ಶ್ರೀವಿದ್ಯಾಪ್ರಸನ್ನತೀರ್ಥರು

ಶ್ರೀವಿದ್ಯಾಪ್ರಸನ್ನತೀರ್ಥರು

ಶ್ರೀ ವಿದ್ಯಾಪ್ರಸನ್ನತೀರ್ಥರ ತೀರ್ಥರ ಹುಟ್ಟು ಕಾರ್ತಿಕ ಶುದ್ಧ ಹುಣ್ಣಿಮೆಯಂದು. ಅದು ಗುರುನಾನಕ್ ಜಿ ಹುಟ್ಟಿದ ದಿನ ಸಹ. ಈ ತುಲನೆಯೇ ಕೆಲವರಿಗೆ ವಿಸಂಗತವೆನಿಸಬಹುದು; ಬಾಹ್ಯ  ’ನಿಷ್ಠಾವಂತ’ರಂತೂ ಕೆನ್‌ಎ ಮುಟ್ಟಿಕೊಂಡು ’ಶಾಂತಂ; ಪಾಪಂ’ ಎಂದಾರು. ಆದರೆದುಕೊಳ್ಳಬಹುದು. ಆದರೆ ಈ ನೆನಹಿಗೊಂದು ನೈಜಸೂತ್ರವಿದೆ; ಏಕತ್ರವಿದೆ. ಅದು ಶ್ರೀಹರಿಯ ಅನುಭಾವ! ಪುಸ್ಪ ಮದ್ಯ ಜೋ ಬಾಸ್ ಬಸತ್ ಹೈ; ಮುಕರ ಮಾಹಿ ಜೋ ಛಾಯೀ; ತೈಸೇ ಹೀ ಹರಿ ಬಸತ್ ನಿರಂತರ್; ಘಟ್ ಹೀ ಖೋಜೋ ಭಾಯೀ - ಇದು ಗುರು ನಾನಕದೇವ್ ಕಳಕಳಿ. ಪ್ರಾಮಾಣಿಕ ’ಖೋಜ್‌ದಾರ’ರಾದರೆ, ಅವರಿಗೆ ಪ್ರಸನ್ನತೀರ್ಥರ ಹಾಡುಗಳ ಸ್ವಾರಸ್ಯ ಸೊಗೆಯಿಸೀತು. ಓದುಗ ಬಳಗದಲ್ಲಿ ಅಂಥವರಿರಬಹುದೇನೋ ಎಂಬ ಅನುಮಾನದ ನೆಲೆಗಟ್ಟಿನ ಮೇಲೆಯೇ ಒಂದು ಲೇಖನವನ್ನು ನಿಲ್ಲಿಸಹೋಗುತ್ತಿದ್ದೇನೆ.
 ಸ್ವಾನುಭವ ಮತ್ತು ಸ್ವಾನುಭೂತಿ, ಇವುಗಳ ಪ್ರಾಮಾಣಿಕ ಅಭಿವ್ಯಕ್ತಿ - ಇವು, ಭಾಗವತರ ಮತ್ತು ಶರಣ ಅನಭಾವಿಗಳ ಮಾತಿನ ಜೀವಸತ್ವ; ಜೀವನೋತ್ಸಾಹ. ಅಂತಹ ಮುಗ್ಧ ಮಹಾತ್ಮರ ’ಸಂಗ ಸುಖ’ಕ್ಕಾಗಿಯೂ, ’ಸೂಳ್ನುಡಿ’ಗಾಗಿಯೂ ಹಂಬಲಿಸಿದ ಸಂಭಾವಿತ ಮಹನೀಯರುಗಳು ನಮ್ಮ ಹಿಂಬದಿಯಲ್ಲಿ ಬಹುಮಂದಿ ಇದ್ದಾರೆ. ’ಸ್ವಾಂತವನು ಗೆಲಿದ ಪ್ರಸನ್ನ ಮಾನಸರ’ ದರ್ಶನಭಾಗ್ಯ, ಸಂಭಾಷಣಾ ಸೌಭಾಗ್ಯ, ಒಂದರೆ ಘಳಿಗೆ ಸಿಕ್ಕರೂ ಸರ್ವಾಂತರ‍್ಯಾಮಿಯೇ, ಸ್ವಯಂ ಮೂರ್ತಗೊಂಡಂತೆ! ’ನಿಮ್ಮ ಶರಣರ ಸೂಳ್ನುನುಡಿಯನೊಂದರೆ ಘಳಿಗೆ ಇತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥಾ’! ಎಂಬುದು ಶರಣಶ್ರೇಷ್ಠರೊಬ್ಬರ ಹಪಾಹಪಿ. ನಮಗೇ ನೇರವಾಗಿ ಅಂತಹ ವಾಗವಕಾಶ ಸಿಕ್ಕದಿದ್ದರೆ ಹೋಗಲಿ; ಆ ಸನ್ನಿವೇಶದ ದರ್ಶನವೇ ಬೇಕಾದಷ್ಟು; ’... ಸಜ್ಜನರ ವಾದ - ಸಂವಾದಗಳು ಉಯ್ಯಾಲೆ’! ಇದನ್ನು ಕಾಣಹೋಗುವುದೇ ’ಭಾಗವಂತಿಕೆ’. ಅದು ಹೇಗಿರುತ್ತದೆ?...
