ಕಾಡಬೆಳದಿಂಗಳು: ಕಾಡುವ ಬೆಳದಿಂಗಳು
ಬಿಯರ್ ಸವಿಯುತ್ತಾ ಟೀವಿ ನೋಡುತ್ತಿರುವಾಗ ಅಲ್ಲೊಂದು ಸುದ್ದಿ: `ಪಟಾಕಿ ಸಿಡಿಯಿತು' ಎಂದು ವರದಿಯಾದ ಬಾಂಬ್ ಸ್ಫೋಟದ ಸುದ್ದಿ ಅದು. ಅದರ ಸಾವಿನ ಸುದ್ದಿಯ ಪೂರ್ವಾಪರವನ್ನು ವರದಿ ಮಾಡುವುದಕ್ಕಾಗಿ ಟೀವಿ ಚಾನಲ್ನ ವರದಿಗಾರ್ತಿ ಸುದೇಷ್ಣೆ ರಾತ್ರೋರಾತ್ರಿ ಸ್ಥಳಕ್ಕೆ ತೆರಳುತ್ತಾಳೆ ಮತ್ತು ಆಕೆ ವರದಿ ಮಾಡಿದ ಸುದ್ದಿ ಮರುದಿನ ಟೀವಿಯಲ್ಲಿ ಪ್ರಸಾರವಾಗುತ್ತದೆ. ಸಂಪಾದಕರು ಆಕೆಯನ್ನು ಆಕ್ಷೇ ಪಿಸುತ್ತಾರೆ: ಎಲ್ಲರೂ ವರದಿ ಮಾಡಿದ್ದನ್ನೇ ನೀನೂ ಮಾಡಿದ್ದೀಯಾ. ಏನಾದರೂ ವಿಶೇಷವಾಗಿದ್ದನ್ನು ಮಾಡು.ಅತ್ತ ಬಾಂಬ್ ಬ್ಲಾಸ್ಟ್ನಲ್ಲಿ ಸತ್ತ ವ್ಯಕ್ತಿಯೊಬ್ಬನ ಜೇಬಲ್ಲಿ ಸದಾಶಿವರಾಯರ ವಿಳಾಸ ಸಿಗುತ್ತದೆ. ಸದಾಶಿವರಾಯರು ಪುಟ್ಟಳ್ಳಿಯವರು. ಅವರ ಮಗ ಸತ್ತಿರಬೇಕು ಎಂದು ಯಾರೋ ಹಳ್ಳಿಗೆ ತಾರು ಕೊಟ್ಟಿದ್ದಾರೆ. ಸದಾಶಿವರಾಯರು ಮಗನನ್ನು ನೋಡಲು ಕಂಪಿಸುವ ಕಾಲೂರುತ್ತಾ ಬೆಂಗಳೂರಿಗೆ ಬಂದಿದ್ದಾರೆ ಮತ್ತು ಹೆಣ ನೋಡಿದ್ದಾರೆ. `ನಿಮ್ಮ ಮಗನ ಹೆಣವಾ?' ಎಂದು ಪೊಲೀಸ್ ಸ್ಟೇಷನ್ನವರು ಕೇಳುತ್ತಾರೆ. ರಾಯರು ತಲೆ ಆಡಿಸುತ್ತಾರೆ. ಅದು ಹೌದು ಎಂದೂ ಆಗಿರಬಹುದು, ಅಲ್ಲ ಎಂದೂ ಆಗಿರಬಹುದು!
ಸದಾಶಿವರಾಯರು ಊರಿಗೆ ಮರಳುತ್ತಾರೆ ಮತ್ತು ಸತ್ತವ ತಮ್ಮ ಮಗ ಆಗಿರಲಿಲ್ಲ ಎಂದು ಎಲ್ಲ ರಿಗೂ ಸಾರಿ ಹೇಳಿ, ಹತ್ತಿರದವರನ್ನು ಕಳಕೊಂಡವ ರಂತೆ ಸೂತಕದ ಸ್ನಾನ ಮಾಡುತ್ತಾರೆ (ರಾಯರ ಇಪ್ಪ ತ್ತೆಂಟು ವರ್ಷದ ಮಗ ಧ್ರುವ ಓಡಿಹೋದವನು. ಓಡಿಹೋದವನ ಇರುವಿಕೆಯ ಬಗ್ಗೆ ಊರಿಡೀ ಊಹಾಪೋಹಗಳು. ಸದಾಶಿವ ರಾಯರ ನೆನಪಲ್ಲಿ ಬರುವ ಓಡಿಹೋದ ಮಗನ ಮಾತುಗಳು ಕ್ರಾಂತಿಕಾರಿಯಾಗಿವೆ. ಮಗನ ನೋಟ್ ಪುಸ್ತಕಗಳಲ್ಲಿ ಕ್ರಾಂತಿಕಾರಿ ಸಾಲುಗಳಿವೆ).
