ರಂಗು ರಂಗಿನ ಮದರಂಗಿ

ರಂಗು ರಂಗಿನ ಮದರಂಗಿ

ಶುಭ ಸಮಾರಂಭಗಳಲ್ಲಿ ತಮ್ಮ ಕೈಗಳನ್ನು ಚಿತ್ತಾಕರ್ಷಕ ಚಿತ್ತಾರಗಳಿಂದ ಅಲಂಕರಿಸಿಕೊಳ್ಳುವುದೆಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಹರ್ಷ. ಅನಾದಿ ಕಾಲದಿಂದಲೂ ಮದರಂಗಿ ಅಥವಾ ಮೆಹಂದಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡೇ ಬಂದಿದೆ. ವಿನ್ಯಾಸ, ಶೈಲಿ, ಆಚರಣೆಗಳು ಬದಲಾಗಿವೆಯೇ ಹೊರತು ಮೆಹಂದಿ ಸಂಭ್ರಮ ಬದಲಾಗಿಲ್ಲ.
ಮದರಂಗಿ ಶಾಸ್ತ್ರ:
ಹೆಚ್ಚಿನ ಸಮುದಾಯದ ಮದುವೆ ಸಮಾರಂಭಗಳಲ್ಲಿ ಮದರಂಗಿ ಶಾಸ್ತ್ರ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಮದುವೆಯ ಮುನ್ನಾ ದಿನ ಕುಟುಂಬದ ಹಿರಿಯರೆಲ್ಲಾ ಗಂಡು ಹಾಗೂ ಹೆಣ್ಣಿನ ಮನೆಯಲ್ಲಿ ಒಟ್ಟಾಗಿ ಸೇರಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು. ನಂತರ ಮದುವೆಯ ಹೆಣ್ಣು ಅಥವಾ ಗಂಡನ್ನು ಮಣೆಮೇಲೆ ಕೂರಿಸಿ ಅರಶಿನ ಎಣ್ಣೆ ಸ್ನಾನ ಮಾಡಿಸುವುದು ಸಂಪ್ರದಾಯ. ತುಸು ಆಧುನಿಕತೆಯ ಸ್ಪರ್ಶವಾಗಿದೆಯೇ ವಿನ: ಉಳಿದವೆಲ್ಲವೂ ಸಂಪ್ರದಾಯವೇ. ನಂತರ ಮಡಿಯುಟ್ಟು ಮೆಹಂದಿಗೆ ಕುಳಿತರೆಂದರೆ ಕೈ ಕಾಲುಗಳನ್ನು ಶೃಂಗರಿಸಿ ಮುಗಿಸುವವರೆಗೂ ಏಳುವಂತಿಲ್ಲ. ಮದುಮಕ್ಕಳ ಭಾವ ಅಥವಾ ನಾದಿನಿಯರಿಗೆ ಈ ಜವಾಬ್ದಾರಿ. ನವ ಜೀವನದ ಹೊಸ್ತಿಲಲ್ಲಿ ನಿಂತಿರುವ ನವಜೋಡಿಗಳ ಮನದಲ್ಲಿ ರಂಗು ರಂಗಿನ ಚಿತ್ತಾರ ಮೂಡಲು ಅಣಿಗೊಳಿಸುವ ಸಮಯ. ಮನೆಯಲ್ಲಿ ಸೇರಿದ ಬಂಧುಗಳಿಗೆ ಅಂದು ಸಂಭ್ರಮವೋ ಸಂಭ್ರಮ. ಹಿಂದೆ ಸಂಪ್ರದಾಯದ ಹಾಡುಗಳಿಗೆ ಎಲ್ಲರೂ ಹೆಜ್ಜೆ ಹಾಕಿ ನರ್ತಿಸುತ್ತಿದ್ದರು. ಇಂದು ಅವುಗಳ ಸ್ಥಾನವನ್ನು ಸಿನಿಮಾ ಹಾಡು, ಡಿಜೆ, ಸಿನಿಮಾ ನೃತ್ಯಗಳು ಆವರಿಸಿವೆ. ಅಲ್ಲದೆ ಮದುವೆ ಹೆಣ್ಣಿನ ಕೈ ಮೆಹಂದಿ ತುಂಬಾ ಕೆಂಪಾದರೆ, ಗಂಡನಲ್ಲಿ ಅತಿಯಾದ ಪ್ರೀತಿ ಎಂಬ ನಂಬಿಕೆಯೂ ಇದೆ. ಆಗಮಿಸಿದ ಬಂಧುಗಳಿಗೆ ಹಬ್ಬದೂಟವಾದರೆ ಮದುಮಕ್ಕಳಿಗೆ ಅಂದಿನಿಂದ ಮರುದಿನದವರೆಗೆ ಫಲಾಹಾರದ ಆತಿಥ್ಯ. ಮದುವೆ ಮುಗಿದ ಬಳಿಕವೇ ಊಟ.