ನಾನು ನನ್ನದು ಎಂಬ ಅಭಿಮಾನವ ಬಿಟ್ಟು|
ಮಾನಸ ಕಲ್ಮಶಗಳ ತೊರೆದು|
ಧ್ಯಾನದಿ ಬಿಂಬ ಮೂರುತಿ ದರುಶನ ಮಾಡಿ|
ಆನಂದಪಡುವ ಬಗೆಯ ತೋರುವ ಕಥೆ|| ಆಗಿರುತ್ತದೆ.
ಭಾಗವಂತಿಕೆ, ಆ ಭಾಗವತದ ಕಥೆಯಲ್ಲಿರುತ್ತದೆ; ಅದರ ತವಕಿಗಳಲ್ಲಿರುತ್ತದೆ. ನಾರದರ ಬೋಧೆಯಿಂದ, ಮಹಾತ್ಮಾ ವೇದವ್ಯಾಸರು ಬರೆದು, ಜಾತವಿರಕ್ತ ಶುಕ ಮಹರ್ಷಿಗಳ ಅಖಂಡ ವಾಗ್ಧಾರೆಯಾಗಿ ಹರಿದ ’ಏಳು ದಿನದ ಕಥೆ’ಯೇ ಆ ಭಾಗವತ. ಪ್ರಸನ್ನತೀರ್ಥರು ಆ ಕಥೆಯಲ್ಲಿ ಪರವಶರು. ಕಥೆ ಅದೇ ಆದರೂ ಆವೃತ್ತಿ - ಗಿeಡಿsioಟಿ - ಅದೇ ಅಲ್ಲ! ಪೂರ್ಣ ಭಾಗವತ ಕಥಾನಕವೂ ಅಲ್ಲ, ಅದರ ಕೃಷ್ಣಕಥಾ ಭಾಗ ಮಾತ್ರಾ; ಮನನೀಯ ವಾದಿರಾಜ ಸ್ವಾಮಿಗಳ ’ಶ್ರೀರುಕ್ಮಿಣೀಶ ವಿಜಯ’! ಪ್ರಸನ್ನತೀರ್ಥರಿಗೆ ಆ ಕೃತಿಯಲ್ಲೂ, ಕೃತಿಕಾರರಲ್ಲೂ ವಿಶೇಷ ವಾಂಛಲ್ಯ. ವಾದಿರಾಜ ಕವಿಕುಲಶೇಖರರು, ’ಷೇಕ್ಸ್ಪಿಯರ, ಶೆಲ್ಲಿ, ಬ್ರೌನಿಂಗ್, ಮಿಲ್ಟನ್ನರನ್ನು ಏಕಾಪೋಶನ ಮಾಡಿದವರಂತೆ! ಇದು ಸ್ವಾಮಿಗಳು ಹೇಳಿರುವ ದುರಭಿಮಾನದ ಮಾತಲ್ಲ, ಎದೆ ತುಂಬಿ ಬಂದ ಪ್ರಾಮಾಣಿಕ ವಿಮರ್ಶೆ. ಪ್ರಸನ್ನತೀರ್ಥರು, ಪೂರ್ವಾಶ್ರಮದ ಕಾಲೇಜು ವಿದ್ಯಾಭ್ಯಾಸದಲ್ಲಿ, ಇಂಗ್ಲಿಷ್ ಸಾಹಿತ್ಯವನ್ನು ವಿಶೇಷವಾಗಿ ಓದಿದ್ದವರು.