ಬೆಂಗಳೂರಿಗೆ ಹೋಗಿ ಬಂದ ನಂತರ ವ್ಯಕ್ತವಾಗುವ ರಾಯರ ನಡವಳಿಕೆಗಳು ಕ್ರಮೇಣ ನಿಗೂಢವಾಗುತ್ತಾ ಹೋಗುತ್ತವೆ. ರಾಯರು ದಿನೇ ದಿನೇ ಅಧೀರರಾಗುತ್ತಾ, ಸಮಾಜ ದಿಂದ ವಿಮುಖರಾಗುತ್ತಾ ಹೋಗುತ್ತಾರೆ. ಈ ಹೊತ್ತಲ್ಲಿ ಒಂದು ವಿಶೇಷ ವರದಿ ಮಾಡುವು ದಕ್ಕಾಗಿ ಸುದೇಷ್ಣೆ ಸಣ್ಣಳ್ಳಿಗೆ ಬಂದು ಇಳಿಯುತ್ತಾಳೆ. ಚಂದ್ರಣ್ಣ ಎಂಬ ಒಂಟಿ ವೃದ್ಧನ ಮನೆಯಲ್ಲಿ ಉಳಿಯುತ್ತಾಳೆ. ಆಗ ಅವಳಿಗೆ ಊರಿನ ಇನ್ನೊಂದು ಮುಖ ಕಾಣುತ್ತದೆ. ಆ ಊರಲ್ಲಿ ತರುಣರೇ ಇಲ್ಲ ಎಂದು ತನ್ನ ಕ್ಯಾಮರಾಮನ್ಗಳ ಎದುರು ಉದ್ಗರಿಸು ತ್ತಾಳೆ! ಭವಿಷ್ಯ ಹುಡುಕಿಕೊಂಡು ಪೇಟೆಗಳಿಗೆ ವಲಸೆ ಹೊರಟ `ಜವ್ವನಿಗರು' ಆ ಊರನ್ನು ವೃದ್ಧಾಶ್ರಮ ಮಾಡಿದ್ದಾರೆ ಎಂಬ ಆ್ಯಂಗಲ್ನಲ್ಲಿ ಒಂದು ಡಾಕ್ಯೂ ಮೆಂಟರಿ ಮಾಡಲು ಸುದೇಷ್ಣೆ ತಯಾರಾಗುತ್ತಾಳೆ.
ಹಾಗೆ ನೋಡಿದರೆ ಆ ಊರೊಂದೇ ಅಲ್ಲ, ಎಲ್ಲಾ ಹಳ್ಳಿಗಳೂ ವೃದ್ಧಾಶ್ರಮಗಳಾಗುತ್ತಿವೆ ಎನ್ನುತ್ತಾನೆ ಚಂದ್ರಣ್ಣ. ಆ ಊರು ಅದಕ್ಕೆ ಉದಾಹರಣೆ ಯಷ್ಟೇ. ಅಲ್ಲಿ ಮಕ್ಕಳು ಬಂದಾರು ಎಂದು ಕಾಯುವ ಮೂವರು ವೃದ್ಧರು- ಸದಾಶಿವ ರಾಯರು, ಚಂದ್ರಯ್ಯ ಮತ್ತು ಶಂಕರಣ್ಣ. ಒಂದರ್ಥದಲ್ಲಿ ಸದಾಶಿವ ರಾಯರ ಮಗನಷ್ಟೇ ಅಲ್ಲ ಚಂದ್ರಯ್ಯ ಮತ್ತು ಶಂಕರಣ್ಣನ ಮಕ್ಕಳೂ ಓಡಿ ಹೋದವರೇ. ಒಂದು ಕಡೆ ಕೆಲಸ ಮಾಡುತ್ತಿದ್ದಾರೆ ಮತ್ತು ಅವರಿಗೆ ವಿಳಾಸವಿದೆ ಎಂಬುದಷ್ಟೇ ಅವರಿಗೂ ಓಡಿಹೋದ ಧ್ರುವನಿಗೂ ಇರುವ ವ್ಯತ್ಯಾಸ! ಓಡಿಹೋದ ಮಗ ಊರಿಗೆ ಬರುತ್ತಾನೆ ಎಂಬ ಖಾತ್ರಿಯಿಲ್ಲ, ಆದರೆ ನಿರೀಕ್ಷೆಯಿದೆ. `ಓ ಡಿ' (ಆನ್ ಡ್ಯೂಟಿ) ಹೋಗಿರುವ ಉಳಿದ ಮಕ್ಕಳು ಮರಳುತ್ತಾರೆಂಬ ಖಾತ್ರಿಯೂ ಇಲ್ಲ, ನಿರೀಕ್ಷೆಯೂ ಇಲ್ಲ.
