ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ

ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ

ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ....ಊರ ಹೆಸರನ್ನು ಅಂಟಿಕೊಂಡ ತಿನಿಸುಗಳ ಲೋಕದತ್ತ ಒಂದು ಇಣುಕು ನೋಟ. -ವಾಣಿ ರಾಮದಾಸ್.


ಮುಂಬೈ ವಡ-ಪಾವ್? ತಿಂಡಿಗೂ-ಊರಿಗೂ ಅದೆಂಥಾ ಬಾಂಧವ್ಯ ಇದೆ ಯೋಚಿಸಿದ್ದೀರಾ? ಮದ್ದೂರು ವಡೆ, ಮೈಸೂರುಪಾಕ್, ಮಂಗಳೂರು ಭಜಿ, ಬೆಳಗಾವಿ ಕುಂದ, ಧಾರವಾಡ ಪೇಢ, ದಾವಣೆಗೆರೆ ಬೆಣ್ಣೆ ದೋಸೆ, ಬಳ್ಳಾರಿ ಮಿರ್ಚಿ, ಉತ್ತರ ಕರ್ನಾಟಕದ ಖಡಕ್‍ರೋಟಿ, ಗೋಕಾಕದ ಕರದಂಟು, ಮುಂಬೈ ವಡ ಪಾವ್, ಪಾವ್ ಭಾಜಿ, ಗುಜರಾತಿ ಡೋಕಳಾ... ನಳ, ಭೀಮರೇನಾದರೂ ಧರೆಗಿಳಿದು ಬಂದು ಇತ್ತೀಚಿನ ರೆಸ್ಟೊರೆಂಟುಗಳಿಗೆ ಭೇಟಿ ಇತ್ತಲ್ಲಿ ವಾಹ್ ಸುಗ್ರಾಸ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು ಎಂದುಲಿಯುವರೇನೋ. ಅಂದ ಹಾಗೇ ಊರ ಹೆಸರನ್ನೇ ಅಂಟಿಸಿಕೊಂಡ ಈ ಮೇಲಿನ ಹಲವಾರು ಜನಪ್ರಿಯ ತಿನಿಸುಗಳ ಪಟ್ಟಿ ನೋಡಿ ಬೆರಗಾಗಿ ಮೂಗಿನ ಮೇಲೆ ಬೆರಳನಿಟ್ಟಾರು ಕೂಡ! ಮನುಜ ತನ್ನ ಎಲುಬಿಲ್ಲದ ನಾಲಿಗೆಯ ಚಪಲತೆಗಾಗಿ ಉಪ್ಪು, ಹುಳಿ, ಸಿಹಿ, ಕಹಿ, ಖಾರ, ಒಗರು ಎಂಬ ಆರು ರಸಗಳಲ್ಲಿಯೂ ಹೊಸ ಹೊಸ ತಿಂಡಿ - ತಿನಸುಗಳನ್ನು ಆವಿಷ್ಕರಿಸುತ್ತಲೇ ಹೋಗಿದ್ದಾನೆ. ಇಂತಹ ಆವಿಷ್ಕಾರದಲ್ಲಿ ಪರಿಷ್ಕಾರಗೊಂಡು ಜೊತೆಗೆ ಊರ ಹೆಸರನ್ನೂ ತಮ್ಮೊಂದಿಗೆ ಅಂಟಿಸಿಕೊಂಡ ಹಲವು ತಿನಿಸುಗಳ ಲೋಕದತ್ತ ಒಂದು ಪಯಣ.


