"ಸಿನೆಮಾ"(ಕಥೆ) .....ಬಾಗ 4

"ಸಿನೆಮಾ"(ಕಥೆ) .....ಬಾಗ 4

ಚಿತ್ರ

                          
     ಮಾದೇವ ಸದಾಶಿವನ ಜೊತೆ ಆತನ ಮನೆ ಸೇರಿದಾಗ ಸಾಯಂಕಾಲ ಆರು ಗಂಟೆಯ ಸಮಯವಾಗಿತ್ತು. ಸದಾಶಿವನ ತಂದೆ ತಾಯಿ ಮತ್ತು ಹಿರಿಯರು ಎಲ್ಲ ಬಹಳ ಹಿಂದೆಯೇ ತೀರಿ ಕೊಂಡಿದ್ದರು. ಮನೆಯಲ್ಲಿ ಸದಾಶಿವ ಆತನ ಹೆಂಡತಿ ಗಿರಿಜ, ಮಗ ಧರಣೇಶ ಆತನ ಹೆಂಡತಿ ಗಂಗಾ ಅವರಿಬ್ಬರ ಸಣ್ಣ ಮಕ್ಕಳಾದ ಕಾಂತೇಶ ಮತ್ತು ಲಕ್ಷ್ಮೀ ಇದ್ದರು. ಸದಾಶಿವ ಅವರೆಲ್ಲರ ಪರಿಚಯ ಮಾಡಿಸಿದ. ಹಿರಿಯ ಮಗ ಕಾಂತೇಶ ತಂದೆಯೊಟ್ಟಿಗೆ ವ್ಯವಸಾಯ ಮಾಡಿ ಕೊಂಡಿದ್ದರೆ, ಕಿರಿಯ ಮಗ ಮಹಾಂತೇಶ ಕಂಪ್ಯೂಟರ್ ಡಿಪ್ಲೋಮಾ ಮಾಡಿ ಬೆಂಗಳೂರಿನ ಸಾಫ್ಟ್ವೇರ್ ಕಂಪನಿ ಯೊಂದರಲ್ಲಿ ಕೆಲಸ ಮಾಡಿ ಕೊಂಡಿರುವನೆಂದು ತಿಳಿಸಿದ. ಸದಾಶಿವ ಕಷ್ಟಪಟ್ಟು ತನ್ನ ಜೀವನದಲ್ಲಿ ಮೇಲೆ ಬಂದವ. ಸಂತೃಪ್ತ ಜೀವನ ಅವನದಾಗಿತ್ತು ಎಂಬುದು ಆತನೊಡನೆ ನಡೆಸಿದ ಮಾತುಕತೆಯಿಂದ ತಿಳಿದು ಬಂತು. ಆದರೂ ಒಂದು ಮೆಚ್ಚತಕ್ಕ ಅಂಶವೆಂದರೆ ಎಷ್ಟೇ ಹದಗೆಟ್ಟಿದ್ದರೂ ಇನ್ನೂ ಗ್ರಾಮ ಜೀವನದ ಬಗೆಗೆ ಒಲವಿಟ್ಟು ಕೊಂಡಿರುವುದು ಮತ್ತು ತನ್ನ ಹಳ್ಳಿಯಲ್ಲಿಯೆ ವಾಸವಾಗಿರುವುದು. ಸದಾಶಿವ  ತನ್ನ ಗ್ರಾಮ ದುರ್ವಾಪುರದ ಎಲ್ಲ ವಿಷಯಗಳ ಕುರಿತು ಮಾತನಾಡಿದ. ನನ್ನ ತರಗತಿಯ ಪೋಲಿ ಹುಡುಗರಾಗಿದ್ದ ಚನವೀರ ಸುಹಾಸ ಮತ್ತು ದೀಪಕ ರವರುಗಳ ವಿಚಾರ ಬಂದು ಅವರ ಬದುಕಿನ ದುರಂತಗಳ ಬಗೆಗೆ ಹೇಳಿ ಚನವೀರ ಹೊನಗಲ್ಲಿನಲ್ಲಿ ಕೂಲಿ ಕೆಲಸ ಮಾಡಿ ಕೊಂಡಿದ್ದು ದುರ್ವ್ಯಸನಗಳಿಂದಾಗಿ ತೀರಿ ಕೊಂಡನೆಂದು, ಇನ್ನೊಬ್ಬ ದೀಪಕನ ಪಕ್ಕದ ಮನೆಯ ಸುಹಾಸ ಸಹ ಸಿನೆಮಾ ಷೋಕಿಗೆ ಬಿದ್ದು ಕುಡಿತದ ಚಟದಿಂದ ಹೊರ ಬರಲಾಗದೆ ಹುಬ್ಬಳ್ಳಿಯಲ್ಲಿ ರಸ್ತೆ ಅಪಘಾತದಲ್ಲಿ ತೀರಿ ಕೊಂಡನೆಂದೂ, ಇನ್ನೊಬ್ಬ ದೀಪಕ ಈಗ್ಗೆ ಕೆಲ ವರ್ಷಗಳ ಹಿಂದೆ ಪೂನಾದಿಂದ ಇಲ್ಲಿಗೆ ಬಂದು ವಾಸ ವಾಗಿರುವನೆಂದು ಆಗಾಗ ನನ್ನ ಬಗೆಗೆ ವಿಚಾರಿಸುತ್ತಿರುವನೆಂದೂ ಹೇಳಿದ. ಮಾತುಕತೆಯಲ್ಲಿ ರಾತ್ರಿ ಹತ್ತು ಗಂಟೆ ಯಾಗಿರುವುದು ಸಹ ಗೊತ್ತ್ತಾಗಲಿಲ್ಲ.
     ಸದಾಶಿವನ ಮಾತಿನ ಭರಾಟೆಯನ್ನು ಗಮನಿಸಿದ ಗಿರಿಜಮ್ಮ ' ಬಸ್ನ್ಯಾಗ ಪ್ರಯಾಣ ಮಾಡಿ ಅವರು ಸುಸ್ತಾಗಿ ಬಂದಾರ, ಹಂಗ ಅವರು ಬಂದಾಗಿಂದನ ಸುರುವು ಹಚ್ಚೀರಿ ಇನ್ನೂ ಮುಗಿವಲ್ದು ನಿಮ್ಮ ಮಾತು, ನಾಳೆ ಮತ್ತ ಬೆಳಗಾಗ್ತದ ನಾಳಿಗೂ ಸ್ವಲ್ಪ ಇರಲಿ ' ಎಂದರು.
     ' ಹೈದೇನೋ ಮಾದೇವ ನನಗೂ ತಿಳಿಲಿಲ್ಲ ನೋಡು ಹಂಗ ಮತು ಸುರುವು ಹಚ್ಚಿ ಬಿಟ್ಟೇನಿ, ನಿನಗ ಬ್ಯಾಸರಾತನು ' ಎಂದ ಸದಾಶಿವ.
     ' ಏ ಇಲ್ಲ ಬಿಡು ನನಗೂ ಈ ಊರಿನ ವಿಷಯ ತಿಳಿಕೋ ಬೇಕು ಅಂತ ಆಸಕ್ತಿ ಇತ್ತು, ನನಗೇನೂ ಬ್ಯಾಸರಾಗಿಲ್ಲ 'ಮಾದೇವ.
     ' ಇವಗ ಒಳಗ ಹಾಸಿಗಿ ಹಾಸಿ ಕೊಡ್ರಿ ಎಂದ ' ಸದಾಶಿವ.
     ' ಬ್ಯಾಡ ನನಗೂ ಹೊರಗ ಹಾಸಿಗಿ ಇರಲಿ ಒಳಗ ಬ್ಯಾಡ 'ಎಂದ ಮಾದೇವ.