ಆಧುನಿಕತೆಯ ಮೆಹಂದಿ:
ಹಿಂದೆ ಮದರಂಗಿ(ಮೆಹಂದಿ) ಎಲೆಯನ್ನು ಚೆನ್ನಾಗಿ ಅರೆದು ತೆಂಗಿನಗರಿ ಕಡ್ಡಿಯಲ್ಲಿ ತಮಗೆ ಬೇಕಾದ ಹಾಗೆ ಚುಕ್ಕಿಗಳನ್ನೋ, ರಂಗೋಲಿಗಳನ್ನೋ ತಮ್ಮ ಕೈಯಲ್ಲಿ ಬಿಡಿಸಿಕೊಳ್ಳುತ್ತಿದ್ದರು. ಈ ಎಲೆಯಿಂದ ಹಳದಿ ಮಿಶ್ರಿತ ಕೆಂಪು ಬಣ್ಣ ಬರುವುದರಿಂದ ಅದನ್ನು ಕಡುಕೆಂಪು ಬಣ್ಣವಾಗಿಸಲು ಚಹಾಪುಡಿಯನ್ನು ಬೆರೆಸಿ ಅರೆಯುತ್ತಿದ್ದರು. ಆದರೆ ಇಂದು ಅವುಗಳ ಬದಲು ಮಾರುಕಟ್ಟೆಯಲ್ಲಿ ಸಿದ್ಧವಾದ ಮೆಹಂದಿ ಕೋನ್(ಟ್ಯೂಬ್)ಗಳು ಜನರಲ್ಲಿ ಹೆಚ್ಚು ಉಪಯೋಗವಾಗುತ್ತಿವೆ. ಮದುರಂಗಿ ಎಲೆಯನ್ನು ಕೊಯ್ದು ಅರೆಯುವಷ್ಟು ಸಮಯ ಯಾರಿಗಿದೆ ಹೇಳಿ? ಇದ್ದರೂ ಸಿದ್ದಪಡಿಸಿರುವ ವಸ್ತು ಸಿಗುತ್ತಿರುವಾಗ ಅವುಗಳನ್ನು ತಯಾರಿಮಾಡಿಕೊಳ್ಳುವಷ್ಟು ತಾಳ್ಮೆ ನಮ್ಮಲ್ಲಿದೆಯೇ? ಈ ಟ್ಯೂಬ್‌ಗಳು ಸಾಮಾನ್ಯದವೇನಲ್ಲ. ಹಲವಾರು ರಾಸಾಯನಿಕಗಳಿಂದ ತಯಾರಿಸಿದ ಇವುಗಳನ್ನು ಹಚ್ಚಿಕೊಂಡ ಕೆಲವೇ ಕ್ಷಣಗಳಲ್ಲಿ ಕೈ ಬಣ್ಣ ಕಡುಕೆಂಪು ಬಣ್ಣಕ್ಕೆ ತಿರುಗುವುದು. ಆರೋಗ್ಯದ ದೃಷ್ಟಿಯಿಂದ ಇವುಗಳು ಒಳ್ಳೆಯದಲ್ಲ. ಆದರೆ ಎಲ್ಲವೂ ಫ್ಯಾಶನ್‌ಗಾಗಿ! ಇತ್ತೀಚೆಗಂತೂ ಧಾರ್ಮಿಕ ಹಬ್ಬವೊಂದರ ಸಂದರ್ಭದಲ್ಲಿ ಮೆಹಂದಿ ಹಚ್ಚಿಕೊಂಡ ಹಲವಾರು ಮಂದಿಯ ಕೈ ಅಲರ್ಜಿಯಾಗಿ, ಹಬ್ಬದೂಟವನ್ನು ಸವಿಯುವಂತಾಗದೆ ಆಸ್ಪತ್ರೆಗಳಿಗೆ ಹೋಗಬೇಕಾಗಿದ್ದನ್ನು ನಾವು ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ನೋಡಿದ್ದೇವೆ. ಆದರೂ ಶುಭಸೂಚಕ ಮೆಹಂದಿ ವ್ಯಾಮೋಹವನ್ನು ಬಿಡಲು ಸಾಧ್ಯವೇ?
