ಶಾಂತಾನಿ ಸವಿನೆನಪು

ಶಾಂತಾನಿ ಸವಿನೆನಪು


ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳವು. ಒಂದೊಂದು ಬೆಂಚಿನಲ್ಲಿ ೫-೬ ಮಂದಿ ಒತ್ತಾಗಿ ಕುಳಿತುಕೊಳ್ಳುತ್ತಿದ್ದೆವು. ಪರೀಕ್ಷಾ ದಿನಗಳಲ್ಲಿ ಮಾತ್ರ ಗೋಡೆಯ ಮೂಲೆ ಮೂಲೆಯಲ್ಲಿ ನಮ್ಮ ಆಸನ ವ್ಯವಸ್ಥೆ ಮಾಡುತ್ತಿದ್ದವರು ಗುರುಗಳು. ಆಗ ನಾವು ಮಾಡುತ್ತಿದ್ದ ಕೀಟಲೆಗಳಿಗೇನೂ ಕಮ್ಮಿಯಿಲ್ಲ. ಬಾಲ್ಯವೇ ಹಾಗೆ ಯಾರಿಗಾದರೂ ಕೀಟಲೆ ಮಾಡಿ ಸಂತೋಷ ಪಡುವಂತಹ ಕಾಲ. ಅದರಲ್ಲೂ ತುಂಟ ಮಕ್ಕಳೆಂದರೆ ಯಾರೂ ಏನೂ ಕೇಳುವಂತಿಲ್ಲ. ಯಾರ ಮಾತನ್ನೂ ಅವು ಕೇಳವು. ಹೀಗೆ ಚಳಿಗಾಲದ ಒಂದು ದಿನ, ನಮ್ಮ ತರಗತಿಯಲ್ಲಿ ಎಂದಿನಂತೆ ಶಿಕ್ಷಕರೊಬ್ಬರು ಪಾಠ ಮಾಡುತ್ತಿದ್ದರು. ಕನ್ನಡದ ಪದ್ಯವೊಂದನ್ನು ರಾಗವಾಗಿ ಹಾಡುತ್ತಾ ಮಧ್ಯ-ಮಧ್ಯದಲ್ಲಿ ಅವುಗಳ ವಿವರಣೆಯನ್ನು ನೀಡುತ್ತಿದ್ದರು.
ಕೊರೆಯುವ ಚಳಿಯಲ್ಲಿ ಯಾರಿಗಾದರೂ ಪಾಠ ಕೇಳುವ ಮನಸ್ಸು ಇರುತ್ತದೆ ಹೇಳಿ. ಗುರುಗಳಿಗೆ ಹೆದರಿ ಮುಂದಿನ ಎರಡು ಬೆಂಚಿನ ವಿದ್ಯಾರ್ಥಿಗಳು ಮಾತ್ರ ಶಿಸ್ತಾಗಿ ಕುಳಿತುಕೊಳ್ಳುತ್ತಿದ್ದರು. ಅದು ಅವರಿಗೆ ಅನಿವಾರ್ಯವೂ ಆಗಿತ್ತು.

ಗುರುಗಳು ಎಷ್ಟೇ ಸರಳವಾಗಿ ವಿವರಣೆಯನ್ನು ನೀಡುತ್ತಿದ್ದರೂ ಮನಸ್ಸು ಮಾತ್ರ ಮನೆಯ ಕಡೆಗೆ ವಾಲುತ್ತಿತ್ತು. ಕಾರಣ ಈ ಚಳಿಯಲ್ಲಿ ಬೆಚ್ಚಗೆ ತಿನ್ನಲು ಅಮ್ಮ ಏನನ್ನು ಮಾಡಿರಬಹುದು? ಎಂಬ ಯೋಚನೆ. ಹೀಗೆ ಆಲೋಚಿಸುತ್ತಿರುವಾಗಲೇ ಗೆಳತಿಯರೆಲ್ಲಾ ಏನನ್ನೋ ಕೈಯಿಂದ ಕೈಗೆ ಹಂಚಿಕೊಳ್ಳುತ್ತಿದ್ದ  ಶಬ್ದವಾಗಿ ವಾಸ್ತವದ ಅರಿವಾದದ್ದು. ನೋಡನೋಡುತ್ತಿದ್ದಂತೆಯೇ ನನ್ನ ಕೈಗೂ ಅದು ತಲುಪಿತು. ಚಳಿಗಾಲದಲ್ಲಿ ತಿನ್ನಲೆಂದು ಬೇಸಿಗೆಯಲ್ಲಿ ಚೆನ್ನಾಗಿ ಬೇಯಿಸಿ ಒಣಗಿಸಿ ಇಟ್ಟ ಹಲಸಿನಹಣ್ಣಿನ ಬೀಜ. ಆಡುಭಾಷೆಯಲ್ಲಿ ಶಾಂತಾನಿ ಎಂಬ ಹೆಸರು ಅದಕ್ಕೆ. ತುಂಬಾ ಗಟ್ಟಿಯಾದ ಶಾಂತನಿಯನ್ನು ಅಗಿಯಲು ಸಮಯಗಳೇ ಬೇಕಾಗುತ್ತಿತ್ತು, ಆದ್ದರಿಂದ ಚಳಗಾಲದಲ್ಲಿ ತಿನ್ನಲು ಇದು ಅತ್ಯಂತ ಸೂಕ್ತ. ಹಳ್ಳಿಯಾದ್ದರಿಂದ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಚಳಿಗಾಲದ ತಿಂಡಿಗಳು ಪೂರ್ವತಯಾರಿಯಾಗಿರುತ್ತಿದ್ದವು. ಹಪ್ಪಳ,ಸಂಡಿಗೆ, ಶಾಂತಾನಿ, ಗೆಣಸಿನ ತಿಂಡಿಗಳು ಇತ್ಯಾದಿ. ಕೊನೆಯ ಬೆಂಚಿನಿಂದ ಎಲ್ಲರಿಗೂ ಪಾಸಾಗಿದ್ದ ಶಾಂತಾನಿಗೆ ಮೊದಲೆರಡು ಬೆಂಚನ್ನು ತಲುಪಲು ಸಾಧ್ಯವಾಗಲೇ ಇಲ್ಲ. ಕಾರಣ ಗುರುಗಳಿಗೆ ಸಿಕ್ಕಿಬೀಳುವ ಭಯ. ಹಾಗಾಗಿ ಅಲ್ಲೇ ನಿಂತಿತು ಶಾಂತಾನಿ ಸರಬರಾಜು.