     ' ಒಳಗ ಒಂಥರಾ ಶಕಿ ಕುಚ್ಚತದ ಅದಕ ನಾ ಹೊರಗ ಮಲಗೋದು' ಎಂದ ಸದಾಶಿವ.
     ' ನನಗೂ ಶಕಿ ಅಗೋದುಲ್ಲ ' ಎಂದ ಮಾದೇವ. ಇಬ್ಬರೂ ಪಡಸಾಲೆಯಲ್ಲಿ ಮಲಗಿದರು. ಐವತ್ತು ವರ್ಷಗಳಲ್ಲಿ ಊರಲ್ಲಿ ಆದ ಎಲ್ಲ ವಿಷಯಗಳು ಹಾಗೂ ಬದಲಾವಣೆ ಕುರಿತಂತೆ ವಿಸ್ತಾರವಾಗಿ ಮಾತನಾಡಿದ. ಸದಾಶಿವ ಗ್ರಾಮದಲ್ಲಿದ್ದರೂ ಆತನ ವೈಚಾರಿಕತೆ ಪ್ರಖರವಾಗಿತ್ತು. ಅನ್ಯಾಯಗಳ ಕುರಿತು ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸುತ್ತಿದ್ಚ. ಮಾದೇವನನ್ನು ಯುವ ಕವಿ ಸಮ್ಮೇಳನದ ಆಶಯ ಭಾಷಣಕ್ಕೆ ಆಯ್ಕೆ ಮಾಡಿದ ವಿಷಯ ಕುರಿತು ನಿರ್ವಂಚನೆಯಿಂದ ಮಾತನಾಡಿದ.
     ಅದಕ್ಕೆ ಮಾದೇವ ' ಅಷ್ಟೊಂದು ಶ್ರಮ ವಹಿಸಿ ನನ್ನನ್ನು ಆಯ್ಕೆ ಮಾಡುವ ಅವಶ್ಯಕತೆ ನನಗೆ ಕಾಣಲಿಲ್ಲ ' ನೀನು ಕರೆದಿದ್ದರೆ ನಾನು ಹಾಗೇನೇ ಬಂದು ಹೋಗುತ್ತಿದ್ದೆ ' ಎಂದ.
    ' ಅದ್ಹ್ಯಾಂಗ ಆಗ್ತೆದೋ ಅವರು ನಮ್ಮ ಊರಾಗ ಓದ್ಯವರು ಅಂತ ಅವರು ಇವರು ಎಲ್ಲರ್ನೂ ಗುರುತಿಸ್ಯಾರ ಆದ್ರ ನೀನು ಈ ಊರಾಗ ಓದ್ಯವ ಅಲ್ಲನು, ನೀನು ಕೆಲವು ಪುಸ್ತಕಾ ಬರದಿ ಎಲ್ಲರಕಿಂತನೂ ಛೊಲೋನ ಬರದಿ ಅದನ್ನ ಇವರು ಗುರುತಸ ಬಾರದನು ' ಎಂದ ಸದಾಶಿವ.
