'ಕರ್ಪೂರ'-ಒಂದು ಸಮರ್ಥ ಸೊಳ್ಳೆ ನಿವಾರಕ.

'ಕರ್ಪೂರ'-ಒಂದು ಸಮರ್ಥ ಸೊಳ್ಳೆ ನಿವಾರಕ.

 

ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಇಲ್ಲದ ಸ್ಥಳವೆ ಇಲ್ಲ.  ಸ್ವಲ್ಪ ಹಸಿರು ಇದ್ದರೆ ಮುಗಿಯಿತು, ಸೊಳ್ಳೆಗಳ ದಾಂಧಲೆ ಹೇಳ ತೀರದು.  ಸಂಜೆಯಾಗುತ್ತಿದ್ದಂತೆ ಎಲ್ಲಾ ಕಿಟಕಿ ಬಾಗಿಲು ಬಂದ್ ಆದರೆ ಬಚಾವ್, ಇಲ್ಲಾಂದ್ರೆ ಸೊಳ್ಳೆಗಳ ಹಾವಳಿ ತಡೆಯಲಸಾಧ್ಯ. ಇವುಗಳ ಕಾಟ ತಡೆಯಲಾರದೆ ಬೇವಿನ ಸೊಪ್ಪಿನ ಹೊಗೆ, ಬೆರಣಿ ಹೊಗೆ, ಸಾಮ್ರಾಣಿ ಹೊಗೆ ಇತ್ಯಾದಿ ಬಳಕೆಯಾಗುತ್ತಿತ್ತು.  ನಂತರದಲ್ಲಿ ಕೆಲವು ಕಂಪೆನಿಯವರು ಈ ಮೂಲವಸ್ತುಗಳನ್ನು ಇಟ್ಟುಕೊಂಡು ಕಾಯಿಲ್ ತರಹ ಮಾಡಿ ಮಾರುಕಟ್ಟೆಗೆ ತಂದರು.  ಸ್ವಲ್ಪ ದಿನ  ಸಹಿಸಿಕೊಂಡ ಜನ ಇದರ ಹೊಗೆ ಕೆಲವರಿಗೆ ಅಲರ್ಜಿಯಾಯಿತು.  ಕೆಮ್ಮು ದಮ್ಮು ಇದ್ದವರಿಗಂತೂ ಇದರ ವಾಸನೆಯೇ ರಾತ್ರಿ ಇವರ ನಿದ್ದೆ ಕೆಡಿಸುತ್ತಿತ್ತು. ಇದನ್ನು ಮನಗಂಡ ಕೆಲವು ಕಂಪನಿಗಳು ಸ್ವಲ್ಪ ಸುಧಾರಿತ ಮಾದರಿಯಲ್ಲಿ ರಾಸಾಯನಿಕ ಬಳಸಿ ಬಿಲ್ಲೆ ಮತ್ತು ರಸವಿರುವ ರಿಪಲ್ಲೆಂಟ್ ಗಳನ್ನೂ  ಬೆಳಕಿಗೆ ತಂದರು.   ಇದರ ವಾಸನೆಯಂತು  ಘಾಟಿನದಾಗಿದ್ದು  ಇದು ಸಹಾ ಕೆಮ್ಮು ,ದಮ್ಮು , ಹೃದಯ ರೋಗಿಗಳಿಗೆ ಆಗಿಬರಲಿಲ್ಲ.  ಇವರು ಕೊನೆಗೆ ಸೊಳ್ಳೆ ಪರದೆಗೆ ಅಂಟಿಕೊಂಡರು.   ಮಲಗುವಾಗಲೇನೋ ಪರವಾಗಿಲ್ಲ. ಇನ್ನು ಮಿಕ್ಕ ಸಮಯದಲ್ಲಿ ಈ ಸೊಳ್ಳೆ ಹಾವಳಿಯಿಂದ ತಪ್ಪಿಸಿಕೊಳ್ಳುವುದು ಒಂದು ಸಮಸ್ಯೆಯೇ  ಆಗಿದೆ.   ಹೆಚ್ಚಾಗಿ ವಯಸ್ಸಾದವರು, ಹೆಂಗಸರು ಮತ್ತು ಮಕ್ಕಳು ಸಂಜೆಯ ಸಮಯದಲ್ಲಿ  ಮನೆಯಲ್ಲಿರುವುದರಿಂದ ಸೊಳ್ಳೆಯಿಂದ ವಿಮುಕ್ತಿ  ಅನಿವಾರ್ಯವೇ ಆಗಿದೆ. 

