ಫೆಬ್ರವರಿ 14

ಫೆಬ್ರವರಿ 14

ಸೂರ್ಯನ ಪ್ರಕಾಶಮಾನವಾದ ಕಿರಣಗಳು ಕಿಟಕಿಯ ಸರಳುಗಳನ್ನು ಭೇಧಿಸಿಕೊಂಡು ಬಂದು ಕಣ್ಣು ಚುಚ್ಚಿದಾಗಲೇ ಓಹ್...ಬೆಳಗಾಯಿತು ಗೊತ್ತಾಗಿದ್ದು. ಸೂರ್ಯನಿಗೆ ಅದೇನು ಆತುರವೋ ಗೊತ್ತಿಲ್ಲ, ಇಷ್ಟು ಬೇಗ ಎದ್ದು ಬಿಡುತ್ತಾನೆ. ಅಥವಾ ಅವನಿಗೂ ಯಾರಾದರೂ ಅಲಾರಂ ಇಟ್ಟಿರುತ್ತಾರ??!!. ಇಷ್ಟು ವರ್ಷದಿಂದ ಹೆಚ್ಚುಕಡಿಮೆ ಒಂದೇ ಸಮಯಕ್ಕೆ ಎದ್ದು ಬಿಡುತ್ತಾನೆ. ಒಂದು ದಿವಸವಾದರೂ ನಿಧಾನವಾಗಿ ಏಳಬಾರದ? ಹಾಗೆಂದು ದಿನವೂ ಅಂದುಕೊಳ್ಳುತ್ತೇನೆ...ಆದರೆ ಅವನು ಮಾತ್ರ ಬದಲಾಗಿಲ್ಲ. ಹೌದು ಕಾಲ ಬದಲಾಯಿತು, ಜನ ಬದಲಾದರು, ಜನರ ಮನಸುಗಳೂ ಬದಲಾಯಿತು. ಆದರೆ ಅವನು ಮಾತ್ರ ನಿಶ್ಚಲ.


ಎದ್ದು ಒಮ್ಮೆ ಸಮಯ ನೋಡಿದರೆ ಇನ್ನೂ ಎಂಟೂವರೆ ಘಂಟೆ ತೋರಿಸುತ್ತಿತ್ತು. ಕನ್ನಡಿಯ ಮುಂದೆ ಹೋಗಿ ನಿಂತರೆ ಕಣ್ಣುಗಳು ಹೆಡ್ ಲೈಟಿನ ಹಾಗೆ ಆಗಿದ್ದವು. ರಾತ್ರಿ ಕುಡಿದ ರಮ್ಮಿನ ಪ್ರಭಾವ ಅದಾಗಿತ್ತು. ನನ್ನ ಬಾಯಿ ನನಗೆ ವಾಕರಿಕೆ ತರಿಸುತ್ತಿತ್ತು. ಆದರೆ ಇದೇನು ಹೊಸದಲ್ಲ. ದಿನ ಬೆಳಿಗ್ಗಿನ ಕಥೆಯೇ ಅಲ್ಲವೇ?. ರೂಮಿನಲ್ಲಿ ನೋಡಿದರೆ ಅದೆಷ್ಟೋ ರುಂಡ ಕಳೆದುಕೊಂಡು ಬರೀ ಮುಂಡ ಮಾತ್ರ ಉಳಿಸಿಕೊಂಡು ಅನಾಥ ಶವಗಳಂತೆ ಬಿದ್ದಿದ್ದ ಸಿಗರೇಟಿನ ತುಂಡುಗಳು, ಬ್ರಾಂಡಿನ ವ್ಯತ್ಯಾಸವಿಲ್ಲದೆ ಅಣ್ಣ ತಮ್ಮಂದಿರಂತೆ ಒಂದೇ ಕಡೆ ಗುಂಪಾಗಿ ಬಿದ್ದಿದ್ದ ಖಾಲಿ ಬಾಟಲಿಗಳು...


