ಟೂಜಿ ಸ್ಪೆಕ್ಟ್ರಮ್:ಮಾನ ಹರಾಜು

ಟೂಜಿ ಸ್ಪೆಕ್ಟ್ರಮ್:ಮಾನ ಹರಾಜು

ಟೂಜಿ ಸ್ಪೆಕ್ಟ್ರಮ್:ಮಾನ ಹರಾಜು
ಟೂಜಿ ಸ್ಪೆಕ್ಟ್ರಮ್ ಹರಾಜು ಮೂಲಕ ಕನಿಷ್ಠವೆಂದರೂ ನಲುವತ್ತು ಸಾವಿರ ಕೋಟಿ ಗಳಿಸಿ,ತನ್ನ ವಿತ್ತ ಕೊರತೆಯನ್ನು ಕಡಿಮೆ ಮಾಡುವ ಕನಸು ಕೇಂದ್ರ ಸರಕಾರದ್ದಾಗಿತ್ತು.ನ್ಯಾಯಾಲಯವು ಟೂಜಿ ಲೈಸೆನ್ಸ್ ರದ್ದು ಗೊಳಿಸಿ,ಕಂಪೆನಿಗಳಿಗೆ ಹರಾಜು ಪ್ರಕ್ರಿಯೆ ಮೂಲಕ ಸ್ಪೆಕ್ಟ್ರಂ ಹಂಚಲು ಆದೇಶ ನೀಡಿದ ಅನ್ವಯ,ಈ ಹರಾಜಿಗೆ ಸರಕಾರ ಮುಂದಾಗಿತ್ತು.ಟ್ರಾಯ್ ಒಂದು ಬ್ಯಾಂಡ್ ಸ್ಪೆಕ್ಟ್ರಮಿಗೆ ಹದಿನೆಂಟು ಸಾವಿರ ಕೋಟಿ ಮೂಲಬೆಲೆ ನಿಗದಿಪಡಿಸಲು ಬಯಸಿತ್ತು.ಆದರೆ ಸರಕಾರ,ಅದು ಸರಿಯಾದ ದರ ಅಲ್ಲ ಎಂದು ಅಭಿಪ್ರಾಯ ಪಟ್ಟು,ಮೂಲಬೆಲೆಯನ್ನು,ಹದಿನಾಲ್ಕು ಸಾವಿರ ಕೋಟಿ ಬೆಲೆ ನಿಗದಿ ಪಡಿಸಿತು.ಇನ್ನಷ್ಟು ಬೆಲೆ  ಕಡಿಮೆ ಮಾಡಿದರೆ,ಸರಕಾರ ಕಂಪೆನಿಗಳಿಗೆ ಮಣಿಯಿತು ಎನ್ನುವ ಆರೋಪ ಕೇಳಬೇಕಾದ ಅಪಾಯವೂ ಇತ್ತು.ಜತೆಗೇ ಸರಕಾರವು ಲಭ್ಯವಿದ್ದ ಸ್ಪೆಕ್ಟ್ರಮನ್ನು ಪೂರ್ತಿ ಹರಾಜಿಗೆ ಲಭ್ಯವಾಗಿಸದೆ,ಕೊರತೆಯ ಮನೋ ಭಾವ ಉಂಟು ಮಾಡಲು ಯತ್ನಿಸಿತು.ಹೆಚ್ಚು ಬೇಡಿಕೆ ಬಂದಾಗ,ಕಡಿಮೆ ಪೂರೈಕೆಯಿದ್ದರೆ ಹೆಚ್ಚು ಬೆಲೆ ಸಿಗುತ್ತದಲ್ಲ?ಆದರೆ ಹರಾಜು ಆರಂಭವಾಗುವ ಈ ಸಮಯ,ಟೆಲಿಕಾಂ ಉದ್ಯಮದಲ್ಲಿ ಮುಗಿಲು ಕವಿದಿದೆ.ಹೆಚ್ಚಿನ ಜನರೂ ಈಗಾಗಲೇ ಮೊಬೈಲ್ ಸಂಪರ್ಕ ಹೊಂದಿದ್ದಾರೆ.ಈಗ ಹೊಸ ಸಂಪರ್ಕಗಳ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಇಳಿಯುತ್ತಿದೆ.ಜತೆಗೆ ಪ್ರತಿ ಸಂಪರ್ಕದಿಂದ ಕಂಪೆನಿಗಳಿಗೆ ಬರುವ ಆದಾಯ ಇಳಿಯುತ್ತಿದೆ.