ಇತ್ತೀಚಿನ ದಿನಗಳಲ್ಲಿ ಡೆಂಗ್ಯು ಮತ್ತು ಮಲೇರಿಯ ರೋಗಗಳು ಮಾರಣಾಂತಿಕ ಸೊಳ್ಳೆಗಳಿಂದ ಹರಡುತ್ತಿವೆ.  ಇದಕ್ಕೆ ಮುಖ್ಯ ಕಾರಣ ಪರಿಸರದ ನೈರ್ಮಲ್ಯ ಹಾಳಾಗಿರುವುದಾಗಿದೆ. ಎಲ್ಲಿ ನೋಡಿದರು ಕಸ, ಪ್ಲಾಸ್ಟಿಕ್, ತರಕಾರಿ ಸಿಪ್ಪೆಯಿಂದ ಹಿಡಿದು ಎಲ್ಲ ರೀತಿಯ ತ್ಯಾಜ್ಯಗಳು ರಸ್ತೆ ಬದಿಯಲ್ಲೇ ಬಿದ್ದು ಸೊಳ್ಳೆ ಮತ್ತು ಇನ್ನಿತರ ಕ್ರಿಮಿಕೀಟಗಳಿಗೆ  ಹಬ್ಬವಾಗಿದೆ.

 ಇಂತಹ ಒಂದು ಸಂದರ್ಭದಲ್ಲಿ  ಸೊಳ್ಳೆಯಿಂದ ವಿಮುಕ್ತಿ ಪಡೆಯಲು ಸರಳವಾದ, ಮಿತವ್ಯಯದ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದ  ಒಂದು ಪರಿಣಾಮಕಾರಿ ಔಷಧವನ್ನಾಗಿ  ಕೆಲವರು ಸಂಶೋಧಿಸಿ ಬಳಕೆ ಮಾಡಿದ್ದಾರೆ. ದಿನನಿತ್ಯದಲ್ಲಿ ಬಳಕೆ ಮಾಡುವ ಕರ್ಪೂರವೇ ಸೊಳ್ಳೆ ನಿವಾರಕವಾಗಿ ಕೆಲಸ ಮಾಡುವ ಒಂದು ಔಷಧಿ ಎಂದು ಹೇಳಲಾಗಿದೆ.  ಕರ್ಪೂರ, ಇದು ನಿನ್ನೆ ಇಂದಿನದೇನೂ ಅಲ್ಲ.  ಶತ ಶತಮಾನಗಳಿಂದಲೂ ಔಷಧಿಯಾಗಿ ಆಯುರ್ವೇದದಲ್ಲಿ ಬಳಸಲಾಗುತ್ತಿದೆ.  ಕಟ್ಟಿದ ಮೂಗು ತೆರೆಯಲು, ಸ್ನಾಯು ಸೆಳೆತಕ್ಕೆ, ಮೂಳೆ ನೋವು ನಿವಾರಿಸಲು, ತಲೆನೋವು, ಕೆಮ್ಮು ಮತ್ತು ಶೀತ ನಿವಾರಿಸಲು ಕರ್ಪೂರವನ್ನು ಬಳಸಲಾಗುತ್ತಿದೆ. ಜೊತೆಗೆ ಪ್ರತಿನಿತ್ಯ ಕೆಲವರಮನೆಯಲ್ಲಿ ಮಂಗಳ ನೀರಾಜನೆಗೆ

 ( ಮಂಗಳಾರತಿಗೆ ) ಕರ್ಪೂರವನ್ನು ಬಳಸುತ್ತಾರೆ. ದೇವಸ್ಥಾನಗಳಲ್ಲಂತೂ ಕರ್ಪೂರ ನಿತ್ಯಬಳಕೆಯಾಗುತ್ತದೆ.

 ಇಂತಹ ನಿತ್ಯಬಳಕೆಯ ಕರ್ಪೂರವನ್ನು  ಒಂದು ಅಗಲ ಬಾಯಿ ಇರುವ ಒಂದು ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಎರಡು ಮಾತ್ರೆ ಕರ್ಪೂರ ಹಾಕಿ ರೂಮಿನಲ್ಲಿ ಇಟ್ಟರಾಯಿತು. ಇದರ ಸುವಾಸನೆಗೆ ಸೊಳ್ಳೆ ಹತ್ತಿರ ಸುಳಿಯದು.  ರೂಮಿನ ಗಾತ್ರದ ಮೇಲೆ ಕರ್ಪೂರದ ಬಳಕೆಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ.   ನಿಧಾನವಾಗಿ ಕರಗುವ ಕರ್ಪೂರ ನೀರಿನಲ್ಲಿ ಆವಿಯಾಗಿ ಇಡಿ ಮನೆಯನ್ನು ಪಸರಿಸುತ್ತದೆ.  ತುರ್ತಾಗಿ ಪರಿಣಾಮ ಆಗಬೇಕೆಂದು ಬಯಸುವವರು ಸ್ವಲ್ಪ ಬಿಸಿನೀರನ್ನು ಹಾಕಬಹುದು. 

