ಕಟ್ಟಡದ ಒಳಗೆ ಬೆಳಕು ತರುವ 3M ಕೊಳವೆಗಳು

ಕಟ್ಟಡದ ಒಳಗೆ ಬೆಳಕು ತರುವ 3M ಕೊಳವೆಗಳು

 

ಕೋಲಾರಕ್ಕೆ ಅಣುತ್ಯಾಜ್ಯ?
ಕೋಲಾರದಲ್ಲಿ ಬಂಗಾರದ ಅದಿರನ್ನು ತೆಗೆಯಲು ಮಾಡಿದ ದೊಡ್ಡ ದೊಡ್ಡ ಗಣಿಗಳು ಇದೀಗ ಸುದ್ದಿಗೆ ಬಂದಿವೆ.ಕೆಲಸ ನಿಲ್ಲಿಸಿರುವ ಇಲ್ಲಿನ ಚಿನ್ನದ ಉದ್ಯಮದಿಂದಾಗಿ ಇಲ್ಲಿ ಯಾವ ಹೊಸ ಚಟುವಟಿಕೆಗಳೂ ನಡೆದಿಲ್ಲ.ಇಂತಹ ಆಳದ ಗಣಿಗಳಲ್ಲಿ ಅಣುತ್ಯಾಜ್ಯವನ್ನು ಭದ್ರಪಡಿಸಿದ ಕೋಶದಲ್ಲಿಟ್ಟು ಹೂಳುವುದು ಅಣುತ್ಯಾಜ್ಯ ವಿಲೇವಾರಿಗೆ ತೆಗೆದುಕೊಳ್ಳುವ ಕ್ರಮ.ಕೂಡಂಕುಳಂನ ಅಣುತ್ಯಾಜ್ಯವನ್ನು ಇಲ್ಲಿ ವಿಲೇವಾರಿ ಮಾಡಲಾಗುವುದು ಎನ್ನುವ ಸುದ್ದಿಯನ್ನು ಮಾಧ್ಯಮಗಳು ಬಹು ಭರಾಟೆಯಿಂದ ಪ್ರಚಾರ ಮಾಡಿದುವು.ಸ್ಥಳೀಯರಿಗೆ ಇದರಿಂದ ಭಯವಾಗುವುದು ಸಹಜವೇ ಅನ್ನಿ.ಕೂಡಂಕುಳಂ ತ್ಯಾಜ್ಯವನ್ನು ಕೋಲಾರಕ್ಕೆ ತಂದು,ಇಲ್ಲಿ ಹೂಳಿ,ಅದರ ಅಪಾಯಗಳು ತಮ್ಮನ್ನು ಸುತ್ತಿಕೊಳ್ಳುವುದೇಕೆ ಎನ್ನುವುದು ಸ್ಥಳಿಯರ ಪ್ರಶ್ನೆ.
ಹಾಗೆ ನೋಡಿದರೆ,ಕೂಡಂಕುಳಂ ಇನ್ನೂ ಆರಂಭವೇ ಆಗಿಲ್ಲ,ಇನ್ನು ಅಣುತ್ಯಾಜ್ಯದ ಪ್ರಶ್ನೆ ಎಲ್ಲಿ ಬಂತು?ಅದೇನಿದ್ದರೂ ಅಣುಸ್ಥಾವರ ಸಾಕಷ್ಟು ವರ್ಷ ವಿದ್ಯುದುತ್ಪಾದನೆ ಮಾಡಿದ ನಂತರದ ಮಾತು.ವಿಜ್ಞಾನಿಗಳೇನೋ ಕೋಶಗಳಲ್ಲಿ ಭದ್ರಪಡಿಸುವ ಅಣುತ್ಯಾಜ್ಯವನ್ನು ಆಳದಲ್ಲಿ ಹೂಳಿದ ಬಳಿಕ ಅದರಿಂದ ಸೋರಿಕೆಯಾಗುವ ವಿಕಿರಣ ಮಟ್ಟ ನಗಣ್ಯ ಎಂದು ಹೇಳಬಹುದು.ಆದರೆ,ಜನರ ಮನಸ್ಸಿನಲ್ಲಿ ಸಂಶಯದ ಹುಳುವನ್ನು ಹೋಗಲಾಡಿಸಲು ಇಂತಹ ಸಮಜಾಯಿಷಿಗಳು ಹೆಚ್ಚು ಪ್ರಯೋಜನಕ್ಕೆ ಬಾರದು.ಅಣುಸ್ಥಾವರ ಕೇಂದ್ರದ ಗ್ರಿಡ್‌ಗೆ ವಿದ್ಯುತ್ ಪೂರೈಸುವುದರಿಂದರಿಂದ ಇದರ ಪ್ರಯೋಜನ ಬರೇ ತಮಿಳ್ನಾಡಿಗೆ ಅನ್ನುವಂತಿಲ್ಲ.ಸರಕಾರ ಗಪ್‌ಚುಪ್ ತ್ಯಾಜ್ಯ ವಿಲೇವಾರಿ ಮಾಡಬಹುದು.ಆದರೆ ಕೆಲಸಗಳಲ್ಲಿ ಪಾರದರ್ಶಕತೆ ಇಲ್ಲದಿದ್ದರೆ,ಇನ್ನಷ್ಟು ಹೆಚ್ಚು ಸಮಸ್ಯೆಗಳು ಹುಟ್ಟುಹಾಕಿಕೊಳ್ಳುತ್ತವೆ.