ಆರ್ಥಿಕ ಹಿನ್ನಡೆಯ ಈ ದಿನಗಳಲ್ಲಿ,ಹೆಚ್ಚು ಲಾಭಗಳಿಸುವ ಪ್ರಮೇಯವಿಲ್ಲವಾದ್ದರಿಂದ,ಲೈಸೆನ್ಸ್ ರದ್ದಾದ ಹೆಚ್ಚಿನ ಕಂಪೆನಿಗಳೂ ಹರಾಜಿನಲ್ಲಿ ಭಾಗವಹಿಸಲಿಲ್ಲ.ಬೆರಳಿಣಿಕೆಯ ಕಂಪೆನಿಗಳಷ್ಟೇ ಕಣದಲ್ಲಿದ್ದುವು.ಸಿಡಿಎಂಎ ಸ್ಪೆಕ್ಟಮ್ ಬಹು ದುಬಾರಿ ಮೂಲಬೆಲೆ ಹೊಂದಿದ ಕಾರಣ ಯಾವ ಕಂಪೆನಿಯೂ ಹರಾಜಿನಲ್ಲಿ ಭಾಗವಹಿಸಲಿಲ್ಲ.
ಹರಾಜು ಕೇವಲ ಎರಡೇ ದಿನಗಳಲ್ಲಿ ಮುಗಿದು ಹೋಯಿತು.ಹರಾಜಿನಿಂದ ಹತ್ತು ಸಾವಿರ ಕೋಟಿಯೂ ಹುಟ್ಟಲಿಲ್ಲ.ಕರ್ನಾಟಕ,ರಾಜಸ್ತಾನಗಳ ಸ್ಪೆಕ್ಟಮ್ ಕೂಡ ಹರಾಜಾಗದೆ ಉಳಿಯಿತು.ಮೂಲಬೆಲೆಯ ದರವನ್ನು ನಿಗದಿಪಡಿಸುವಲ್ಲಿ ಸರಕಾರ ಎಡವಿದ್ದೇ,ಹರಾಜು ವೈಫಲ್ಯಕ್ಕೆ ಮುಖ್ಯ ಕಾರಣವೆಂಬ ಅಭಿಪ್ರಾಯ ಈಗ ವ್ಯಕ್ತವಾಗಿದೆ. ಕೆಲವೇ ಸಂಖ್ಯೆಯ ಕಂಪೆನಿಗಳು ಹರಾಜಿನಲ್ಲಿ ಭಾಗವಹಿಸಿದ ಕಾರಣ ಉತ್ಸಾಹವೂ ಇರಲಿಲ್ಲ.ಒಟ್ಟಿನಲ್ಲಿ ಹರಾಜಿನಿಂದ ಗಳಿಸಿದ ಮೊತ್ತದಿಂದ ತನ್ನ ವಿತ್ತೀಯ ಕೊರತೆಯನ್ನು ನೀಗಿಸಬಹುದೆಂದು ಲೆಕ್ಕ ಹಾಕಿದ್ದ ಸರಕಾರದ ಲೆಕ್ಕಾಚಾರ ಉಲ್ಟಾ ಆಗಿದೆ. ಆದರೂ ಇನ್ನೊಂದೆಡೆ ಸರಕಾರ ಹರಾಜಿನ ಮೂಲಕವೇ ಸಂಪನ್ಮೂಲಗಳನ್ನು ವಿತರಣೆ ಮಾಡಬೇಕೆಂಬ ಸಿಎಜಿಯ ವರದಿಯಲ್ಲಿನ ಕಿವಿಮಾತಿಗೆ ಹಿನ್ನಡೆಯಾದ್ದು ಸರಕಾರಕ್ಕೆ ಹಿಗ್ಗು ತಂದಿದೆ.ಜತೆಗೇ ಟೂಜಿಯ ಸ್ಪೆಕ್ಟ್ರಮ್ ವಿತರಣೆಯಿಂದ ನಾಲ್ಕು ವರ್ಷಗಳ ಹಿಂದೆ ಸರಕಾರಕ್ಕೆ ಒಂದುಮುಕ್ಕಾಲು ಲಕ್ಷ ಸಾವಿರ ಕೋಟಿಗಿಂತಲು ಹೆಚ್ಚು ನಷ್ಟ ಸಂಭವಿಸಿರಬಹುದೆಂಬ ಸಿಎಜಿ ಲಕ್ಕಾಚಾರ ಸರಿಯಲ್ಲ ಎನ್ನುವ ತನ್ನ ವಾದವನ್ನು ಸರಕಾರ ಪುನ: ಮಂಡಿಸುತ್ತಿದೆ.ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಾಲ್ ಹಿಂದೆಯೂ ಟೂಜಿ ಸ್ಪೆಕ್ಟ್ರಮ್ ವಿಲೇವಾರಿಯಿಂದ ಸರಕಾರಕ್ಕೆ ಆದ ನಷ್ಟ "ಶೂನ್ಯ" ಎಂಬ ವಾದವನ್ನು ಹೂಡಿದ್ದರು.ಈಗಿನ್ನು ಸರಕಾರವು ಮಾರ್ಚ್ ಹೊತ್ತಿಗೆ ಸರಕಾರವು ತನ್ನಲ್ಲುಳಿದಿರುವ ಸ್ಪೆಕ್ಟಮನ್ನು ಮತ್ತೆ ಹರಾಜು ಹಾಕಲು,ಹೊಸ ನಿಯಮಗಳೊಂದಿಗೆ ಪ್ರಯತ್ನಿಸಲಿದೆ ಎಂದು ಘೋಷಿಸಿದೆ.ಅತ್ತ ಸಿಎಜಿ ಮೂಲಗಳು ನಷ್ತದ ಅಂದಾಜಿನಲ್ಲಿ ತಾನು ಆ ವೇಳೆಯಲ್ಲಿ ಕೆಲವು ಕಂಪೆನಿಗಳು ನೀಡಲು ತಯಾರಾಗಿದ್ದ ಮೌಲ್ಯದ ಅಧಾರದಲ್ಲಿ ಹಾಕಿದ್ದು,ಅದು ಈಗಲೂ ಸರಿಯಾಗಿದೆ ಎಂದು ಹೇಳಿವೆ.
ಹರಾಜು ವೈಫಲ್ಯಕ್ಕೆ ಕಾರಣಗಳನ್ನು ಬೊಟ್ಟು ಮಾಡಿರುವ ಕೆಲವು ವಿಶ್ಲೇಷಕರು,ಸ್ಪೆಕ್ಟ್ರಮ್ ಬ್ಲಾಕುಗಳ ಬ್ಯಾಂಡ್ ಹೆಚ್ಚಾದದ್ದು,ಅದರ ಮೂಲಬೆಲೆಯು ಈಗಿನ ಆರ್ಥಿಕ ಹಿನ್ನಡೆಯ ದಿನಗಳಲ್ಲಿ ಅವಾಸ್ತವಿಕವೆನ್ನಬಹುದಾದಷ್ಟಿದ್ದದ್ದು ಕಾರಣಗಳು ಎಂದಿವೆ.ಜತೆಗೆ ಆಗ ಐನೂರು ಕಂಪೆನಿಗಳಿಗಳಿಗೂ ಹೆಚ್ಚು ಸಂಖ್ಯೆಯ ಕಂಪೆನಿಗಳು ಉತ್ಸಾಹದಿಂದ್ದುವು.ಅದಕ್ಕೆ ಕಾರಣ,ಆಗ ದೇಶದ ಜನಸಂಖ್ಯೆಯ ಶೇಕಡಾ ಇಪ್ಪತ್ತು ಭಾಗ ಜನರೂ ಮೊಬೈಲ್ ಸಂಪರ್ಕ ಹೊಂದಿರದಿದ್ದು,ಟೆಲಿಕಾಂ ಉಚ್ಛಾಯ ಸ್ಥಿತಿಯಲ್ಲಿದ್ದ,ಕಾರಣ ಆಗೇನಾದರೂ ಹರಾಜು ನಡೆದರೂ ಅದು ಈಗಿನಂತೆ ಫ್ಲಾಪ್ ಶೋ ಆಗುತ್ತಿರಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಸರಕಾರವು ಹರಾಜಿನಿಂದ ತಾನು ಲೆಕ್ಕ ಹಾಕಿದ್ದ ಆದಾಯ ಗಳಿಸದೇ ಹೋದದ್ದು,ಅದರ ವೈಫಲ್ಯವೆಂದೇ ಹೇಳಬೇಕಾಗುತ್ತದೆ.