ಕೈಯಲ್ಲೇ ಹಿಡಿದಿದ್ದ ಶಾಂತಾನಿಯ ಸಿಪ್ಪೆಯನ್ನು ಮೆಲ್ಲಗೆ ಶಬ್ದ ಜೋರಾಗದಂತೆ ತೆಗೆದು ಬಾಯಿಗೆ ಹಾಕಿಕೊಳ್ಳುವ ಸರದಿ ಈಗ. ಕಷ್ಟಪಟ್ಟು ಗುರುಗಳ ಕಣ್ಣುತಪ್ಪಿಸಿ ಹೇಗೋ ಬಾಯೊಳಗೆ ಸೇರಿಕೊಂಡಿತು ಆದರೆ ತುಂಬಾ ಗಟ್ಟಿಯಾದ ವಸ್ತುವಾದ್ದರಿಂದ ಜಗಿಯುವಾಗ ಸಣ್ಣ-ಸಣ್ಣ ಶಬ್ದಗಳು ಬರತೊಡಗಿದವು. ನಿಧಾನವಾಗಿ ಮುಂದಿನ ಬೆಂಚಿನವರು ಮೆಲ್ಲಗೆ ಶಬ್ದ ಬಂದ ಕಡೆ ತಿರುಗಿ ನೋಡುವಂತಾಯಿತು. ಗುರುಗಳ ಕಿವಿಗೆ ತಲುಪಲು ಇನ್ನೆಷ್ಟು ಹೊತ್ತು? ಕೊನೆಗೂ ತಲುಪಿತು. ಒಂದೆರಡು ಬಾರಿ ಅತ್ತಿತ್ತ ಗಮನಿಸಿದವರು ಕೂಡಲೇ ಒಬ್ಬನನ್ನು ಎದ್ದು ನಿಲ್ಲುವಂತೆ ಸೂಚಿಸಿದರು. ಅಷ್ಟು ಹೊತ್ತು ಹಂಚಲು ಕಷ್ಟಪಟ್ಟದ್ದೆಲ್ಲಾ..ನೀರಿನ ಮೇಲೆ ಹೋಮ ಇಟ್ಟಂತೆ ಆಗಿತ್ತು! ಎಲ್ಲರೂ ಸಾಲಾಗಿ ಎದ್ದು ನಿಲ್ಲುವಂತಾಯಿತು ಮೊದಲೆರಡು ಬೆಂಚನ್ನು ಬಿಟ್ಟು. ಶಾಂತಾನಿಯ ಶಬ್ದದ ಜತೆಗೆ ಗುರುಗಳ ಬೈಯ್ಗಳದ ಶಬ್ದವೂ ಜತೆಯಾಯಿತು.
ಅಂದು ಬೈಯ್ಗಳ ಆದರೆ ನಂತರದ ಚಳಿಗಾಲದಲ್ಲಿ ಸುಂದರ ಸವಿನೆನಪಾಗಿ ತುಟಿಯಂಚಿನಲ್ಲಿ ಕಿರುನಗು ಮೂಡಿಸುತ್ತಿರವುದು ಸುಳ್ಳಲ್ಲ.  
 

Comments

Submitted by H A Patil Tue, 12/04/2012 - 20:27

ಮೇಡಂ ವಂದನೆಗಳು " ಶಾಂತಾನಿ ಸವಿ ನೆನಪು " ಬಹಳ ಸೊಗಸಾದ ನಿರೂಪಣೆ, ಶಾಂತಾನಿಯ ಆ ಪರಿಸ್ಥಿತಿಗೆ ನನ್ನ ಮರುಕವಿದೆ, ಸೊಗದಸಾದ ನೆನಪಿನ ದಾಖಲೆಗೆ ಧನ್ಯವಾದಗಳು.