ಮಾರುಕಟ್ಟೆಯಲ್ಲಿ ಸಿದ್ದಪಡಿಸಿದ ಮೆಹಂದಿಯನ್ನು ಹಚ್ಚಿಕೊಂಡು ಅನಾರೋಗ್ಯಕ್ಕೆ ಆಹ್ವಾನ ನೀಡಿಕೊಳ್ಳುವ ಬದಲು ಮನೆಯಲ್ಲೇ ತಯಾರಿಸಿದ ಮೆಹಂದಿಯನ್ನು ಹಚ್ಚಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಅದೇ ಚೆಂದವೂ ಕೂಡ. ತುಂಬಾ ಕೆಂಪಗಿನ ಬಣ್ಣ ಹೊಂದದಿದ್ದರೂ, ಎಲೆಯನ್ನು ಅರೆಯುವಾಗ ಕೆಲವು ಸಾಮಾಗ್ರಿಗಳನ್ನು ಮಿಶ್ರಣ ಮಾಡಿ ಬಣ್ಣವನ್ನು ಕೆಂಪಾಗಿಸಿಕೊಳ್ಳಬಹುದು.
* ಮೆಹಂದಿ ಎಲೆಯನ್ನು ಅರೆಯುವಾಗ ಅದಕ್ಕೆ ಚಹಾ ಪುಡಿ ಮಿಶ್ರಣ ಮಾಡಿದರೆ ಬಣ್ಣ ಕೆಂಪಗಾಗುತ್ತದೆ.
* ನೀರಿನಲ್ಲಿ ಸಕ್ಕರೆಯನ್ನು ಕಲಸಿ ಆ ನೀರನ್ನು ಕೈಯಲ್ಲೇ ಒಣಗಿದ ಮೆಹಂದಿಗೆ ಆಗಾಗ ಸಿಂಪಡಿಸುತ್ತಿದ್ದರೆ ಕಡುಕೆಂಪು ಬಣ್ಣಕ್ಕೆ ತಿರುಗುತ್ತದೆ.
* ಮೆಹಂದಿ ಹೆಚ್ಚು ದಿನ ಉಳಿಯಬೇಕೇಂದರೆ ಆಗಾಗ ಕೈಯನ್ನು ನೀರಿನಲ್ಲಿ ಅದ್ದುವುದನ್ನು ಕಡಿಮೆ ಮಾಡಬೇಕು, ಯಾವುದೇ ಹುಳಿಯನ್ನು ಕೈಗೆ ತಾಗಿಸಬಾರದು.
* ಮೆಹಂದಿಯನ್ನು ತೊಳೆದ ನಂತರ ಕೊಬ್ಬರಿ ಎಣ್ಣೆಯನ್ನು ಕೈಗೆ ತಿಕ್ಕಿಕೊಂಡರೆ ಬಣ್ಣ ಕೆಂಪಾಗುತ್ತದೆ.
ಮೆಹಂದಿ ಎಲೆಯನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿಕೊಂಡರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಔಷದೀಯ ಗುಣವುಳ್ಳ ಈ ಮೆಹಂದಿಯು ದೇಹವನ್ನು ತಂಪಾಗಿಸುತ್ತದೆ.