-------------------------------------------------------
ಟೆಲಿಕಾಂ:ವಿದೇಶಿ ಉತ್ಪನ್ನಗಳಿಗೆ ಗುಡ್‌ಬೈ
ದೇಶದ ಟೆಲಿಕಾಂ ವಲಯದಲ್ಲಿ ವಿದೇಶೀ ಕಂಪೆನಿಗಳ ಉತ್ಪನ್ನಗಳು ಎಲ್ಲೆಡೆ ಜನಪ್ರಿಯವಾಗಿವೆ.ಮೊಬೈಲ್ ಹ್ಯಾಂಡ್‌ಸೆಟ್ಟುಗಳಿರಬಹುದು,ಟೆಲಿಕಾಂ ಕಂಪೆನಿಗಳು ಸೇವೆ ನೀಡಲು ಬಳಸುವ ನೆಟ್‌ವರ್ಕಿಂಗ್ ಸಾಧನಗಳು.ರೂಟರ್ ಹೀಗೆ ಎಲ್ಲವೂ ಹೆಚ್ಚಾಗಿ ವಿದೇಶೀ ಕಂಪೆನಿಯ ಉತ್ಪನ್ನಗಳೇ ಆಗಿವೆ.ಅದರಲ್ಲೂ ಚೀನೀ ಕಂಪೆನಿಗಳ ಉತ್ಪನ್ನಗಳು ಒಂದು ಕೈ ಮೇಲುಗೈ ಸಾಧಿಸಿವೆ.ಬಿಎಸ್‌ಎನ್‌ಎಲ್ ಅಂತಹ ಸಾರ್ವಜನಿಕ ಕ್ಷೇತ್ರದ ಕಂಪೆನಿಯೂ ಹ್ಯುವೈ ಅಂತಹ ಚೀನೀ ಕಂಪೆನಿಯೊಂದಿಗೆ ಸಹಯೋಗದಲ್ಲಿದ್ದು,ಮಾಡೆಮ್,ನೆಟ್‌ವರ್ಕಿಂಗ್ ಸಲಕರಣೆಗಳನ್ನು ಅದರಿಂದಲೇ ಆಮದು ಮಾಡುತ್ತಿದೆ.ಗುಪ್ತಚರ ವರದಿಗಳ ಪ್ರಕಾರ,ಇದು ದೇಶದ ಸುಭದ್ರತೆಯ ದೃಷ್ಟಿಯಿಂದ ಶ್ರೇಯಸ್ಕರವಲ್ಲ ಎಂದು ಗೊತ್ತಾಗಿದೆ.ಸೈಬರ್ ದಾಳಿಯ ಸಮಯ,ಅಥವಾ ವೈರಿ ದೇಶಗಳ ಜತೆ ಯುದ್ಧದ ಸಮಯ,ಇಂತಹ ವಿದೇಶೀ ಸಾಧನ-ಸಲಕರಣೆಗಳು ಗುಪ್ತಚಾರಿಕೆಯ ಕೆಲಸಗಳಿಗೆ ಬಳಕೆಯಾಗಬಹುದು ಎನ್ನುವ ಭೀತಿಯಿದೆ.ಇದನ್ನು ಮನಗಂಡಿರುವ ಕೇಂದ್ರ ಸರಕಾರ,ಇದೀಗ ಮಾಡೆಮ್,ರೂಟರ್,ನೆಟ್‌ವರ್ಕಿಂಗ್ ಸಾಧನಗಳನ್ನು ದೇಶದಲ್ಲೆ ತಯಾರಿಸಿ,ವಿದೇಶೀ ಅವಲಂಬನೆಯನ್ನು ನಿಲ್ಲಿಸಲು ಮನಮಾಡಿದೆ.ಆದರಿದು ಒಮ್ಮೆಗೇ ಆಗುವ ಕೆಲಸವೇನೂ ಅಲ್ಲ,ನಿಧಾನವಾಗಿ,ಹಂತಗಳಲ್ಲಿ ಈ ಕೆಲಸವನ್ನು ಮಾಡಬೇಕಿದೆ.ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದಾಗಲೀ,ಅಥವಾ ಇತರ ಕಂಪೆನಿಗಳ ಜತೆ ಎರವಲು ಪಡೆದು ಸಾಧಿಸಬೇಕಿದೆ.2017ರ ವೇಳೆ ಇದನ್ನು ಸಾಧಿಸುವುದು ಸದ್ಯದ ಗುರಿ.
