಳಾಕೆ 
ಕರೆದರೆ ಬಳಿ ಬಾರಳು
ಬಂದರು ಎದುರಿಗೆ ತಲೆ ಎತ್ತಿ ನಿಲ್ಲಳು
 
ನಸು ಬೆಳಗಿನ ಜಾವ 
ಹೊರಗಡೆ ಕತ್ತಲೆ ಕತ್ತಲೆ 
ಚುಮು ಚುಮು ಚಳಿಗೆ ಬೆಚ್ಚಗೆ ಹೊದ್ದು ಮಲಗಿದ್ದೆ
ಹೊರಗೆ ಜಿಟಿ ಜಿಟಿ ಮಳೆ 
 
ಮಳೆಯ ಹನಿಯ ಹನಿಯ ಸತತ ಶಬ್ದ
ಹೊರಗೆ ಮನೆಯ ಆವರಣದಲ್ಲಿ ಗೆಜ್ಜೆಯ ಶಬ್ದ!
ಬೆಚ್ಚಿ ಎದ್ದು ಕುಳಿತೆ! 
ಅದ್ಯಾರು ಈ ಸಮಯದಲ್ಲಿ
 
ಬಾಗಿಲು ತೆರೆದು ಹೊರಬಂದರೆ 
ಕವನ ಎಂಬ ನಾಚಿಕೆಯ ಬಾಲಕಿ ಆಕೆ 
ಮಾತನಾಡಳು  ಬಲು ಸಂಕೋಚದವಳಾಕೆ 
ಕರೆದರೆ ಬಳಿ ಬಾರಳು
ಬಂದರು ಎದುರಿಗೆ ತಲೆ ಎತ್ತಿ ನಿಲ್ಲಳು
 
ನನ್ನನ್ನು ಕಾಣುತ್ತಲೆ 
ನಿಧಾನ ಹೆಜ್ಜೆ ಇಡುತ್ತ ಮಳೆಯಲ್ಲಿ ಮರೆಯಾದಳು
ಕತ್ತಲಲ್ಲಿ ಮಳೆ ಹನಿಗಳ ನಡುವಿನಲ್ಲಿ 
ಕತ್ತಲಲ್ಲಿ ಬೆಳಕು ಕರಗಿದಂತೆ
ಕವನ ಎಂಬ ನಾಚಿಕೆಯ ಬಾಲಕಿ 
ಕತ್ತಲಲ್ಲಿ ಕರಗಿ ಕಣ್ಮರೆಯಾದಳು
 
Rating
No votes yet

Comments

lpitnal@gmail.com

Thu, 11/01/2012 - 09:45

ಪ್ರಿಯ ಪಾರ್ಥರವರೇ, ಲಕ್ಷ್ಮೀಕಾಂತ ಇಟ್ನಾಳ ರಿಂದ ರಾಜ್ಯೋತ್ಸವದ ಶುಭಾಶಯಗಳು. 'ಕವನ ಎಂಬ ನಾಚಿಕೆಯ ಬಾಲಕಿ' ತುಂಬ ಅರ್ಥವಂತಿಕೆಯ ಕವನ. ಕವನವನ್ನು ನಾಚಿಕೆಯ ಪಕ್ಕದ ಮನೆಯ ಪುಟಾಣಿಯಂತೆ ನಾಚಿಕೆಯ ಗೊಂಬೆಯ ಹಾಗೆ ಮಳೆಯಲ್ಲಿಯೇ ಕರಗಿ ಹೋಗುವ ಚಿತ್ರಣ ಸುಂದರ ಸುಂದರ. ಕವನವೂ ಹಾಗೆಯೇ ಅಲ್ಲವೇ. ತುಂಬ ತೂಗಿ ಪೋಣಿಸಬೇಕಾದ ಶಬ್ದಗಳ ಹಾರಗಳ ಸರಣಿಗಳ ಸಾಲುಗಳು ನಿಜಕ್ಕೂ ಬಹು ಕಠಿಣ. ಖ್ಯಾತ ಲೇಖಕ ಮಿತ್ರರೊಬ್ಬರು ಮೊನ್ನೆ ' ಈ ಕವನ' ವೆಂಬುದು ಅತಿ ಕಠಿಣ ರಚನೆಗೆ , ಎಲ್ಲಾ ಬರೆಯಬಹುದು ಆದರೆ ಕವನ ರಚನೆ ನಿಜಕ್ಕೂ ಕಷ್ಟ ಎಂದಿದ್ದು ಅದೆಷ್ಟು ಸತ್ಯ. ತಾವು ಅದಕ್ಕೆ ಸಮಾಂತರವಾಗಿ ನಾಚಿಕೆಯ ಸ್ವಭಾವದವಳು ಪದಪ್ರಯೋಗಿಸಿದ್ದು ಛಂದ ಮೂಡಿದೆ. ಉತ್ತಮ ಕವನ. ಧನ್ಯವಾದಗಳು.

ಆತ್ಮೀಯ ಪಾರ್ಥಸಾರಥಿಯವರೇ,
ಕವನದಲ್ಲಿ " ಕತ್ತಲಲ್ಲಿ ಬೆಳಕು ಕರಗಿದಂತೆ " ಎಂಬ ವಾಕ್ಯ ಪ್ರಯೋಗದ ಬಗ್ಗೆ ಸ್ವಲ್ಪ ವಿವರಿಸುವಿರಾ?
ಧನ್ಯವಾದಗಳು.

