ಪ್ರಕಟಣೆ: ಪ್ರಳಯ ೨೦೧೨

Submitted by sudatta on Fri, 11/30/2012 - 08:41

ಇಂದ,
        ಹವಾಮಾನ ಹಾಗೂ ಪ್ರಳಯ ಇಲಾಖೆ
        ವಿಶ್ವಸಂಸ್ಥೆ

                                         ಸಾರ್ವಜನಿಕರ ಗಮನಕ್ಕೆ

ಮಾನ್ಯರೇ,
ಎಲ್ಲರಿಗೂ ತಿಳಿದಿರುವಂತೆ ಡಿಸೆಂಬರ್ ೨೧ - ೨೦೧೨ಕ್ಕೆ ವಿಶ್ವ ಪ್ರಳಯ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಈ ಕಾರ್ಯಕ್ರಮವನ್ನು ಅನಿರ್ದಿಷ್ಟ ಕಾಲ ಮುಂದೂಡಬೇಕಾಗಿ ಬಂದಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಈ ಕಾರ್ಯಕ್ರಮವನ್ನು ಆದಷ್ಟೂ ಬೇಗ ಮತ್ತೊಂದು ದಿನಾಂಕದಲ್ಲಿ ನಡೆಸಲಾಗುವುದು. ಆದರೆ ಕೋಟ್ಯಾಂತರ ಜನರು ಕಾತುರದಿಂದ ಕಾದಿರುವ ಈ ಪ್ರಳಯ ಬೇಗ ನಡೆಯಲು ನಿಮ್ಮೆಲ್ಲರ ಸಹಕಾರ ಅತಿ ಅವಶ್ಯ. ಈ ಕೆಳಕಂಡ ಸಲಹೆ-ಸೂಚನೆಗಳನ್ನು ತಪ್ಪದೆ ಪಾಲಿಸಬೇಕಾಗಿ ಎಲ್ಲರಲ್ಲಿ ಕಳಕಳಿಯ ಮನವಿ.

ಸಲಹೆ-ಸೂಚನೆ:
೧. ಮರಗಳನ್ನು ಆದಷ್ಟೂ ಬೇಗ ಕೆಡವಿರಿ 
೨. ನೆನಪಿರಲಿ: ಅರಣ್ಯಗಳು ನಗರಗಳ ಬೆಳವಣಿಗೆಗೆ ಮಾರಕ. ಮರಗಳನ್ನು ಬೇಗ ಕೆಡವಿದಲ್ಲಿ ಅರಣ್ಯಗಳ ನಾಶ ಅತಿ ಶೀಘ್ರದಲ್ಲೇ ಆಗುವುದು.
೩. ನಿಮ್ಮ ಸುತ್ತಲಿನ ಪರಿಸರವನ್ನು ಆದಷ್ಟೂ ಮಾಲಿನ್ಯಗೊಳಿಸಿ. ಪ್ಲಾಸ್ಟಿಕ್ ಪದಾರ್ಥಗಳಿಂದ ಮಾಲಿನ್ಯಗೊಲಿಸಿದಲ್ಲಿ ಇನ್ನೂ ಉತ್ತಮ.
೪. ಪೆಟ್ರೋಲ್ ಬೆಲೆ ಜಾಸ್ತಿ ಆಯಿತೆಂದು ಚಿಂತಿಸಬೇಡಿ. ಎಷ್ಟಿದ್ದರೂ ಪ್ರಳಯ ಸನಿಹವೇ. ಹೆಚ್ಚು ಹೆಚ್ಚು ಪೆಟ್ರೋಲ್ ಅಥವಾ ಡೀಸೆಲ್ ಬಳಸಿ. ಎಲ್ಲಿಗೂ ನಡೆದು ಓಡಾಡಬೇಡಿ.

ಗಮನಿಸಿ:
೧. ಅಲ್ಲಿಯವರೆಗೆ ನಿಮ್ಮ ಸಾಲಗಳಿಗೆ ನೀವೇ ಜವಾಬ್ದಾರರು. ಸ್ನೇಹಿತರ ಸಾಲಗಳನ್ನು ಮರೆಯದೆ ತೀರಿಸಿ 
೨.  ಬಂಗಾರದ ಖರೀದಿಯನ್ನು ಮುಂದೂಡದಿರಿ. ನೆನಪಿರಲಿ: ಎಂತಹ ಪ್ರವಾಹ-ಪ್ರಳಯಗಳಲ್ಲೂ ಚಿನ್ನ ಹೊಳೆಯುತ್ತಲೇ ಇರುತ್ತದೆ
೩. ಶಸ್ತ್ರಚಿಕಿತ್ಸೆ ಇತ್ಯಾದಿಗಳನ್ನು ಮುಂದೂಡದಿರಿ. ಆರೋಗ್ಯಶಾಲಿಗಳಾಗಿ ಪ್ರಳಯವನ್ನು ಆನಂದಿಸಿ
೪. ಕೊನೆಯ ಗಳಿಗೆಯಲ್ಲಿ ನಿಮ್ಮ ಪರವಾಗಿ, ನಿಮ್ಮ ಪಾಪ ಪರಿಹಾರ್ಥವಾಗಿ ಪೂಜೆ ಮಾಡಲು ಜ್ಯೋತಿಷಿ ಹಾಗೂ ಸ್ವಾಮೀಜಿಗಳ ದಂಡೇ  ಕಾದಿದೆ. ಹಾಗಾಗಿ ಜ್ಯೋತಿಷಿ ಹಾಗೂ ಸ್ವಾಮೀಜಿಗಳ ಧನಲಾಭಕ್ಕೆ ನೀವು ಕಾರಣರಾದಲ್ಲಿ, ನೀವು ಪ್ರಳಯದ ಸಮಯದವರೆಗೂ ಯಾವುದೇ ಅಂಜಿಕೆಯಿಲ್ಲದೆ ನಿಮ್ಮ ಪಾಪಕಾರ್ಯಗಳನ್ನು ಮುಂದುವರಿಸಬಹುದು.

ನೆಮ್ಮದಿಯಾಗಿ ಪ್ರಳಯವನ್ನು ಮುಂದಿನ ಒಂದು ದಿನಾಂಕದಲ್ಲಿ ಆನಂದಿಸುತ್ತೀರೆಂದು  ಆಶಿಸುವ
 - ವಿಶ್ವಸಂಸ್ಥೆ