ಆ ಮೂರು ಬೆರಳುಗಳು
ಆ ಮೂರು ಬೆರಳುಗಳು
ಮತ್ತೊಮ್ಮೆ ಕನ್ನಡಕವನ್ನು ಮೂಗಿನ ಮೇಲಿಂದ ಸರಿಪಡಿಸಿಕೊಂಡರು ಮೇಜರ್ .
"ನಿಜ!" ಮಿಲಿಂಡ್ ಹೇಳಿಕೆಯನ್ನು ಅನುಮೋದಿಸುತ್ತ " ಎಷ್ಟೇ ಸೂಕ್ಷ್ಮವಾಗಿ ಪರಿಶೀಲಿಸಿದರೂ ಎಲ್ಲಿಯೂ ತಪ್ಪು ಗೊತ್ತಾಗುತ್ತಿಲ್ಲ, ನನ್ನ ಇಷ್ಟು ವರ್ಷಗಳ ಸುಧೀರ್ಘ ಅನುಭವದಲ್ಲಿ ಈ ರೀತಿಯಲ್ಲಿ ತಯಾರಿಸಿರೋ ಪರ್ಫೆಕ್ಟ್ ಟೆಂಡರ್ ನೋಡಿರಲಿಲ್ಲ." ಎಂದರು ಮೇಜರ್ ವಿಶ್ವನಾಥ್,
"ನಿಮಗೆ ಸಂಶಯ ಯಾಕೆ ಬಂತು ಹೇಳುತ್ತೀರಾ ?" ಮಿಲಿಂಡ್.
"ಮೊದಲನೆಯ ಹಂತದಿಂದ ನಾಲ್ಕನೆಯ ಹಂತದವರೆಗಿನ ನಮ್ಮ ಪರಿಶೀಲಿಸುವಿಕೆಯಲ್ಲಿ ಪ್ರತಿಯೊಂದೂ ಟೆಂಡರನ್ನು ನಾವು ಕೂಲಂಕುಶವಾಗಿ ಪರಿಶೀಲಿಸಿದ್ದೆವು. ಇದಕ್ಕೇ ನಮ್ಮದೇ ಆದ ವಿಶಿಷ್ಟವಾದ ಸಿಸ್ಟಮ್ ಒಂದನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ. ನಾಲ್ಕನೆಯ ಹಂತಕ್ಕೆ ಬಂದ ನಾಲ್ಕು ಟೆಂಡರುಗಳೂ ಒಳ್ಳೆಯ ಪ್ರತಿಷ್ಟಿತ ಸಂಸ್ಥೆಗಳಿಂದಲೇ ಬಂದಿವೆ. ಯಾರನ್ನೂ ಸಂಶಯಿಸುವ ಹಾಗೆ ಇಲ್ಲ. ಅಂತಹ ರೆಕಾರ್ಡ್ ಅವರದ್ದೆಲ್ಲಾ. ಆದರೆ ಐದನೆಯ ಸಂಸ್ಥೆಯದ್ದೇ ನನಗೆ ಸಂಶಯ. ಅಷ್ಟೇನೂ ಪ್ರತಿಷ್ಟಿತವಾಗಿಲ್ಲದ ಸಂಸ್ಥೆಯೊಂದು ಹೀಗೆ ಇಲ್ಲಿಯವರೆಗೆ ಬಂತು ಎಂದರೆ ಒಂದೋ ಅದು ನಿಜವಾಗಿಯೂ ಒಳ್ಳೆಯ ಸಂಸ್ಥೆ ಅಥವಾ ನಮ್ಮಲ್ಲಿನ ಯಾರೋ ಅದಕ್ಕೆ ಸಹಾಯ ಮಾಡುತ್ತಿದ್ದಾರೆ. ಅದು ಒಳ್ಳೆಯದೇ ಆಗಿದ್ದರೆ ಸರಿ, ಆದರೆ ಹಾಗಿಲ್ಲದ ಪಕ್ಷದಲ್ಲಿ ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ಬರುವ ಸಾಧ್ಯತೆಯಿದ್ದುದಲ್ಲದೇ ಈ ಪದ್ದತಿ ಮುಂದುವರಿಯುವುದು ಎಲ್ಲಾ ರೀತಿಯಿಂದಲೂ ಕೆಟ್ಟದ್ದು." ಮೇಜರ್.
"ನಿಮಗೆ ಯಾರ ಮೇಲಾದರೂ ಸಂಶಯ..??" ಮಿಲಿಂಡ್.