     ' ನಾ ಈ ಊರವ ಅಲ್ಲ ಊರ ಬಿಟ್ಟು ಹೋಗೆ ಐವತ್ತು ವರ್ಷಾತು ಈಗ ನೀವ ಕರದೀರಿ ಅಂತ ಬಂದೇನಿ, ನಾನು ಇಲ್ಲೆ ಕನ್ನಡ ಸಾಲಿ ಓದ್ಯವ ಅನ್ನೊ ಒಂದ ಕಾರಣ ಬಿಟ್ರ ನನಗ ಮತ್ತೇನು ಅರ್ಹತೆ ಅದ. ಇನ್ನ ನಾ ಬರದ ಪುಸ್ತಕದ ವಿಷಯ ನಿನಗ ನನ್ನ ಬಗ್ಗೆ ಅಭಿಮಾನ ಅದ ಛೊಲೋ ಅವ ಅಂತಿ, ಆದರ ಸಾಹಿತ್ಯ ಲೋಕ ಅವನ್ನ ಒಪ್ಪ ಬೇಕಲ್ಲ, ಮೇಲಾಗಿ ಈ ಕಾರ್ಯಕ್ರಮ ಆಯೋಜನಾ ಮಾಡಿದವರು ಇತ್ಲಾಗಿನ ಪೀಳಿಗಿ ಅವರು, ಅವರಿಗೆ ನನ್ನ ವಿಷಯ ಗೊತ್ತಿಲ್ಲದ ಇರಬಹುದು, ಅದೂ ಅಲ್ಲದ ಬೇರೆ ಇನ್ನೇನೂ ಕಾರಣ ಇರತಾವ, ಆದರ ನನ್ನ ಕರಸಲಿಕ್ಕೆ ಭಾಳ ಪ್ರಯತ್ನ ಮಾಡೀದಿ ಅನಸ್ತದ ' ಎಂದ ಮಾದೇವ.
     ' ಈ ಕಾರ್ಯಕ್ರಮಕ್ಕ ಆಯ್ಕೆ ಮಾಡ್ಯಾರಲ್ಲ ಅವರು ಯಾರು ಈ ಊರಗ ಅದಾರ ಅಂತಿ, ಅವರೆಲ್ಲ ಹುಬ್ಬಳ್ಳಿ ಧಾರವಾಡ ಅಂತ ಬ್ಯಾರೆ ಬ್ಯಾರೆ ಊರಾಗನ ಇರೋವರು, ಅಂಥಾದರಾಗ ನಿನ್ನೊಬ್ಬನ ವಿಷಯದಾಗನ ಯಾಕ ಪಾರ್ಶ್ಯಲಿಟಿ, ಮೇಲಾಗಿ ನಾನೂ ನಿನ್ನ ಪುಸ್ತಕ ಕೊಟ್ಟೇನಿ ಛೊಲೋ ಅವ ಅಂತನೂ ಅಂದಾರ, ಇಷ್ಟೆಲ್ಲ ಇದ್ದೂ ಮುಂದಿನ ವರ್ಷ ನೋಡೋಣ ಅಂದ್ರ ಹ್ಯಾಂಗ, ನಾನೇನೂ ನಿನ್ನ ಈ ಸಾಹಿತ್ಯ ಸಮಾರಂಭಕ್ಕ ಕರೀರಿ ಅಂತನೂ ಅಂದಿರಲಿಲ್ಲ, ಅವರ ನಮ್ಮನೀಗೆ ಬಂದು ನಿನ್ನ ಕರಸಬೇಕು ಅಂತ ಹೇಳಿ ಎಲ್ಲ ಆದ ಮ್ಯಾಲೆ ಹೀಂಗ ಹೇಳೀದ್ರ ನಮಗ ಬ್ಯಾಸರಾಗೋದುಲ್ಲನು, ಅದಕ್ಕನ ನಾನೂ ಕಡ್ಡಿ ಎರಡು ತುಂಡ ಮಡಿದ್ಹಂಗ ಹೇಳಿದೆ, ನೀವೇನರ ಮಾಡಿಕೊಳ್ರಿ ನಿಮ್ಮ ಸಂಘದ ಸಹವಾಸ ಸಾಕು ಅಂದೆ ನೋಡು, ಹಂಗ ದಾರಿಗೆ ಬಂದ್ರು' ಎಂದ ಸದಾಶಿವ.
     ' ಏನ ಆಗ್ಲಿ ನೀನು ಪಟ್ಟ ಹಿಡಿದದ್ದು ತಪ್ಪು ನನಗ ಭಾಗ ವಹಿಸಲಿಕ್ಕೆ ಮುಜುಗರ ಆಗ್ತದ ' ಎಂದ ಮಾದೇವ.