ಭಾಗವತವೆನ್ನುವುದು ವ್ಯಾಸಕೃತ ಮಹನೀಯ ಗ್ರಂಥವಷ್ಟೇ ಅಲ್ಲ; ಅದೊಂದು ತತ್ತ್ವ, ತಥ್ಯ. ಅದೇ ಒಂದು ವಿಶಿಷ್ಟ ’ಇರಸಣಿಕೆ’; ವೈಷ್ಣವ ಜನತೆಯ ಇರವು - ’... ಸಕಲಲೋಕ ಮಾ ಸಹನೇ ಬಂಧು; ನಿಂದಾ ನ ಕರೇ ಕೇ ನೀರೇ; ವಾಚ, ಕಾಚ, ಮನ ನಿಶ್ಚಲ ರಾಖೆ...’ ಇತ್ಯಾದಿ ಗುಣ-ವಿಶೇಷಣಗಳನ್ನೂ, ಚ್ಯುತಿಗೊಳಿಸಬಾರದೆಂಬ ಸೂಚ್ಯ ಎಚ್ಚರಿಕೆಯನ್ನೂ ಸ್ವಯಂ ಭಾಗವತನೋರ್ವನೇ ನೀಡಿದ್ದಾನೆ. ಆಸಕ್ತರಿಗೆ. ಇಂಥಾ ವೈಷ್ಣವತ್ವ ಸತತ ಸಾಧನೆಯಿಂದ ಬರತಕ್ಕದ್ದು. ಆದರೆ ಬರಲಾರದ್ದಂತೂ ಖಂಡಿತಾ ಅಲ್ಲ. ಅಂತಹ ’ಭಾಗವತ’, ’ಯೋಗಿವಲ್ಲಭನ ಅನುರಾಗವನು ಪಡೆದವ’ನಾಗಿ ಪ್ರಸನ್ನತೀರ್ಥರಿಗೆ ಕಾಣಿಸುತ್ತಾನೆ; ಆತ, ’ವೇದಾಂತ ಸಾಮ್ರಾಜ್ಯದಧಿಕಾರದಲಿ ಕುಳಿತು, ವೇದಾಂತವೇದ್ಯನನು ಮೋದಪಡಿಸುವನು; ಕಾದ ಮರುಭೂಮಿಯಲಿ ಸಕಲ ಸಂಪತ್ತುಗಳ ಸಾಧಿಸುವ, ಭೇದಿಸುತ ವಿಘ್ನರಾಶಿಗಳ’ - ಎನ್ನುತ್ತಾರೆ. ತೀರ್ಥಪಾದರು ಇದನ್ನು ಇಷ್ಟು ಸದೃಢ ಬಾನಿ - ಂsseಡಿಣive ಣoಟಿe - ಬಳಸಿ ಹೇಳಿದ್ದರಲ್ಲಿ ಡಂಭ-ವಾಗಾಡಂಬರಗಳೇನೂ ಇಲ್ಲ. ಈ ’ಲಕ್ಷಣ’ಕ್ಕೆ ಅವರೇ ಸ್ವಯಂ ’ಲಕ್ಷ್ಯ’ವೂ ಹೌದು! ಇದನ್ನು ಸ್ವಾನುಭವೆಂದು ನಂಬಿ ಮನನ ಮಾಡುವ ಪ್ರಾಮಾಣಿಕ ವಿನಯಶೀಲರಿಗೆ, ಅದರ ಕಿಂಚಿತ್ ಅಮೃತಸೇಚನವಾಗಬಹುದು. ’ಇಲ್ಲ’ವೆನ್ನುವವರೊಡನೆ ತಕರಾರೇನೂ ಇಲ್ಲ!
