ಹೂ ಹಸಿರಿನ ಮಾತು

ಹೂ ಹಸಿರಿನ ಮಾತು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಎಲ್. ಸಿ. ಸುಮಿತ್ರಾ
ಪ್ರಕಾಶಕರು
ಅಂಕಿತ ಪ್ರಕಾಶನ

ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಲ್.ಸಿ.ಸುಮಿತ್ರಾರವರು ವಿಮರ್ಶಾ ಕೃತಿಗಳು ಕವಿತೆ, ಅನುವಾದ, ಕಥಾಸಂಕಲನ ಪ್ರಕಟಿಸಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರ ಇತ್ತೀಚಿನ ಪುಸ್ತಕ “ಹೂ ಹಸಿರಿನ ಮಾತು”. ಇದು ದೇಶೀಯವಾದ ಹೂ ಬಿಡುವ ಗಿಡಮರಗಳನ್ನು ಅತ್ಯಂತ ಆಪ್ತವಾಗಿ ಪರಿಚಯಿಸುತ್ತದೆ. ಈ ಪುಸ್ತಕದ ಓದು ಹೂ ಗಿಡಮರಗಳೊಂದಿಗಿನ ಆಪ್ತಸಂವಾದ ಒಡನಾಟದ ಮುದವನ್ನು ನಮಗೆ ನೀಡುತ್ತದೆ. ಲೇಖಕಿ ಸ್ವತಃ ಗಿಡಗಳನ್ನು ನೆಟ್ಟು ಬೆಳೆಸುವುದರಲ್ಲಿ ವಿಶೇಷ ಆಸಕ್ತಿ ಹೊಂದಿರುವವರು. ಕಾಡಿನ ದಾರಿಯಲ್ಲಿ ವಾಕಿಂಗ್ ಹೋಗುವಾಗ ಅವರ ಕಣ್ಣುಗಳು ಆರ್ಕಿಡ್ಗಳನ್ನು ಅರಸುತ್ತವೆ. ಹೂ ಗಿಡಗಳಿಗಾಗಿ ಆಪ್ತರ ಮನೆಗಳಿಗೆ ಹೋಗುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ಕುರಿಂಬೆ ಹೂ ನೋಡಲು ಬಾಬಾಬುಡನ್ ಗಿರಿಗೆ ಹೋಗುತ್ತಾರೆ. ಅಷ್ಟೇಕೆ, ಗಿಡಮರಗಳಿಗಾಗಿ ಬೇರೆ ಬೇರೆ ರಾಜ್ಯಗಳಿಗೂ ಪ್ರವಾಸ ಕೈಗೊಳ್ಳುತ್ತಾರೆ. ಸಹಜವಾಗಿಯೇ ತಮ್ಮ ಮನೋಭೂಮಿಕೆಯಲ್ಲಿ ಪ್ರೀತಿಯ ಸ್ಥಾನ ಪಡೆದಿರುವ ಗಿಡಮರಗಳ ವರ್ಣನೆ ಕೂಡ ಸ್ವಾರಸ್ಯಕರವಾಗಿದೆ. ನಮ್ಮದೇ ಪರಿಸರದಲ್ಲಿ ಸಹಜವಾಗಿ ಬೆಳೆಯುವ ಗಿಡಮರಗಳ ಬಗ್ಗೆ ಮಾತ್ರ ಲೇಖಕಿ ತಿಳಿಸಿದ್ದಾರೆ. ಹೂವಿನ ಆಕಾರ ಬಣ್ಣ, ಗಂಧ, ಎಲೆ, ಕಾಂಡ, ಗಿಡದ ಸ್ವರೂಪ, ಯಾವ ತಿಂಗಳಲ್ಲಿ ಹೂ ಬಿಡುತ್ತದೆ, ಕಾಯಿ ಹೇಗಿರುತ್ತದೆ, ಬೀಜ ಪ್ರಸಾರ, ವಂಶಾಭಿವೃದ್ಧಿ ಹೇಗೆ ಇತ್ಯಾದಿ ವಿವರಗಳ ವರ್ಣನೆಯಲ್ಲಿ ವೈಜ್ಞಾನಿಕತೆ ಇದೆ. ಸ್ವತಃ ಕನ್ನಡ ಪ್ರಾಧ್ಯಾಪಕಿಯಾಗಿರುವ ಲೇಖಕಿ ಹೆಚ್ಚಿನ ಹೂ ಗಿಡಗಳ ಕುರಿತು ವಿವಿಧ ಕಾವ್ಯಗಳಲ್ಲಿ ಬಂದಿರುವ ಪ್ರಸ್ತಾಪವನ್ನು ದಾಖಲಿಸುತ್ತಾರೆ. ಉದಾಹರಣೆಗೆ ಅಶೋಕ ಹೂಗಳು. ಕುವೆಂಪು ವರ್ಣನೆಯ ಅಶೋಕವನ, ಬುದ್ಧನು ಅಶೋಕವನದಲ್ಲಿ ಹುಟ್ಟಿದನೆಂಬ ನಂಬಿಕೆ, ಚರಕ ಸಂಹಿತೆಯಲ್ಲಿನ ಪ್ರಸ್ತಾಪ, ಪಂಪ ಕಾಳಿದಾಸರ ವರ್ಣನೆ, ಕುಪ್ಪಳ್ಳಿಯ ಕವಿಶೈಲದ ಹಿಂಭಾಗದ ನರ್ಜಿ ಎಂಬ ಊರಿನ ಅಶೋಕ ಮರಗಳು. ಹೀಗೆ ಅಶೋಕ ಹೂಗಳು ಕವಿಗಳ ಮನಸೂರೆಗೊಂಡ ಪರಿ ಇಲ್ಲಿದೆ. ಹೀಗೆಯೇ ‘ರಂಜವೆಂಬ ಬಕುಲದ ಹೂ’ , ಕೇದಗೆ, ‘ಮಾದಕ ಮಾಧವಿಲತೆ’ ಬಹಳಷ್ಟು ಹೂಗಿಡಗಳ ವರ್ಣನೆಯಲ್ಲಿಯೂ ಕಾವ್ಯದ ಪ್ರಸ್ತಾಪವಿದೆ. ಗಿಡಗಳ ಸಸ್ಯಶಾಸ್ತ್ರೀಯ ಹೆಸರು, ವಿವಿಧ ಹೆಸರುಗಳನ್ನು ದಾಖಲಿಸಲಾಗಿದೆ. ಹಾಲವಾಣಕ್ಕೆ ಇಂಡಿಯನ್ ಕೋರಲ್ ಟ್ರೀ, ಟೈಗರ್ಸ್ ಕ್ಲಾ ಎಂದೂ ಕರೆಯಲಾಗುವುದು. ಹೂಗಳ, ಎಲೆಕಾಂಡಗಳ ಔಷಧೀಯ ಬಳಕೆಯ ಪ್ರಸ್ತಾಪವಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಹೇಗೆ ವಿಭಿನ್ನ ರೀತಿಯಲ್ಲಿ ಬಳಕೆಯಗುತ್ತದೆ ಎಂಬ ಪ್ರಸ್ತಾಪವಿದೆ. ಉದಾಹರಣೆಗೆ ಕೇದಗೆಯನ್ನು ಒಡಿಸ್ಸಾದಲ್ಲಿ ಅತ್ತರು ಮಾಡಲು ಬಳಸಿದರೆ, ಉತ್ತರ ಭಾರತದಲ್ಲಿ ಸಿಹಿತಿಂಡಿಗೆ, ಕೇಶದ್ರವ್ಯವಾಗಿ ಬಳಸುತ್ತಾರೆ. ಮಲೆನಾಡು-ಕರಾವಳಿಗಳಲ್ಲಿ ದೇವರಪೂಜೆಗೆ ಕೇದಗೆ ಬೇಕು. ಹೀಗೆ ವಿವಿಧ ರೀತಿಯ ಬಳಕೆಗಳನ್ನು ಪರಿಚಯಿಸುತ್ತಾರೆ. ಹೂಗಿಡಗಳು ಬರಿಯ ಹೂಗಿಡಗಲಷ್ಟೆಯೇ? ಅವುಗಳನ್ನು ಪ್ರೀತಿಸುವವರಿಗೆ ಅವು ಹೃದಯದ ಮಿಡಿತದಂತೆ ಅವಿನಾಭಾವ ಸಂಬಂಧ ಹೊಂದಿರುವವು. ಲೇಖಕಿ ಹೂಗಿಡಗಳು ಜನಜೀವನದೊಂದಿಗೆ ಹೇಗೆ ಬೆರೆತಿವೆ ಎಂದು ತಿಳಿಸುತ್ತಾರೆ. ಹಾಲವಾಣದ ಬೀಜ ಚೆನ್ನೆಕಾಯಿ, ಅದನ್ನು ಚೆನ್ನೆಮಣೆ ಆಟಕ್ಕೆ ಬಳಸುತ್ತಾರೆ. ಮೈಸೂರುಕಡೆ ಅದನ್ನು ಹಳಗುಳಿಮಣೆ ಆಟ ಎನ್ನುತ್ತಾರೆ. ಇಪ್ಪೆ ಹೂವಿನಿಂದ ಬಸ್ತರ್ ಆದಿವಾಸಿಗಳು ಮಾದಕ ಪಾನೀಯ ತಯಾರಿಸುತ್ತಾರೆ. ಇಪ್ಪೆ ಬೆಣ್ಣೆ ತಯಾರಿಸುತ್ತಾರೆ. ಗೊಂಡ ಆದಿವಾಸಿಗಳು ಮಗುವಿಗೆ ಇಪ್ಪೆ ಮಧು ನೆಕ್ಕಿಸುತ್ತಾರೆ. ಹೊಳೆದಾಸವಾಳ |”ಭಾರತದಹೆಮ್ಮೆ” ಯಾದರೆ, ಸುವರ್ಣಧಾರೆ ಅಥವಾ ಕಕ್ಕೆ ಹೂ ಥೈಲಾಂಡಿನ ರಾಷ್ಟ್ರೀಯ ಪುಷ್ಪ. ಹಾಗೆಯೇ ವಾಟೆಹುಳಿ, ಜೀರ್ಕ, ಬೇರ್ಕ ಮುಂತಾದ ಹುಳಿಸಿಹಿ ಹಣ್ಣುಗಳು ಸಸ್ಯಗಂಧಿ ಎಂಬ ಮೂಲಿಕೆಗಳ ಪ್ರಸ್ತಾಪವಿದೆ. “ಅಂಕಿತ ಪ್ರಕಾಶ”ದ ಪುಸ್ತಕ ಅಂದ ಚೆಂದದಿಂದ ಅತ್ಯಾಕರ್ಷಕವಾಗಿದೆ. ಹೂ ಹಣ್ಣುಗಳ ವರ್ಣರಂಜಿತ ಛಾಯಾಚಿತ್ರಗಳು ಪುಸ್ತಕದ ಮೌಲ್ಯ ಹೆಚ್ಚಿಸಿವೆ. ತುಂಬ ವಿಶೇಷವಾದದ್ದೆಂದರೆ ಪುಸ್ತಕದ ಮುಖಪುಟ ಅದಿನ್ನೊಂದೇ ಕತೆ ಹೇಳುತ್ತದೆ. ಕನ್ನಡದ ಹೆಸರಾಂತ ಲೇಖಕಿ ಉಷಾ ಪಿ. ರೈ ಅವರು ಅರವತ್ತನೇ ವರ್ಷದಲ್ಲಿ ಭೀಕರ ಅಪಘಾತಕ್ಕೊಳಗಾಗಿ ಪರಾವಲಂಬಿಯಾದರು. ಮಾನಸಿಕ ಸ್ಥೈರ್ಯದಿಂದ ಅರ್ಥಪೂರ್ಣವಾಗಿಸಿಕೊಳ್ಳಲು ಅವರು ಚಿತ್ರಕಲೆಯ ಮೊರೆಹೋಗುತ್ತಾರೆ. ಅಪಘಾತಕ್ಕೂ ಮೊದಲು ಕೇವಲ ಎರಡು ತಿಂಗಳು ಮಾತ್ರ ಚಿತ್ರಕಲೆಯತ್ತ ಮುಖ ಮಾಡಿದ್ದ ಉಷಾರವರು ಒಂದು ವರ್ಷದಲ್ಲೇ ಚಿತ್ರಕಲಾ ಪರಿಷತ್ತಿನಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸುತ್ತಾರೆ. ಮನುಷ್ಯನ ಅಪ್ರತಿಮ ಚಿತ್ತಸ್ಥೈರ್ಯಕ್ಕೆ ಈ ಪ್ರದರ್ಶನ ಸಾಕ್ಷಿಯಾಗಿತ್ತು. ಲೇಖಕಿಯಾಗಿದ್ದವರು ಚಿತ್ರಕಲಾವಿದೆಯಾಗುತ್ತಾರೆ. ಅವರ ರಚನೆಯ “ಫುಲ್ ಬ್ಲೂಮ್’ ಚಿತ್ರ ಹೂ ಹಸಿರಿನ ಮಾತು ಪುಸ್ತಕದ ಮುಖಪುಟವಾಗಿ ಒಂದು ಮೌಲ್ಯವನ್ನೇ ಸಾರುತ್ತದೆ ಎನ್ನಬಹುದು. ಪರಿಸರದಲ್ಲಿ ಸಹಜವಾಗಿ ಬೆಳೆಯುತ್ತಿದ್ದ ಕೆಲವು ಗಿಡ-ಮರಗಳು ಇಂದು ಅಪರೂಪವಾಗುತ್ತಿರುವ ಸಂದರ್ಭದಲ್ಲಿ , ಹಸಿರನ್ನು ಉಸಿರಾಗಿಸಿಕೊಳ್ಳಲು, ಮನೆಯಂಗಳದಲ್ಲಿ ಹೂಗಿಡಗಳಿಗೆಡೆಕೊಡಲು ಪುಸ್ತಕ ಪ್ರೇರೇಪಿಸುತ್ತದೆ.