***
ಈ ಊರಲ್ಲಿ ಆಟದ ಮೈದಾನಗಳಿವೆ, ಆಡುವವರೇ ಇಲ್ಲ. ಇಲ್ಲಿ ಕೆರೆಗಳಿವೆ, ಈಜುವವರೇ ಇಲ್ಲ... ಈ ಊರಲ್ಲಿ ತರುಣರೇ ಇಲ್ಲ! ಹಾಗೆಂದು ನಿರೂಪಿಸುತ್ತಾ ಸುದೇಷ್ಣೆ ಹದಿಮೂರು ಎಪಿಸೋಡು ಗಳ ಒಂದು ಕಾರ್ಯಕ್ರಮ ಸರಣಿ ಶುರು ಮಾಡುತ್ತಾಳೆ.
ಆಕೆಯೇನೋ ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಎಪಿಸೋಡುಗಳ ಕ್ಯಾಸೆಟ್ ಕಳಿಸಿರುತ್ತಾಳೆ. ಆದರೆ ಅದು ಕಚೇರಿಗೆ ಹೋದಮೇಲೆ ಸುದೇಷ್ಣೆ ವರದಿಯ ಆ್ಯಂಗಲ್ ಬದಲಾಗುತ್ತದೆ, `ಚಾನಲ್ ಸಂಪಾದಕನ' ದೃಷ್ಟಿಕೋನದಲ್ಲಿ ಎಪಿಸೋಡು ಪ್ರಸಾರವಾಗುತ್ತದೆ. ಈ ವರದಿ ಇಡೀ ಊರನ್ನು ಕೆರಳಿಸುತ್ತದೆ. ಒಂದೊಂದು ಎಪಿಸೋಡು ಪ್ರಸಾರವಾದಾಗಲೂ ಒಬ್ಬೊಬ್ಬರು ಒಂದೊಂದು ಕಂಪ್ಲೇಂಟ್ ಮೇರೆಗೆ ಸುದೇಷ್ಣೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಕೆಯ ವರದಿ ಓರ್ವನ ಹತ್ಯೆ ಮತ್ತು ಅನೇಕ ಸಂಬಂಧಗಳ ಒಡಕಿನಲ್ಲಿ ಕೊನೆಗೊಳ್ಳುತ್ತದೆ.
***
ಇದು `ಕಾಡ ಬೆಳದಿಂಗಳು' ಚಿತ್ರದ ಕಥಾ ಬೆಳವಣಿಗೆ. `ಜಾನಕಿ' ಕಾಲಂನಲ್ಲಿ ಬಂದ ಪುಟ್ಟ ಕತೆ ಮತ್ತು ಒಂದು ಲೇಖನವನ್ನು ಒಂದುಮಾಡಿ `ಬೆಂಗಳೂರು ಕಂಪನಿ' ಮಾಡಿರುವ ಸಿನಿಮಾ ಇದು. ಚಿತ್ರಕತೆ ಮತ್ತು ಸಂಭಾಷಣೆ ಪತ್ರಕರ್ತರಾದ ಜೋಗಿ ಮತ್ತು ಉದಯ ಮರಕಿಣಿ ಅವರದು. ನಿರ್ಮಾಣ ತಂಡದಲ್ಲಿ ಕೆ ಎಂ ವೀರೇಶ್, ಲಿಂಗದೇವರು, ಕೆ ಎನ್ ಸಿದ್ಧಲಿಂಗಯ್ಯ, ವಾಗ್ದೇವಿ, ಲೋಕನಾಥ್, ರಾಮಚಂದ್ರ, ಜಾನ, ಸೆಲ್ವಂ ಇದ್ದಾರೆ. ಹಳ್ಳಿಗಳು ವಾನಪ್ರಸ್ಥಾಶ್ರಮಗಳಾಗುತ್ತಿವೆ ಎಂಬುದು ಈ ಕತೆಯ ಕೇಂದ್ರ. ಆದರೆ ಆ ಕೇಂದ್ರದ ಬೇರೆ ಬೇರೆ ಮಜಲುಗಳನ್ನಷ್ಟೇ ಶೋಧಿಸುವುದಕ್ಕೆ ಅದು ಸೀಮಿತವಾಗುವುದಿಲ್ಲ ಎನ್ನುವುದು ಕತೆಯ ಹೆಚ್ಚುಗಾರಿಕೆ. ಅನೇಕ ಅಸಂಬಂಧೀ ಚುಕ್ಕಿಗಳನ್ನು ಇಟ್ಟು, ಅದನ್ನು ಒಂದು ಎಳೆಯಲ್ಲಿ ಬೆಸೆಯುವ ರಂಗೋಲಿ, ಇಲ್ಲಿನ ಶೈಲಿ. ಅದು ಮೇಲ್ನೋಟಕ್ಕೆ ಕತೆಯೇ ಆಗದ ಹಲವು ಸಂಗತಿಗಳ ಒಂದು ಕಂತೆ- ಕವಿತೆ ಅಲ್ಲಲ್ಲಿ ಹೊಳೆಸುವ ಸತ್ಯದಂತೆ, ಸಾಕ್ಷಾತ್ಕಾರದಂತೆ.
