ಏನು ಹುಡುಕುತ್ತಿದ್ದಾರೆ?

ಏನು ಹುಡುಕುತ್ತಿದ್ದಾರೆ?

ಚಿತ್ರ

 ಮಹಾತ್ಮಾಜಿಯ ಅಪರೂಪದ ಫೋಟೋವೊಂದು ಸಾಬರ್ಮತಿ ಅಶ್ರಮದಲ್ಲಿ ಸಿಕ್ಕಿದ್ದಂತೆ. ಚುನಾವಣೆಯ ಜಾಡನನ್ನರಿಸಿ ಗುಜರಾತಿಗೆ ಹೋಗಿರುವ ಭೀಷ್ಮಪತ್ರಕರ್ತರಾದ ಶೇಷಣ್ಣ ಮತ್ತು ದೈತೋಟರು, ಎಂದಿನ ಅಭಿಮಾನದಿಂದ ನನಗೆ ಕಳಿಸಿಕೊಟ್ಟಿದ್ದು.
 ರಾಷ್ಟ್ರಪಿತನಂತೆ, (ಹೀಗಂದರೆ ಕೆಲವರಿಗೆ ಕೋಪ; ವಾಡಿಕೆಯ ಅರ್ಥದಲ್ಲಿ ಅಂದಿದ್ದೇನಷ್ಟೆ) ನಾವು, ಪ್ರಾಮಾಣಿಕ ಮತದಾರರು, ಚುನಾವಣೆಯಿಂದ ಚುನಾವಣೆಗೆ, ಇದೇ ವ್ಯರ್ಥ ಪ್ರಯತ್ನವನ್ನೇ ಮಾಡುತ್ತಿದ್ದೇವೆ; ತಪ್ಪು ನಮ್ಮದಲ್ಲ, ಚುನಾವಣಾ ವ್ಯವಸ್ಥೆಯದ್ದು, ಅದನ್ನು ಉಂಟುಮಾಡಿದ ಪ್ರಜಾಪ್ರತಿನಿಧಿ ಕಾಯ್ದೆಯದ್ದು.
ಇದು ವ್ಯರ್ಥ ಪ್ರಯತ್ನ ಎಂದು ನನಗನ್ನಿಸಿದ್ದೇಕೆಂದರೆ, ಮಹಾತ್ಮಾಜಿ ಬಹುಶಃ ರಾಜಕೀಯ ಸತ್ಯಸಂಧತೆಯನ್ನು ಮೈಕ್ರೋಸ್ಕೋಪ್‌ನಲ್ಲಿ ಹುಡುಕುತ್ತಿದ್ದಾರೆಂದುಕೊಂಡೆ! ಅಥವಾ ಸಮಕಾಲೀನ ರಾಜಕೀಯದಲ್ಲಿ ಮನುಷ್ಯತ್ವದ ಪ್ರಾಮಾಣಿಕತೆ, Microscopic minority ಎಂಬರ್ಥದ ಸಂಕೇತ, ಇದು ಎಂದು ಸಮಾಧಾನ ಮಾಡಿಕೊಂಡೆ. ಟೆಲಿಸ್ಕೋಪ್ ನಲ್ಲಾದರೆ, ಅವರ ಆದರ್ಶಗಳನ್ನು, ಅನ್ಯಗ್ರಹ ಜೀವಿಗಳಲ್ಲಾದರೂ ಅರೆಸಬಹುದಿತ್ತೇನೊ?!
 ಇಷ್ಟಕ್ಕೂ ಸ್ವಾತಂತ್ರ್ಯಾನಂತರದ ದಿನಗಳಲ್ಲಿ, ಗಾಂಧೀಜಿಯನ್ನು ಕ್ಯಾರೇ ಎಂವರಾದರೂ ಯಾರು? ಅವರ ಹತ್ಯೆ, ಇತಿಹಾಸದ ಪುಟಕ್ಕೆ ಅರ್ಹ ಲೇಖನವಾಯಿತಾದರೂ, ಅಂದಿನ ಸಮಕಾಲೀನ ರಾಜಕೀಯದಲ್ಲೂ ಇದು ಮಹತ್ವದ ಸಂಗತಿಯೇನೂ ಆದಂತೆನಿಸುವುದಿಲ್ಲ.