ಸೊಳ್ಳೆ ನಿವಾರಕಕ್ಕೆ ಬಳಸುವ ರಿಪಲ್ಲೆಂಟ್ ನಲ್ಲೆ  ಮ್ಯಾಟ್ ಅಥವಾ ಲಿಕ್ವಿಡ್ ಬದಲಿಗೆ ಎರಡು ಬಿಲ್ಲೆ ಕರ್ಪೂರವನ್ನು ಇರಿಸಿ ಸ್ವಿಚ್ ಹಾಕಿ ಅರ್ಧ ಗಂಟೆ ಬಿಟ್ಟರೆ ಸಾಕು ಎಂದು ಹೇಳುತ್ತಾರೆ. ಇದನ್ನು ಬೆಳಿಗ್ಗೆ ಮತ್ತು ಸಂಜೆ ಅರ್ಧ ಘಂಟೆ ಬಳಸಿದರೆ ಸಾಕು ಸೊಳ್ಳೆಯಿಂದ ವಿಮುಕ್ತಿ ಪಡೆಯಬಹುದೆಂದು ಅನುಭವಿಗಳು ಹೇಳುತ್ತಾರೆ.

ಒಮ್ಮೆ ಇದರ ಬಳಕೆ ಮಾಡಿನೋಡಿ ನಿಮಗೆ ತಿಳಿಸುತ್ತಿದ್ದೇನೆ.   ನಿಮಗೂ  ಉಪಯುಕ್ತವೆನಿಸಿದರೆ ಯಾಕೆ ಉಪಯೋಗ ಮಾಡಬಾರದು? ನಮಗೆ ಇದು ಸಾಧ್ಯ ಎಂದು ಖಾತ್ರಿಯಾದಮೇಲೆ ಮತ್ತೊಬ್ಬರಿಗೂ ಈ ವಿಚಾರ ತಿಳಿಸಬಹುದಲ್ಲವೇ?  ಅದಕ್ಕಾಗಿ ಈ ಮಾಹಿತಿಯನ್ನು ತಮ್ಮೊಡನೆ ಹಂಚಿಕೊಂಡಿದ್ದೇನೆ.  ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.  

Comments

Submitted by Prakash Narasimhaiya Sat, 12/15/2012 - 10:03

In reply to by partha1059

ಆತ್ಮೀಯ‌ ಪಾರ್ಥಸಾರಥಿ ಯವರೆ, ನಾನು ಕೂಡಾ ಪ್ರಯೊಗ‌ ಮಾಡಿದ‌ ನ0ತರವಷ್ತೆ ಒಪ್ಪಿದ್ದು. ಪ್ರಯೊಗ‌ ಮಾದಿ ನೊಡಿ. ಧನ್ಯವಾದಗಳು.
Submitted by tthimmappa Fri, 12/14/2012 - 22:01

ದೇವರ‌ ಪೂಜೆಗೆ ಮಾತ್ರ‌ ಬಳಸುತ್ತಿದ್ದ‌ ಕರ್ಪೂರದ‌ ಬಗ್ಗೆ ಉಪಯುಕ್ತ‌ ಮಾಹಿತಿ ಧನ್ಯವಾದಗಳು ಪ್ರಕಾಶ್ ರವರೇ....
Submitted by swara kamath Fri, 12/14/2012 - 22:42

ಲೇಖನವನ್ನು ಓದಿದ ಮರುಕ್ಷಣವೆ ನಾನು ಮಾಡಿದ ಮೊದಲ ಕೆಲಸ ಮೂಲೆಗೆ ಬಿದ್ದಿದ್ದ ರಿಪೆಲ್ಲೇಂಟ್ನಲ್ಲಿ ಕರ್ಪೂರದ ಬಿಲ್ಲೆಯನ್ನಿಟ್ಟು ಟಿವಿ ನೋಡುವ ಹಾಲ್ ನಲ್ಲಿರುವ ವಿದ್ದ್ಯುತ್ ಸಂಪರ್ಕಕ್ಕೆ ಅಳವಡಿಸಿದೆ .ರೂಮಿನ ತುಂಬಾ ಕರ್ಪೂರದ ಸುವಾಸನೆ ಹರಡಿತು. ಆದರೆ ನಮ್ಮೂರಿನ ಸೊಳ್ಳೆಗಳು ಕಿಂಗ ಸೈಜ್ ಆಗಿರುವುದರಿಂದಲೋ ಎನೊ ಕರ್ಪೂರದ ಘಮಲಿಗೆ ಕೇರ್ ಮಾಡದೆ ಕಾಲಿನ ಸಂದಿಯನ್ನು ಸ್ಪರ್ಷಿಸಲು ಅವಕಾಶ ಹುಡುಕುತ್ತಿದ್ದವು. ನಾಳೆ ಸ್ವಲ್ಪ ದೊಡ್ಡದಾದ ಬಿಲ್ಲೆಯನ್ನಿಟ್ಟು ಪರೀಕ್ಷಿಸುತ್ತೇನೆ. .......ವಂದನೆಗಳು ಪ್ರಕಾಶ್ ನರಸಿಂಮಯ್ಯನವರೆ,.............ರಮೇಶ್ ಕಾಮತ್,ರಿಪ್ಪನ್ ಪೇಟೆ.
Submitted by venkatb83 Sat, 12/15/2012 - 16:28