ಇವೆಲ್ಲವನ್ನೂ ನೋಡಿದರೆ ಯಾರು ಬೇಕಾದರೂ ಆರಾಮಾಗಿ ಹೇಳಿಬಿಡಬಹುದಾಗಿತ್ತು. ಇದೊಂದು ಭಗ್ನ ಪ್ರೇಮಿಯ ರೂಮೆಂದು. ಮೊಬೈಲಿನಲ್ಲಿ ಡೇಟ್ ಫೆಬ್ರವರಿ 14 ಎಂದು ತೋರಿಸುತ್ತಿತ್ತು. ಇವತ್ತಿಗೆ ಸರಿಯಾಗಿ ಆರು ವರ್ಷ ಆಗಿತ್ತು ನನ್ನ ಲವ್ವಿಗೆ ಪೋಸ್ಟ್ ಮಾರ್ಟಂ ಆಗಿ. ಪ್ರತಿ ವರ್ಷ ಇದೆ ದಿನಾಂಕದಂದು ಕಾಲೇಜಿನ ಬಳಿ ಹೋಗುತ್ತಿದ್ದ ಅಭ್ಯಾಸ ಇಟ್ಟುಕೊಂಡಿದ್ದೇನೆ. ಅಲ್ಲಿಗೆ ಹೋದರೆ ಅವಳೇನು ಬರುವುದಿಲ್ಲ. ಆದರೆ ನೆನಪುಗಳು ಒಂದೆರೆಡು ದಿನಕ್ಕಾಗುವಷ್ಟು ಕಿಕ್ ಕೊಡುತ್ತದೆ ಎಂದು ಅಷ್ಟೇ. ಅಸಲಿಗೆ ಅವಳ ಅಮಲು ಇಳಿದಿದ್ದರೆ ಅಲ್ವ...


ಎರಡು ವಾರವಾಗಿತ್ತು ಶೇವ್ ಮಾಡಿ...ಮೊದಲಾಗಿದ್ದರೆ ವಾರಕ್ಕೆ ಎರಡು ದಿನ....ಅವಳಿಗೆ ಗಡ್ಡ ಎಂದರೆ ಆಗುತ್ತಿರಲಿಲ್ಲ...ಯಾವಾಗಲೂ ನೀಟ್ ಶೇವ್ ಇರಬೇಕು ಎನ್ನುತ್ತಿದ್ದಳು. ಸರಿ ಇವತ್ತು ಶೇವ್ ಮಾಡಿಕೊಳ್ಳೋಣ ಎಂದೆನಿಸಿ ಶೇವ್ ಮಾಡಿ ಸ್ನಾನ ಮಾಡಿ ರೆಡಿ ಆಗಿ ಕಾಲೇಜಿನ ಬಳಿ ಬಂದೆ. ಹೋದ ವರ್ಷಕ್ಕೂ ಇವಾಗಲೂ ಬಹಳಷ್ಟು ಬದಲಾವಣೆ ಆಗಿದೆ. ನನ್ನಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿರಲಿಲ್ಲ. ಒಂದೇ ಒಂದು ಎಂದರೆ ಹೋದ ವರ್ಷ ಇದ್ದ ಕಂಪನಿ ಬಿಟ್ಟು ಹೊಸ ಕಂಪನಿ ಸೇರಿದ್ದೇ ಅಷ್ಟೇ. ಅದೂ ನನಗಾಗಿ ಅಲ್ಲ....ಮನೆಯವರಿಗಾಗಿ...ಅಪ್ಪ ಅಮ್ಮನಿಗಾಗಿ.


