ಕಥೆ: ಮುದುಕ ಮತ್ತು ಆಲದ ಮರ

ಕಥೆ: ಮುದುಕ ಮತ್ತು ಆಲದ ಮರ

 

    ಅದು ಮಳೆಗಾಲದ ಕಪ್ಪು ಬಿಳುಪಿನ ಮಬ್ಬು ಮಬ್ಬಾದ ಒಂದು ಸಂಜೆ.  ಸೂರ್ಯನು ಮೋಡಗಳ ಮಧ್ಯದಲ್ಲಿ  ಕಣ್ಣು ಮುಚ್ಚಾಲೆ ಆಟ ಆಡುತ್ತ, ಆಗೊಮ್ಮೆ ಈಗೊಮ್ಮೆ ತನ್ನ ಇರುವಿಕೆಯನ್ನ ತೋರಲೋ  ಎಂಬಂತೆ ಆ ಕಪ್ಪು ಬಿಳುಪಿನ ಸಂಜೆಯ ಮೇಲೆ ತನ್ನ ಬಣ್ಣ ಬಣ್ಣದ ಮಂದ ಪ್ರಕಾಶದಿಂದ ಚಿತ್ರಿಸುತ್ತಿದ್ದ. ಗಾಳಿಯೂ ಅಷ್ಟೆ ನಿಧಾನಕ್ಕೆ ತಂಪಾಗಿ ಬೀಸಿ ಸಂಜೆಯ ಆ ಚಿತ್ರಣಕ್ಕೆ ಆಲ್ಹಾದತೆಯನ್ನು ಜೊತೆಗೂಡಿಸಿತ್ತು. ಇಂತಹ ಅದೆಷ್ಟೋ ಸಂಜೆಯನ್ನು ಜೀವನದುದ್ದಕ್ಕೂ ನೋಡಿ ಅನುಭವಿಸಿದ್ದ ಒಬ್ಬ ಮುದುಕ ತನ್ನ ಸಂಜೆಯ ವಾಯುವಿಹಾರಕ್ಕೆಂದು  ಅಲ್ಲಿ ಬಂದವನು ದಿನನಿತ್ಯದಂತೆ  ಅಲ್ಲಿಯೇ ಇದ್ದ ಒಂದು ಹಳೆಯ ಆಲದ ಮರದ ಕೆಳಗೆ ಕುಳಿತ. ಆ ಆಲದ ಮರಕ್ಕೂ  ಅಷ್ಟೆ,  ಆ ಮುದುಕನನ್ನು ಅದೆಷ್ಟೋ ಇಂತಹ ಸಂಜೆಯಲ್ಲಿ ತನ್ನ ಬುಡದಲ್ಲಿ ಕುಳಿತಿರುವುದನ್ನು ನೋಡುವುದು ಒಂದು ರೂಡಿಯಾಗಿ ಹೋಗಿತ್ತು. ಜೊತೆಗೆ ಚಿಕ್ಕ ಸಸಿಯಿಂದ ಇಲ್ಲಿನ ವರೆಗೆ ಅದೆಷ್ಟೋ ಇಂತಹ ಸಂಜೆಯನ್ನ ಆ ಆಲದ ಮರ ಅನುಭವಿಸಿ ಅದರಲ್ಲಿ ಆಸಕ್ತಿಯನ್ನ ಕಳೆದುಕೊಂಡಿತ್ತು.  ಹೀಗೆ ಆ ಸಂಜೆಯಲ್ಲಿ ಇಬ್ಬರಲ್ಲೂ ಅಷ್ಟೇನೂ ಆಸ್ತೆ ಇಲ್ಲದಿದ್ದರೂ, ಆವತ್ತು ಮಾತ್ರ ಯಾಕೋ ಆ ಮುದುಕ ಮತ್ತು ಮರ ಒಬ್ಬರನ್ನೋಬ್ಬರನ್ನು ಕುರಿತು ಯೋಚಿಸ ತೊಡಗಿದರು.