" ನಿಜ ಹೇಳಬೇಕೆಂದರೆ, ಇಲ್ಲ. ನಮ್ಮ ಗುಮಾಸ್ತ ಸುಮಾರು ಹದಿನೈದು ವರ್ಷಗಳಿಂದ ನಮ್ಮಲಿಯೇ ಇದ್ದಾನೆ, ತುಂಬಾ ನೇರಸ್ಥ. ಅವನನ್ನು ಸಂಶಯಿಸಲಾಗದು. ಅಲ್ಲದೇ ನಮ್ಮಲ್ಲಿ ಎಲ್ಲಾ ಕಡೆ ಸಿಸಿ ಕೆಮರಾಗಳಿವೆ. ಯಾವುದೇ ವಿಷಯವೂ ಆಫೀಸಿನಿಂದ ಹೊರ ಹೋಗುವುದು ಸಾಧ್ಯವೇ ಇಲ್ಲ. ಅಷ್ಟೂ ಭದ್ರತೆಯಿದೆ. ಇಲ್ಲಿಯವರೆಗೆ ಬಂದ ಟೆಂಡರುದಾರರ ರೇಟು ಪರಿಶೀಲಿಸಿದಾಗ ಯಾವುದೇ ವಿಷಯ ಪರಸ್ಪರ ವಿನಿಮಯದ ಮಾಹಿತಿಯಿಲ್ಲ.... ಆದರೂ.....!!!"
ಇನ್ನೆಷ್ಟು ಜನರಿದ್ದೀರಿ.. ಈ ಟೆಂಡರು ಪ್ರಕ್ರಿಯೆಯಲ್ಲಿ ? ಕೇಳಿದ ಮಿಲಿಂಡ್ ಸುಮ್ಮನೇ.
"ನಾನು, ಈ ಕನ್ಯಾಲ್, ಈ ಆಫೀಸಿನ ಮುಖ್ಯಸ್ತ ಕಲ್ಲೂರಾಮ್, ಕೆಲಸಗಾರ ಮಂಜೂ ಮತ್ತು ಇಬ್ಬರು ಭಾಗೀದಾರರು, ಒಟ್ಟು ಏಳು ಜನ ಮಾತ್ರ.
"ಏಳನೆಯವ ಯಾರು..??" ಮಿಲಿಂಡ್
"ರುದ್ರ, ಒಬ್ಬ ಸಲಹಾದಾರ. ಈ ಪ್ರಾಜೆಕ್ಟ್ ಹೇಗೆ ನಡೆಯ ಬೇಕು, ಯಾವ ಯಾವ ಕಾಮಗಾರಿ ಯಾವ್ಯಾವಾಗ ಅನುಕ್ರಮವಾಗಿ ಹೇಗೆ ನಡೆಯಬೇಕು, ಎಂಬುದನ್ನು ನೋಡಿಕೊಳ್ತಾನೆ. ಈ ಪ್ರಾಜೆಕ್ಟನ ಮೇಲುಸ್ತುವಾರಿ ಆತನದ್ದೇ. ಕಳೆದ ನಾಲ್ಕು ಪ್ರಾಜೆಕ್ಟ್ ಅವನ ಮೇಲುಸ್ತುವಾರಿಯಲ್ಲೇ ನಡೆದದ್ದು. ಒಳ್ಳೆಯ ಲಾಭ ಸಹಾ ತರಿಸಿದ್ದ." ಮಧ್ಯೆ ಬಾಯಿ ಹಾಕಿದ್ದ ಮಿಲಿಂಡ್
"ಅಲ್ಲಾ ಮೇಜರ್ ನಿಮಗೆ ಸಂಶಯ ಯಾಕೆ ಬಂತು ಎನ್ನುವುದನ್ನು ಹೇಳಲಿಲ್ಲವಲ್ಲ ನೀವು."
"ನನ್ನ ಆರನೆಯ ಇಂದ್ರಿಯ" ವಿಶ್ವನಾಥ್ ನುಡಿದರು. ಆ ದಿನದ ಘಟನೆಯನ್ನು ಮೆಲುಕು ಹಾಕುತ್ತ ....
"ಹೇಳಿ, ನಿಮ್ಮ ಟೆಂಡರಿನಲ್ಲಿ ನೀವು ಬೇರೆಯವರಿಗಿಂತ ಎಷ್ಟು ಕಡಿಮೆಯಲ್ಲಿ ಈ ಪ್ರಾಜೆಕ್ಟ್ ಮುಗಿಸಿಕೊಡಬಲ್ಲಿರಿ..? ನಾನೆಂದೆ.
"ಯಾಕೆಂದರೆ ಈ ಕೆಲಸಕ್ಕೆ ಬಂದಿರುವ ಟೆಂಡರಿನಲ್ಲಿ ನೀವೇ ಕೊನೆಯವರು, ಬಾಕಿ ಉಳಿದವರ ಕೊಟೇಷನ್ ನಮಗೆ ಸಿಕ್ಕಿ ಆಗಿದೆ. ನಿಮ್ಮ ಉತ್ತರದ ಮೇಲೆ ಅದು ಅವಲಂಬಿಸಿದೆ. ನಿಮ್ಮೊಬ್ಬರನ್ನು ಬಿಟ್ಟು ಉಳಿದೆಲ್ಲರ ಕೋಟ್ ನಮಗೆ ಬಂದಾಗಿದೆ."
"ಸರಿ ಸರ್ ನಾನು ಈಗಲೇ ನನ್ನ ಕೊನೆಯ ಕೋಟ್ ನಿಮಗೆ ಕೊಡುತ್ತಿದ್ದೇನೆ, ಇದು ಉಳಿದವರಿಗಿಂತ ಕಡಿಮೆ ಅಂತ ನನಗೆ ಖಂಡಿತಾ ನಂಬಿಕೆಯಿದೆ," ಆತನೆಂದ.
ಆತನ ಮಾತಿನಲ್ಲಿನ ವಿಶ್ವಾಸ ನನ್ನನ್ನು ಕೆಲ ಕಾಲ ಸ್ಥಬ್ದವಾಗಿಸಿತ್ತು.
ತನ್ನ ಕಿಸೆಯಿಂದ ಪೆನ್ ತೆಗೆದು ಕ್ಷಣ ಮಾತ್ರ ಯೋಚಿಸಿದ ಆತ ತನ್ನ ಕಂಪೆನಿಯ ತಲೆ ಬರಹದ ಪತ್ರದಲ್ಲಿ ಸರಸರನೆ ಬರೆದು ಕೈಗಿತ್ತ. ನಿಜ, ಇಲ್ಲಿಯವರೆಗೆ ಎಲ್ಲಕ್ಕಿಂತ ಕಡಿಮೆ ಬಂದ ಟೆಂಡರಿಗಿಂತಲೂ ಮೂರು ಪ್ರತಿಶತ ಅತ ತನ್ನ ಟೆಂಡರಿನ ಹಣದಲ್ಲಿ ಕಡಿತ ಮಾಡಿದ್ದ. ನಿಜವಾಗಿಯೂ ಉಳಿದೆಲ್ಲರಿಗಿಂತ ಇದು ಕಡಿಮೆಯೇ.
ನಿಜವಾಗಿ ಇವನಿಗೇ ಟೆಂಡರ್ ಕೊಡಬೇಕು, ಆದರೆ ನನಗೆ ಬಂದ ಸಂಶಯ ಈ ಕಂಪೆನಿಗೆ ಕೆಲಸ ಕೊಡಲು ಅನುಮಾನಿಸಿತ್ತು.
ಇವತ್ತೇ ಕೊನೇ ದಿನ, ನಾಳೆ ಕೆಲಸದ ಪರವಾನಿಗೆ ನೀಡಲೇ ಬೇಕು. ಅದಕ್ಕೇ ನಿನಗೆ ಕರೆ ಮಾಡಿದ್ದು.ಏನಾದರೂ ಮಾಡಿ ನೀನು ಈ ಒಗಟನ್ನು ಬಿಡಿಸುವಿ ಎಂತ ನಂಬಿದ್ದೇನೆ.
"ಅಲ್ಲ, ಎಲ್ಲಾ ಕಡೆ ಸಿಸಿ ಕೆಮರಾಗಳಿವೆ ಎಂದಿರಲ್ಲ..??"
"ಹೌದು ನಿಜ, ಅದೆಲ್ಲಾ ನಾನು ನೋಡಿಯಾಗಿದೆ ಮಿಲಿಂಡ್, ಅದೂ ನಮ್ಮೆಲ್ಲರ ಇದಿರಿಗೇ ಮುಖತ: ನಡೆಯುವ ಘಟನೆ, ಇದರಲ್ಲಿ ಹೇಗೆ ಮತ್ತು ಯಾಕೆ ಯಾರಾದರೂ ತನ್ನ ಕತ್ತು ಕೊಯ್ದು ಕೊಳ್ಳುವರು..??"
"ಆದರೂ ಒಂದು ಕೊನೆಯ ಚಾನ್ಸ್ ನೋಡೆ ಬಿಡೋಣ..ಸರ್" ಮಿಲಿಂಡ್
"ಓ ಕೆ ಮೈ ಬಾಯ್!!" ಆತನ ಬೆನ್ನು ತಟ್ಟುತ್ತಾ ಮೇಜರ್ ಕಾನ್ಫರೆನ್ಸ್ ಹಾಲ್ ಪ್ರವೇಶಿಸಿದರು ಮಿಲಿಂಡ್ ಜತೆ.
