ಆತ್ಮವಿಶ್ವಾಸದೊಳಗೊಂದು ಸುತ್ತು.

ಆತ್ಮವಿಶ್ವಾಸದೊಳಗೊಂದು ಸುತ್ತು.



ಬದುಕು ನಾವಂದುಕೊಂಡಂತೆ ಯಾವತ್ತೂ  ನಡೆಯುವುದಿಲ್ಲ  ಎಂದು  ಸಾಮಾನ್ಯವಾಗಿ  ಎಲ್ಲರ ಬಾ ಯಲ್ಲೂ ಕೇಳೋ ಮಾತು.  ಅದೇಕೋ ಏನೋ ಬದುಕಿನ ಅನುಭವಗಳು ಕೆಲವೊಮ್ಮೆ  ನಮ್ಮನ್ನು ಉದ್ದೇಶಪೂರ್ವಕವಾಗಿಯೇ  ಮೋಸಗೊಳಿಸುತ್ತದೆ. ಹೌದು, ಹಲವು ಬಾರಿ ನಾವು ನೆನಪಿಡಬೇಕೆಂಬ ವಿಷಯ ಸರಿಯಾದ ಸಮಯದಲ್ಲಿ ನೆನಪಿಗೆ ಬಾರದೆ ಪರದಾಡುತ್ತಿರುತ್ತೇವೆ. ಆದರೆ ನಮ್ಮ ಜೀವನದಲ್ಲಿ ನಡೆದ  ಕಹಿ ಘ ಟನೆಗಳನ್ನು  ಮರೆಯಲು ಅದೆಷ್ಟು ಪ್ರಯತ್ನಿಸಿದರೂ ಬೆನ್ನು ಬಿಡದ  ಬೇತಾಳನಂತೆ  ನಮ್ಮನ್ನು  ಕಾಡುತ್ತಿರುತ್ತದೆ. ಸಮಯ ಬೇಗನೆ ಸಾಗಲಿ ಎಂದು ಯೋಚಿಸಿದಂತೆಲ್ಲಾ  ಸಮಯ ಇನ್ನಷ್ಟು ದೀರ್ಘವಾದಂತೆ  ಅನ್ನಿಸುತ್ತದೆ. ಯಾವುದಾದರೊಂದು ಪ್ರಮುಖ  ಕೆಲಸವನ್ನು  ಇಂದು ಮುಗಿಸಿಯೇ ಮಲಗುವುದು ಎಂದು ಯೋಚಿಸಿದ್ದ ದಿನ  ಬಲು ಬೇಗನೆ  ನಿದ್ದೆ  ಬಂದುಬಿಡುತ್ತದೆ. ಆದರೆ ತಡರಾತ್ರಿಯವರೆಗೆ ಕಾದಂಬರಿ,ಕಥೆ ಪುಸ್ತಕ ಅಥವಾ ಸಿನಿಮಾ ನೋಡುತ್ತಿರಬೇಕಾದರೆ ನಿದ್ದೆ ಹತ್ತಿರ  ಸುಳಿಯುವುದಿಲ್ಲ. ಹೀಗೆ ಸಣ್ಣ -ಪುಟ್ಟ ವಿಚಾರಗಳಿಂದ ಹಿಡಿದು ಪ್ರಮುಖ ವಿಚಾರಗಳವರೆಗೆ ಯೋಚನೆಗಳು  ಈ ರೀತಿ ಅಡಿಮೇಲಾಗುತ್ತಿರುತ್ತವೆ.