ಅಂದ ಹಾಗೆ ಬೆಂಗಳೂರಿನ ಕಸವನ್ನು ಎಲ್ಲಿ ಹೂಳುವುದು ಎಂದು ನಮ್ಮ ಬೆಂಗಳೂರಿನ ಬಿಬಿಎಂಪಿ ತಲೆಕೆಡಿಸಿಕೊಳ್ಳುತ್ತಿದೆ.ಅದೂ ಕೋಲಾರವನ್ನೇ ಅಯ್ದು ಕೊಳ್ಳದಿದ್ದರೆ ಸಾಕು!
------------------------------------------
ಟೂಜಿ ಹರಾಜು ಪ್ರಕ್ರಿಯೆ:ಕೋರ್ಟು ಗರಂ
ಟೂಜಿ ಹರಾಜು ಪ್ರಕ್ರಿಯೆಯಲ್ಲಿ ಸರಕಾರವು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.ಹರಾಜು ನಡೆಸುವಾಗ ತನ್ನ ತೀರ್ಪಿನ ಅನುಸಾರ ನಡೆಸದೆ,ಖುಷಿವಾಷಿ ರೀತಿಯಲ್ಲಿ ನಡೆಸಿದ್ದು ಯಾಕೆ ಎಂದು ಸರಕಾರ ಸ್ಪಷ್ಟನೆ ಕೇಳಿದೆ.ಈ ನಡುವೆ ಯೋಜನಾ ಆಯೋಗದ ಮುಖ್ಯಸ್ಥೆ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೂ,ನಿಗದಿ ಪಡಿಸಿದ ಮೂಲಬೆಲೆ ಹೆಚ್ಚಾದದ್ದೂ ನೀರಸ ಪ್ರತಿಕ್ರಿಯೆಗೆ ಕಾರಣ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
----------------
ಜಿಮೇಲ್‌ನಲ್ಲಿ ಹೊಸತು
ಜಿಮೇಲ್ ಗೂಗಲ್ ಬಳಗದ ಜನಪ್ರಿಯ ಮಿಂಚಂಚೆ ಸೇವೆ.ಇದರಲ್ಲಿ ಹೊಸ ಹೊಸ ಅನುಕೂಲತೆಗಳನ್ನು ಬಳಕೆದಾರರಿಗೆ ಒದಗಿಸಿ,ಅವರ ಶಹಭಾಷ್‌ಗಿರಿಗಿಟ್ಟಿಸಲು ಗೂಗಲ್ ಪ್ರಯತ್ನಿಸುತ್ತದೆ.ಇತ್ತೀಚಿನ ಹೊಸ ಅನುಕೂಲವೆಂದರೆ,ಹೊಸ ಮಿಂಚಂಚೆ ರಚಿಸುವಾಗ,ಅದು ಸಣ್ಣ ಕಿಟಕಿಯಲ್ಲಿ ತೆರೆದುಕೊಂಡು,ಕಡತಗಳನ್ನು ಸೇರಿಸುವಂತಹ ಅನುಕೂಲತೆಯೂ ಮೊದಲನೇ ನೋಟಕ್ಕೆ ಸಿಗುವಂತಾಗುತ್ತದೆ.ಅದಕ್ಕಾಗಿ ಹುಡುಕಾಡುವ ಅಗತ್ಯವೇ ಇಲ್ಲದಂತಾಗಿದೆ.