ವಾರಕ್ಕೆ ಹತ್ತು ಹನ್ನೆರಡು ಬಾರಿಯಾದರೂ ಮೀಟಿಂಗ್ ನಡೆದೇ ನಡೆಯುತ್ತೆ ಇಲ್ಲಿ.
ಕನ್ಯಾಲ್ ಹಾಲ್ನ ಪ್ರೊಜೆಕ್ಟರ್ ಶುರು ಮಾಡಿದ. ಇದಿರಿನ ದೊಡ್ಡ ಪರದೆಯಲ್ಲಿ ಟೆಂಡರು ಪ್ರಕ್ರಿಯೆ ಆರಂಭವಾಯ್ತು.
ಟೆಂಡರುಗಳನ್ನು ಪರಿಶೀಲಿಸುವಾಗ ಗೋಚರವಾದದ್ದೆಂದರೆ ಕ್ಯಾಮರಾದ ಕೋನ ಬರೇ ವೆಂಡರ್ಸ್ ಅಥವಾ ಇದಿರಿನ ವ್ಯಕ್ತಿಗಳ ಮೇಲೆಯೇ ಕೇಂದ್ರೀಕ್ರತವಾಗಿದ್ದುದು, ಮಿಲಿಂಡ್ ಅದನ್ನೇ ವ್ಯಕ್ತ ಪಡಿಸಿದಾಗ...
"ಅದರಲ್ಲೇನು ಈಕಡೆ ನಮ್ಮ ಕಂಪೆನಿಯವರಲ್ಲವೇ ಇದ್ದುದ್ದು.." ಮೇಜರ್ ಉತ್ತರಿಸಿದ್ದರು,
ಬೇರೆ ಕೋನದಿಂದ ತೆಗೆದ ವಿಡಿಯೋ ಇದೆಯಾ..? " ಮಿಲಿಂಡ್ ಪ್ರಶ್ನೆ.
ಇದೆ ಸಾರ್... ಆದರೆ...? ಕನ್ಯಾಲ್ ಹೇಳಲು ಅನುಮಾನಿಸಿದ್ದ.
ಏನು.... ಆದರೆ..??
"ಆದರೆ ಅದು ಸಾರ್ ( ಮೇಜರ್ ತೋರಿಸಿ) ರೂಮಿನಲ್ಲಿದೆ ಸರ್".
"ಓಕೆ ಅಲ್ಲಿಗೇ ಹೋಗಿ ನೋಡೋಣ" ಇಬ್ಬರನ್ನೂ ಅಲ್ಲಿಂದ ಎಬ್ಬಿಸಿದ ಮಿಲಿಂಡ್
++++++++++
ಮಿ. ರುದ್ರ... ನಾನು ಮಿಲಿಂಡ್.ಸೊಲ್ಯುಶನ್ ಕಂಪೆನಿಯ ಆಂತರಿಕ ಸಲಹಾದಾರ.
ನಿಮ್ಮಲ್ಲಿ ಕೆಲವು ಪ್ರಶ್ನೆ ಕೇಳಬೇಕು"
ಕೇಳಿ, ಅದಕ್ಕೇನು..??
ನಿನಗೆ ತಾನೇ ಎಲ್ಲಾ ಕೊಟೇಷನ್ನುಗಳ ವಿವರ ತಿಳಿದಿದ್ದುದು.
ಹೌದು, ನಾನು ಈ ಕಂಪೆನಿಯ ಪ್ರೊಜೆಕ್ಟ್ ಗಳ ಸಲಹಾದಾರ.. !!"
ಸಾಧಾರಣ ವಿಷಯವೆಂಬಂತೆ ಮಿಲಿಂಡ್ ಮಾತನ್ನು ತಳ್ಳಿ ಹಾಕಿದ್ದ ರುದ್ರ.
ಮೇಜರ್ ಮುಖದಲ್ಲಿ ಇನ್ನೂ ಕಿರಿ ಕಿರಿ ಕಾಣಿಸಿಕೊಂಡಿತು. ಮಿಲಿಂಡ್ ಮೇಜರ್ಗೆ ಕಂಡೂ ಕಾಣದ ಹಾಗೆ ಕಣ್ಣು ಹೊಡೆದ.
ನಿಜ.
ನಿನ್ನೆ ನೀವು ಕನ್ಯಾಲ್ ಗೆ ಐದನೆಯವರ ಹೆಸರಿಗೆ ಕೆಲಸ ಆರಂಭಿಸುವ ಪತ್ರ ತಯಾರಿಸಲು ಹೇಳಿದ್ದರಲ್ಲಾ??
