ಸಹಪ್ರಯಾಣಿಕೆ.

ಸಹಪ್ರಯಾಣಿಕೆ.

ದಿನನಿತ್ಯ ನಮ್ಮ ಸುತ್ತಲೂ ಅನೇಕ ರೀತಿಯ  ಸ್ವಭಾವದ  ಜನರನ್ನು  ನಾವು  ಕಾಣುತ್ತೀರುತ್ತೇವೆ.  ನಮ್ಮ ನೆರೆ-ಹೊರೆ, ಬೀದಿಗಳಲ್ಲಿ  ನಡೆದುಕೊಂಡು ಹೋಗುತ್ತಿರುವಾಗ , ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ, ಕೆಲಸದ ಕಛೇರಿಯಲ್ಲಿ ಹೀಗೆ  ಎತ್ತ ಹೋದರೂ ನಾವು  ವ್ಯವಹರಿಸುವ   ಜನರೆಲ್ಲರೂ  ವಿಭಿನ್ನ ವಾಗಿರುತ್ತಾರೆ.  ಎಲ್ಲರೂ ಶಾಂತ ಸ್ವಭಾವದವರಾಗಿರುವುದಿಲ್ಲ. ನಾವು ಹಾಗಂದುಕೊಂಡರೂ ಅದು ತಪ್ಪಾಗುತ್ತದೆ. ಮನುಷ್ಯನ ಸ್ವಭಾವಗಳು ಅವರವರ ಜೀವನದ  ಶೈಲಿಯನ್ನು  ಅವಲಂಬಿಸಿರುತ್ತದೆ. ಒಬ್ಬ ಸಹೃದಯಿ ಬಡವನಿಗೆ ತನ್ನ ಜೀವನ  ನಿರ್ವಹಣೆ  ಕಷ್ಟಸಾಧ್ಯವಾದಾಗ  ಸಹಜವಾಗಿ  ಆತನ ಮನದಲ್ಲಿ    ಬೇಸರದ   ಛಾಯೆ ಮೂಡಿ ಒಂದೊಮ್ಮೆ  ಆತನ  ಮನಸ್ಸು  ಬದಲಾಗಲೂಬಹುದು. ಹಾಗಯೇ ಶ್ರೀಮಂತನೊಬ್ಬ  ತಾನು  ಕೂಡಿಟ್ಟ  ಹಣವನ್ನು  ಯಾವ  ರೀತಿಯಾಗಿ  ಬಳಸಬೇಕೆಂದು ತಿಳಿಯದೆ, ಅದು ಎಲ್ಲಿ ತನ್ನಿಂದ ಕಳೆದುಹೋಗಿ ಬಿಡುವುದೋ ಎಂಬ ಭಯವೋ ಅಥವಾ  ತನ್ನಲ್ಲಿ ಯಾರಾದರೂ  ಹಣವನ್ನು ಕೇಳಬಹುದೆಂಬ  ಭಯದಿಂದಲೋ ತನ್ನೆದುರಿಗೆ  ಸಿಕ್ಕವರಲ್ಲಿ  ಸಿಡುಕು  ಸ್ವಭಾವದಿಂದಲೂ  ವರ್ತಿಸಬಹುದು. ಇನ್ನು ಮಕ್ಕಳಲ್ಲಿನ ಗುಣಗಳು ಅವರವರ ಮನೆಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ಅವಲಂಬಿಸಿರುತ್ತದೆ. ಮುಂದೆ ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಾಗ  ಅವರಲ್ಲೂ  ಬದಲಾವಣೆ ಸಹಜ. ಮನೆಯಲ್ಲೇ ಮುದ್ದಾಗಿ  ಸಾಕಿದ  ಮಕ್ಕಳು  ಹೊರಗಡೆ  ಹೋಗಬೇಕಾದ ಅನಿವಾರ್ಯತೆ  ಬಂದಾಗ  ಸಮಾಜದ  ಜನರೊಂದಿಗೆ  ವ್ಯವಹರಿಸುವುದು ಅನಿವಾರ್ಯ. ಇಂತಹ ಸಂದರ್ಭಗಳಲ್ಲಿ ಕೆಲವು ಮುಖಗಳ ಪರಿಚಯ ಅವರಿಗಾಗುತ್ತದೆ.