ಆರು ವರ್ಷದ ಹಿಂದೆ ನಾವುಗಳು ಕುಳಿತು ಕೈಯಲ್ಲಿ ಸಿಗರೇಟ್ ಸೇದುತ್ತಾ ಹೋಗಿ ಬರುತ್ತಿದ್ದ ಹುಡುಗಿಯರನ್ನು ರೇಗಿಸುತ್ತಿದ್ದ ಕಟ್ಟೆ ಇದ್ದ ಜಾಗದಲ್ಲಿ ಈಗ ಸಣ್ಣದಾದ ಪಾರ್ಕೊಂದು ಬಂದಿದೆ. ಪಾರ್ಕು ಮುಂಚೆ ಏನಾದರೂ ಇದ್ದಿದ್ದರೆ...ಅಲ್ಲೇ ಒಂದು ಹೂ ಕಿತ್ತು ಅವಳಿಗೆ ಕೊಡುತ್ತಿದ್ದೆನೇನೋ...ಅದೇ ಕಟ್ಟೆಯ ಮೇಲೆ ಕುಳಿತಿದ್ದಾಗಲೇ ಅಲ್ಲವೇ ನನಗೂ ಅವಳಿಗೂ ಲವ್ ಆಗಿದ್ದು. ನನಗೆ ಇವತ್ತಿಗೂ ಅನುಮಾನ....ಅದು ಹೇಗೆ ಲವ್ವಾಯಿತೋ ಗೊತ್ತಿಲ್ಲ...ಇಬ್ಬರೂ ಒಬ್ಬರಿಗೊಬ್ಬರೂ ಹೇಳಿಕೊಂಡಿರಲಿಲ್ಲ..ಆದರೂ ಲವ್ವಾಗಿತ್ತು. ಅಲ್ಲಿಯವರೆಗೂ ಕಾಲೇಜಿನ ಆಂಗ್ರಿ ಯಂಗ್ ಮೆನ್ ಆಗಿದ್ದ ನಾನು ಅಂದಿನಿಂದ ಚಾಕಲೇಟ್ ಹೀರೋ ಆದೆ.


ಬ್ಲೇಡ್ ಕಾಣದ ಗಡ್ಡಕ್ಕೆ ವಾರಕ್ಕೆರಡು ಬಾರಿ ಬ್ಲೇಡ್ ಕಾಣುವ ಸೌಭಾಗ್ಯ ಒದಗಿಸಿದೆ. ಅವಳೆದುರಿಗೆ ಕೆಟ್ಟ ಕೆಲಸ ಮಾಡುವಂತಿರಲಿಲ್ಲ, ಅಂದರೆ ಕಟ್ಟೆಯ ಮೇಲೆ ಕುಳಿತು ಹುಡುಗಿಯರನ್ನು ರೇಗಿಸುವಂತಿಲ್ಲ,ಸಿಗರೇಟ್ ಸೇದುವಂತಿಲ್ಲ...ಅದೂ ಇದೂ ಏನೇನೋ ಕಂಡೀಷನ್ನು ಹಾಕಿದಳು. ಲವ್ವಲ್ಲಿ ಬಿದ್ದ ಮೇಲೆ ಇದೆಲ್ಲ ಮಾಮೂಲಿ ಎಂದು ಅವಳಿದ್ದಾಗ ಅದ್ಯಾವುದನ್ನೂ ಮಾಡುತ್ತಿರಲಿಲ್ಲ.


ಲವ್ವಲ್ಲಿ ಬಿದ್ದ ಪ್ರತಿಯೊಬ್ಬ ಪ್ರೇಮಿಗಳೂ ಅಂದುಕೊಳ್ಳುವಂತೆ ನಾವೂ ಅಂದುಕೊಂಡಿದ್ದೆವು. ನಮ್ಮ ಪ್ರೀತಿಯೇ ಶ್ರೇಷ್ಠ. ಉಳಿದೆಲ್ಲರದೂ ಬೂಟಾಟಿಕೆ ಪ್ರೀತಿ. ನಮ್ಮದು ನಿಷ್ಕಲ್ಮಷ ಪ್ರೀತಿ?? ಅದೂ ಇದೂ ಏನೇನೋ ಭಾವನೆಗಳು.ಇಬ್ಬರ ಧ್ಯೆ ಬದಲಾದ ಗ್ರೀಟಿಂಗುಗಳು,ಗಿಫ್ಟುಗಳು,ಸಂದೇಶಗಳು,ಮಿಸ್ಡ್ ಕಾಲುಗಳು,ಕಾಲುಗಳು,ಒಣ ಜಗಳಗಳು ಅದೆಷ್ಟೋ...ಅದೆಲ್ಲ ಒಂದು ಸವಿ ಸವಿ ನೆನಪಿನಂತೆ ಕಣ್ಣ ಮುಂದೆ ಹಾದು ಹೋದವು.