ಈ ’ಸ್ಥಿತಿ’ ಹಾಗಿಂದ ಹಾಗೇ ಬಂದುಬಿಡುವುದಲ್ಲ್ಲ, ಇದಕ್ಕೆ ಮುನ್ನಿನ ಅವಸ್ಥೆಗಳನ್ನೂ, ದುಗುಡ-ದುಮ್ಮಾನಗಳ ಸ್ವಾನುಭಾವವನ್ನೂ, ಸ್ವಾಮಿಗಳು, ಪ್ರಾಮಾಣಿಕ ಸಾಧಶೀಲರಿಗಾಗಿ ಬಿಚ್ಚಿಡುತ್ತಾರೆ. ನೆಮ್ಮದಿಗೆಟ್ಟ ಮನಸ್ಸು; ತಪ್ಪು-ಸರಿಗಳ, ಮಿಥ್ಯ-ತಥ್ಯಗಳ, ನಿಂದೆ-ಸ್ತುತಿಗಳ, ಸ್ವಾರ್ಥ-ಪ್ರಾಮಾಣಿಕತೆಗಳ ದ್ವಂದ್ವದ ಅಲೆ-ತರಂಗಗಳಲ್ಲಿ ತೇಲೇಳುವ ಮನಸ್ಸು; ಅರ್ಚಾಮೂರ್ತಿಯಲ್ಲಿ ಸದೃಢವಾಗಿ, ಏಕಾಗ್ರವಾಗಿ ನ್ಯಾಸಾದಿಗಳನ್ನು ಮಾಡಲೂ ಬಿಡದ ತೊಳಲಾಟವನ್ನು ಅವರು ಅನುಭವಿಸಿದ್ದಾರೆಂಬುದು, ಅವರ ಜೀವನ ಚರಿತ್ರೆಯನ್ನು ಮನನೀಯವಾಗಿ ಅವಲೊಕಿಸಿದವರಿಗೆ ಮನದಟ್ಟುವ ವಿಚಾರ! ’ಬೆಟ್ಟ ಬಿಸಿಲಲಿ ಬೇಯುವುದ ನೋಡುತ ಮನವು | ಕೆಟ್ಟುಹೋಗದೆ ಸತತ ಶುದ್ಧವಿರಲಿ | ಹೊಟ್ಟಪಾಡಿಗೆ ಕೊರತೆ ಪಡುತಿರುವ ಜನರಲ್ಲಿ | ಸಿಟ್ಟು ಬಾರದೆ ಮನಕೆ ತಾಳ್ಮೆಯಿರಲಿ ||’ ತಾನು ಬೆಟ್ಟದಂತೆ ಜಡ-ನಿಶ್ಚಲನಾಗಿರುತ್ತಿದ್ದರೆ ಜೀವನದ ಅನುಭೂತಿಯಾದರೂ ಏನಿರುತ್ತಿತ್ತು? ಬೆಟ್ಟ ಬೇಯುವ ಆ ಬಿಸಿಲ ತಾಪಕ್ಕೆ ಹೋಲಿಸಿದರೆ, ಜೀವನದ ’ಅಧಿಭೌತ ತಾಪ’ ಎಷ್ಟು ಮಾತ್ರದ್ದೂ ಅಲ್ಲವೆಂಬ ಗಟ್ಟಿತನ ಒಡಮೂಡುತ್ತದೆ. ಇದರ ಪರೀಕ್ಷೆಯಾಗುವುದು, ಕಿರಿಕಿರಿಕಾರಕ ಸನ್ನಿವೇಶದಲ್ಲಿ; ಗೆಂಜಾಟದಲ್ಲೂ ಮೊಂಡಾಟ ತೋರುವ ಭಿಕ್ಷಕಾರನನ್ನೂ, ಮನಗೆಟ್ಟು, ಬೈದು ಹೊರಗಟ್ಟದೆ, ತಾಳ್ಮೆಯಿಂದ ಸಮಾಧಾನಮಾಡಿ ಕಳಿಸುವ ಮಾನವೀಯತೆ ಬೆಳೆದು-ಉಳಿಯುವುದಾದರೆ, ತಾಪತ್ರಯಗಳ ಪೈಕಿ ಒಂದನ್ನು ಗೆದ್ದಂತೆ!
