ಹೀಗೊಂದು ಮೌನ ನಿಮ್ಮನ್ನೂ ಕಾಡಬೇಕು....!
……....... ೧. ಬುದ್ಧಿ ಬಲಿಯುತ್ತಿರುವ ಹುಡುಗನೊಬ್ಬ ವಾಹನ ಚಾಲನೆಯ ಬಗ್ಗೆ ಕುತೂಹಲಿಗನಾಗಿ ರಸ್ತೆಯ ನಿಯಮಗಳನ್ನು ಓದಿಕೊಂಡ ದಿನವೇ ಅವನ ತಂದೆಯೇ, ಈ ದಿಕ್ಕಿನಲ್ಲಿ ಚಲಿಸಬಾರದು ಎಂದು ಬೋರ್ಡಿರುವ ದಿಕ್ಕಿಗೆ ಚಲಿಸಿರುತ್ತಾರೆ ಮತ್ತು ನಿಲ್ಲಿಸಬಾರದೆಂದ ಬೋರ್ಡಿನ ಎದುರೆ ನಿಲ್ಲಿಸಿರುತ್ತಾರೆ.
……........೨. ಅಮ್ಮನೊಂದಿಗೆ ಹಟ ಮಾಡಿ, ಅಪ್ಪನೊಂದಿಗೆ ಕಛೇರಿಗೆ ಹೋದ ಪುಟ್ಟನ ಎದುರೇ ಲಜ್ಜೆಗೆಟ್ಟು ಈ ಕೆಲಸಕ್ಕೆ ಇಷ್ಟೆಂದು ರೇಟು ಮಾತಾಡುವಾಗ ಪುಟ್ಟನಿಗೆ ಶಾಲೆಯಲ್ಲಿ ಕೇಳಿಸಿಕೊಂಡ ಕರ್ತವ್ಯ ನಿಷ್ಠೆ, ಶ್ರದ್ಧೆ ಎಂಬ ಪದಗಳು ಅರ್ಥ ಕಳೆದುಕೊಂಡು ಬಿಡುತ್ತವೆ.
…….........೩. ತರಲೆ ವಿಷಯಕ್ಕಾಗಿ ಸ್ನೇಹಿತನೊಂದಿಗೆ ಜಗಳವಾಡಿ ಮುನಿಸಿಕೊಂಡಿರುವಾಗ ಅಮ್ಮ ದಿನನಿತ್ಯ ಹೊಂವರ್ಕ್ ಮಾಡಿಸುತ್ತಾ ನೋಡುವ ಧಾರಾವಾಹಿಗಳ ನೆರಳಲ್ಲಿ ಅಮ್ಮ ಹೇಳುವ ಪ್ರೀತಿ, ಅನ್ಯೂನತೆ, ಸ್ನೇಹ ಸಂಬಂಧ ಯಾವುದು ಚೆಂದವಾಗಿ ಕಾಣುವುದಿಲ್ಲ.
ಮೇಲೆ ಹೇಳಿರುವ ಸಂಗತಿಗಳಿಗೆ ನೀವು, ದೃಷ್ಯ... ಚಿತ್ರಣ.... ಸಂಗತಿ... ಹೀಗೇ ಯಾವುದಾದರೂ ನಾಮಕರಣ ಮಾಡಬಹುದು... ನಿಮ್ಮ ಭಾವಕ್ಕನುಗುಣವಾಗಿ... ಆದರೆ, ನಾನು ಅದಕ್ಕೆ ವಾಸ್ತವ ವೆಂದು ಹೆಸರಿಡುತ್ತೇನೆ ಮತ್ತು ಅದೇ ಹೆಚ್ಚು ಸೂಕ್ತ.
ನಮ್ಮ ಸಾಮಾನ್ಯ ಬದುಕಿನ ರಿಯಲ್ ಹೀರೋಗಳಂತೆ ನಾವು ನಮ್ಮಲ್ಲಿ ಕಂಡುಕೊಳ್ಳುವ, ಕಣ್ಣೆದುರಿನ ಅಪ್ಪ , ಹೆತ್ತ ಅಮ್ಮ , ಸಲಹುವ ಶಿಕ್ಷಕ , ಪಕ್ಕದ್ಮನೆ ಅಂಕಲ್ , ಆಚೆಮನೆ ಅಣ್ಣಯ್ಯ , ಹಿಂದಿನ ಮನೆ ಅಜ್ಜಿ ಹೀಗೇ ಸಾಲು ಸಾಲಾಗಿ ನಮ್ಮ ಮುಂದೆ ಒಂದು ತಪ್ಪು ಉದಾಹರಣೆ (FALSE EXAMPLES) ಗಳನ್ನು ಪೋಣಿಸುತ್ತಾ ಸಾಗುತ್ತಾರೆ.
ಅವರ ನಡೆಯು ತಪ್ಪೆಂದು ಅವರಿಗೆ ತಿಳಿದಿದ್ದರೂ ಅದಕ್ಕೊಂದು READYMADE REASON ಕೊಟ್ಟು ವಾಸ್ತವದ ಅವಶ್ಯಕತೆ ಹಾಗೂ ಅನಿವಾರ್ಯತೆ ಎಂದು ಅವಸರದ ನೆಪವೊಡ್ಡಿ ಮೌನವಹಿಸುತ್ತಾರೆ.