ಆಗ ಕಾಲೇಜಿನ ಎದುರುಗಡೆ ಇದ್ದ ಕಾಕಾ ಅಂಗಡಿ ಇದ್ದ ಜಾಗದಲ್ಲಿ ಈಗ ಅಗಲವಾದ ರಸ್ತೆ ಆಗಿದೆ. ಅದೇ ಕಾಕಾ ಅಂಗಡಿಯಲ್ಲಿ ಸಾಲದ ಲೆಕ್ಕದಲ್ಲಿ ಕುಡಿದ ಗಸಿ ಸಹಿತ ಟೀಗಳಿಗೆ ಲೆಕ್ಕವೇ ಇಲ್ಲ. ಅಲ್ಲಿ ಟೀ ಕುಡಿಯಲು ಕಳೆದ ಸಮಯವನ್ನು ಓದುವುದರಲ್ಲಿ ಕಳೆದಿದ್ದರೆ ಇಂದು ನೋ ಆಗಿರುತ್ತಿತ್ತು.ಹ್ಮ್ಮ್...


ಪುಳಿಯೋಗರೆಯಂತೆ ಘಮ ಘಮ ವಾಸನೆ ಬರುತ್ತಿದ್ದ ನಮ್ಮ ಪ್ರೇಮ, ಕಾಲ ಕಳೆದಂತೆ ಹಳಸಿದ ಪುಲಾವ್ ವಾಸನೆ ಬರತೊಡಗಿತು. ತಂಗಳನ್ನು ಎಷ್ಟೇ ಬಿಸಿ ಮಾಡಿದರೂ, ಫ್ರಿಜ್ಜಿನಲ್ಲಿ ಇಟ್ಟರೂ  ವಾಸನೆ ೂರ್ತಿಯಾಗಿ ಹೋಗುವುದಿಲ್ಲ.ಹಾಗೆಯೇ ಮ್ಮ ಪ್ರೀತಿ ಕೂಡ ಅಡ್ಡವಾಸನೆ ಹೊಡೆಯಲು ಶುರುವಾಯಿತು.ಮೊದಮೊದಲು ಜಗಳ ಶುರುಮಾಡಿದ್ದೆ ಅವಳುನಾನು ಬೇಡ ಎಂದರೂ  ಕಟ್ಟೆಯ ಮೇಲೆ ಕೂಡುತ್ತೀಯ, ಅಲ್ಲಿ ಕೂತು ಹುಡುಗಿಯರನ್ನು ರೇಗಿಸುತ್ತೀಯ? ನನ್ನ ಮಾತಿಗೆ ಬೆಲೆ ಇಲ್ಲವ? ಅದೂ ಇದೂ ಸಣ್ಣ ಪುಟ್ಟ ವಿಷಯಗಳಿಗೆ ುಚ್ಚಿಯಂತೆ?? ಆಡುತ್ತಿದ್ದಳು 