     ' ಅದೆಲ್ಲ ಇರ್ಲಿ ಈಗ ನೀ ಮತ್ತೇನು ಬರೀಲಿಕ್ಕೆ ಹತ್ತಿ ಹೇಳು ' ಅಂದ ಸದಾಶಿವ.
     ' ಏ ಬಿಡೋ ನಾವೆಲ್ಲ ಎಂತಹ ಬರ್ಯೋವರೊ ನಮ್ಮಂಥವರ ಬರಹಕ್ಕ ಒಂದು ಮಿತಿ ಇರ್ತದ, ಒಂದಿಷ್ಟು ಕಥೀ ಬರ್ದೇನಿ ' ಎಂದ ಸದಾಶಿವ.
     ' ಹ್ಯಾಂಗ ಇರ್ಲೋ ಎಲ್ಲಾರು ಕುವೆಂಪು ಬೇಂದ್ರೆ ಮಾಸ್ತಿ ಕಾರಂತರು ಆಗಲಿಕ್ಕೆ ಆಗ್ತದನು, ಅವರ ಯೋಗ್ಯತಾ ಅವರದು ನಮ್ಮ ಯೊಗ್ಯತಾ ನಮ್ಮದು, ಸಣ್ಣವು ದೊಡ್ಡವು ಗುಡ್ಡ ಬೆಟ್ಟಾ ಇರೊದ್ರಿಂದನ ಮೌಂಟ ಎವರೆಸ್ಟ್, ಕಾಂಚನಗಂಗಾ ಶಿಖರಗೋಳು ಎದ್ದು ಕಾಣೋದು ಅದನ ಮದ್ಲ ತಿಳಕೋ, ರಾತ್ರಿ ಹನ್ನೆರಡಾತು ಮಲಕೋ ಬೆಳಿಗ್ಗೆ ಎದ್ದು ಈ ಕಾರ್ಯಕ್ರಮದ ಆಯೋಜಕರ್ನ ಭೆಟ್ಟಿ ಮಾಡೋಣಂತ ' ಎಂದು ಸದಾಶಿವ ಪ್ರೋತ್ಸಾಹಕರವಾದ ಮಾತುಗಳನ್ನಾಡಿದ. ಕಿಟಕಿಯಿಂದ ಚಂದ್ರನ ಬಿಂಬ ಕಾಣುತ್ತಿತ್ತು. ಚುಕ್ಕಿಗಳು ನೀಲಾಗಸದಲ್ಲಿ ಫಳ ಫಳನೆ ಹೊಳೆಯುತ್ತಿದ್ದವು, ತಣ್ಣನೆಯ ಗಾಳಿ ಕಿಟಕಿಯಿಂದ ನುಗ್ಗಿ ಬರುತ್ತಿತು, ಬೀಸಿ ಬರುವ ಆ ಹಿತಕರ ತಂಗಾಳಿಗೆ ಸದಾಶಿವ ಮತ್ತು ಮಾದೇವ ನಿದ್ರೆಗೆ ಜಾರಿದರು.