----------------------------------------------
ಪುಟ ತಿರುಗಿಸುವ ತಂತ್ರಕ್ಕೆ ಪೇಟೆಂಟ್ ಪಡೆದ ಆಪಲ್




ಸ್ಪರ್ಶಸಂವೇದಿ ಸಾಧನಗಳಲ್ಲಿ,ಪುಟ ತಿರುವಿ ಪುಸ್ತಕವನ್ನೋದುವ ಮಾಮೂಲೀ ವಿಧಾನಕ್ಕೆ ಆಪಲ್ ಕಂಪೆನಿಯು ಹಕ್ಕುಸ್ವಾಮ್ಯ ಪಡೆದಿದೆ.ಹಾಗಾಗಿ,ಅಂತಹ ಸವಲತ್ತು ಇತರ ಕಂಪೆನಿಗಳು ಒದಗಿಸುವ ಹಾಗಿಲ್ಲ,ಮಾಮೂಲಿ ಐಡಿಯಾಕ್ಕೆ ಪೇಟೆಂಟ್ ಪಡೆದ ಹಾಗೆ ಕಂಡರೂ,ಅದು ಹಾಗಲ್ಲ,ಅದರಲ್ಲಿ ವಿಶೇಷ ಅನಿಮೇಶನ್ ತಂತ್ರ ಅಡಗಿದೆ ಎಂದು ಆಪಲ್ ಹೇಳಿಕೊಂಡಿದೆ.
--------------------------------------------------
ಒಂದು ಜಿಬಿಪಿಎಸ್ ವೇಗದ ಗೂಗಲ್ ಇಂಟರ್‌ನೆಟ್ ಸಂಪರ್ಕ
ಅಮೆರಿಕಾದ ಕನ್ಸಾಸ್ ನಗರದಲ್ಲಿ ಗೂಗಲ್ ಕಂಪೆನಿಯ ಬಹುಚರ್ಚಿತ ಶರವೇಗದ ಇಂಟರ್‌ನೆಟ್ ಸಂಪರ್ಕ ಕೊನೆಗೂ ನನಸಾಗಿದೆ.ಪ್ರತಿಸೆಕೆಂಡಿಗೆ ಒಂದು ಗಿಗಾಬಿಟ್ ವೇಗದ ಶರವೇಗದ ಸಂಪರ್ಕ,ಅಲ್ಲಿನ ಗ್ರಾಹಕರಿಗೆ ಲಭ್ಯ.ಜತೆಗೆ ಅದು ದುಬಾರಿಯೂ ಅಲ್ಲ,ತಿಂಗಳೊಂದಕ್ಕೆ ಬರೇ ಎಪ್ಪತ್ತು ಡಾಲರುಗಳು.ಈ ದರದಲ್ಲಿ ಅಲ್ಲಿ ಸಾಮಾನ್ಯ ಇಂಟರ್‌ನೆಟ್ ಸಂಪರ್ಕವೂ ಲಭ್ಯವಿಲ್ಲ.ಅಂತೂ ಅಲ್ಲಿನ ನಗರವಾಸಿಗಳು ಪೂರ್ತಿ ಖುಷಿಪಡುತ್ತಿದ್ದಾರೆ.