ನಮ್ಮ ಚುನಾವಣಾ ಇತಿಹಾಸದುದ್ದಕ್ಕೂ, ಆಳ್ವಿಕೆ (ದಬ್ಬಾಳಿಕೆ ಸಹ!) ನಡೆಸಿರುವುದು, ವೈಯಕ್ತಿಕ ವರ್ಚಸ್ಸೇ ಹೊರತು ಪಕ್ಷ ಸಿದ್ಧಾಂತವೆಂಬುದು ಇಲ್ಲವೇ ಇಲ್ಲ. ದೇಶ ಕಂಡ ಏಕೈಕ ಗಂಡು ಪ್ರಧಾನಿ, ಇಂದಿರಾಗಾಂಧಿ ಎಂಬ ಸ್ತ್ರೀ! ದಬ್ಬಾಳಿಕೆಯ ತುತ್ತತುದಿಗಾದರೂ ಎಚ್ಚೆತ್ತುಕೊಳ್ಳುವ ಜಾಗೃತಿ ಈ ಜನಮಾನಸಕ್ಕಿದ್ದು, ಯರೋ ಒಬ್ಬ ಅಧಿಕಾರ ನಿರಪೇಕ್ಷಿ ನಾಯಕ ಅವತರಿಸಿ ಆಗ ನಮ್ಮತನವನ್ನಿಷ್ಟು ಉಳಿಸಿದರು. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಭಾರತ, ಇಂದಿರಾಗಾಂಧಿ ಓರಗೆಯ ಮಉಮ್ಮರ್ ಗಡಾಫಿಯ ಲಿಬಿಯಾ ಅಥವಾ ಅನ್ವರ್ ಸದಾತನ ಇಜಿಪ್ಟ್ ಆಗಿಬಿಡುವ ಸಂಭವ ಹೆಚ್ಚಾಗೇ ಇತ್ತು. 
ದೇಶದ ಪ್ರಜಾಸತ್ತೆ ಪ್ರಪಾತಕ್ಕೆ ಬೀಳಲಿಲ್ಲವೆಂಬ ಸಮಾಧಾನವೇನೋ ಇದೆ.
 ಆದರೆ 1977ರಿಂದೀಚೆಗೆ ಇಲ್ಲಿ ಸ್ಥಿರ ರಾಜಕೀಯವೆಂಬುದೇ ಮೊಲದ ಕೊಂಬಾಗಿದೆ. 
 ಪ್ರಸಕ್ತ ಚುನಾವಣೆಯಲ್ಲಿ ನರೇನ್ ಮೋದಿ ಜಯಭೇರಿ ಬಾರಿಸಿದರೂ, ಇನ್ನೇನು ಮೂಲೆ ತಿರುಗುತ್ತಿರುವ ಸಂಸದೀಯ ಚುನಾವಣೆಯಲ್ಲಿ, ಇದರ ಕಿಂಚಿತ್ ಪ್ರಯೋಜನ ಪಡೆದುಕೊಳ್ಳು ಸ್ಥಿತಿಯಲ್ಲಿ, ಬಿಜೆಪಿ (ಎನ್‌ಡಿಎ ಅಲ್ಲ!) ಇರುವಂತಿಲ್ಲ. ಒಕ್ಕೂಟವೆಂಬ ದೈನೇಸಿ ಸ್ಥಿತಿಯಿಂದ ಸ್ವತಂತ್ರವಾಗುವ ಸ್ಥೈರ್ಯವನ್ನು ದೊಡ್ಡ ಪಕ್ಷಗಳು ತೋರಿಸಬೇಕು.
 

Rating
No votes yet