ನಾನೇನೆ ವಿವರಣೆ ಕೊಟ್ಟರೂ ಅವಳಿಗೆ ಮಾಧಾನವಾಗುತ್ತಿರಲಿಲ್ಲ. ಮುಂಚೆ ಅವಳ ಸ್ನೇಹಿತೆಯರ ಜೊತೆ ಮಾತಾಡಿದರೆ ಫ್ರೆಂಡ್ಲಿ ನೇಚರ್ ಎನ್ನುತ್ತಿದ್ದವಳು ಈಗ ಅದನ್ನೇ ಫ್ಲರ್ಟ್ ಎನ್ನಲು ಶುರು ಮಾಡಿದ್ದಳು.ಮುಂಚೆ ಗಂಟೆಗಟ್ಟಲೆ ಫೋನ್ ನಲ್ಲಿ ಮಾತಾಡುತ್ತಿದ್ದರೆ ಇನ್ನೂ ಸ್ವಲ್ಪ ಹೊತ್ತು ಮಾತಾಡು ಎನ್ನುತ್ತಿದ್ದವಳು ಈಚೀಚೆಗೆ ಹತ್ತು ನಿಮಿಷ ಆದರೆ ಸಾಕು ಫೋನ್ ಇಡುತ್ತೇನೆ ಎನ್ನುತ್ತಿದ್ದಳು.


ನಮ್ಮ ಕಾಲೇಜಿನ ಪಕ್ಕದಲ್ಲಿ ಆಗಷ್ಟೇ ಹೊಸದಾಗಿ ಒಂದು ಆಸ್ಪತ್ರೆ ಶುರುವಾಗಿತ್ತು. ಕೆಲವೇ ದಿನಗಳಲ್ಲಿ ನಾನು ಒಬ್ಬ ಪೇಶಂಟ್ ಆಗಿ ಅಲ್ಲಿ ಸೇರುತ್ತೇನೆ ಎಂದು ನಸಿನಲ್ಲೂ ಎಣಿಸಿರಲಿಲ್ಲ. ಇವಳ ಹುಚ್ಚಾಟ, ತಿರಸ್ಕಾರದಿಂದ ಬೇಸತ್ತು ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ಆಗ ಸ್ನೇಹಿತರೆಲ್ಲರೂ ಹೊತ್ತುಕೊಂಡು ಇದೆ ಆಸ್ಪತ್ರೆಯಲ್ಲಿ ಸೇರಿಸಿ ಟ್ರೀಟ್ಮೆಂಟ್ ಕೊಡಿಸಿದ್ದರು. ಅಪ್ಪ ಅಮ್ಮನಿಗೆ ವಿಷಯ ತಿಳಿಸಬೇಡಿ ಎಂದು ನಾನೇ ತಿಳಿಸಿದ್ದೆ. ಅವಳು ಒಂದು ದಿನವೂ ಆಸ್ಪತ್ರೆಗೆ ಬರಲಿಲ್ಲ.ಆಗಲೇ ತಿಳಿಯಿತು ಅವಳು ನಮ್ಮ ್ರೇಮಕ್ಕೆ ಘಟಶ್ರಾದ್ಧ ಮಾಡಲು ನಿರ್ಧರಿಸಿದ್ದಾಳೆ ಎಂದು.


ಬಲ್ಲ ಮೂಲಗಳಿಂದ ತಿಳಿದು ಬಂದ ಮಾಹಿತಿ ಏನೆಂದರೆ ಅವಳು ಇನ್ನೊಬ್ಬನನ್ನು ಗಾಢವಾಗಿ ಪ್ರೀತಿಸುತ್ತಿದ್ದಾಳೆ ಎಂದು.ಹಾಗಾದರೆ ಅವಳು ಇಷ್ಟು ದಿವಸ ನನ್ನೊಡನೆ ಮಾಡಿದ ನಾಟಕಕ್ಕೆ ಪ್ರೀತಿ ಎಂಬ ಹೆಸರಿಟ್ಟಿದ್ದಳ ?? ಒಟ್ಟಿನಲ್ಲಿ ನನ್ನ ಪ್ರೇಮಕ್ಕೆ ಅಂತ್ ಸಂಸ್ಕಾರ ಆಗಿತ್ತು. ಅವತ್ತೇ ಕೊನೆ...ನನ್ನ ಪ್ರೀತಿಯನ್ನು ಕೊಂದ ಕೊಲೆಗಾತಿಯನ್ನು ನಾನು ಮತ್ತೆಂದೂ ನೋಡಲಿಲ್ಲ. ಮನಸಿನಲ್ಲಿ ಇಷ್ಟೊಂದು ಹಗೆ ದ್ವೇಷ ದ್ದರೂ ಪ್ರತಿ ಫೆಬ್ರವರಿ 14 ಕ್ಕೆ ಕಾಲೇಜಿನ ಬಳಿ ಏಕೆ ಬರುತ್ತಿದ್ದೇನೆ?


