ಗೆಜ್ಜೆನಾದ

ಗೆಜ್ಜೆನಾದ

 

ಮೈಸೂರಿನ ಮಾನಸಗಂಗೋತ್ರಿಯ ಓಲ್ಡ್ ಪಿ.ಜಿ ಹಾಸ್ಟೆಲ್ ನಲ್ಲಿ 2008 (ನಾನು ಎಂ.ಎಸ್ಸಿ ಓದುತ್ತಿದ್ದ ಸಮಯ) ರಲ್ಲಿ ಒಂದು ಗುಲ್ಲೆದ್ದಿತ್ತು. ತುಂಬಾ ವಿಶಾಲವಾಗಿರುವ ಹಾಸ್ಟೆಲ್ ಚೌಕಾಕಾರವಿದ್ದು ಹಲವು ಮೂಲೆಗಳಿವೆ. ರಾತ್ರಿಯಾದಂತೆ ಆ ಮೂಲೆಗಳಿಗೆ ಹೋಗುವುದೆಂದರೆ ಭಯ. ಪ್ರಮುಖ ಕಾರಣವೆಂದರೆ ಅಲ್ಲಿ ಬೆಳಕಿರಲಿಲ್ಲ. ಗವ್ವು ಕತ್ತಲೆ. ಜೊತೆಗೆ ಮೂತ್ರ ವಾಸನೆ. ಮೆಟ್ಟಿಲಿಳಿದು ಕೆಳಗೆ ಹೋಗಿ ಶೌಚಾಲಯ ಮುಟ್ಟಿಬರುವ ಧೈರ್ಯ ಮತ್ತು ತಾಳ್ಮೆ ಅನೇಕರಲ್ಲಿರಲಿಲ್ಲ. ನಾನಿದ್ದ ಕೊಠಡಿಯ ಬಲಗಡೆಯ ಮೂಲೆಯ ಸಮೀಪ ರಾತ್ರಿ 10ರ ನಂತರ ಯಾರೂ ಸುಳಿಯುತ್ತಿರಲಿಲ್ಲ. ಕಾರಣ ಕತ್ತಲು ದಟ್ಟವಾದಂತೆ ಅಲ್ಲಿಂದ ಮೂಡಿ ಬರುತ್ತಿದ್ದ ಗೆಜ್ಜೆಶಬ್ದ!

