ಗುರುವಿಗೇ ಅರಿವಾಗದಿರೆ ?

ಗುರುವಿಗೇ ಅರಿವಾಗದಿರೆ ?

 

ದಿನ ಬೆಳಗಾದರೆ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ನಾವು ನೋಡುತ್ತಿರುವುದು ಮಕ್ಕಳ ಮೇಲಿನ ದೈಹಿಕ, ಮಾನಸಿಕ ಹಿಂಸೆ, ದೌರ್ಜನ್ಯ ಇತ್ಯಾದಿ ಸುದ್ದಿಗಳನ್ನು. ಅದರಲ್ಲೂ ಶಾಲಾ ಮಕ್ಕಳ ಮೇಲಾಗುತ್ತಿರುವ ಮಾನಸಿಕ ಹಾಗೂ ದೈಹಿಕ ಹಿಂಸೆ ಹೆಚ್ಚಾಗಿ ಕಂಡು ಬರುವುದು ವಿಷಾದಕರ ಸಂಗತಿ. ಶಾಲೆಯಲ್ಲಿ ಅಧ್ಯಾಪಕರು, ಶಿಕ್ಷಕಿಯರು ಕೊಡುವ ಶಿಕ್ಷೆಯನ್ನು ತಡೆದುಕೊಳ್ಳಲಾರದೆ ಅದೆಷ್ಟೋ ಕಂದಮ್ಮಗಳು ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಿವೆ. ಒಳ್ಳೆಯ ಶಿಕ್ಷಣ ಪಡೆದು ಮಕ್ಕಳು ವಿದ್ಯಾವಂತರಾಗಲಿ ಎಂಬ ಆಶಯದೊಂದಿಗೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಹಿಂತಿರುಗಿ ಬರುವಾಗ ತಮ್ಮ ಮೈಮೇಲೆ ಗಾಯದ ಬರೆಯನ್ನು ಹೊತ್ತು ತರುವುದು ಸಾಮಾನ್ಯವಾಗಿಬಿಟ್ಟಿದೆ.
ವಿಜಾಪುರದಲ್ಲಿ ಶಿಕ್ಷಕಿಯ ಕಿರುಕುಳ ತಾಳಲಾರದೆ ವಿದ್ಯಾರ್ಥಿಯೊಬ್ಬ ಬೆಂಕಿ ಹಚ್ಚಿಕೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಹಸಿಯಾಗಿರುವಾಗಲೇ, ಇಂತಹುದೇ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಅಲ್ಲಿನ ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಅಸ್ಲಾಂ ಅನ್ಸಾರಿ ಅನ್ನುವ ಬಾಲಕ ಶಾಲೆಯಲ್ಲಿನ, ನೀರಿನ ಬಕೆಟ್ ಮುರಿದ ಕಾರಣಕ್ಕಾಗಿ ಇಬ್ಬರು ಶಿಕ್ಷಕರು ಚೆನ್ನಾಗಿ ಥಳಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ. ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ  ಹೋಂ ವರ್ಕ್ ಮಾಡಲಿಲ್ಲವೆನ್ನುವ ಕಾರಣಕ್ಕಾಗಿ ಆತನ ಹಲ್ಲನ್ನೇ ಮುರಿದ ಪ್ರಸಂಗ, ಮಕ್ಕಳು ಜೋರಾಗಿ ಗಲಾಟೆ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ, ಮಕ್ಕಳನ್ನು ನೋಡಿಕೊಳ್ಳುವ ಮಹಿಳೆಯೊಬ್ಬಳು (ಆಯಾ) ನಾಲ್ಕು ವರ್ಷದ ಮಕ್ಕಳ ಮೇಲೆ ಸಾಮೂಹಿಕವಾಗಿ ಬರೆಹಾಕಿದ ಸುದ್ದಿ, ನಾಲ್ಕು ವರ್ಷದ ಬಾಲಕಿಗೆ ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆ ಕೊಡುತ್ತೇನೆಂದು ಕರೆದುಕೊಂಡು ಹೋಗಿ ಪೋಷಕರ ಸ್ನೇಹಿತನೇ ಆ ಪುಟ್ಟ ಬಾಲಕಿಗೆ ಕಿರುಕುಳ ನೀಡಿದ ಘಟನೆ ಹೀಗೆ ಪ್ರತಿದಿನ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಾ ಹೋಗುತ್ತಿದೆ.  

ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಅಂತಃಕರಣ ಜಾಸ್ತಿ, ಎಷ್ಟೇ ತುಂಟ ಮಕ್ಕಳನ್ನೂ ಕೂಡಾ ಸಂಭಾಳಿಸಿಕೊಂಡು ಹೋಗುತ್ತಾರೆ ಎನ್ನುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳಲ್ಲಿ ಶಿಕ್ಷಕಿಯರದ್ದೇ ಮೇಲುಗೈ. ಹೋಂ ವರ್ಕ್ ಮಾಡಲಿಲ್ಲವೆಂಬ ಕಾರಣಕ್ಕಾಗಿಯೋ, ಸರಿಯಾಗಿ ಪಾಠ ಕೇಳುವುದಿಲ್ಲವೆಂಬ ಕಾರಣಕ್ಕಾಗಿಯೋ ಮಕ್ಕಳನ್ನು ಹಿಡಿದುಕೊಂಡು ಚೆನ್ನಾಗಿ ಬರೆ ಹಾಕುವುದು, ಹಲ್ಲು ಮುರಿಯುವುದು, ನಿಂದಿಸುವುದು ಹೀಗೆ ಹಲವಾರು ರೀತಿಯ ಹಿಂಸೆಗಳು ಮುಗ್ಧ ಮಕ್ಕಳ ಮೇಲೆ ನಡೆಯುತ್ತಲೇ ಇವೆ. ಚಿಕ್ಕಂದಿನಲ್ಲಿ ಮಕ್ಕಳು ಬೆಳೆಯುತ್ತಿರುವ ವಾತಾವರಣ ಅವರ ಮುಂದಿನ ಜೀವನವನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತನ್ನು ನಾವು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ಶಿಕ್ಷಕರು ಹೇಳಿಕೊಡುತ್ತಿದ್ದರು. ಆದರೆ ಇಂದು ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಮಕ್ಕಳಿಗೆ ಸಿಂಹ ಸ್ವಪ್ನವಾಗಿ ಪರಿಣಮಿಸುತ್ತಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ದೈಹಿಕ, ಮಾನಸಿಕ ಹಿಂಸೆ ಕೊಡಬಾರದು,ಮಕ್ಕಳನ್ನು ಚೆನ್ನಾಗಿ ತಿದ್ದಿ ಬುದ್ದಿ ಹೇಳಿ ಸರಿದಾರಿಗೆ ತರಲು ಪ್ರಯತ್ನಿಸಬೇಕೆಂಬ ಕಾನೂನು ಇದ್ದರೂ ಮಕ್ಕಳ ಮೇಲಿನ ದೌರ್ಜನ್ಯ ನಿರಂತರವಾಗಿದೆ. ಯಾರದೋ ಮೇಲಿನ ಕೋಪವನ್ನೋ, ಅಥವಾ ಒತ್ತಡದಿಂದಲೋ, ಮಕ್ಕಳನ್ನು ಈ ರೀತಿಯಾಗಿ ಹಿಂಸಿಸುವುದು ಎಷ್ಟು ಸರಿ? ಅಥವಾ  ಶಿಕ್ಷಕರಿಗೆ, ಬದಲಾದ ತಲೆಮಾರಿನ ಮಕ್ಕಳನ್ನು ನಿಭಾಯಿಸುವಂತಹ ಸೂಕ್ತ ತರಭೇತಿಯ ಕೊರತೆಯೇ? ಪೋಷಕರು ಮಕ್ಕಳನ್ನು ಯಾವ ಧೈರ್ಯದ ಮೇಲೆ ಶಾಲೆಗೆ ಕಳುಹಿಸುವುದು? ಮಕ್ಕಳನ್ನು ಮುಂದಿನ ಸತ್ಪ್ರಜೆಗಳಾಗಿ ರೂಪಿಸಬೇಕಾಗಿರುವ ಶಿಕ್ಷಕರೇ ಈ ರೀತಿಯಾಗಿ ವರ್ತಿಸಿದರೆ? ಶಾಲೆಯಲ್ಲಿ ಇಂತಹ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಮುಂದೆ ಸಮಾಜದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡು ಬಾಳಬಲ್ಲರೇ?
 

Rating
No votes yet