    ಆ ಆಲದ ಮರವನ್ನ ನೋಡು, ದೇವರು ಏನೇನೆಲ್ಲ ಅದಕ್ಕೆ ಕೊಟ್ಟಿದ್ದಾನೆ ಅಂತ. ಅದರ ಆ ಬಲಿಷ್ಠ ರೆಂಬೆಯ ಮುಂದೆ ಈ ಮಳೆ, ಗಾಳಿಯೆಲ್ಲ ಯಾವ ಲೆಕ್ಕ. ಒಮ್ಮೆ ಆ ಮರದ ಕಾಂಡವನ್ನು ನೋಡು ಎಷ್ಟು ಗಟ್ಟಿಯಾಗಿದೆ. ಅದರಿಂದಲೇ ಅಲ್ಲವೇ ನೂರಾರು ವರ್ಷ ಹೀಗೆ ಈ ಮರ ಗಟ್ಟಿಯಾಗಿ ನಿಂತಿರುವುದು. ಅದರ ಬೇರುಗಳೋ ಭೂಮಿಯಲ್ಲಿ ಮೈಲುಗಟ್ಟಲೆ ದೂರ ಚಾಚಿಕೊಂಡಿರುತ್ತದೆ. ಆ ಬೇರುಗಳೇ ಅಲ್ಲವೇ ಆ ಮರಕ್ಕೆ ನಿಂತಲ್ಲೇ ಬೇಕು ಬೇಕಾದ ಆಹಾರ, ನೀರು ಎಲ್ಲಾ ತಂದು ಕೊಡುವುದು. ಅದಕ್ಕೆ ಎಂತಹ ವೈಭೋಗ ಅಲ್ಲವೇ ? ನಿಂತಲ್ಲೇ ಏನೂ ಕಷ್ಟ ಪಡದೇ ಆರಾಮಾಗಿ ಇರಬಹುದಲ್ಲವೇ ? ಆದರೆ ನನ್ನ ನೋಡು ಎಷ್ಟೆಲ್ಲಾ ವರ್ಷ ಎಲ್ಲೆಲ್ಲಿ ಓಡಾಡಿಲ್ಲ ನಾನು, ಏನೇನು ಕೆಲಸ ಮಾಡಿಲ್ಲ ನಾನು. ಯಾತಕ್ಕಾಗಿ,  ಬರಿ ಹೊಟ್ಟೆ ಬಟ್ಟೆಗಾಗಿ ಅಲ್ಲವೇ? ಜೀವನ ಪೂರ್ತಿ ಬರಿ ಹೊಟ್ಟೆ ಬಟ್ಟೆಗಾಗಿ ಹೋರಾಡಿದ್ದು ಬಿಟ್ಟರೆ ಮತ್ತೇನು ಮಾಡಿದ್ದೇನೆ ನಾನು? ಈ ಮರವಾಗಿ ಹುಟ್ಟಿದ್ದರೆ ನನ್ನ ಜೀವನ ಎಷ್ಟೊಂದು ಸುಖಮಯವಾಗಿ  ಇರುತ್ತಿತ್ತು. ಆ ಮರಕ್ಕೆ ದೇವರು ಕೊಟ್ಟ ಎಲ್ಲಾ  ಭಾಗ್ಯದ ಜೊತೆಗೆ ಬಳಲಿ ಬಂದವರಿಗೆ ನೆರಳು,ಆಶ್ರಯ ನೀಡಿದ ಪುಣ್ಯ ದೊರಕುತ್ತಿತ್ತು. ನನ್ನ ಮಕ್ಕಳೆಲ್ಲ ನನ್ನ ಸುತ್ತಮುತ್ತಲೇ ಇದ್ದು ನನ್ನನ್ನು ನೋಡಿ ಕೊಳ್ಳುತ್ತಿದ್ದರಲ್ಲವೇ ? ಈ ಮುಪ್ಪಿನಲ್ಲಿ ಒಬ್ಬಂಟಿಯಂತೆ ಬದುಕುವ ಪ್ರಸಂಗ ಬರುತ್ತಿತ್ತೆ? ಅಷ್ಟೆ ಯಾಕೆ ನಾನು ಮರವಾಗಿಯೇ ಸತ್ತಿದ್ದರೆ ಈ ಜನರು ನನ್ನನ್ನು ದೇವರ ಮೂರ್ತಿಯನ್ನಾಗಿ ಮಾಡಿ ಪೂಜಿಸುತ್ತಿರಲಿಲ್ಲವೇ? ಅಲ್ಲದೇ ಹೋದರೆ ಯಾರದೋ ಮನೆಯ ಸುಂದರ ಪೀಟೋಪಕರಣವಾಗಿ ಅದರ ವಿನ್ಯಾಸಕ್ಕೆ ಮರುಳಾಗುವವರನ್ನು ನೋಡಿ ಆನಂದಿಸುತ್ತಿದ್ದೆ. ಅದೆಂತಹ ಶ್ರೇಷ್ಠ ಜೀವನ ಅಲ್ಲವೇ !  ಆದರೆ ಈಗ ನನ್ನ ಅವಸ್ತೆ ನೋಡು , ನನ್ನನ್ನು ನೋಡಿ ಉದಾಸೀನ ಮಾಡುವವರೇ ಹೆಚ್ಚು. ಇವತ್ತು ನಾನು ಸತ್ತರೂ ಒಂದೆರಡು ದಿನ ನನ್ನ ಬಂಧುಗಳು ಶೋಕ ಆಚರಿಸಿ ನನ್ನನ್ನು ಮರೆಯುತ್ತಾರೆ ಅಷ್ಟೆ. ಎಂದು ಯೋಚಿಸುತ್ತ ಆ ಮುದುಕ ಆ ಹೇಳೆಯ ಮರವನ್ನ ನೋಡಿ ಅದನ್ನು ಮತ್ತಷ್ಟು ಅವಲೋಕಿಸ ತೊಡಗಿದ. 