ನಾನು ಮೊದ ಮೊದಲು ಇದನ್ನೆಲ್ಲಾ ನಂಬುತ್ತಿರಲಿಲ್ಲ. ನಂತರ ಒಮ್ಮೆ ಪರೀಕ್ಷಿಸೋಣವೆಂದು ತಡರಾತ್ರಿ 12ರವರೆವಿಗೂ ಎಚ್ಚರವಿದ್ದು ಮೂಲೆಯ ಹತ್ತಿರ ಬಂದೆ. ನಂಬಲಾಗಲಿಲ್ಲ, ನಿಜಕ್ಕೂ ಅಲ್ಲಿಂದ ಗೆಜ್ಜೆ ಶಬ್ದ ಹೊರಡುತ್ತಿತ್ತು. ಕಡಿಮೆ ಶಬ್ದದಿಂದ ಪ್ರಾರಂಭವಾಗಿ ಒಂದೇ ಸಮನೆ ಗೆಜ್ಜೆಶಬ್ದ ತೀವ್ರವಾಗುತ್ತಿತ್ತು. ಗೆಜ್ಜೆ ಕಟ್ಟಿಕೊಂಡು ಯಾರೋ ನಿಧಾನವಾಗಿ, ಇದ್ದಕ್ಕಿದ್ದಂತೆ ಜೋರಾಗಿ ಓಡಿದಂತೆ. ಆ ಮೂಲೆಯಲ್ಲಿದ್ದ ಕಿಟಕಿಯ ಮೂಲಕವೂ ಏನೂ ಕಾಣುತ್ತಿರಲಿಲ್ಲ. ದೈತ್ಯಾಕಾರದ ಮರಗಳು ಬೆಳಕನ್ನು ಮರೆಮಾಡಿದ್ದವು. ಇದನ್ನೆಲ್ಲಾ ಮನುಷ್ಯರ ಕಾಲ್ಚಳಕ! ಒಂದಿಬ್ಬರು ಗೆಜ್ಜೆ ಶಬ್ದ ಮಾಡುತ್ತಿದ್ದರೆ, ಗುಂಪಿನ ಉಳಿದವರು ಯಾರೂ ಅಲುಗಾಡದ ಆ ಹೊತ್ತಿನಲ್ಲಿ ಕಳ್ಳತನ ಮಾಡಿಕೊಂಡು ಸಿಕ್ಕಷ್ಟು ದೋಚಿಕೊಂಡು ಹೋಗುವ ಜಾಣ್ಮೆಯಾಟಗಳು ಇಂಥವು ಎಂದು ಅನೇಕ ಕಡೆ ಓದಿದ್ದೆ. ಆದರೆ, ಈ ಪ್ರಕರಣದಲ್ಲಿ ಯಾವುದೇ ಕಳ್ಳತನದ ವರದಿಯಾಗಿರಲಿಲ್ಲ. ಅಂದು ಮುಂದೆ ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆದುಕೊಂಡೆ. ಒಂದು ವೇಳೆ ಇದೆಲ್ಲಾ ಮನುಷ್ಯರ ಆಟವೇ ಆಗಿದ್ದರೂ ಆ ಸಮಯದಲ್ಲಿ ಆ ಕತ್ತಲಕೂಪಕ್ಕೆ ಕಾಲಿಡುವುದು ಸೂಕ್ತವಲ್ಲವೆಂದೆನಿಸಿತ್ತು.

ನನಗೆ, ಈ ಗೆಜ್ಜೆಶಬ್ದದ ನಿಗೂಢತೆ ದಿನ ದಿನಕ್ಕೂ ಕಾಡತೊಡಗಿತು. ಮತ್ತೆರಡು ದಿನ ಆ ಮೂಲೆಯ ಬಳಿ ಸಾರಿದಾಗ ಅದೇ ಅನುಭವ. ಗೆಜ್ಜೆಶಬ್ದ. ಹೀಗೆ ಒಂದು ದಿನ, ನಾನು ಮತ್ತು ಗೆಳೆಯ ಶಂಕರ್ ಎಂಬುವವರು ಧೈರ್ಯ ಮಾಡಿ, ಆ ನಿಗೂಢವನ್ನು ಭೇದಿಸಲು ನಿರ್ಧರಿಸಿದೆವು. ಕೈಯಲ್ಲಿ ಒಂದು ಟಾರ್ಚ್ ಹಿಡಿದು ಮೂಲೆಯ ಬಳಿ ಹೋಗುವುದು, ಗೆಜ್ಜೆ ಶಬ್ದ ಬಂದೊಡನೆ ಟಾರ್ಚ್ ಆನ್ ಮಾಡುವುದು, ಗೆಜ್ಜೆ ಶಬ್ದದ ಗುಟ್ಟು ಕೂಡಲೇ ಗೋಚರಿಸಿಕೊಳ್ಳಬಹುದು ಎಂಬುದು ನಮ್ಮ ಲೆಕ್ಕಾಚಾರ. ಜೊತೆಗೆ ಟಾರ್ಚ್ ಬೆಳಕು ನಮ್ಮ ಕೈಯಿಂದ ಹೊರಡುವುದರಿಂದ ನಾವುಗಳು ಅಷ್ಟು ಸುಲಭವಾಗಿ ಆ ಕೃತ್ಯವೆಸಗುತ್ತಿರುವವರಿಗೆ ಕಾಣುವುದಿಲ್ಲವೆಂಬ ಧೈರ್ಯ.