ನಿಜ ಎಲ್ಲರಿಗಿಂತ ಕಡಿಮೇ ಅವರದ್ದೇ ಆಗಿತ್ತಲ್ಲ ಸರ್, ಅದಕ್ಕೇ ಕಾಗದ ಸಿದ್ಧ ಮಾಡಿಡಲು ತಿಳಿಸಿದ್ದೆ, ಅದರಲ್ಲೇನು ತಪ್ಪು..??
ತಪ್ಪಿಲ್ಲ ನೀನು ಮಾಡಿದ್ದುದು ಸರಿ,
ಇನ್ನೊಂದು ವಿಷಯ ನಿಮ್ಮ ಕಾರು ತುಂಬಾ ಚೆನ್ನಾಗಿದೆ ಯಾವ ಮೊಡೆಲ್?
ಈ ವರ್ಷದ್ದೇ ಸಾರ್,
ಅಲ್ಲಯ್ಯಾ ಎರಡು ತಿಂಗಳು ಕಳೆದರೆ ಮುಂದಿನ ವರ್ಷದ್ದೇ ಸಿಗುತ್ತಿತ್ತಲ್ಲಾ..?
ಇಲ್ಲ ಸರ್ ಮನೆಯವರು ಒತ್ತಾಯ ಮಾಡಿದ್ದರು ಸಾರ್
ಅವರ ಆಯ್ಕೆಯಾ ನಿಮ್ಮದಾ..?
ನನ್ನದೇ ಸರ್..?
ಮತ್ತೆ ನಿಮ್ಮ ಮನೆ ಸಾಲದ ಕೊನೆಯ ಕಂತೂ ತೀರಿಸಿ ಬಿಟ್ಟಿರಿ
ಹೌದು ಸರ್
ಅದೂ ಐದು ವರ್ಶದ್ದು ಒಮ್ಮೆಲೇ ಕಟ್ಟಿದ್ದಿರಾ..?ಈಗ ಆಶ್ಚರ್ಯವಾಗುವ ಸರದಿ ರುದ್ರನದ್ದು.
ಹೌದು ಸರ್,
ಅದೇ ಇದಕ್ಕೆಲ್ಲಾ ಹಣ ಎಲ್ಲಿಂದ ಬಂತು..??
ನನ್ನಣ್ಣ ಕೊಟ್ಟರು ಸಾರ್...??
ಯಾವ ಅಣ್ಣ..?
ಯಾಕೆ ಸರ್..??ನನ್ನ ಮೇಲೆ ಸಂಶಯವಾ..? ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಏನಾದರು ತಪ್ಪು ಕಂಡಿದ್ದೀರಾ.."
ಆದರೆ ರುದ್ರ ಈ ಪ್ರಶ್ನೆ ಕೇಳಿದ್ದು ಮೇಜರಿಗೆ. ಅವರು ಸುಮ್ಮನಿದ್ದರು.
ಮಿಲಿಂಡ್ ಮುಂದುವರಿಸಿದ್ದ.. ತನ್ನ ಪ್ರಶ್ನಾವಳಿ.
ಮಿ ರುದ್ರ... ನೀವು ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಹೋಗಲಿ ಚೆಕ್ ಕೊಟ್ಟರಾ ಅಥವಾ ನಗದಾ..?
ನಗದೇ ಸರ್.
ಹತ್ತು ಲಕ್ಷ.... ನಿಮಗಾಗಿ ನಿಮ್ಮಣ್ಣ ಎಲ್ಲಿಂದ ತಂದರು ಅಂತ ಕೇಳಿದಿರಾ..??
"ಇಲ್ಲ ಸರ್... ಅದು..."
"ಸರಿ ಅವರ ಹೆಸರೇನು ಅಂದಿರಿ..?"
"ಕೄಷ್ಣಕಾಂತ್ ಸರ್.."
"ಆದರೆ ನಿಮ್ಮ ಅಕ್ಕೌಂಟ್ ಗೆ ಹಣ ಕಟ್ಟಿದವರ ಹೆಸರು ಅದಲ್ಲ."
"ಅದೂ...... ನಾನು ಬೇರೆ ಯಾರನ್ನೋ ಕಳುಹಿಸಿದ್ದೆ "
ಯಾರನ್ನು ಕಳುಹಿಸಿದ್ದೀರಿ..?? " ಈ ಪ್ರಶ್ನೆಗೆ ಉತ್ತರವಿಲ್ಲ ರುದ್ರನ ಬಳಿ
.........
"ಹೇಳಿ ರುದ್ರ... ಯಾರನ್ನ ಕಳುಹಿಸಿದ್ದೀರಿ..?"