    ಈ ಮುದುಕನನ್ನ ನೋಡು ಎಷ್ಟು ಪುಣ್ಯವಂತ. ದೇವರು ಅವನಿಗೆ ಏನೇನೆಲ್ಲ ಕೊಟ್ಟಿದ್ದಾನೆ ಅಂತ. ಅವನ ಆ ಕಾಲುಗಳನ್ನು ನೋಡು, ಹೇಗೆ ಅವನು ಬಯಸಿದಂತೆ ಎಲ್ಲಿ ಬೇಕಾದರಲ್ಲಿ ನಡೆಯಬಲ್ಲ. ಆ ಕೈಗಳನ್ನು ನೋಡು, ಹೇಗೆ ಬೇಕೊ ಹಾಗೆ ಅದನ್ನ ತನ್ನ ಕೆಲಸ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳಬಲ್ಲ. ತನ್ನ ಕಣ್ಣಿನಿಂದ ಈ ಜಗತ್ತಿನ ಸೌಂದರ್ಯವನ್ನ ಸವಿಯಬಲ್ಲ. ಅದೆಲ್ಲಾ ಯಾಕೆ, ದೇವರು ಅವನಿಗೆ ಎಂತಹ ಅದ್ಭುತ ಬುದ್ದಿಶಕ್ತಿಯನ್ನ ದಯಪಾಲಿಸಿದ್ದಾನೆ ಅಲ್ಲವೇ? ಆ ಬುದ್ಧಿಶಕ್ತಿಯಿಂದ ಈ ಜಗತ್ತನ್ನೇ ತಾನು ಹೇಳಿದಂತೆ ಕೇಳುವಂತೆ ಮಾಡುತ್ತಿದ್ದಾನೆ ಅಲ್ಲವೇ? ಅವನಿಗೆ ಜೀವನದಲ್ಲಿ ಬೇಸರ ಅನ್ನುವುದೇ ಇಲ್ಲ ಅನಿಸುತ್ತದೆ. ಅವನಿಚ್ಚೆಯಂತೆ ಎಲ್ಲಿ ಬೇಕಾದರಲ್ಲಿ ಓಡಾಡಿ, ಸೃಷ್ಟಿಯ ಸೌಂದರ್ಯ ಸವಿಯುತ್ತ. ಅದ್ಬುತವಾದದ್ದನ್ನು ತನ್ನ ಬುದ್ದಿಶಕ್ತಿಯಿಂದ ಗ್ರಹಿಸುತ್ತ ಹಾಯಾಗಿ ಇರಬಹುದಲ್ಲವೇ? ನನ್ನ ಈ ಸದಾ ಬೇಜಾರಿನ ಜೀವನ ನೋಡು. ಯಾವಾಗಲೂ ನಿಂತಲ್ಲೇ ನಿಂತು ಬೇಸತ್ತು ಹೋಗಿದ್ದೇನೆ. ಆ ಮನುಷ್ಯನಂತೆ ಹುಟ್ಟಿದ್ದರೆ ಎಂತಹ ಶ್ರೇಷ್ಠ ಜೀವನವಾಗಿರುತ್ತಿತ್ತು ಅಲ್ಲವೇ? ನಾನು  ಈ ಜಗತ್ತಿನ ಅದ್ಬುತವನ್ನು ಅನುಭವಿಸಿ, ಅದ್ಬುತ ವಾದದ್ದನ್ನು ಸೃಷ್ಟಿಸಬಹುದಾಗಿತ್ತು. ಈಗ ನಾನು ಸತ್ತರೆ ಏನು ಸಾಧಿಸಿದಂತೆ ಆಗುತ್ತದೆ? ಆ ಜನರು ನನ್ನನ್ನು ಕಡಿದು ಅವರಿಷ್ಟದ ಯಾವುದೋ ಪೀಟೋಪಕರಣ ವಾಗುವುದಿಲ್ಲವೇ ನಾನು. ಅದಕ್ಕೂ ಪ್ರಯೋಜಕ್ಕೆ ಬರಲಿಲ್ಲ ಅಂತಾದರೆ  ಯಾರದೋ ಮನೆಯ ಒಲೆಯಲ್ಲಿ ಹೇಳ ಹೆಸರಿಲ್ಲದೆ ಸುಟ್ಟು ಬೂದಿಯಾಗುತ್ತೇನೆ. ಯಾರಾದರೂ ನನ್ನ ಸಾವನ್ನು ನೋಡಿ ದುಃಖಿಸುತ್ತಾರೆಯೇ? ಆ ಮುದುಕ ಸತ್ತರೆ ಬಂಧುಗಳೆಲ್ಲ ಸೇರಿ  ಅವನ ಸಾವಿಗೆ ಮರುಗುವರು. ಅವನನ್ನು ಸತ್ತನಂತರವೂ ಸ್ಮರಿಸುವರು. ಅದೆಂತಹ ಶ್ರೇಷ್ಠ ಜೀವನ ಅಲ್ಲವೇ !  ಎನ್ನುವ ಯೋಚನೆಗಳು ಆ ಹಳೆಯ ಮರವನ್ನ ಹಾದುಹೋದವು.