ಸರಿ ಸುಮಾರು ರಾತ್ರಿ 12 ಘಂಟೆ. ನಾನು ಮತ್ತು ಗೆಳೆಯ ಆ ಮೂಲೆ ಬಳಿ ಗೋಡೆಗವಚಿಕೊಂಡು ನಡುಗುವ ಎದೆಯೊಂದಿಗೆ ಕಷ್ಟಪಟ್ಟು ಉಸಿರು ಬಿಗಿ ಹಿಡಿದು ನಿಂತುಕೊಂಡೆವು. ಆಶ್ಚರ್ಯದ ಸಂಗತಿಯೆಂದರೆ ಅಂದು ಗೆಜ್ಜೆಶಬ್ದ ಹೊರಡಲೇ ಇಲ್ಲ. ನಿಜಕ್ಕೂ ನಾವು ಕಕ್ಕಾಬಿಕ್ಕಿಯಾಗಿಬಿಟ್ಟೆವು. ಭಯ ಹೆಚ್ಚಾಯಿತು. ಯಾಕೆಂದರೆ, ಈ ವಿಚಾರ ನಮ್ಮಿಬ್ಬರಲ್ಲಿಯೇ ಇತ್ತು. ನಮ್ಮಿರುವಿಕೆ ಮೊದಲೇ ಗೋಚರಿಸಿಕೊಂಡು ಇಂದು ಗೆಜ್ಜೆಶಬ್ದ ನಿಲ್ಲಿಸಿರುವಂತೆ ಭಾಸವಾಯಿತು.

ಗೆಳೆಯ ಮತ್ತು ನಾನು ರೂಮಿಗೆ ಹಿಂದಿರುಗಿದವರೇ ಭಯದಿಂದ ಉಸಿರಾಡತೊಡಗಿದೆವು. ಮೌನದ ಹೊತ್ತಿನಲ್ಲಿ ಮೈಮೇಲೆ ಬಟ್ಟೆ ಬಿದ್ದರೂ ದೇಹ ಕಂಪಿಸಿಬಿಡುತ್ತದೆ. ಇಬ್ಬರಿಗೂ ನಿದ್ರೆ ಬರಲಿಲ್ಲ. ಮತ್ತೆ ಸುಮಾರು 1.30ರ ಸಮಯಕ್ಕೆ ಅದೇ ಮೂಲೆಗೆ ಬಂದು ಗೋಡೆಗವಚಿಕೊಂಡು ನಿಂತೆವು. ಇಬ್ಬರ ಕೈಯಲ್ಲಿಯೂ ಟಾರ್ಚ್ ಇತ್ತು. ಈ ಬಾರಿ ಗೆಜ್ಜೆಶಬ್ದ ಬಂತು. ಒಮ್ಮೆಲೇ ಜೋರಾಯಿತು. ನಡುಗುತ್ತಿದ್ದ ಕೈಗಳಿಂದ ಇಬ್ಬರೂ ಆ ಮೂಲೆಯೆಡೆಗೆ ಟಾರ್ಚ್ ಆನ್ ಮಾಡಿದೆವು.

.

.

.

.

.

.

.

ಅಲ್ಲಿ ಯಾರೂ ಇರಲಿಲ್ಲ. ಎಲ್ಲವೂ ಶೂನ್ಯ. ಆದರೆ ಗೆಜ್ಜೆಶಬ್ದ ಮಾತ್ರ ಹೊರಡುತ್ತಲಿತ್ತು. ಇಬ್ಬರಿಗೂ ಮೈ ನಡುಕ ಹೆಚ್ಚಾಗಿ ಹೆಜ್ಜೆಗಳು ಹಿಂದೆ ಸರಿದವು. ಏನಾದರೂ ಅಪಾಯ ಕಂಡರೆ ಓಡಿಬಿಡೋಣವೆಂದು ಮೊದಲೇ ನಿರ್ಧರಿಸಿಕೊಂಡಿದ್ದೆವು. ಖಾಲಿ ಜಾಗದಿಂದ ಗೆಜ್ಜೆಶಬ್ದ ಹೊರಡುತ್ತಿದ್ದದ್ದು ತುಂಬಾ ಆಶ್ಚರ್ಯ ಮತ್ತು ಭಯ ಹುಟ್ಟುಹಾಕಿತ್ತು. ಯಾರೂ ಕಾಣುತ್ತಿಲ್ಲ ಆದರೆ ಗೆಜ್ಜೆಶಬ್ದ ಹೊರಡುತ್ತಿದೆ.