-------------------------
ಐಪ್ಯಾಡ್ ಮೂಲಕ ಸಂವಹನ
ಬಾಲ್ಯದಿಂದಲೇ ಕಾಡಿದ ಕಾಯಿಲೆಯಿಂದ ಮಾತನಾಡಲು ಸಾಧ್ಯವಾಗದೆ,ಇತರ ಅಂಗಗಳ ಚಲನೆಯೂ ಕಠಿನವಾಗಿದ್ದ ಹುಡುಗಿಯೋರ್ವಳು,ಐಪ್ಯಾಡ್ ಮೂಲಕ ಸಂವಹನಕ್ಕೆ ಹೊಸ ದಾರಿಕಂಡುಕೊಂಡಿದ್ದಾಳೆ.ಅದರಲ್ಲಿನ ಫೇಸ್‌ಬುಕ್ ಅಂತಹ ತಾಣದಲ್ಲಿ ಚಿತ್ರಗಳ ಮೂಲಕ,ವಿಡಿಯೋಗಳ ಮೂಲಕ ತನ್ನ ಮನಸ್ಸಿನ ಭಾವನೆಗಳನ್ನು ಹೊರಹಾಕುವುದು ಆಕೆಗೆ ಸುಲಭವಾಗಿದೆ.ಅದಕ್ಕೆ ಐಪ್ಯಾಡಿನಲ್ಲಿ ಅನುಸ್ಥಾಪಿಸಲಿರುವ ಒಂದು ಆಪ್ ಬಹು ಪ್ರಯೋಜನಕಾರಿಯಾಗಿದೆ.
---------------------------
ಜಾಹೀರಾತು:ವ್ಯಕ್ತಿ ಆಧಾರಿತ
ಇಂಟರ್ನೆಟ್ ತಾಣಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳು ಯಾವಾಗಲೂ ಒಂದೇ ಇರದೆ,ಅದು ತಾಣವನ್ನು  ತೆರೆದ ವ್ಯಕ್ತಿಯ ಆಸಕ್ತಿಗನುಗುಣವಾಗಿರುವುದು ಈಗಿನ ವೈಖರಿ.ಕಂಪ್ಯೂಟರಿನಲ್ಲಿ ಹುದುಗಿಸಿಟ್ಟ ಮಾಹಿತಿಯ ಆಧಾರದಲ್ಲಿ ವ್ಯಕ್ತಿಯನ್ನು ಗುರುತಿಸಿ,ಆತನ ಆಸಕ್ತಿಗೆ ಯಾವ ಜಾಹೀರಾತುಗಳು ಸೂಕ್ತ ಎಂದು ಲೆಕ್ಕ ಹಾಕಬಲ್ಲ,ಸುಧಾರಿತ ಕಂಪ್ಯೂಟರ್ ಕ್ರಮವಿಧಿಗಳು ಈಗ ಲಭ್ಯವಿವೆ.ಆದರೆ ಈ ವೈಖರಿ ಕೆಲವು ತಾಣಗಳಿಗೆ ಪಥ್ಯವಾಗದು.ಯಾಕೆಂದರೆ,ಅವುಗಳಲ್ಲಿ ಪ್ರಕಟವಾದ ಜಾಹೀರಾತುಗಳಿಗೆ ಕಂಪೆನಿಗಳು ಅದಾಗಲೇ ಹಣಪಾವತಿಸಿದ್ದು,ಅವುಗಳಿಗೆ ನ್ಯಾಯಸಲ್ಲಬೇಕಲ್ಲ?ಇಂತಹ ತಾಣಗಳಲ್ಲಿ ಸುದ್ದಿಪತ್ರಿಕೆಯ ತಾಣಗಳೇ ಪ್ರಧಾನವಾಗಿವೆ.
--------------------------------------


*ಅಶೋಕ್‌ಕುಮಾರ್ ಎ