-----------------------------------------
ಎಲ್ ಇ ಡಿ:ದುಬಾರಿ
ಎಲ್ ಇ ಡಿಗಳನ್ನು ಬಳಸಿದ ದೀಪಗಳು ಸಿ ಎಫ್ ಎಲ್ಗಿಂತಲೂ ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತದೆ.ಇದರಿಂದು ವಿದ್ಯುಚ್ಛಕ್ತಿ ಬಳಕೆ ಇಳಿಯುತ್ತದೆ.ಆದರೆ ಬೆಲೆಯ ವಿಚಾರ ದಲ್ಲಿ ಇವಿನ್ನೂ ದುಬಾರಿ.ಹದಿಮೂರು ವ್ಯಾಟ್ ಎಲ್ ಇ ಡಿಯು, ನಲುವತ್ತು ವ್ಯಾಟ್ ಸಿ ಎಫ್ ಎಲ್ ಬಲ್ಬಿನಷ್ಟೇ ಬೆಳಕು ಬೀರುತ್ತದಾದರೂ,ಬೆಲೆ ಎಲ್ ಇ ಡಿ ದೀಪಕ್ಕೆ ಒಂದೂವರೆ ಸಾವಿರವಾದರೆ,ಸಿ ಎಫ್ ಎಲ್ ನಲುವತ್ತು ರೂಪಾಯಿಗೆ ದೊರೆಯುತ್ತದೆ.ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾದಂತೆ,ಬೆಲೆ ಇಳಿಯುವುದು ಮಾಮೂಲಿ.ಹಾಗಾಗಿ,ಇನ್ನೊಂದೆರಡು ವರ್ಷಗಳಲ್ಲಿ ಎಲ್ ಇ ಡಿಯೂ,ಕೈಗೆಟಕುವ ಬೆಲೆಯಲ್ಲಿ ಸಿಗಬಹುದು.ಪಿಲ್ಫ್ಹ್ಸ್ ಅಂತಹ ಕಂಪೆನಿ ಈಗ ಎಲ್ ಇ ಡಿ ದೀಪದ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡಿದೆ.ಅವುಗಳಿಗೆ ಲೈಟ್‌ನೆಕ್ಸ್ಟ್ ಎಂದು ಹೆಸರಿಸಲಾಗಿದೆ.
------------------
ಕಟ್ಟಡದ ಒಳಗೆ ಬೆಳಕು ತರುವ 3M ಕೊಳವೆಗಳು
3M ಹಗಲು ಬೆಳಗುವ ಕೊಳವೆ ಉತ್ಪನ್ನಗಳು ಇದೀಗ ಲಭ್ಯಬಾಗಿವೆ.ಕಟ್ಟಡ ಸಂಕೀರ್ಣಗಳಲ್ಲಿ,ಬೆಳಕಿನ ಅಭಾವ ಹೆಚ್ಚು.ಹಾಗಾಗಿ ಹಗಲಿನಲ್ಲೂ ವಿದ್ಯುಚ್ಛಕ್ತಿ ಬಳಸಬೇಕಾಗುತ್ತದೆ.ಇದನ್ನು ತಡೆಯಲು ಕಟ್ಟಡದ ಛಾವಣಿ ಮೇಲೆ ಬೀಳುವ ಸೂರ್ಯ ಪ್ರಕಾಶದ ಪ್ರಖರತೆಯನ್ನು ಇಲ್ಲವಾಗಿಸಿ,ಅದರಿಂದ ಬರುವ ಶಾಖವನ್ನೂ ಸೋಸಿ,ಬರೇ ಬೆಳಕನ್ನು ಕಟ್ಟಡದ ಒಳಗಡೆ ತಂದು ವಿದ್ಯುದ್ದೀಪಗಳನ್ನು ಅನಗತ್ಯವಾಗಿಸುವ ಹಗಲು ಬೆಳಗುವ ಕೊಳವೆ ವ್ಯವಸ್ಥೆಗಳನ್ನು 3M ಒದಗಿಸಲಾರಂಭಿಸಿದೆ.ಮೋಡ ಮುಸುಕಿದ ವಾತಾವರಣದಲ್ಲೂ ಇದು ಫಲಕಾರಿ.