ಹೀಗೇ, ಜನ್ಮದ ಆ ಹೊತ್ತಿನಿಂದಲೇ ಹಾತು ಹೊದ್ದಿರುವ ಭ್ರಷ್ಟತೆಗೆ ಮತ್ತು ಅದರ ಅನಿಷ್ಟಕ್ಕೆ ಸಾಕ್ಷಿಯಾಗುತ್ತಾ ಬೆಳೆವ ನಾವು ನಮಗರಿವಿಲ್ಲದೇ CORRUPT ಆಗುತ್ತಾ ಬೆಳೆಯುತೇವೆ. ಮತ್ತು ಹಾಗೆ CORRUPT ಆಗದೇ ಬದುಕುತ್ತೇವೆಂದು ಮುನ್ನಡೆದವರಿಗೆ ಬದುಕುವುದು ಕಷ್ಟವಿನಿಸುತ್ತದೆ.
ಇಪ್ಪತ್ತು ವರ್ಷದಿಂದ ದಿನನಿತ್ಯ ಕುಡಿದು ತಡರಾತ್ರಿಯಲ್ಲಿ ಮನೆಗೆ ಬರುವ ತಂದೆಯು ಅದೊಂದು ದಿನ ತಡರಾತ್ರಿಯಲ್ಲಿ ಮಗ ಕುಡಿದು ಬಂದಾಗ ಗದರಿಸುವ ನೈತಿಕತೆಯ ಹಕ್ಕನ್ನು ಕಳೆದುಕೊಂಡಂತೆ, ಭ್ರಷ್ಟರಾಗಿ ಬದುಕುವ ಶೈಲಿಗೆ ADDICT ಆಗಿ ಬದುಕುತ್ತಿರುವ ನಮ್ಮಲ್ಲಿ ನಮ್ಮ ಕಿರಿಯರ ತಪ್ಪನ್ನು ಗದರಿಸುವ ನೈತಿಕತೆ ಉಳಿದುಕೊಂಡಿರುತ್ತದಾ?
ನಾವು ಭ್ರಷ್ಟರೆಂದು, ಮಾಡಿದ್ದು ಮಾಡುತ್ತಿರುವುದು ತಪ್ಪೆಂದು ಅದನ್ನ ಪಾಲಿಸಬೇಡವೆಂದು ಎದೆಸೆಟೆಸಿ ಕಿರಿಯರಿಗೆ ಹೇಳುವಷ್ಟು ಸಾತ್ವಿಕತೆ ನಮ್ಮಲ್ಲಿ ಉಳಿದುಕೊಂಡಿದೆಯಾ..?
ದಿನದಿಂದ ದಿನಕ್ಕೆ ಯಾಂತ್ರಿಕವಾಗುತ್ತಾ ಸಾಗುತ್ತಿರುವ ಈ ಜೀವನ ಶೈಲಿಯಲ್ಲಿ ಇಷ್ಟೊಂದು ಆಲೋಚನೆಗಳಿಗೆ ಅವಕಾಶ ಉಳಿಯುತ್ತಿಲ್ಲ; ಮೇಲಾಗಿ ನಾವು ಮನಸ್ಸು ಮಾಡುತ್ತಿಲ್ಲ . ಆದರೂ ನಾವೊಂದು ಭ್ರಷ್ಟಮುಕ್ತ ರಾಷ್ಟ್ರದ ಕನಸು ಕಟ್ಟಿ ಕೈಕಟ್ಟಿ ಕುಳಿತಿದ್ದೇವೆ; ಪಾಯವ ಹಾಕುವುದ ಮರೆತು.
ನನ್ನ ಆಲೋಚನೆಗಳಲ್ಲಿ ಬಹು ದಿನಗಳಿಂದ ನಲುಗುತ್ತಿದ್ದ ಹೀಗೊಂದು ಯೋಚನೆಯನ್ನ ನಿಮ್ಮ ಪಟಲದಲ್ಲಿ ಮೂಡಿಸುವ (ಕ್ಷಣದ ಮಟ್ಟಿಗಾದರೂ) ಈ ಪ್ರಯತ್ನದ ಸಂದರ್ಭದಲ್ಲಿ ನನ್ನನ್ನು ಕಾಡುವ ಮೌನವೊಂದೇ... ನನ್ನ ಕಿರಿಯರಿಗೆ ನಾನು ಎಂಥಹ ಮಾದರಿಯಾಗಿ ರೂಪಿತನಾಗುತ್ತೀದ್ದೇನೆ...??!
ಅದಕ್ಕುತ್ತರ ನನ್ನ ಕಿರಿಯರು ಹೇಳಬೇಕು……… ಮತ್ತು………
ಹೀಗೊಂದು ಮೌನ ನಿಮ್ಮನ್ನೂ ಕಾಡಬೇಕು....!
ನನ್ನೊಬ್ಬನಿಂದ ಏನಾದೀತೆಂಬ ಮನದ ಪ್ರಶ್ನೆಗೂ ಇದು ಪರಿಹಾರವಾಗಬಲ್ಲದಲ್ಲವೇ?
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
ಕೆ.ವಿಶಾಂತ್ ರಾವ್
Comments
ಸಾಹಿತ್ಯ ಕ್ಷೇತ್ರದಲ್ಲಿ ನಾನಿನ್ನು
ಸಾಹಿತ್ಯ ಕ್ಷೇತ್ರದಲ್ಲಿ ನಾನಿನ್ನು
ನಿಜವಾಗಿಯೂ ಒಂದು ಮೌನ ಕಾಡಿತು..