ನೀಡೊಂದು ಅವಕಾಶ

ನೀಡೊಂದು ಅವಕಾಶ

ಕವನ

 

ಅಮ್ಮ ಓ ಅಮ್ಮ
ಕಂದನ ಕರೆಯ ಆಲಿಸಮ್ಮ.
 
ಇಲ್ಲಿರುವೆ ನೋಡು ನಿನ್ನ ಒಡಲೊಳಗೆ
ಕೊಲ್ಲಬೇಡ ಬರುವ ಮೊದಲು ಧರೆಗೆ
ಕಿವುಡಾಗಬೇಡ ಕರುಳ ಕುಡಿಯ ಕರೆಗೆ
ಜಗವ ನೋಡುವಾಸೆ ನಿನ್ನ ಮಡಿಲೊಳಗೆ.
 
ಎದೆಯ ಅಮೃತ ಹೀರಿ ಬೆಳೆಯುವಾಸೆ
ಲಾಲಿ ಜೋಗುಳಹಾಡ ಕೇಳುವಾಸೆ
ನಳಿದೋಳ ತೊಟ್ಟಿಲಲಿ ಮಲಗುವಾಸೆ
ಮೆದು ತೊಡೆಯ ಮೇಲಾಡಿ ಕುಣಿಯುವಾಸೆ.
 
ನನ್ನೀ ಆಸೆಗಳು ಸರಿಯಲ್ಲವೇನಮ್ಮ
ಅಪ್ಪನಿಗೂ ಈ ಕೂಸು ಹೊರೆಯಾಯಿತೇನಮ್ಮ
ಅಜ್ಜ ಅಜ್ಜಿಯರ ಪ್ರೀತಿಗೆ ಎರವಾದನೇನಮ್ಮ
ಗಂಡಾಗದಿರುವುದು ನನ್ನ ತಪ್ಪೇನಮ್ಮ.
 
ನೀನು, ಅತ್ತೆ, ಅಜ್ಜಿ ಹೆಣ್ಣಲ್ಲವೇನಮ್ಮ
ಹೆಣ್ಣಿಂದಲೇ ಹೆಣ್ಣಿಗೆ ಅನ್ಯಾಯವೇಕಮ್ಮ
ನನಗೂ ಬದುಕಿರಲಾಸೆಯಮ್ಮ
ನನ್ನನ್ನೀಗಲೆ ಕೊಲ್ಲಬೇಡಮ್ಮ.
 
ಮಡಿಲಿಗೆ ಬರಲು ನೀಡೊಂದು ಅವಕಾಶ
ಬಂಧಿಸುವೆ ಎಲ್ಲರನು ಕಟ್ಟಿ ಪ್ರೇಮದ ಪಾಶ
ಓದಿ, ದುಡಿದು, ನೀಡುವೆ ಆಸರೆಯ
ಆರತಿಯಾಗಿ ಬೆಳಗಿ, ತರುವೆ ಕೀರುತಿಯ.
 
ಶಾರಿಸುತೆ
ಚಿತ್ರಕೃಪೆ: ಅಂತರ್ಜಾಲ
 
ಚಿತ್ರ್