ಸವಿಯಲು ಬೇಕಾ-ಮೈಸೂರು ಪಾಕ:- ನಾಲ್ವಡಿ ಕೃಷ್ಣರಾಜರು ಬಾಣಸಿಗ ಮಾದಪ್ಪನ ಊಟದ ರೆಸಿಪಿ ಪ್ರಿಯರರಾಗಿದ್ದರಂತೆ. ಒಮ್ಮೆ ಏನೋ ಮಾಡಲು ಹೋಗಿ ಅದೇನೋ ಆಯಿತು. ಒಮ್ಮೆ  ಸಂಜೆ ಬೇಗನೆ ಪಾಕಶಾಲೆಗೆ ಆಗಮಿಸಿದ ಮಹಾರಾಜರು ಏನು ಮಾಡುತ್ತಿದ್ದೆಯೋ ಅದನ್ನೇ ಬಡಿಸು ಎಂದು ಅಪ್ಪಣೆ ಇತ್ತರಂತೆ.  ಚಿನ್ನದ ಪ್ಲೇಟಿನಲಿ ಬಂದ ತಿನಿಸನು ಸವಿದು ಏನಿದು ಹೊಸದು, ಸಿಹಿ ತಿನಿಸು ಎಂದ ಮಹಾರಾಜರ ಎದುರು ಬಾಣಸಿಗ ತಡವರಿಸಿದ್ದೇ ಮೈಸೂರು ಪಾಕ್. ಮಾದಪ್ಪನ ವಂಶಜರು ಇದೀಗ ಗುರುರಾಜ ಸ್ವೀಟ್ಸ್, ಕೆ.ಆರ್.ಮಾರುಕಟ್ಟೆಯಲ್ಲಿ ಮೈಸೂರು ಪಾಕ್ ಅಂಗಡಿ. ಬಾಯಲ್ಲಿ ಇಟ್ಟರೆ ಕರಗೇ ಹೋಗುವ ತುಪ್ಪದಲಿ ತೋಯ್ದ ಈ ಪಾಕದ ರೆಸಿಪಿ ಬಲು ಸಿಂಪಲ್.


ಮದ್ದೂರು ವಡೆ:  ವಡೆ ಹುಟ್ಟಿದ ಕಥೆ : ಬೆಂಗಳೂರು ಮೈಸೂರು ರೈಲು ಸಂಚಾರ ಆರಂಭಗೊಂಡು 128 (1881) ವರುಷಗಳಾಯಿತು. ಆ ಕಾಲದಲ್ಲೇ ಉಡುಪಿ-ಮಂಗಳೂರು ಕಡೆಯ ಆಚಾರರೊಬ್ಬರು ರೈಲ್ವೆ ಕ್ಯಾಂಟೀನಿನಲ್ಲಿ ಇಡ್ಲಿ, ಕಾಫಿ, ಮಂಗಳೂರು ಬೋಂಡಾ ಅಂಗಡಿ ಇಟ್ಟಿದ್ರು. ರೈಲು ನಿಲ್ಲುತ್ತಿದ್ದುದು ಐದು ನಿಮಿಷ. ಡಿಮ್ಯಾಂಡ್ ಇದ್ದದ್ದು ಬೋಂಡ ಹಾಗೂ ಬೈಟು ಬೆಲ್ಲದ ಕಾಫಿಗೆ. ಒಂದು ದಿನ ಕಡಲೆಹಿಟ್ಟು ಮುಗಿದು ಹೋಯಿತು. ಅಂದಿನ ಕಾಲದಲ್ಲಿ ರೈಲ್ವೇ ನಿಲ್ದಾಣ ಊರಿನಿಂದ ದೂರವಿತ್ತು. ರೈಲು ಬರುವ ವೇಳೆ, ಹಿಟ್ಟಿಲ್ಲ. ಜನ ಹಸಿದು ಬರುತ್ತಾರೆ. ಅದರಲ್ಲೂ ಬೋಂಡ ಕೊಡಿ ಆಚಾರ್ರೆ ಎಂದು ಓಡೋಡಿ ಬರುತ್ತಾರೆ ಏನು ಮಾಡುವುದು ಎಂದು ಯೋಚನೆಗೀಡಾದ ಆಚಾರರಿಗೆ ಹೊಳೆದದ್ದು ಹೊಸ ರೆಸಿಪಿ. ಇದ್ದ ರವೆ, ಹಿಟ್ಟು, ಈರುಳ್ಳಿ, ಮೆಣಸಿನಕಾಯಿಗಳ ಮಿಶ್ರಣ ಸೇರಿಸಿ ಕೈಯ್ಯಲ್ಲಿ ಚಪಾತಿಯಂತೆ ತಟ್ಟಿ ಎಣ್ಣೆಗೆ ಇಳಿ ಬಿಟ್ಟರು. ರೈಲು ಬಂದಾಕ್ಷಣ ’ಬೋಂಡ ಕೊಡಿ ಆಚಾರ್ರೆ’ ಎಂದುಲಿದ ಪಯಣಿಗರಿಗೆ ’ಇವತ್ತು ಬೋಂಡ ಅಲ್ಲ ವಡೆ ಸ್ಪೆಷಲ್’ ಎಂದರು. ’ಏನ್ ವಡೆ’ಗೆ ಬಂದ ಉತ್ತರ ಮದ್ದೂರು ವಡೆ. ಇಂದು ದಿನಪ್ರತಿ ಸುಮಾರು 600-800  ವಡೆಗಳು ಮಾರಾಟವಾಗುವ ಈ ಕೋತಿನಾಷ್ಟ. ಮದ್ದೂರು ವಡೆಗೆ ಶತಮಾನಂ ಭವತಿ!