-----------------------------
ಸರಾಗ ಸಂಚಾರಕ್ಕೆ ಐಬಿಎಂ ವ್ಯವಸ್ಥೆ


ಪ್ರಾನ್ಸ್‌ನ ನಗರವಾದ ಲಯಾನ್‌ನಲ್ಲಿ ಅನುಷ್ಠಾನವಾಗಲಿರುವ "ಚೂಟಿ" ಸಾರಿಗೆ ವ್ಯವಸ್ಥೆಯು,ವಾಹನ ಚಾಲಕರಿಗೆ ನೇರವಾಗಿ ರಸ್ತೆಗಳಿಂದ ಪಡೆದ,ಸಾರಿಗೆ ಸ್ಥಿತಿ ಆಧಾರಿಸಿ,ಸಹಾಯ ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಿದೆ.ಇದರಲ್ಲಿ ಹಳೆಯ ದತ್ತಾಂಶಗಳ ಜತೆ ಆ ಹೊತ್ತಿನಲ್ಲಿ ಏನಾಗುತ್ತಿದೆ ಎನ್ನುವುದನ್ನು ವಿಶ್ಲೇಷಿಸಿ,ಸಹಾಯ ಸಿಗುವುದರಿಂದ,ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ.ಈಗ ಅಮೆರಿಕಾ,ಯುರೋಪ್ ಮುಂತಾದೆಡೆ,ಚಾಲಕರು ರಸ್ತೆಯ ಸಾರಿಗೆ ವ್ಯವಸ್ಥೆ ಬಗ್ಗೆ ತಿಳುವಳಿಕೆ ಏನೋ ಪಡೆಯುತ್ತಾರೆ.ಆದರೆ,ಯಾವ ರಸ್ತೆ ಮೂಲಕ ಪ್ರಯಾಣಿಸಬೇಕು ಅನ್ನುವಂತಹ ನಿರ್ಧಾರಗಳನ್ನು ಸ್ವತ: ಚಾಲಕನೇ ತಳೆಯಬೇಕಾಗುತ್ತದೆ.ಇಲ್ಲಿ ಹಾಗಲ್ಲ,ಸ್ಮಾರ್ಟ್ ವ್ಯವಸ್ಥೆಯು ಅವರಿಗೆ ಮಾರ್ಗದರ್ಶನ ಮಾಡಲಿದೆ.
----------------------------------------
ಕೀಟದಿಂದ ಪಾಠ
ಮರುಭೂಮಿಯಲ್ಲಿ ವಾಸಿಸುವ ಕೀಟವೊಂದು ತನ್ನ ನೀರಿನ ಅವಶ್ಯಕತೆಗೆ ವಾತಾವರಣದ ಗಾಳಿಯನ್ನೇ ಬಳಸಿಕೊಳ್ಳುತ್ತದೆ.ಇದೇ ತತ್ವವನ್ನು ಬಳಸಿಕೊಂಡು,ಅಮೆರಿಕಾದ ಹೊಸ ಕಂಪೆನಿಯೊಂದು ಬಾಟಲಿಗೆ ನೀರು ತುಂಬುವ ವಿಧಾನ ಅಭಿವೃದ್ಧಿ ಪಡಿಸಿದೆ.ಇದರಲ್ಲಿ,ಸಣ್ಣ ಫ್ಯಾನ್ ಮೂಲಕ ಗಾಳಿಯನ್ನು ಬಾಟಲಿಯೊಳಗೆ ತಳ್ಳಲಾಗುತ್ತದೆ.ಬಾಟಲಿಯೊಳಗಿನ ನೀರಿನ ಪಸೆ ಅಲ್ಲೇ ಉಳಿದು,ಹೊಸ ಗಾಳಿ ಪ್ರವೇಶಿಸಿದಂತೆಲ್ಲ,ಅಲ್ಲಿ ತುಂಬಿದ್ದ ಗಾಳಿ ಜಾಗ ಖಾಲಿ ಮಾಡುತ್ತದೆ.ಇಂತಹ ವ್ಯವಸ್ಥೆಗಳು ಈಗಾಗಲೇ ಲಭ್ಯವಿದ್ದರೂ,ಅವೆಲ್ಲಾ ಹೆಚ್ಚು ವಿದ್ಯುತ್ ಬಯಸುತ್ತವೆ.ಒಣ ಪ್ರದೇಶಗಳಲ್ಲಿ ವಾಸಿಸುವವರಿಗೆ ಅವರ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಸಹಾಯ ಮಾಡುವ ಉದ್ದೇಶದಿಂದ ಕಂಪೆನಿ ಈ ಯೋಜನೆಗೆ ಕೈಹಾಕಿದೆ