     ಮಾರನೆ ದಿನ ಶನಿವಾರ ಎಂದಿನಂತೆ ಮಾದೇವನಿಗೆ ಎಚ್ಚರವಾಯಿತು. ಹೊದಿಕೆಯನ್ನು ಸರಿಸಿ ತೆರೆದು ಕೊಂಡಿದ್ದ ಕಿಟಕಿಯೆಡೆಗೆ ನೋಡಿದ. ಪೂರ್ವದಿಗಂತ ಕೆಂಬಣ್ಣದಿಂದ ಹೊಳೆಯುತ್ತಿತ್ತು, ಎದ್ದು ಹಾಸಿಗೆ ಸುತ್ತಿಟ್ಟು ಪ್ರಾಥಃವಿಧಿಗಳನ್ನೆಲ್ಲ ಪೂರೈಸಿದ. ಸದಾಶಿವನ ಮಗಳು ಲಕ್ಷ್ಮೀ ಚಹಾ ತಂದು ಕೊಟ್ಟಳು ಚಹಾ ಸೇವಿಸುತ್ತ ಕುಳಿತವನು ಅಲ್ಲಿಯೆ ಮೇಜಿನ ಮೇಲಿದ್ದ ಸಂಯುಕ್ತ ಕರ್ನಾಟಕ,  ವಿಜಯ ಕರ್ನಾಟಕ ಪತ್ರಿಕೆಗಳ ಮೇಲೆ ಕಣ್ಣಾಡಿಸಿದ. ದುರ್ವಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಹಿತ್ಯ ಸಮ್ಮೇಳನದ ಕುರಿತಾದ ವಿಸ್ತೃತವಾದ ಮಾಹಿತಿಗಳು ಅವುಗಳಲ್ಲಿ ಬಂದಿದ್ದವು. ಕಣ್ಣಾಡಿಸಿ ಆ ಪತ್ರಿಕೆಗಳನ್ನು ಮೇಜಿನ ಮೇಲಿಟ್ಟ. ದನದ ಕೊಟ್ಟಿಗೆಯ ಕೆಲಸವನ್ನು ಸದಾಶಿವನ ಮಗ ಕಾಂತೇಶ ಅಚ್ಚುಕಟ್ಟಾಗಿ ಮಾಡಿ, ಹಸುಗಳ ಹಾಲು ಹಿಂಡಿ ಒಳಗೆ ಕೊಟ್ಟು ದನಗಳನ್ನು ಬಿಟ್ಟುಕೊಂಡು ತಮ್ಮ ಹೊಲಗಳ ಕಡೆಗೆ ಹೊರಟ.
     ' ಏನು ನಿನ್ನ ಮಗ ಬರೋದು ಇನ್ನ ಸಂಜೀಮುಂದ ಅನು ' ಎಂದ ಮಾದೇವ.
     ' ಇಲ್ಲ ಇವತ್ತ ಸ್ವಲ್ಪ ದನ ಮೇಯಿಸಿಗೊಂಡು ಅವಕ್ಕ ಹುಲ್ಲು ಕೊಯ್ಕೊಂಡು ಮಧ್ಯಾನ್ಹನ ಬಂದ ಬಿಡ್ತಾನ, ನೀನೂ ಜಳಕಾ ಮಾಡಿ ಬಿಡು ತಿಂಡಿ ತಿಂದು ಊರಾಗ ಹೋಗಿ ಬರೋಣ ' ಎಂದ ಸದಾಶಿವ. 
     'ಆಯ್ತು' ಎಂದ ಮಾದೇವ ಸ್ನಾನಕ್ಕೆ ನಡೆದ, ಸದಾಶಿವ ಸಹ ಸ್ನಾನ ಮುಗಿಸಿಕೊಂಡು ಬಂದ. ಇಬ್ಬರೂ ತಿಂಡಿ ತಿಂದು ಗ್ರಾಮ ಸಂಚಾರಕ್ಕೆ ಹೊರಟರು. ಹನುಮಂತ ದೇವರ ಗುಡಿಗೆ ಹೋಗಿ ಸದಾಶಿವ ನಮಸ್ಕರಿಸಿ ಬಂದ, ಮಾದೇವನೂ ಅವನನ್ನು ಅನುಸರಿಸಿದ.
     ' ನೀನೂ ದೇವರ ಗುಡಿಗೆ ಹೋಗ್ತಿ ' ಎಂದ ಸದಾಶಿವ.
     ' ಇಲ್ಲ ಅಂಥ ಭಕ್ತಿಯೇನೂ ಇಲ್ಲ ನಿನ್ನ ಜೋಡಿ ಬಂದೆ ಅಷ್ಟ, ಹೋಗಬೇಕು ಅಂತನೂ ಇಲ್ಲ ಹೋಗಬಾರ್ದನೂ ಅಂತನೂ ಇಲ್ಲ ' ಎಂದ ಮಾದೇವ.