"ನಾನ್ಯಾಕೆ ಹೇಳಬೇಕು ಸರ್ ನಿಮಗೆ..? ಅದು ನನ್ನ ಸ್ವಂತ ವಿಷಯ...." ರುದ್ರನ ಅಸಹನೆಯ ಕೊನೆಯ ಕ್ಷಣ ಅದು
"ನಿಜ ರುದ್ರ, ಈ ವಿಷಯ ನಿಮ್ಮ ವೈಯ್ಯಕ್ತಿಕ, ಆದರೆ ಕಟ್ಟಿದ ಹಣ ಮಾತ್ರ ವೈಯ್ಯಕ್ತಿಕ ಅಲ್ಲ."
"ಅಂದರೆ ಏನು ನಿಮ್ಮ ಮಾತಿನ ಅರ್ಥ..??...."
"ನಿಮ್ಮ ಹಣ ಕಟ್ಟಿದವನು ಈ ಐದನೆಯ ಟೆಂಡರ್ ಕಂಪೆನಿಯ ಎರಡನೆಯ ಪಾಲುದಾರ".
ನೀವು ಹೇಳುತ್ತಿರುವುದು ಶುದ್ಧ ಸುಳ್ಳು..... ಅವನ ಸ್ವರ ತಡವರಿಸುತ್ತಿತ್ತು.
ಮೇಜರ್ ಕೇಳಿದರು "ಇದೇನು ಮಿಲಿಂಡ್ ರುದ್ರ ನೀವು ಯಾವುದರ ಬಗ್ಗೆ ಮಾತನಾಡುತ್ತಿದ್ದೀರಿ..?"
"ಸರ್ ಎರಡು ದಿನದ ಹಿಂದೆ ರುದ್ರನ ಖಾತೆಗೆ ಸೇರಿದ್ದ ಹತ್ತು ಲಕ್ಷದ ಬಗ್ಗೆ, ಆ ಹಣ ರುದ್ರನ ಅಣ್ಣ ಕೊಟ್ಟಿದ್ದಲ್ಲ, ಅದನ್ನು ಕೊಟ್ಟವರು ಪೀತಾಂಬರ್ ನಿಮ್ಮ ಐದನೆಯ ಟೆಂಡರು ಕಳುಹಿಸಿದ ಕಂಪೆನಿಯ ಎರಡನೆಯ ಪಾಲುದಾರ. ನಾನು ನಿಮ್ಮ ಆಫೀಸಿನ ಎಲ್ಲರ ಬಗ್ಗೆ ಮಾಹಿತಿ ಕಲೆ ಹಾಕಿದ್ದೆ. ಪ್ರತಿ ತಿಂಗಳೂ ಅಡ್ವಾನ್ಸಾಗಿಯೇ ಸಂಬಳ ತೆಗೆದು ಕೊಳ್ಳುವ ರುದ್ರ, ಸಂಬಳ ಎರಡು ದಿನ ತಡವಾದರೆ ಇಡೀ ಫೈನಾನ್ಸ್ ಸೆಕ್ಷನ್ ನ್ನೇ ಬುಡ ಮೇಲು ಮಾಡುವ ರುದ್ರ ಈ ತಿಂಗಳು ಸುಮ್ಮನಿದ್ದರಂತೆ ನಾಲ್ಕು ದಿನ ತಡವಾದರೂ.