--------------------------------
ಇಂಟರ್ನೆಟ್ ಉದ್ಯಮ
ಜನರಿಗೆ ಹೆಚ್ಚೆಚ್ಚು ಸಹಾಯ ಮಾಡುಅವ ವ್ಯವಸ್ಥೆಗೆಳನ್ನು ರೂಪಿಸಲು,ಜನರಲ್ ಇಲೆಕ್ಟ್ರಿಕ್ ಎಂಜಿನಿಯರಿಂಗ್ ಬಯಸುತ್ತಿದೆ.ಸಾಧನವೊಂದು ತನ್ನ ಸ್ಥಿಇತಿ ಚೆನ್ನಾಗಿಲ್ಲ ಎನ್ನುವುದರ ಬಗ್ಗೆ ಗಮನ ಸೆಳೆಯುವಂತಹ ಅನುಕೂಲತೆಗಳನ್ನು ಒದಗಿಸಲು ಬಯಸುತ್ತದೆ.
ವಿನ್8:ಧಾರಾಳ ಆಪ್ಸ್ ಲಭ್ಯತೆ
ಈಗಿನ್ನೂ ವಿನ್8 ಆಪರೇಟಿಂಗ್ ವ್ಯವಸ್ಥೆಯು ಬಿಡುಗಡೆಯಾಗಿ ತಿಂಗಳೂ ಉರುಳಿಲ್ಲ-ಅದಾಗಲೇ ಇಪ್ಪತ್ತು ಸಾವಿರ ಆಪ್‌ಗಳು ಲಭ್ಯವಾಗಿವೆ.ಹೆಚ್ಚಿನವೂ ಉಚಿತವಾಗಿ ಲಭ್ಯವಿವೆ.ಏಪಲ್‌ನ ವ್ಯವಸ್ಥೆಗಳಿಗೆ ಏಳು ಲಕ್ಷ ಆಪ್‌ಗಳೂ,ಗೂಗಲ್‌ನ ಆಂಡ್ರಾಯಿಡ್‌ಗೆ ಆರು ಲಕ್ಷ ಆಪ್‌ಗಳೂ ಲಭ್ಯವಿವೆಯೆನ್ನಿ.ಮುಂದಿನ ತಿಂಗಳಲ್ಲಿ ವಿನ್8 ಆಪ್‌ಗಳ ಸಂಖ್ಯೆ ಇಮ್ಮಡಿಯಾಗುವ ನಿರೀಕ್ಷೆಯಿದೆ.ಹೊಸ ಕಂಪ್ಯೂಟರ್ ಖರೀದಿಸುವವರ ಸಂಖ್ಯೆ ಹೊಸ ವರ್ಷದಲ್ಲಿ ಏರುವುದು ನಿರೀಕ್ಷಿತ.ಅವರಿಗೆ ಬೇಕಾಗುವ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವ ತಂತ್ರಾಂಶ ತಜ್ಞರು,ಇಂತಹ ಅವಕಾಶವನ್ನು ಕಳೆದುಕೊಳ್ಳಬಯಸರಾದ್ದರಿಂದ ಆಪ್‌ಗಳ ಸಂಖ್ಯೆ ಒಂದೇ ಸವನೆ ಏರುವುದು ನಿಶ್ಚಿತ.
----------------------
(ಈ ಅಂಕಣ ಬರಹಗಳು http://ashok567.blogspot.comನಲ್ಲೂ ಲಭ್ಯವಿವೆ.)
*ಅಶೋಕ್‌ಕುಮಾರ್ ಎ
epaperudayavani
UDAYAVANI

 

Comments