     ದೇವಸ್ಥಾನದಿಂದ ಹೊರಟ ಇಬ್ಬರೂ ಗ್ರಾಮ ಪಂಚಾಯತಿ ಪಕ್ಕದ ಪಂಚಾಯತಿ ಸಭಾ ಭವನಕ್ಕೆ ಬಂದರು. ದುವರ್ಾಪುರದ ಕನ್ನಡ ಸಂಘದ ಪದಾಧಿಕಾರಿಗಳು ಸದಸ್ಯರು ಗ್ರಾಮದ ಮುಖ್ಯಸ್ಥರು ಎಲ್ಚಲ ಇದ್ದರು. ಅವರೆಲ್ಲರಿಗೂ ಸದಾಶಿವ ಮಾದೇವನನ್ನು ಪರಿಚಯಿಸಿದ. ಲೋಕಾಭಿರಾಮದ ಮಾತುಯಕತೆಯ ನಂತರ ಕಾರ್ಯಕ್ರಮದ ಆಯೋಜಕರು ನನ್ನನ್ನು ಕುರಿತು ಸಮಯದ ಅಭಾವದ ಕುರಿತು ಮತ್ತೊಮ್ಮೆ ಹೇಳಿ ಹತ್ತು ನಿಮಿಷಗಳಲ್ಲಿ ಯುವ ಕವಿ ಗೋಷ್ಟಿಯ ಆಶಯ ಭಾಷಣ ಮುಗಿಸ ಬೇಕೆಂದು ಕೋರಿ ಕೊಂಡರು, ಅದಕ್ಕೆ ಒಪ್ಪಿ ಅವರೆಲ್ಲರಿಗೆ ವಿದಾಯ ಹೇಳಿ ಅಲ್ಲಿಂದ ಹೊರ ಹೊರಟರು.
     ಸ್ವಲ್ಪ ದೂರ ಹೋಗುತ್ತಿದ್ದಂತೆ ಸದಾಶಿವ ರಾಮ ಭವನದ ಎದುರು ನಿಂತಿದ್ದ ಒಬ್ಬ ವ್ಯಕ್ತಿಯನ್ನು ತೋರಿಸಿ
     ' ಇವರ್ಯಾರು ಗೊತ್ತೇನು' ? ಎಂದು ಮಾದೇವನನ್ನು ಪ್ರಶ್ನಿಸಿದ. ಯಾರೆಂದು ತಿಳಿಯದ ಮಾದೇವ ಆ ವ್ಯಕ್ತಿಯನ್ನು ದಿಟ್ಟಿಸಿ ನೋಡಿದ. ತನಗಿಂತ ಸ್ವಲ್ಪ  ಕುಳ್ಳಗಿನ ವ್ಯಕ್ತಿ, ದುಂಡನೆಯ ಮುಖ, ಮುಂದಲೆಯಲ್ಲಿ ಕೂದಲಿಲ್ಲ, ಹಿಂಭಾಗದಲ್ಲಿರುವ ಅಲ್ಪ ಸ್ವಲ್ಪ ಕೂದಲು ಸಹ ಸುಮಾರಾಗಿ ನೆರೆತಿದೆ, ತೀಕ್ಷ್ಣ ನೋಟದ ಚುರುಕು ಕಣ್ಣುಗಳು, ಯಾರೆಂಬುದು ಮಾದೇವನಿಗೆ ಹೊಳೆಯುತ್ತಿಲ್ಲ. ಗೊತ್ತಿಲ್ಲವೆಂದು ಮಾದೇವ ತಲೆಯಲ್ಲಾಡಿಸಿದ.