’ನೀರು ಕಡೆದರೆ ಬೆಣ್ಣೆ ಬಾದೆನ್ನುವ ಕ್ಲೇಶ | ದೂರವಾಗಲಿ, ಮತ್ತೆ ಬಾರದಿರಲಿ | ಧೀರ ಹನುಮನು ತನ್ನ ಸಾರ ಸೇವೆಗೆ ಫಲವ ಈ ಕೋರಿದನೆ ಧನ-ಕನಕ-ವೈಭವಗಳ?’|| ನಮ್ಮ ಬುದ್ಧಿ ಮಂಕುತನ; ಎಡವಿದ ಕಲ್ಲನ್ನೇ ಮತ್ತೆ-ಮತ್ತೆ ಎಡಹುವ ಮನೋಜಡತೆ; ಇರುವ Iಕಿವನ್ನು ಸಾಮಾನ್ಯಜ್ಞಾನ ವಿಸ್ತರಣೆಗೆ, ಕಲಿಕೆಗೆ ಬಳಸದೆ, ’ಇದೆಲ್ಲಾ ನನ್ನ ಪೂರ‍್ವಾರ್ಜಿತ ಪ್ರಾರಬ್ಧ’ ಎಂದು ನುಣಿಚಿಕೊಳ್ಳುವ ಆತ್ಮದ ಸೋಂಬೇರಿತನ! ತಾನಾಗಿಯೇ ಸದ್ವಿಚಾರವನ್ನು ಅರೆಸಿ ಕಲಿಯುವುದಿರಲಿ, ಹೇಳಿಕೊಡಹೋದವರ ಮೇಲೆಯೇ ಎಗರಿಬೀಳುವಂತೆ ಮಾಡುತ್ತದೆ, ಇದು! ಆದರೆ ಇಲ್ಲಿ ನೋಡಿ. ಸದಾ ಪಟುತೆಯಿಂದಿರುವ, ಪಟುತೆ, ವಾಣಿಜ್ಯಕ ಚಟುವಟಿಕೆಯಾಗದೆ, ಸಹಜ ಅಸ್ತಿತ್ವವಾಗಿ ಉಳ್ಳ ಮುಖ್ಯಪ್ರಾಣದೇವರಿದ್ದಾರೆ; ಅವರನ್ನು ಪ್ರೇರಕರನ್ನಾಗಿ - ತಾರಕರನ್ನಾಗಿ ಆಶ್ರಯಿಸಿ; ’ಅನುಭವಿಸಿ’ದರೆ,  ’ಆಧ್ಯಾತ್ಮಿಕ ತಾಪ’ ತೊರೆದುಹೋದೀತು.
ಮೇರೆ ಮೀರಿದ ಅಹಂಕಾರ, ಅಜ್ಞಾನಮಯ ದುರಹಂಕಾರ ನಮ್ಮ ’ಅಧಿದೈವಿಕ ತಾಪ’. ಕೃಪಾಸಂಪನ್ನನಾದ ಆತ, ಅದನ್ನೂ ಕಳೆದಾನು; ಕೇಳಿಕೊಳ್ಳಬೇಕು, ಅಷ್ಟೆ. ಅದು ಕಳೆದರೆ ನಾನೆಂಬುದೂ ಇರುವುದಿಲ್ಲ; ನನ್ನದೆಂಬುದೂ ಇರುವುದಿಲ್ಲ. ಅಂತಲ್ಲಿ ಚಿಂತೆ ಸಂತಾಪಗಳು ಎಲ್ಲಿ ಸುಳಿಯಬೇಕು? ಯಾರಿಗೆ ಸುಳಿಯಬೇಕು?! ’ಜಬ್ ಮೈ ಹ್ಞೂ ತಬ್ ’ಹರಿ’ ನಹಿಂ ಅಬ್ ’ಹರಿ’ ಹೈ ಮೈ ನಾಹಿಂ!’