ಆ ಮೂಲೆಯ ಬಲಗೋಡೆಯ ಮೇಲಿದ್ದ ಕಿಟಕಿಯಲ್ಲಿ ಟಾರ್ಚ್ ಬೆಳಕಿಗೆ ಏನೋ ಹೊಳೆಯುತ್ತಿರುವಂತೆ ಕಂಡಿತು. ತುಂಬಾ ಸೂಕ್ಷ್ಮವಾಗಿ ಗಮನಿಸಿದಾಗ ಗೆಜ್ಜೆಶಬ್ದ ಅಲ್ಲಿಂದಲೇ ಹೊರಡುತ್ತಿದ್ದದ್ದು. ಎದುರಿಗಿದ್ದ ಮತ್ತೊಂದು ಕಿಟಕಿಯಿಂದ ರಭಸವಾಗಿ ಗಾಳಿ ನುಗ್ಗಿದರೆ ಸಾಕು ಗೆಜ್ಜೆಶಬ್ದ ಹೆಚ್ಚಾಗುತ್ತಿತ್ತು. ಆ ಹೊತ್ತಿನಲ್ಲಿ ಅದನ್ನೆಲ್ಲಾ ಗಮನಿಸುವ ಮನಸ್ಸಾಗಲಿಲ್ಲ. ಹಿಂದಿರುಗಿ ರೂಮಿಗೆ ಬಂದು ನಡುಗಿ ನಡುಗಿ ಹೇಗೋ ನಿದ್ರೆ ತಂದುಕೊಂಡದ್ದಾಯಿತು.

ಮುಂಜಾನೆ ಹೋಗಿ ಗಮನಿಸಿದಾಗ, ಅದೊಂದು ತಗಡಿನ ಹಾಳೆ. ಯಾರು ಅಲ್ಲಿಗೆ ಸಿಕ್ಕಿಸಿದ್ದರೋ ಅರಿಯೆ. ಆದರೆ ತುಂಬಾ ಮೌನ ಆವರಿಸಿರುವ ಆ ಹೊತ್ತಿನಲ್ಲಿ, ಎದುರಿಗಿದ್ದ ತೆರೆದ ಕಿಟಕಿಯ ಗಾಳಿಯ ರಭಸಕ್ಕೆ ಆ ಹಾಳೆ ಜೋರಾಗಿ ಬಡಿದುಕೊಳ್ಳುತ್ತಿತ್ತು. ಗದ್ದಲ ತುಂಬಿಕೊಳ್ಳುವ ಹಗಲಿನಲ್ಲಿ ಆ ಶಬ್ದ ಕೇವಲ ನಗಣ್ಯ. ಆದರೆ ಸರಿರಾತ್ರಿಯಲ್ಲಿ ಗಾಳಿ ಬೀಸಿದಂತೆ, ರಭಸ ಹೆಚ್ಚಾದಂತೆ, ಗೆಜ್ಜೆಶಬ್ದದಂತೆ ಹೊರಡುತ್ತಿತ್ತು. ತೆಳು ತಗಡಿನ ಹಾಳೆಯಾದುದರಿಂದ ಶಬ್ದ ನೀಳವಾಗಿ ಮತ್ತು ನಿಚ್ಚಳವಾಗಿ ಕೇಳಿಸುತ್ತಿತ್ತು. ಕೊನೆಗೂ ಆ ತಗಡಿನ ಹಾಳೆ ಕಿತ್ತಿದ್ದಾಯಿತು. ಗೆಜ್ಜೆಶಬ್ದಕ್ಕೆ ಪೂರ್ಣ ವಿರಾಮ ನೀಡಿದ್ದಾಯಿತು.