     ಆ ವ್ಯಕ್ತಿಯೆಡೆಗೆ ತಿರುಗಿದ ಸದಾಶಿವ ಆತನನ್ನುದ್ದೇಶಿಸಿ ' ಇವರ್ಯಾರು ನೀನು ಹೇಳು ನೋಡುವ ' ಎಂದ. ಅದಕ್ಕೆ ಆತ ' ನನಗೆ ಗೊತ್ತಾಗ್ತಾ ಇಲ್ಲ ನೀನೆ ಹೇಳು ' ಎಂದ.
     ಅದಕ್ಕೆ ಸದಾಶಿವ ಮಾದೇವನನ್ನುದ್ದೇಶಿಸಿ ' ಏ ಇಂವ ನಿನ್ನ ಕ್ಲಾಸ್ ಮೇಟ್ ದೀಪಕ ಅಲ್ಲನೋ ' ಎಂದ.
     ಮತ್ತೆ ಜಿಜ್ಞಾಸೆಗೆ ಬಿದ್ದ ಮಾದೇವನನ್ನು ನೋಡಿ ಸದಾಶಿವ ' ಇಂವ ಗೋಕುಲ್ ಕಾ ಚೋರ್ ಗ್ಯಾಂಗಿನ ದೀಪಕ ಅಲ್ಲನೋ ' ಎಂದ.
     ' ಇನ್ನೂ ಇಷ್ಟು ವರ್ಷವಾದರೂ ಚಾಷ್ಟಿ ಮಾಡೋದು ಬಿಡಬ್ಯಾಡ ' ಎಂದು ದೀಪಕ ಸದಾಶಿವನಿಗೆ ಹೇಳಿದ. ನಿಮ್ಮ ಗೆಳ್ಯಾರು ಅಪರೂಪಕ್ಕ ನಮ್ಮ ಊರಿಗೆ ಬಂದಾರ ಚಾ ಕುಡ್ಯೋಣ ಬರ್ರಿ ' ಎಂದ ದೀಪಕ.
     ' ಯಾಕಪಾ ಅವ ನನಗ ಮಾತ್ರ ಗೆಳ್ಯಾ ಅವನು ನಿನಗಲ್ಲೇನು, ನನಗಿಂತ ನೀನು ಹತ್ರದ ಗೆಳ್ಯಾ ಯಾಕಂದರ ನೀವಿಬ್ರೂ ಒಂದ ಇಯತ್ತಾದಾಗ ಓದ್ಯವರು ' ಎಂದು ಸದಾಶಿವ ಮಾರ್ನುಡಿದ.
     ' ಏ ಬ್ಯಾಡ ಬಿಡ್ರಿ ಈಗ ಮನ್ಯಾಗ ಚಾ ಕುಡದ ಬಂದೇವಿ ' ಎಂದ ಮಾದೇವ.
     ' ಏ ಸುಮ್ನಿರು ಇವ ಹಂಗ ಚಾ ಕುಡಸೊ ಗಿರಾಕಿ ಅಲ್ಲ, ನಿನ್ನ ದಶಿಂದ ನಮಗೂ ಒಂಚೂರು ಚಾ ಸಿಗತದ' ಎಂದ ಸದಾಶಿವ. ಎಲ್ಲರೂ ಶ್ರೀ ರಾಮ ಭವನದ ಒಳಗೆ ಹೋಗಿ ಕುಳಿತರು. ಆಗಿನ ದೀಪಕಗೂ ಈಗಿನ ದೀಪಕಗೂ ಬಹಳ ಅಂತರವಿತ್ತು. ದೀಪಕ ಮತ್ತು ಸದಾಶಿವ ರವರು ಮಾತುಕತೆಗಳಲ್ಲಿ ಮುಳುಗಿದರು. ಅವರನ್ನು ಗಮನಿಸುತ್ತ ಕುಳಿತ ಮಾದೇವ ತನ್ನ ಶಾಲಾ ದಿನಗಳ ಹಳೆಯ ನೆನಪುಗಳಿಗೆ ಜಾರಿದ.



                                                                         ( ಮುಂದುವರಿದುದು )



                                                                    
 

Rating
No votes yet