ಮಂಗಳೂರು ಬಜ್ಜಿ-ಗೋಳಿ ಬಜೆ:-  ಮೋಡ ಮುಸುಕಿದ ವಾತಾವರಣ, ಮಳೆರಾಯನ ಆಗಮನ, ಮೈ ಮನ ಉಲ್ಲಸಿತವಾದಂತೆ ಬಾಯಿಗೆ ಬೇಕೆನಿಸುತ್ತದೆ ಭಜಿ, ಬೋಂಡ ತಿನಿಸುಗಳು.  ಆಗ ತಕ್ಷಣವೇ ಇಪ್ಪತ್ತು ನಿಮಿಷದಲ್ಲಿ ಮಾಡಬಹುದಾದ ತಿಂಡಿಯೆಂದರೆ ಗೋಳಿಬಜೆ, ಝಟ್ ಮಂಗ್ನಿ ಫಟ್ ಶಾದಿ ಎನ್ನುವ ಹಾಗೆ. ಮಂಗಳೂರು ಬಜ್ಜಿಗೆ ಗೋಳಿ ಬಜೆ -ಮಂಗಳೂರು ಮೀನಿನಷ್ಟೇ ಜನಪ್ರಿಯ. 


ಧಾರವಾಡ್ ಪೇಢಾ: ಬಾರೋ ಸಾಧನ ಕೇರಿಗೆ, ನನ್ನ ಒಲುಮೆಯ ಗೂಡಿಗೆ’ಎಂದು ಕೈಬೀಸಿ ಕರೆಯುವ ಸಾಧನಕೇರಿಯಷ್ಟೇ ಸಿಹಿ ಧಾರವಾಡ ಫೇಡ. ಫೇಡಾ-ಬೇಡಾ ಎನ್ನುವವರುಂಟೇ? ಉತ್ತರಪ್ರದೇಶ ಮೂಲದ ದಿವಂಗತ ಶ್ರೀ ರಾಮ್‌ರತನ್ ಸಿಂಗ್‌ರು ಸುಮಾರು ನೂರ ಎಪ್ಪತ್ತೈದು ವರ್ಷಗಳ ಹಿಂದೆ ಧಾರವಾಡಕ್ಕೆ ಬಂದು ಕೋರ್ಟ್ ಬಳಿಯ ರಸ್ತೆಯಲ್ಲಿ ಪೇಡಾ ಅಂಗಡಿಯನ್ನು ಪ್ರಾರಂಭಿಸಿದರು. ಇದೀಗ ಐದನೆಯ ಪೀಳಿಗೆಗೆ ಫೇಡಾ ವ್ಯವಹಾರ ನಿರಂತರವಾಗಿ ನಡೆಯುತ್ತಿದೆ. ಬ್ಯಾಟು ಹಿಡಿದುಕೊ೦ಡಿರುವ ಚಿಣ್ಣನಿ೦ದ ಹಿಡಿದು ಊರುಗೋಲು ಹಿಡಿದಿರುವ ಮುದುಕನ ತನಕ ಎಲ್ಲರಿಗೂ ಇಷ್ಟ.