ಏಕೆಂದರೆ ನಮ್ಮ ಪ್ರೇಮ ಶುರುವಾದ ನಂತರ ಬಂದ ಫೆಬ್ರವರಿ 14ಕ್ಕೆ ಅವಳು ಮೊಟ್ಟ ಮೊದಲ ಬಾರಿಗೆ ನನಗೆ ಚುಂಬಿಸಿದ್ದಳು.ಅವಳ ನೆನಪುಗಳು ಮಾಸಿದ್ದರೂ ಅವಳ ಬೆಚ್ಚನೆಯ ಉಸಿರು...ನನ್ನ ಅಧರದ ಮೇಲೆ ಇನ್ನೂ ಹೊಗೆಯಾಡುತ್ತಿರುವ  ಚುಂಬನದ ಬಿಸಿ ಮಾತ್ರ ಇಂದಿಗೂ ಹಾಗೆ ಇದೆ. ಅದೇ ನನ್ನನ್ನೂ ಇಂದಿಗೂ ಜೀವಂತವಾಗಿ ಇಟ್ಟಿರುವುದು. ಆದರೆ ಮತ್ತೆಂದೂ ಸಾಯುವ ಪ್ರಯತ್ನ ಮಾಡಲಿಲ್ಲ. ಅವಳಿಗಾಗಿ ನನ್ನನ್ನೇ ನಂಬಿಕೊಂಡಿರುವ ಅಪ್ಪ ಅಮ್ಮನಿಗೆ ನಾನೇಕೆ ದ್ರೋಹ ಮಾಡಬೇಕು? ಅವರ ಕಣ್ಣೆದುರಿಗೆ ನಾನಿದ್ದು...ನನ್ ಕಷ್ಟ ನೋಡಿ ಅವರು ನೋವು ಪಡುವುದು ಬೇಡ ಎಂದುಕೊಂಡು..ದೂರದ ಊರಿನಲ್ಲಿ....ಅದೇ ನನ್ನ ಪ್ರೀತಿಯ ಜನನ ಮರಣವಾದ ಊರಿನಲ್ಲೇ...

Rating
No votes yet

Comments

Submitted by sasi.hebbar Mon, 12/03/2012 - 17:04

ಜಯಂತ್, . . . . .. . . ಕಾಲುಗಳು, "ಮಿಸ್ಡ್" ಕಾಲುಗಳು, "ಇನಕಮಿಂಗ್" ಕಾಲುಗಳೂ, . . .. ಗಂಟೆ ಗಟ್ಟಲೆ ಮಾತನಾಡಿದ್ದು. . . .. . ಎಲ್ಲಾ ನೀರಿನಲ್ಲಿ ಮಾಡಿದ ಹೋಮದಂತೆ ಆಯ್ತಲ್ಲಾ! ಫೆ. 14ಕ್ಕೆ ಇನ್ನೂ ಎರಡು ತಿಂಗಳು ಇದೆಯಲ್ಲಾ, ಆಗಲೇ, "ಪ್ರೇಮಿಗಳ ದಿನ" ನೆನಪಿಸಿ, ಮನದ ಒಂದು ಮೂಲೆಯಲ್ಲಿ ಬೆಚ್ಚನೆಯ ಝಳಕನ್ನು, ಇನ್ನೊಂದು ಮೂಲೆಯಲ್ಲಿ ಬೇಸರದ ಛಳಕನ್ನೂ ಎಬ್ಬಿಸಿದ್ದೀರಾ! ಬರಹ ಚೆನ್ನಾಗಿದೆ.