ಹೀಗಿದ್ದಾಗ  ಯಾಕೋ ನಮ್ಮ  ಟೈಂ  ಚೆನ್ನಾಗಿಲ್ಲ  ಅಂದುಕೊಂಡು  ಬದುಕಿನಲ್ಲಿ ಮುಂದೆ ಸಾಗುತ್ತಿರುತ್ತೇವೆ. ಈ ರೀತಿ ನಾವು ನಮ್ಮ ಅಪನಂಬಿಕೆಯನ್ನು ಹೊಂದಿರುವುದರ ಪ್ರತಿಫಲವೇ ಈ ಎಲ್ಲಾ ವೈಪರೀತ್ಯಗಳಿಗೆ ಕಾರಣವಾಗುತ್ತದೆ. ಪ್ರಖ್ಯಾತ ವಿಜ್ಞಾನಿ  ಐನ್‌ಸ್ಟೈನ್‌ ರ ಪ್ರಕಾರ  ಯಾರು ತಮ್ಮ ಮೇಲೆ  ಪ್ರಭುತ್ವ ವನ್ನು  ಸಾಧಿಸುವುದಿಲ್ಲವೋ  ಅವರೆಂದೂ  ಸ್ವತಂತ್ರ ಅನ್ನಿಸುವುದೇ ಇಲ್ಲ. ನಾವು ನಮ್ಮ ಮನಸ್ಸಿನ ಮೇಲೆ ಪ್ರಭುತ್ವ  ಸಾಧಿಸುವಲ್ಲಿ ವಿಜಯಿಯಾದರೆ  ಅದು ನಮ್ಮ ಬದುಕಿನ ವಿಜಯದ ಪ್ರಥಮ ಮೆಟ್ಟಿಲಾಗಿರುತ್ತದೆ. ಆದರೆ ನಾವು ಪದೇ ಪದೇ ನಮ್ಮ ಮನಸ್ಸಿಗೆ ಮಿತಿಗಳನ್ನು  ಹೇರುತ್ತಾ  ಬರುತ್ತೇವೆ. ನಾವಂದುಕೊಂಡಂತೆ  ಆಗದೆ ಹೋದರೆ, ನಮಗಿಂತ ಇತರರು ಚೆನ್ನಾಗಿ ಮಾಡಿದರೆ, ನನ್ನಿಂದ ಸಾಧ್ಯವಾಗದೆ ಹೋದರೆ  ಇಂತಹ ನಕಾರಾತ್ಮಕ ವಿಷಯಗಳನ್ನು ಮನಸ್ಸಿನಲ್ಲಿ ಯೋಚಿಸುತ್ತಾ ಹೋಗುವುದರಿಂದ  ಸುಪ್ತ ಮನಸ್ಸಿನಲ್ಲಿ  ಅಂತಹ ವಿಷಯಗಳು  ಹುದುಗಿ ಹೋಗುತ್ತವೆ. ಇದರಿಂದಾಗಿ ನಮ್ಮ ಮೇಲೆ  ನಮಗಿರುವ ವಿಶ್ವಾಸ  ಕಡಿಮೆಯಾಗಿ  ನಾವು ಮಾಡುವ ಕೆಲಸಗಳೆಲ್ಲಾ  ನಮ್ಮ ಯೋಚನೆಗೆ ವಿರುದ್ಧವಾಗಿ ನಡೆದುಹೋಗುತ್ತವೆ.
ಮಾನಸಿಕವಾಗಿ ನಮ್ಮ ಮನಸ್ಸಿನ ಮೇಲೆ ಪ್ರಭುತ್ವಸಾಧಿಸಿದಾಗ ಯಾವ ವಿಷಯಗಳೂ ನಮಗೆ ಕಷ್ಟ ಎಂದೆನಿಸುವುದಿಲ್ಲ. ನಾವು ಯಾವತ್ತೂ ನಮ್ಮ ಮೇಲಿರು ವ  ವಿಶ್ವಾಸವನ್ನು ಕಳೆದುಕೊಳ್ಳಬಾರದು. ಯಾವುದೇ ಕೆಲಸವನ್ನು ಮಾಡುವಾಗ  ಶ್ರದ್ಧೆಯಿಂದ ಮಾಡಿ ಮುಗಿಸಬೇಕು. ತನ್ನಿಂದ ಸಾಧ್ಯವಿಲ್ಲ ಎಂದು ಯೋಚಿಸುವ ಬದಲು  ಯಾಕೆ ಸಾಧ್ಯವಿಲ್ಲ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಬೇಕು. ಯಾವುದೇ ಕೆಲಸವನ್ನಾದರೂ  ನನಗದು ಸಾಧ್ಯವಾಗುತ್ತದೆ ಎಂದು  ಯೋಚಿಸಿ  ಮನಸ್ಸಿಗೆ ಹೇಳುತ್ತಾ ಹೋದರೆ  ಮನಸ್ಸು ನಮ್ಮ ಭಾವನೆಗೆ  ಸ್ಪಂದಿಸತೊಡಗುತ್ತದೆ, ನಾವೂ ಯಶಸ್ಸಿನತ್ತ ಹೆಜ್ಜೆ ಹಾಕುವುದರಲ್ಲಿ ಸಂಶಯವಿಲ್ಲ.