ನನಗೆ ಇನ್ನೂ ರುದ್ರನ ಮೇಲೆ ಸಂಶಯ ಹೆಚ್ಚಾದದ್ದು ಇನ್ನೊಂದು ವಿಷಯ ಮಂಜುವಿನಿಂದ ಕೇಳುವಾಗ, ತಿಂಗಳು ತಿಂಗಳು ರುದ್ರನ ಮನೆಯ ಸಾಲದ ಕಂತು ಬ್ಯಾಂಕ್ ಗೆ ಕಟ್ಟುವವ ಮಂಜು, ಈ ಸಾರಿ ತಡವಾದರೂ ರುದ್ರ ಚೆಕ್ ಕೊಡದಿದ್ದಾಗ ಕೇಳಿದರೆ ಬೇಡ ಬಿಡು ಅಂದರಂತೆ, ಈ ವಿಷಯದ ಹಿಂದೆ ತಪಾಸಿಸಿದಾಗ ಗೊತ್ತಾಗಿದ್ದುದು ಎಲ್ಲಾ ಹಣ ಚುಕ್ತಾ ಮಾಡಿದ್ದಾರೆ ರುದ್ರ ಅಂತ. ಅದಲ್ಲದೇ ಹನ್ನೆರಡು ಲಕ್ಷ ದ ಕಾರಿಗೆ ಈತ ಸಾಲ ತೆಗೆದದ್ದು ಬರೇ ಎರಡು ಲಕ್ಷ ಮಾತ್ರ, ಬಾಕಿ ಎಲ್ಲಾ ನಗದಿನಲ್ಲಿ ಪಾವತಿಸಿದ್ದಾನೆ. ನಿಮ್ಮ ಹೆಸರು ಹೇಳುತ್ತಲೇ ಬ್ಯಾಂಕ್ ಮೆನೇಜರ್ ಎಲ್ಲ ವಿಷಯಗಳನ್ನೂ ಅರುಹಿದ್ದರು. ನಿಮ್ಮ ಕಂಪೆನಿಯ ಮಾರ್ಕೇಟ್ ವ್ಯಾಲ್ಯೂ ತುಂಬಾ ಹೆಚ್ಚಿನದ್ದು. ಅದಲ್ಲದೇ ನಿಮ್ಮ ಕಂಪೆನಿಯ ಹೆಸರಿನಲ್ಲಿನ ಆತನ ಖಾತೆಯಲ್ಲಿಯೇ ಆತ ತನ್ನೆಲ್ಲಾ ವ್ಯವಹಾರ ಮಾಡಿದ್ದರಿಂದಲೂ, ಆತನ ಪಾನ್ ಕಾರ್ಡ್ ನಂಬರ್ ನಿಂದಲೂ ಬಾಕಿ ವಿಷಯ ಗೊತ್ತಾಗಿತ್ತು.
ಎಲ್ಲಾ ವ್ಯವಹಾರಗಳನ್ನೂ ಆತ ನಗದಿನಲ್ಲಿಯೇ ವ್ಯವಹಾರ ಮಾಡಿದ್ದರೂ, ನೀವು ಹೇಗೆ ಇಷ್ಟೆಲ್ಲಾ ವಿವರ ಸಂಗ್ರಹ ಮಾಡಿದಿರಿ..? ಮೇಜರ್
ಅದೇ ಸರ್ ನನಗೆ ಗೊತ್ತಾಗಲು ಮುಖ್ಯ ಕಾರಣ ಪಾನ್ ಕಾರ್ಡ್ ನಂಬರ್. ಜಾಸ್ತಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾದರೆ ಪಾನ್ ಕಾರ್ಡ್ ನಂಬರ್ ಕೊಡಲೇ ಬೇಕು, ಅದನ್ನು ಪರಿಶೀಲಿಸಿದಾಗ ಗೊತ್ತಾಗಿದ್ದದ್ದು ಪಾನ್ ನಂಬರ್ ರುದ್ರನದ್ದಲ್ಲ, ಆ ನಂಬರ್ ಹಿಂದೆ ಹೊರಟಾಗ ಹೊರಗೆ ಬಂತು ಪೀತಾಂಬರ್ ಹೆಸರು.
ಅದು ಸರಿ ಮಿಲಿಂಡ್, ನಿನಗೆ ಸಂಶಯ ಬಂದುದು ಹೇಗೆ?
ನಿಮ್ಮ ಚೇಂಬರ್ ನಲ್ಲಿದ್ದ ವಿಡಿಯೋ ಸರ್,
ಅದನ್ನ ನಿನ್ನ ಜತೆ ನಾನೂ ಕನ್ಯಾಲ್ ನೋಡಿದ್ದೆವಲ್ಲ, ಅದರಲ್ಲಿ ನಿನಗೇನು ಪುರಾವೆ ದೊರಕಿತ್ತು..?
ನಡೆಯಿರಿ ಸರ್ ನಿಮ್ಮ ರೂಮಿನಲ್ಲೇ ಕಾಫಿ ಕುಡಿಯುತ್ತ ಕೇಳೋಣ, ಅಲ್ಲಲ್ಲ ನೋಡೋಣ.
ದೊಡ್ಡ ಪರದೆಯ ಮೇಲೆ ಪುನಃ ಅಂದಿನ ದೃಶ್ಯಗಳನ್ನು ತೋರಿಸಲಾಯ್ತು, ಎರಡೂ ಕೋನಗಳಿಂದ ತೆಗೆದ ಕ್ಯಾಮೆರಾಗಳಿಂದ.
ಪುನ ದಿಗಂಬರ್ ತನ್ನ ಪೆನ್ನು ತೆಗೆದು ಬರೆದು ಮೇಜರಿಗೆ ಕೊಟ್ಟಲ್ಲಿಯವರೆಗೆ...
ಗೊತ್ತಾಯ್ತಾ ಸರ್..
ಇಲ್ಲವಲ್ಲ....
ಈಗ ನೋಡಿ ಸರ್ ಎರಡೂ ಕಡೆಯ ದೃಶ್ಯ.