ಬೆಳಗಾವಿ ಕುಂದ, ತಿನ್ನಲು ಬಲು ಚೆಂದ: ನೂರು ವರುಷಗಳ ಹಿಂದೆ ಪುರೋಹಿತ್ ಪಂಗಡದ ರಾಜಸ್ತಾನಿನ ಗಜಾನನ್ ಹೊಟ್ಟೆಪಾಡಿಗಾಗಿ ಬೆಳಗಾವಿಗೆ ಬಂದರಂತೆ. ಹೆಸರೇ ಮಿಠಾಯಿವಾಲ- ಒಮ್ಮೆ ಮಿಠಾಯಿ ಮಾಡಲು ಹಾಲನ್ನು ಕಾಯಿಸಲು ಇಟ್ಟು ಮರೆತೇ ಹೋದರಂತೆ. ಕುದ್ದು ಕುದ್ದು ಕಂದು ಬಣ್ಣಕ್ಕೆ ತಿರುಗಿ, ಗಟ್ಟಿಯಾದ ಹಾಲನ್ನು ಕಂಡು ಎಸೆಯಲು ಮನ ಬರದೆ ಅದಕ್ಕೆ ಖೋವ-ಸಕ್ಕರೆ ಬೆರೆಸಿ, ಬಾಯಿಗೆ ಇಟ್ಟದ್ದೇ ವಾಹ್- ಯುರೇಕಾ ಎನ್ನುವ ಬದಲು ಕುಂದ ಎಂದರೇನೋ...ಅದೇ ಹೆಸರು ನಿಂತಿತು. ಬೆಳಗಾವಿ ಕುಂದಾ ನಗರಿ ಎಂದೇ ಪ್ರಸಿದ್ಧಿ ಪಡೆಯಿತು.


ಗದಗದ ಗಿರಮೆಟ್(ಭೇಲ್‍ಪುರಿ):-ತಿನ್ನಕ್ಕ್ ಏನೈತ್ರಿ...ಗಿರಮಿಟ್ ಎಂದೊಡನೆ ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಎಂಬಂತೆ..ಅ-ತಿಥಿಗಳು ಓಡಿ ಬಂದಾರು. ನಮ್ಮಲ್ಲಿ ಬಡವರ ಕಳ್ಳೆಕಾಯಿ ಎಂಬ ಹಾಗೇ ಗದಗದಲ್ಲಿ ಬಡವರ ಭೇಲ್ ಈ ಗಿರಮಿಟ್. ಮಂಡಕ್ಕಿ, ಸಾಸಿವೆ, ಜೀರಿಗೆ, ಈರುಳ್ಳಿ ಜೊತೆಗೆ ಟೊಮಾಟೋ, ಸೌತೆ, ಹಸಿ ಮೆಣಸು...ನಾಲಿಗೆ ಚುರುಗುಟ್ಟಿಸಿ ಆ..ಇನ್ನೂ ಬೇಕು, ಸ್..ಖಾರ ಆದರೂ ಚೆನ್ನಾಗಿದೆ ಎಂಬ ಗಿರಮಿಟ್ ಸವಿದು ನೋಡಿ!