ನಿಮ್ಮ ಪ್ರತಿಕ್ರಿಯೆ ವಂದನೆಗಳು.
ಸುತ್ತಲು ಕತ್ತಲೆಯೆ ತುಂಬಿದಾಗ ಬೆಳಕನ್ನು ಅರಿಸುತ್ತ ಇರುತ್ತೇವೆ, ಆಗ ದೂರದಲ್ಲಿ ಎಲ್ಲೊ ಒಂದು ಬೆಳ್ಳಿ ಗೆರೆಯಂತೆ ಬೆಳಕು ಗೋಚರಿಸುತ್ತದೆ, ನಾವು ಉತ್ಸಾಹದಿಂದ ಅತ್ತ ನಡೆಯಲು ಹೊರಟಾಗ, ಆ ಬೆಳಕಿನ ಭ್ರಮೆ ಕತ್ತಲಲ್ಲಿ ಕರಗಿಹೋಗಿ, ಬೆಳಕಿನ ಕಿರಣ ಮಾಯವಾಗಿ ಮತ್ತೆ ಕತ್ತಲೆಯೆ ತುಂಬಿಕೊಂಡರೆ !. ಹಾಗೆ ಕವನ ಎಂಬ ಬಾಲಕಿ ಮಿಂಚಿನಂತೆ ಗೋಚರಿಸಿ, ಮತ್ತೆ ಕತ್ತಲೆಯಲ್ಲಿ ಮರೆಯಾದಳು ಎನ್ನುವ ಕಲ್ಪನೆ ! ಚೆನ್ನಾಗಿದೆಯ ?

ಆತ್ಮೀಯ ಪಾರ್ಥಸಾರಥಿ ಯವರೇ,
ನಿಮ್ಮ ವಿವರಣೆಗೆ ಧನ್ಯವಾದಗಳು. ಕತ್ತಲಲ್ಲಿ ಬೆಳಕು ಕರಗಲು ಸಾಧ್ಯವೇ? ಏಕೆಂದರೆ ಬೆಳಕಿದ್ದೆಡೆ ಕತ್ತಲು ಕರಗಲೇಬೇಕು, ಅದು ಹೇಗೆ ಕತ್ತಲು ಬೆಳಕನ್ನು ಕರಗಿಸಲು ಸಾಧ್ಯ? ಎಂಬುದು ನನ್ನ ಸಂಶಯವಾಗಿತ್ತು. ನೀವು ಅದನ್ನು ಭ್ರಮೆ ಎಂದು ಹೇಳಿದಮೇಲೆ ನನ್ನ ಸಂಶಯವೂ ಕರಗಿತು. ಉತ್ತಮ ಕವನ.

ವಂದನೆಗಳು , ನಾಚಿಕೆ ಎಂಬ ಪದವನ್ನು ನಾನು ತುಂಬಾ ಯೋಚಿಸಿ ಆಯ್ದುಕೊಂಡೆ, ಕವನ ಎಂಬ ಸಾಹಿತ್ಯವನ್ನು ನಾಚಿಕೆಯ ಬಾಲಕಿ ಎನ್ನುವಾಗ ಅವಳು ನನ್ನ ಹತ್ತಿರ ಸಹ ಸುಳಿಯದೆ , ದೂರ ಓಡುತ್ತಿಹಳು ಅನ್ನುವಾಗ ಕವನ ವಿಭಾಗ ನನಗೆ ಸಾದ್ಯವಿಲ್ಲದ್ದು ಎನ್ನುವ ಭಾವ ನನ್ನದು. ಉತ್ತಮ ಭಾವ ಗ್ರಹಣಕ್ಕೆ ನನ್ನ ಅಭಿನಂದನೆಗಳು
ಪಾರ್ಥಸಾರಥಿ

H A Patil

Thu, 11/01/2012 - 19:47

ಪಾರ್ಥ ಸಾರಥಿ ಯವರಿಗೆ ವಂದನೆಗಳು
' ಕವನ ಎಂಬ ನಾಚಿಕೆಯ ಬಾಲಿಕೆ ' ಸುಂದರ ಮತ್ತು ಯೋಚನೆಗೆ ಹಚ್ಚುವ ಕವನ. >>ಅದ್ಭುತವಾದ ಸಾಲುಗಳು, ಯಾರಾಕೆ ಕನ್ನಡಮ್ಮನೆ, ಬಾಲಕಿ ರೂಪದ ಪ್ರಕೃತಿಯೆ, ಕಾವ್ಯ ಕನ್ನಿಕೆಯೆ ? ಇನ್ನೂ ಯೋಚಿಸುತ್ತಲೆ ಇದ್ದೇನೆ. ಉತ್ತಮ ಕವನ ನೀಡಿದ್ದೀರಿ ಧನ್ಯವಾದಗಳು.

ಪಾಟೀಲರೆ
ತಮ್ಮ ಪ್ರತಿಕ್ರಿಯೆಗೆ ವಂದನೆಗಳು. ಬಹುಷಃ ಈ ಕವನ ಬರೆಯುವಾಗ ನನ್ನ ಮನದಲ್ಲಿ ಇದ್ದಿದ್ದು ಪ್ರಕೃತಿಯೆ. ಪ್ರಕೃತಿಯ ಕವನವೆಂಬ ಬಾಲಿಕೆಯ ರೂಪದಲ್ಲಿ ಬಂದಿದ್ದಳು