ಕತೆಯ ಕೇಂದ್ರದಿಂದ ವಿಶ್ಲೇಷಣೆಗೆ ಹೊರಡೋಣ. `ಯಾರು ಹೇಳಿದ್ದಾರೆ ನಿನಗೆ, ನಾವೆಲ್ಲಾ ಬೇಜಾರಲ್ಲಿದ್ದೇವೆಂದು? ನಾನು ಈ ಗಿಡ ಮರಗಳ ಜತೆ ಮಾತಾಡುತ್ತೇನೆ. ಸದಾಶಿವಯ್ಯ ಅವನ ಪಾಠದಲ್ಲಿ ಸುಖ ಕಾಣುತ್ತಾನೆ. ಶಂಕರಣ್ಣ ಕೆಲಸ ಮಾಡುತ್ತಾ ಮಗ ಬರುತ್ತಾನೆ ಅಂತ ಕಾಯುತ್ತಾನೆ' ಹೀಗೆ ಹೇಳು ತ್ತಾನೆ ಚಂದ್ರಣ್ಣ. ಅದೇ ಚಂದ್ರಣ್ಣ ಮತ್ತೊಂದು ಕಡೆ ಹೇಳುತ್ತಾನೆ: ಊರಿನ ಪಾಲಿಗೆ ಅವರು ಸತ್ತುಹೋಗಿದ್ದಾರೆ, ಅವರ ಪಾಲಿಗೆ ಊರು ಸತ್ತು ಹೋಗಿದೆ.' ಅಂದರೆ ಊರು ವೃದ್ಧಾಶ್ರಮ ವಾಗಿದೆ ಎಂಬ ಸತ್ಯದ ಜತೆ `ಹಾಗಂತ ಅಲ್ಲಿ ಎಲ್ಲರೂ ಅಳುತ್ತಾ ಕುಳಿತುಕೊಂಡಿಲ್ಲ' ಎಂಬ ಸತ್ಯವೂ ಇದೆ ಅಥವಾ ಇಲ್ಲಿನ ಸತ್ಯಗಳು ಅವರವರ `ದೃಷ್ಟಿಕೋನದ ಸತ್ಯ'. ಬದಲಾವಣೆಗಳ ಗಾಲಿ ಉರುಳುರುಳುತ್ತಾ ಹೋದಂತೇ ಸಿಗುವ ನದಿ ಯಂತೆ, ಕಾಡಂತೆ, ಬೆಳದಿಂಗಳಂತೆ, ಬಿಸಿಲ ಕೋಲಿನಂತೆ, ಸಿಕ್ಕರೆ ಬೇಜಾರಿಲ್ಲ, ಸಿಕ್ಕದಿರೆ ಖುಷಿ ಯಿಲ್ಲ. ಸಮಸ್ಯೆಯಾಗಿ ಕಂಡ ಸಂಗತಿ ಬರು ಬರುತ್ತಾ `ಸ್ಥಿತಿ'ಯಾಗಿಬಿಡುವ ವಿಸ್ಮಯವಿದು.