    ಒಮ್ಮೆಲೇ ಇದ್ದಕ್ಕಿದ್ದ ಹಾಗೇ ಮಳೆಗಾಲದ ಜೋರಾದ ಗಾಳಿ ಎಲ್ಲೆಡೆಯಿಂದ ಬೀಸ ತೊಡಗಿತು. ಇಷ್ಟು ಹೊತ್ತು ತಾಳ್ಮೆಯಿಂದ ಕಾದಿದ್ದ ಮಳೆಯೂ ಯಾಕೋ  ಒಮ್ಮೆಲೇ ಸಿಟ್ಟು ಬಂದವರಂತೆ ಆ ಗಾಳಿಯೊಡನೆ ಸೇರಿ ಕೊಂಡಿತು. ಆ ಮರದ ರೆಂಬೆಗಳೆಲ್ಲ ಗಾಳಿ ಮಳೆಯ ರಭಸಕ್ಕೆ ಹೊಯ್ದಾಡ ತೊಡಗಿದವು. ಇಂಥಹ ಅದೆಷ್ಟೋ ಗಾಳಿ ಮಳೆಗೆ ಮಯ್ಯೋಡ್ಡಿದ್ದ  ಆ ಮರವು ಮತ್ತೊಮ್ಮೆ ಅದನ್ನೆದುರಿಸಲು ಸಿದ್ದವಾಗಿ ನಿಂತಿತು. ಆ ಮುದುಕ ಬೇರೆಯೇನೂ ತೋಚದಾಗಿ ಆ ಸಿಟ್ಟಿನಿಂದ ಬೀಸುತ್ತಿದ್ದ ಗಾಳಿ ಮಳೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು  ತನ್ನ ಮನೆಯತ್ತ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡುತ್ತ ಸಾಗಿದ.