’ಗೋಪುರವ ತಾಂಗಿರುವೆನೆಂಬ ಬೊಂಬೆಯ ಹೆಮ್ಮೆ | ಈ ಪರಿಯ ಕ್ಲೇಶವನು ತಂದೊಡ್ಡಿತು | ಶ್ರೀಪತಿಯು ಮಾಡಿ-ಮಾಡಿಸುವನೆಂಬುವ ನಿಜವು | ಲೋಪಪೊಂದದೆ ಪ್ರಸನ್ನವಾಗಲಿ ದೇವಾ -’ ಎಂದಿದ್ದಾರೆ.
ಸಂತರ ಕತೆ, ಅನುಭಾವಗಳನ್ನು ಹೇಳುವುದು-ಕೇಳುವುದು ಅವರೆಷ್ಟು ಮಹತ್ಮರಾಗಿದ್ದರೆಂದು ಷಹಬಾಶ್‌ಗಿರಿ ಕೊಡುವುದಕ್ಕಲ್ಲ. ನಮ್ಮ ಜತೆ, ನಮ್ಮ ಪೈಕಿಯೇ ಒಬ್ಬರಾಗಿದ್ದವರು, ನಮ್ಮದುರೇ ಇಷ್ಟೆಲ್ಲಾ ಆತ್ಮಾತಿಶಯ ಅನುಭವಿಸಿ, ಅದನ್ನು ದಾಖಲೆಯನ್ನೂ ಬಿಟ್ಟುಹೋಗಿದ್ದಾರೆ, ಸ್ವಾಮಿಗಳು. ಅದನ್ನು ಅರ್ಥ ಮಾಡಿಕೊಂಡು ನಾವು ಸಹ ಕಿಂಚಿತ್ ಪ್ರಯತ್ನಶೀಲರಗಬಾರದೇಕೆ ಎಂಬ ಝಲಕ್ ಹೊಳೆಸುವುದಕ್ಕೆ, ಈ ಕತೆ. ಆದರೆ ನಮ್ಮ ’ಆಧ್ಯಾತ್ಮಿಕ ತಾಪ’ ಅದಕ್ಕೆ ಅವಕಾಶ ಕೊಡಬೇಕಲ್ಲಾ?!
’ಏನು ಮಾಡಿದರೇನು ಫಲವು, ನೀನು ’ಮಾನಸವೃತ್ತಿ’ ತಿದ್ದುವ ತನಕ?’ ಎಂದು ಸುಮ್ಮನಿದ್ದುಬಿಡುತ್ತೇವೆ. ’ಪೂಜೆ ಮಾಡಿದರೇನು, ತೇಜಸ್ವಿ ಇರಲೇನು| ರಾಧಿರಾಜ ಸಂಪೂಜ್ಯನೆನಿಸಲೇನು | ರಾಜಿತಾಸನದಲ್ಲಿ ಕುಳಿತರು ರಾಜಿಸದ ಮಾನಸದ ವೃತ್ತಿಯು | ಈ ಜಗದ ಜೀವನವು ಕುದುರೆಯ ಜೂಜಿನಂದದಿ ತೋರುತಿರುವುದು!’ ಅವರಿಗೆ... ನಮಗೆ?...
ಅಧ್ಯಾತ್ಮ ಬಿಡಿ, ನಮ್ಮ ಲೌಕಿಕ ಜೀವನವನ್ನು, ನಮ್ಮ ರಾಜಕೀಯ ಸನ್ನಿವೇಶವನ್ನು, ನಮ್ಮ ಸಾಮಾಜಿಕ ಮೌಲ್ಯಗಳನ್ನು ಉಳಿಸಿಕೊಳ್ಳುವುದು ನಮ್ಮ ಕೈಲೇ ಇದೆ. ಆದರೆ ನಾವು ಜಾಣ ಕುರುಡು, ಜಾಣ ಕಿವುಡು, ಜಾಣ ಮಂಕುಗಳನ್ನು ತೋರಿಸಿಕೊಳ್ಳುವುದರಲ್ಲೇ ಪರಿಣಿತರಾಗುತ್ತ್ತಿದ್ದೇವೆ.