ಐದನೆಯ ಕಂಪೆನಿಯ ಭಾಗೀದಾರ ತನ್ನ ಕೊನೆಯ ಕೋಟ್ ಕೊಡುವ ಮೊದಲಿನ ದೃಶ್ಯದಲ್ಲಿ
ದಿಗಂಬರ್ ಮೇಜರ್ ಕಡೆಯಿಂದ ನಿಧಾನವಾಗಿ ರುದ್ರನ ಕಡೆ ನೋಡುವಾಗ
ಮೇಜಿನ ಮೇಲಿಟ್ಟಿದ್ದ ರುದ್ರನ ಎಡ ಹಿಂಗೈ ಮೇಲೆ ಇಟ್ಟಿದ್ದ ಬಲಗೈ. ಮತ್ತು ನೋಡ ನೋಡುತ್ತಿದ್ದಂತೆ ಅದರ ಮೇಲೆಯೇ ಮಡಚಿಟ್ಟ ಆತನ ಬಲ ಗೈಯ ಹೆಬ್ಬೆಟ್ಟು ಮತ್ತು ಕಿರಿ ಬೆರಳು -ಎರಡೂ ಮಡಿಸಿಕೊಂಡವು.
ಇದಾದ ಎರಡನೇ ನಿಮಿಷದಲ್ಲಿ ಮೇಜರ್ ಕೈಗೆ ಐದನೆಯ ಕಂಪೆನಿಯ ದಿಗಂಬರನ ಟೆಂಡರ್ ಬಂದಿದ್ದು ಮೂರು ಪರ್ಸೆಂಟ್ ಕಡಿಮೆಯಾಗಿ.
ಅರ್ಥವಾಯ್ತೇ..? ಎಂದ ನಗುತ್ತಾ ಮಿಲಿಂಡ್
"ಅಸಾಧ್ಯವಪ್ಪಾ ನೀನು" ಎಂದರು ಅವನೆಡೆ ಹೆಮ್ಮೆಯ ನೋಟ ಬೀರುತ್ತಾ ಮೇಜರ್ ವಿಶ್ವನಾಥ್.
Rating
Comments
ಗೋಪಿನಾಥ ರವರಿಗೆ ವಂದನೆಗಳು
ಗೋಪಿನಾಥ ರವರಿಗೆ ವಂದನೆಗಳು
" ಆ ಮೂರು ಬೆರಳುಗಳು " ಒಂದು ಕುತೂಹಲಕಾರಿ ಕಥಾನಕ, ಬರವಣಿಗೆಯಲ್ಲಿ ಒಂದು ತರಹದ ಲವಲವಿಕೆ ಮತ್ತು ಓಘವಿದೆ. ಧನ್ಯವಾದಗಳು.
In reply to ಗೋಪಿನಾಥ ರವರಿಗೆ ವಂದನೆಗಳು by H A Patil
ಪಾಟೀಲರೇ
ಪಾಟೀಲರೇ
ನಿಮ್ಮ ಉತ್ಸಾಹ ಭರಿತ ಪ್ರೋತ್ಸಾಹದ ನುಡಿಗಳಿಗೆ ಶರಣು
In reply to ಪಾಟೀಲರೇ by gopinatha
ಕುತೂಹಲಕಾರಿಯಾಗಿತ್ತು ಆ ಮೂರು
ಕುತೂಹಲಕಾರಿಯಾಗಿತ್ತು ಆ ಮೂರು ಬೆರಳುಗಳು. ಬರಹ ಚೆನ್ನಾಗಿದೆ. ಅಭಿನಂದನೆಗಳು.
In reply to ಕುತೂಹಲಕಾರಿಯಾಗಿತ್ತು ಆ ಮೂರು by ಮಮತಾ ಕಾಪು
ನಿಮ್ಮ ಪ್ರೋತ್ಸಾಹದಾಯಕ
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಶರಣು ಮಮತಾ ಆವರೇ
ಕುತೂಹಲಕಾರಿಯಾಗಿದೆ, ಚೆನ್ನಾಗಿದೆ.
ಕುತೂಹಲಕಾರಿಯಾಗಿದೆ, ಚೆನ್ನಾಗಿದೆ.
In reply to ಕುತೂಹಲಕಾರಿಯಾಗಿದೆ, ಚೆನ್ನಾಗಿದೆ. by kavinagaraj
ಕವಿಯವರೇ ನಿಮ್ಮ ಮೆಚ್ಚುಗೆಗೆ
ಕವಿಯವರೇ ನಿಮ್ಮ ಮೆಚ್ಚುಗೆಗೆ ಧನ್ಯ