ಬಳ್ಳಾರಿ ಮಿರ್ಚಿ:- ಬಳ್ಳಾರಿ ಬಿಸಿಲು, ಗಣಿಗಳಿಗಷ್ಟೇ ಅಲ್ಲ ವಗ್ಗರಿಣಿ ಮಿರ್ಚಿಗೂ ಸಂಜೆ ಏಳಾದಂತೆ ಬೆಂಚಿನ ಮೇಲೆ ಕುಳಿತ ಖಾರ್ಮಿಕರು, ಲುಂಗಿ ಉಟ್ಟು, ತಲೆಗೊಂದು ಮುಂಡಾಸು ಕಟ್ಟಿ ಮೆಣಸಿನಕಾಯಿಯನ್ನು ಕಡಲೆ ಹಿಟ್ಟಿನಲಿ ಅದ್ದಿ ಹಿಟ್ಟಿನಲ್ಲಿ ಅದ್ದಿ ಬಜ್ಜಿ ಮಾಡುವ ವೈಖರಿ, ಆ ಖಾರ,  ಹೂ...ಬೆಳಗಿನ ಬಿಸಿಲಿನ ಬೇಗೆ ಮಂಗಮಾಯವಾದೀತು. ಆದಾರೂ ಬಳ್ಳಾರಿ ವಗ್ಗರಣೆ ಮಿರ್ಚಿ ತಿನ್ನಲು ಖಂಡಿತ ಎಂಟೆದೆ ಧೈರ್ಯ ಬೇಕು. ಖಾರ ನೆತ್ತಿಗೆ ಏರಿದರೆ ನಾವು ಹೊಣೆಗಾರರಲ್ಲ!


ಬಿಜಾಪುರದ ಖಡಕ್ ರೋಟಿ, ಮುಳಗಾಯಿ ಪಲ್ಯ:- ಬಿಜಾಪುರ ಒಂದೇ ಅಲ್ಲ ಉತ್ತರ ಕರ್ನಾಟಕದಲ್ಲೇ ಫೇಮಸ್ ಖಡಜ್ ರೋಟಿ. ಸಣ್ಣ ಬದನೆಕಾಯಿಯನ್ನು ಸೀಳಿ, ಮಧ್ಯದಲಿ ಮಸಾಲೆ ತುಂಬಿ, ಎಣ್ಣೆಯಲಿ ಬೇಯಿಸಿ, ಜೋಳದ ರೊಟ್ಟಿಯೊಂದಿಗೆ ಸವಿದವನೇ ಬಲ್ಲ...ಅದಕ್ಕೇ ಇರಬೇಕು ಉತ್ತರಕರ್ನಾಟಿಗರ ಮಾತು ಕೂಡ ರೋಟಿಯಂತೆ ಖಡಕ್-ಮನಸು ಬೆಂದ ಬದನೆಯಂತೆ ಬಲು ಮೃದು. ನೀವೇನಾದರೂ ಉತ್ತರ ಕನ್ನಡದ ಭೋಜನವನ್ನು ಸವಿದಿದ್ದರೆ ಖಾರದ ರುಚಿ ನಿಮ್ಮ ನಾಲಗೆಯ ಮೇಲೆ ಹೊರಳಿ ನೆತ್ತಿಗೆ ಹತ್ತಿದ್ದು ಇನ್ನೂ ಮರೆತಿರಲ್ಲ.


ಗೋಕಾಕದ ಕರದಂಟು:- ಕಲ್ಬುರ್ಗಿ ಮತ್ತು ಹಗರ್ಗಿ ಕುಟುಂಬದವರು ಬಾಣಂತಿಗಾಗಿ ತಯಾರಿಸಿದ್ದು. ಇದಕ್ಕೆ ನೂರು ವರುಷಗಳ ಇತಿಹಾಸ ಇದೀಗ ಜನಜನಿತ. ಅಂಟು ಅಂಟಾಗಿ ಇರುವ ಇದನ್ನು ಮೆಲ್ಲುತ್ತಿದ್ದರೆ ಬಿಡಲಾರದ ನಂಟು. ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಜೊತೆಗೆ ವಿಶಿಷ್ಟ ಅಂಟು. ಅದೇ ಇದರ ಗಮ್ಮತ್ತು.