ವಾರದ ಹಿಂದೆ ಎಂದಿನಂತೆ ಆಫೀಸಿಗೆ ಹೊರಟಿದ್ದೆ. ಮನೆಯ ಹಾದಿಯಿಂದ ಬರುವ ಬಸ್ಸು ಬೇಗ  ಸಿಕ್ಕಿದ್ದರಿಂದ  ಮೆಜೆಸ್ಟಿಕ್‌ಗೆ ಎಂದಿಗಿಂತ ಹದಿನೈದು ನಿಮಿಷ ಬೇಗ ತಲುಪಿದ್ದೆ. ಅಲ್ಲಿಂದ ನಾನು ಕೆಲಸ ಮಾಡುತ್ತಿರುವ ಕಛೇರಿಗೆ  ಒಂದು ಗಂಟೆಯ ಪ್ರಯಾಣ. ಊರುಗಳ ಬಗ್ಗೆ ಎಷ್ಟೇ ಪರಿಚಯವಿದ್ದರೂ  ಬಸ್ಸಿನ ಚಾಲಕ -ನಿರ್ವಾಹಕರಲ್ಲಿಯೇ  ನಮ್ಮ ನಿಲ್ದಾಣದ ಬಗ್ಗೆ  ವಿಚಾರಿಸಿ ಬಸ್ಸಿಗೆ ಹತ್ತುವುದು ಒಳಿತವಲ್ಲವೇ? ಅಂತೆಯೇ ನನ್ನ  ನಿಲ್ದಾಣ  ಖಚಿತಪಡಿಸಿಕೊಂಡು  ಬಸ್ಸಿಗೆ ಹತ್ತಿ  ಖಾಲಿ  ಇರೋ ಒಂದು ಸೀಟಿನಲ್ಲಿ  ಕುಳಿತೆ. ಸಮಯದ ಅಭಾವ ಕಾಡ್ತಾ ಇರೋದರಿಂದ  ಬಸ್ಸಿನ ಪ್ರಯಾಣದ  ವೇಳೆ  ಸುಮ್ಮನೆ   ಕುಳಿತುಕೊಳ್ಳುವ ಬದಲು  ಯಾವುದಾದರೂ  ಪುಸ್ತಕ  ಹಿಡಿದುಕೊಂಡು  ಓದುವ ಹವ್ಯಾಸ. ಎಂದಿನಂ ಪುಸ್ತಕ  ತೆಗೆದು  ಒಂದೆರಡು ಪುಟಗಳನ್ನು ಓದುವಷ್ಟರಲ್ಲಿ, ಮಧ್ಯವಯಸ್ಸಿನ ಮಹಿಳೆಯೊಬ್ಬರು  ಜೋರಾಗಿ ಮಾತನಾಡುತ್ತಿರುವದು ಕೇಳಿಸಿತು. ಅದೂ ದು:ಖದ ಧ್ವನಿಯಲ್ಲಿ. ಚಾಲಕನ ಹಿಂದಿನ ಎದುರುಬದುರಾಗಿರು ಸೀಟಿನಲ್ಲಿ  ಕುಳಿತಿದ್ದ ಆ ಮಹಿಳೆ, ಅವರ ಎದುರಿನಲ್ಲಿ ಶಾಲಾಪುಸ್ತಕ ಹಿಡಿದು ಓದುತ್ತಿದ್ದ ಪುಟ್ಟ ಬಾಲಕಿಯಲ್ಲಿ ಏನೋ ಹೇಳುತ್ತಿದ್ದರು. ಆ ಬಾಲಕಿಗೆ ಪರೀಕ್ಷೆಯಿತ್ತೋ ಏನೋ ಒಮ್ಮೆ ಆ ಮಹಿಳೆಯತ್ತ  ನೋಡಿ ತನ್ನ ಪಾಡಿಗೆ ತಾನು  ಓದತೊಡಗಿದಳು. ಮಹಿಳೆ ತೆರೆದಿದ್ದ ಕಿಟಕಿ ಗಾಜಿನ ಮೂಲಕ ಎತ್ತಲೋ ನೋಡುತ್ತಾ  ತನ್ನ ಮಾತನ್ನು  ಮುಂದುವರಿಸುತ್ತಿದ್ದಳು. ಅಷ್ಟಕ್ಕೂ ಆಕೆ ಏನು ಹೇಳುತ್ತದ್ದಾಳೆ  ಎಂದು  ಗಮನವಿಟ್ಟು ಕೇಳಿದಾಗ... (ಆಕೆಗೆ ತನ್ನ ಎದುರು ಪುಸ್ತಕ ಹಿಡಿದು ಕುಳಿತಿದ್ದ ಬಾಲಕಿಯನ್ನು ನೋಡಿ  ತನ್ನ ಮಗಳ  ನೆನಪಾಯಿತೋ ಏನೋ?)  '' ಶಾಲೆಗೆ ಹೋಯ್ತಾ ಇದ್ದೀಯೇನಮ್ಮ ..ಓದು ಓದು ಚೆನ್ನಾಗಿ ಓದು. ಓದಿ ಒಳ್ಳೆ ಕೆಲಸಕ್ಕೆ ಸೇರ್ಕೊ. ಮದುವೆ ಆಗ್ಬೇಡಮ್ಮಾ.. ಆದ್ರೆ ಗಂಡನ ಮನೆಯಲ್ಲಿ ತುಂಬಾ ಕಷ್ಟ ಕೊಡ್ತಾರೆ. ರಾತ್ರಿ ಮನೆಗೆ ಬಂದ ಗಂಡ ಚೆನ್ನಾಗಿ ಹೊಡೀತಾನೆ. ನಮ್ಮ ಕಷ್ಟ ಕೇಳೋರು ಯಾರೂ  ಇರಲ್ಲ. ಅವ ಹೊಡೆದಿರೋ ಏಟಿಗೆ ನೆಟ್ಟಗೆ  ಕೂತ್ಕೊಳ್ಳೋಕೂ ಆಗ್ತಾಇಲ್ಲ" ಎಂದು ಮುಖಕ್ಕೆ ಸೆರಗು ಮುಚ್ಚಿಕೊಂಡು ಒಂದೇ ಸಮನೆ  ಅಳತೊಡಗಿದಳು. ಆಕೆಯ ಅಳುವಿನೊಂದಿಗೆ ಅವಳು ಗೊಣಗುತ್ತಿದ್ದ ವಿಷಯಗಳೂ  ಕೇಳಿಸದಾದವು. ಅಷ್ಟರಲ್ಲಿ ಬಸ್ಸು ಹೊರಟಿತು. ಆಕೆಯ ಎದುರಿಗಿದ್ದ ಆ ಪುಟ್ಟ ಬಾಲಕಿಗೆ ಏನನ್ನಿಸಿತೋ ಏನೋ? ಅರ್ಥವಾಗದ ವಿಷಯಗಳನ್ನು ನನ್ನ ಬಳಿ ಇವರು ಯಾಕೆ ಹೇಳಿಕೊಳ್ಳುತ್ತಿದ್ದಾರೆ  ಎಂದೆನ್ನುವಂತಿತ್ತು ಆಕೆಯ ಮುಖ-ಭಾವ.