    ಮನೆಯನ್ನ ತಲುಪುತ್ತಲೇ ಆ ಮುದುಕ ಮತ್ತೊಮ್ಮೆ ಆ ಮರದ ಬಗ್ಗೆ ಯೋಚಿಸ ತೊಡಗಿದ. ಇಂಥಹ  ಹುಚ್ಚನಂತೆ ಎರಗುವ ಈ ಗಾಳಿ ಮಳೆಯನ್ನ ಎದುರಿಸಲು ಆ ಮರ ಎಷ್ಟು ಕಷ್ಟಪಡುತ್ತಿರಬಹುದು. ನಾನಾದರೆ ಈ ಮನೆಯಲ್ಲಿ ಬೆಚ್ಚಗೆ ಚಿಂತೆಯಿಲ್ಲದೆ ಇರಬಹುದು. ಆದರೆ ಆ ಹಳೆಯ ಮರ ರಾತ್ರಿಯಿಡೀ ಆ ಗಾಳಿ ಮಳೆಗೆ ಮಯ್ಯೋಡ್ಡಿ ಚಿತ್ರಹಿಂಸೆ ಅನುಭವಿಸ ಬೇಕಲ್ಲವೇ?.  ಆ ಬಲಿಷ್ಠ ರೆಂಬೆಗಳು, ಗಟ್ಟಿಯಾದ ಕಾಂಡ, ವಿಶಾಲವಾಗಿ ಹರಡಿರುವ ಅದರ ಬೇರುಗಳಿದ್ದರೂ ಏನು ಪ್ರಯೋಜನ ಅಲ್ಲವೇ?  ಇಂಥಹ ಸಂದರ್ಭದಲ್ಲಿ ಕಷ್ಟಪಡುವುದು ಮಾತ್ರ ತಪ್ಪಲಿಲ್ಲ. ಒಂದಲ್ಲ ಒಂದು ದಿನ ಅವೂ ಪ್ರಯೋಜಕ್ಕೆ ಬಾರದಾದಾಗ ಆ ಮರದ ವ್ಯಥೆ ಊಹಿಸಲೂ ಸಾಧ್ಯವಿಲ್ಲ . ಎಂಥಹ ಹೀನಾಯ ಬದುಕು ಅದು !

    ಆ ಮರ ತನ್ನಲ್ಲೇ ಯೋಚಿಸಿತು. ನಾನು ಎಷ್ಟು ಬಲಿಷ್ಠ ಅಲ್ಲವೇ? ನಾನು ಇಂತಹ ಅದೆಷ್ಟೋ ಭಯಂಕರ ಗಾಳಿ, ಮಳೆ, ಬಿಸಿಲನ್ನ ಹೇಗೆ ತಡೆದು ನಿಂತಿದ್ದೇನೆ ಅಲ್ಲವೇ? ಪಾಪ ಆ ಮುದುಕ, ಅದೆಷ್ಟು ನಿಷ್ಯಕ್ತ ನನ್ನ ಮುಂದೆ ! ಸ್ವಲ್ಪ ಜೋರಾದ ಗಾಳಿ ಬಂದರೂ ತನ್ನ ಮನೆಯಲ್ಲಿ ಹೆದರಿ ಅವಿತಿರಬೇಕಲ್ಲವೇ ? ಆ ಕಾಲು, ಕೈ, ಅಂತಹ ಬುದ್ಧಿ ಶಕ್ತಿ ಇದ್ದರೂ ಏನು ಪ್ರಯೋಜನಕ್ಕೆ ಬಂತು ಇಂಥಹ ಸಂಧರ್ಭದಲ್ಲಿ ?  ಮಳೆ ಗಾಳಿ ನಿಲ್ಲುವುದನ್ನು ಎದುರು ನೋಡುತ್ತಾ ಹೇಡಿಯಂತೆ ಮನೆಯಲ್ಲೇ ಕುಳಿತಿರಬೇಕು. ಎಂಥಹ ಹೀನಾಯ ಬದುಕು ಅದು !

 

 

 

 

 

 

Rating
No votes yet