ಮುಂಬೈ ವಡ-ಪಾವ್:-೧೯೭೧ ರಲ್ಲಿ ಬಡಜನರಿಗೆ ಹೊಟ್ಟೆ ತುಂಬುವ ಊಟ ಆಗಲಿ ಎಂಬ ಅನಿಸಿಕೆ ಮೂಡಿ ಪಾವ್ ಮಧ್ಯೆ ವಡೆ ಇಟ್ಟು ವಡ-ಪಾವ್ ಎಂದು ಹೆಸರಿಸಿ ಮಾರಿದರು ದಾದರಿನ ಅಶೋಕ್ ವೈದ್ಯ. ಮೃದುವಾದ ಪಾವ್-ಅದರ ಮೇಲೆ ಬೆಳ್ಳುಳ್ಳಿ ಚಟ್ನಿ, ಮಧ್ಯೆ ಬಿಸಿಯಾದ ಆಲೂಗೆಡ್ಡೆ ಬೋಂಡ. ಸುಮಾರು ಹೊತ್ತು ಹೊಟ್ಟೆಯೊಳಗೆ ಬಿಮ್ಮನೆ ನಿಂದೀತು.


ಮುಂಬೈ-ಪಾವ್-ಭಾಜಿ:-ಮರಾಠಿಯಲ್ಲಿ ಪಾವ್ ಎಂದರೆ ಸಣ್ಣ ಬನ್ ಅಥವಾ ಬ್ರೆಡ್. ಭಾಜಿ-ಪಲ್ಯ. ಮಿಲ್ ಕಾರ್ಮಿಕರ ಕ್ಯಾಂಟೀನಿನಲ್ಲಿ ಆವಿಷ್ಕಾರಗೊಂಡದ್ದು. ರೋಟಿ ಅಥವಾ ಅನ್ನಕ್ಕೆ ಬದಲಾಗಿ ಬ್ರೆಡ್ ಮತ್ತು ಪಲ್ಯ. ವಡ-ಪಾವ್ ಮತ್ತು ಪಾವ್-ಭಾಜಿ ಒರಿಜಿನಲ್ ಟೇಸ್ಟ್ ಬೇಕಾದಲ್ಲಿ ಮುಂಬೈಗೆ ಹೋಗಿ,  ರಸ್ತೆಯ ಬದಿಯಲ್ಲಿ ನಿಂತು ಸವಿಯಬೇಕು! ಏನಂದ್ರಿ..ಹೈಜೀನ್...ಎಲ್ಲಾ ಜೇನೂ..ಜೀನೂ ಅದರಲ್ಲಿ ಇರುತ್ತೆ ಸ್ವಾಮಿ!


ಇಷ್ಟೆಲ್ಲಾ ಹೇಳಿ ಸಾಗರದ ಹವ್ಯಕರ ಅಪ್ಪೆ ಹುಳಿ ಹೇಳದಿದ್ರೆ ಹೇಗೆ? ಹಸಿ ಮಾವಿನಕಾಯಿ, ಬೇಯಿಸಿದ ಮಾವಿನಕಾಯಿ ಆದ್ರೂ ಸೈ. ಚೆನ್ನಾಗಿ ಕಿವುಚಿ, ಉಪ್ಪು ಬೆರೆಸೆ, ಮೆಣಸಿನಕಾಯಿ, ಕರಿಬೇವು, ಇಂಗಿನ ಒಗ್ಗರಣೆ ಕೊಟ್ಟರೆ ಸೈ. ಚೆನ್ನ್ ಜೀರ್ಣಕ್ರಿಯೆಗೆ ಸಹಕಾರಿ. ಕುಡಿಯಲೂ ರುಚಿ, ಪಿತ್ತಕ್ಕೆ ಒಳ್ಳೇ ಮದ್ದು ಹಾಗೆ ಕುಡಿದು ಮಲಗಿದಲ್ಲಿ ಕುಂಭಕರ್ಣನ ಆವಾಹನೆ ಖಂಡಿತ.