ಈ ಕತೆಯಲ್ಲಿ ನಕ್ಸಲಿಸಂನ ಎಳೆಯೊಂದು ಬಡಿದ ನಗಾರಿ ಮತ್ತು ಸುಮಾರು ಹೊತ್ತು ಅನುರಣಿಸುವ ಅದರ ಸದ್ದಿನಂತೆ ಇಡೀ ಚಿತ್ರದಲ್ಲಿ ಕಾಣುತ್ತದೆ. ಆದರೆ ಅದನ್ನು ಅದರ ಚಿಂತನೆಯ ನೆಲೆಯಲ್ಲಿ ತೋರಿಸದೇ ಪರಿಣಾಮದ ನೆಲೆಯಲ್ಲಿ ತೋರಿಸಿದ್ದು ಅಪರೂಪ. ಈ ನಡುವೆ ದೃಶ್ಯ ಮಾಧ್ಯಮಗಳ ಅತಿರಂಜಕ ವರದಿಗಾರಿಕೆ ಈ ಸಿನಿಮಾದ ಒಂದು ಎಳೆ. ವರದಿಗಳನ್ನು `ಸೃಷ್ಟಿಸುವ' ಅವಸರ ಅದರ ಒಂದು ಅಪಾಯ. ಸೃಷ್ಟಿಯಾದ ವರದಿಯನ್ನು ತಮ್ಮ `ದೃಷ್ಟಿಕೋನ'ಕ್ಕೆ ಬದಲಿಸಿಕೊಂಡು ಬಿಂಬಿಸುವುದು ಇನ್ನೊಂದು ಅಪಾಯ. ಅದು ಪರಿಣಾಮವನ್ನುಂಟು ಮಾಡು ವುದು ಮಾತ್ರ ಸಮಾಜದ ಮೇಲೆ. ಇದನ್ನು ಈ ಚಿತ್ರ ಪ್ರಭಾವಶಾಲಿಯಾಗಿ ನಿರೂಪಿಸುತ್ತಾ ಹೋಗುತ್ತದೆ.
ಕತೆಯ ಎಳೆ ಮತ್ತು ಆ ಕತೆಯನ್ನು ಚಿತ್ರಕತೆ ಯನ್ನಾಗಿಸಿದ ರೀತಿ ಅತ್ಯಂತ ಬಿಗಿಯಾಗಿದೆ, ದಟ್ಟವಾಗಿದೆ. ಅದನ್ನು ನಿರ್ದೇಶಕ ಬಿ ಎಸ್ ಲಿಂಗದೇವರು ಸಿನಿಮಾ ಆಗಿಸಿದ ರೀತಿ ಕೂಡ ಅಷ್ಟೇ ಸುಂದರ. ಚಾನಲ್ಗಳಲ್ಲಿ ಸುದ್ದಿ ಬಿತ್ತರಿಸುವಾಗ ಬಳಸುವ ಹಿನ್ನೆಲೆ ಸಂಗೀತ, ಹೆಡ್ಲೈನ್ಗಳ ಧಾಟಿಯನ್ನೇ ಈ ಚಿತ್ರದ ಆರಂಭ ಕಾಲದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರಕತೆಯಲ್ಲಿನ ಉದ್ದೇಶ ಪೂರ್ವಕ `ವರದಿ' ಶೈಲಿಯನ್ನು ರಾಮಚಂದ್ರ ಅವರ ಕ್ಯಾಮರಾ ಚೆನ್ನಾಗಿ ಅನುಸರಿಸಿದೆ.ಸದಾಶಿವಯ್ಯ ಆಗಿ ಲೋಕನಾಥ್ ನೀಡಿದ ಅಭಿನಯ ಅತ್ಯಂತ ಸ್ತುತ್ಯರ್ಹ. ಅವರು ಮೌನದಲ್ಲೇ ನುಡಿಸುವ ಭಾವ ಆ ಪಾತ್ರದ ನಿಜವಾದ ಭಾವ ಎನ್ನುವುದನ್ನು ನಾವು ನೆನಪಿಟ್ಟುಕೊಳ್ಳ ಬೇಕು. ಸುದೇಷ್ಣೆ ಆಗಿ ಅನನ್ಯ ಕಾಸರವಳ್ಳಿ ತಮ್ಮ ಪಾತ್ರದ ತಳಮಳಗಳನ್ನು ಸಮರ್ಥವಾಗಿ ತೋರು ತ್ತಾರೆ. ಚಂದ್ರಣ್ಣನಾಗಿ ದತ್ತಣ್ಣ ಅನೇಕ ಸಂದರ್ಭ ಗಳಲ್ಲಿ ಕಣ್ಣು ತೋಯಿಸುತ್ತಾರೆ. ಭಾರ್ಗವಿ ನಾರಾಯಣ್, ಡಾ. ವೆಂಕಟೇಶ್ ರಾವ್, ಗುರುಮೂರ್ತಿ ಮೊದಲಾದವರ ಪೋಷಕ ಸಾಮಗ್ರಿ ಕತೆಗೆ ನೆರವಾಗುತ್ತದೆ.