ಆ ಮಹಿಳೆ ಮಾತ್ರ ತನ್ನ ಮನದಲ್ಲಿರುವ ನೋವನ್ನು, ತಾನು ಓದಲು ಅನುಕೂಲವಾಗದೆ ಜೀವನದಲ್ಲಿ ಪಡುತ್ತಿರುವ ಅಸಹಾಯಕತೆಯನ್ನು ಶಪಿಸಿಕೊಂಡು  ತನಗಾದಂತೆ  ಇನ್ನೊಂದು  ಹೆಣ್ಣಿನ  ಬಾಳು  ಕೂಡಾ  ಕಣ್ಣೀರಿನಲ್ಲಿ  ಕೈ ತೊಳೆಯುವಂತಾಬಾರದು ಎಂಬುದನ್ನು  ಈ ರೀತಿಯಾಗಿ  ಹೇಳಿಕೊಂಡಳು.  ಆಕೆಗೆ ಎಷ್ಟೇ ನೋವಿದ್ದರೂ  ಆ ಪುಟ್ಟ  ಬಾಲಕಿಗೆ ತಿಳಿಹೇಳಿದ್ದ  ಆ ಮಾತುಗಳು   ನನ್ನ  ಕಿವಿಯಲ್ಲಿ  ಇನ್ನೂ   ಪಿಸುಗುಡುತ್ತಿರುವಾಗಲೇ..ಕುಂಟುತ್ತಾ ಸೀಟಿನಿಂದ ಎದ್ದ ಆ ಮಹಿಳೆ ನೋಡನೋಡುತ್ತಿರುವಂತೆಯೇ  ತನ್ನ   ನಿಲ್ದಾಣ  ಬಂದಾಗ  ಇಳಿದು ಹೋದಳು. ಮುಂದಿನ ನಿಲ್ದಾಣ ನಾನು ಇಳಿಯಬೇಕಾಗಿರುವುದು  ಎಂದು ಗೊತ್ತಾಗಿದ್ದೇ ನಿರ್ವಾಹಕ  ಕೂಗಿ  ಹೇಳಿದಾಗ.

ದೇಶಕ್ಕೆ ಸ್ವಾತಂತ್ರ್ಯ  ಬಂದು  ಹಲವು  ದಶಕಗಳೇ  ಕಳೆದರೂ  ಹೆಣ್ಣಿನ ಮೇಲೆ  ಆಗುತ್ತಿರುವಂತಹ   ದೌರ್ಜನ್ಯಗಳು ಇನ್ನೂ  ಹಾಗೇ ಇದೆ. ಮಹಿಳೆಯರು ಸಮಾನತೆ,ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೂ  ಸಮಾಜದಲ್ಲಿ ಹೊರನೋಟಕ್ಕೆ ಕಾಣದಿರುವ ಮೂಲೆ-ಮೂಲೆಗಳಲ್ಲಿ ಅದೆಷ್ಟೋ ಮಹಿಳೆಯರು  ದೌರ್ಜನ್ಯದಿಂದ  ನಲುಗುತ್ತಿದ್ದಾರೆ  ಅಲ್ಲವೇ? ಹೀಗೆ ಯೋಚಿಸುತ್ತಾ  ಸಾಗಿದಾಗ ನನ್ನ ಕಛೇರಿ ತಲುಪಿದ್ದೇ ತಿಳಿಯಲಿಲ್ಲ. ಶಿಕ್ಷಣ,ವ್ಯಕ್ತಿಸ್ವಾತಂತ್ರ್ಯವಿಲ್ಲದೆ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವೇ?  ಕಷ್ಟಗಳು ಎಷ್ಟೇ ಇದ್ದರೂ  ಅವುಗಳನ್ನು  ಮಕ್ಕಳಿಗೆ ಗೊತ್ತು  ಪಡಿಸದೆ  ವಿದ್ಯಾಭ್ಯಾಸ  ಕಲಿಸಿ, ಜೀವನದ ಒಂದು ಹಂತಕ್ಕೆ ತಲುಪಿಸಿದ  ನನ್ನ  ಅಪ್ಪನನ್ನು ನೆನೆದು  ಮನದಲ್ಲೇ  ಕೃತಜ್ಞತೆ  ಸಲ್ಲಿಸಿ .. ಕಛೇರಿಯ ಕಾರ್ಯಗಳತ್ತ ಗಮನಹರಿಸಿದೆ.