ಕರಾವಳಿ ಪತ್ರೊಡೆ, ಮೈಸೂರು ಮಸಲಾದೋಸೆ, ಶಿರಸಿ ತೊಡೆದೇವು, ಸವಣೂರು ಚೂಡಾ, ದಾವಣೆಗೆರೆ ಬೆಣ್ಣೆ ದೋಸೆ, ಹೀಗೆ ಬರೆಯುತ್ತಾ ಹೋದಲ್ಲಿ ಬಾಯಲ್ಲಿ ನೀರೂರಿಸುವ, ಊರಿನ ಹೆಸರಿಗಂಟಿದ ಹಲವಾರು ತಿನಿಸುಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದೀತು. ಪ್ರತಿಯೊಂದರದೂ ಒಂದೊಂದು ರುಚಿ, ಅದರದೇ ಆದ ಸೊಗಡು, ಉಪಮಾತೀತ.


ತಿನ್ನಬೇಕೋ ಬೇಡವೋ, ತಿಂದರೆ ಬೊಜ್ಜಿನ ಭಯ, ತಿನ್ನದಿದ್ದರೆ ಕಣ್ಣೆದುರೇ ಕಾಡಿಸುವ ಕೈ ಚಾಚಿದರೆ ದಕ್ಕುವ ರುಚಿ - ಜಿಹ್ವಾ ಜಾಪಲ್ಯ ಯಾರನ್ನು ಬಿಟ್ಟಿಲ್ಲ...ಬಹುಷಃ ಅದಕ್ಕೆ  ನಾಲಗೆಯ ರುಚಿ ಗೆದ್ದವ ವಿಶ್ವವನ್ನೇ ಗೆಲ್ಲಬಲ್ಲ ಎಂದಿದ್ದು.


 


 


 

Comments

Submitted by spr03bt Mon, 12/10/2012 - 13:08

ವಾಣಿಯವರೆ, ಊರಿನ ಹೆಸರನ್ನು ಸೇರಿಸಿಕೊ೦ಡಿರುವ ಬಹಳಷ್ಟು ತಿ೦ಡಿಗಳ ಬಗ್ಗೆ ಚೆನ್ನಾಗಿ ಬರೆದಿರುವಿರಿ.
Submitted by nkumar Mon, 12/17/2012 - 21:33

<<ಮಂಗಳೂರು ಬಜ್ಜಿ-ಗೋಳಿ ಬಜೆ:- ಮೋಡ ಮುಸುಕಿದ ವಾತಾವರಣ, ಮಳೆರಾಯನ ಆಗಮನ, ಮೈ ಮನ ಉಲ್ಲಸಿತವಾದಂತೆ ಬಾಯಿಗೆ ಬೇಕೆನಿಸುತ್ತದೆ ಭಜಿ, ಬೋಂಡ ತಿನಿಸುಗಳು. ಆಗ ತಕ್ಷಣವೇ ಇಪ್ಪತ್ತು ನಿಮಿಷದಲ್ಲಿ ಮಾಡಬಹುದಾದ ತಿಂಡಿಯೆಂದರೆ ಗೋಳಿಬಜೆ, ಝಟ್ ಮಂಗ್ನಿ ಫಟ್ ಶಾದಿ ಎನ್ನುವ ಹಾಗೆ. ಮಂಗಳೂರು ಬಜ್ಜಿಗೆ ಗೋಳಿ ಬಜೆ -ಮಂಗಳೂರು ಮೀನಿನಷ್ಟೇ ಜನಪ್ರಿಯ.>> ಅದರ‌ ಜೊತೆ ಹಲಸಿನ‌ ಹಪ್ಪಳ‌!!!!!!!!!!! !!!
Submitted by ಗಣೇಶ Mon, 12/17/2012 - 23:35

ಮೈಸೂರು ಪಾಕ್ ಒಂದೇ ಬಾಯಲ್ಲಿ ನೀರೂರಿಸುವುದು. ಇನ್ನು......ನನ್ನ ಅವಸ್ಥೆ ಏನಾಗಿರಬಹುದು ಯೋಚಿಸಿ.. :).ಲೇಖನ ಬಹಳ ಇಷ್ಟವಾಯಿತು. -ಗಣೇಶ.