ಪ್ರಕಾಶ್ ನರಸಿಂಹಯ್ಯ ಅವ್ರೆ ಕರ್ಪೂರಕ್ಕೆ ಸೊಳ್ಳೆ ಕಾಟ ನಿವಾರಿಸುವ ಶಕ್ತಿ ಇರುವ ಬಗ್ಗೆ ಮೊದಲೇ ಎಲ್ಲೋ ಓದಿದ್ದೆ..... ಮರೆತಿದ್ದೆ... !! ಈಗ ನೀವು ಬರೆದದ್ದು ಓದಿದ ಮೇಲೆ ಪ್ರಯತ್ನಿಸುವ ಅನಿಸುತ್ತಿದೆ. ಚಿಕ್ಕ ಚಿಕ್ಕ ಸೊಳ್ಳೆಗಳು ಈಗ ಕಾಣಸಿಗದೆ ದೊಡ್ಡ ಗಾತ್ರದ ಸೊಳ್ಳೆಗಳು ಕಾಣಸಿಗುತ್ತಿವೆ..! ಗುಡ್ ನೈಟ್ ಹಚ್ಚಿ ಮಲಗಿದರೂ ಬೆಳಗ್ಗೆ ಎದ್ದು ನೋಡಿದರೆ ಸೊಳ್ಳೆಗಳು ಧರಶಾಯಿ ಆದರೂ ಕೈ ಕಾಲು ಮೇಲೆ ಅವುಗಳು ಕಚ್ಚಿದ ಕೆಂಪು ಗುರುತು...:(( ಕರ್ಪೂರ ಹಚ್ಚಿ ಸೊಳ್ಳೆ ನಿವಾರಿಸುವ ವಿಧಾನ ಪ್ರಯತ್ನಿಸಿ ಆಮೇಲೆ ಫಲಿತಾಂಶ ತಿಳಿಸುವೆ .. ಅಪರೂಪದ ಮಾಹಿತಿ ಹಂಚಿಕೊಂಡದ್ದಕ್ಕೆ ನನ್ನಿ.. ಶುಭವಾಗಲಿ.. \|
Submitted by Prakash Narasimhaiya Mon, 12/17/2012 - 10:33

In reply to by venkatb83

ಆತ್ಮೀಯ ವೆಂಕಟೇಶರೆ, ನಾನು ಈ ವಿಚಾರ ತಿಳಿದ ಕೂಡಲೇ ಒಪ್ಪಲು ಸಿದ್ದನಾಗಲಿಲ್ಲ. ಪ್ರಯತ್ನಿಸಿ ನೋಡುವ ಎಂದು ಚಿಕ್ಕ ಬೌಲ್ನಲ್ಲಿ ಎರಡು ಕರ್ಪೂರದ ಬಿಲ್ಲೆಗಳನ್ನ ಇಟ್ಟು ಸ್ವಲ್ಪ ನೀರು ಹಾಕಿ ನನ್ನ ಮಲಗುವ ಕೋಣೆಯಲ್ಲಿ ಇರಿಸಿದೆ. ನಿಧಾನವಾಗಿ ಸುವಾಸನೆ ಹರಡಿತು. ಸಂಜೆ ಸುಮಾರು ಏಳರ ಸಮಯಕ್ಕೆ ಇಟ್ಟದ್ದು ರಾತ್ರಿ ಹತ್ತರ ಹೊತ್ತಿಗೆ ಒಂದೇ ಒಂದು ಸೊಳ್ಳೆಯೂ ನಮ್ಮನ್ನು ಬಾಧಿಸಲಿಲ್ಲ. ಆ ಎರಡು ಕರ್ಪೂರದ ಬಿಲ್ಲೆಗಳು ಇನ್ನು ಕರಗಿಲ್ಲ, ನೀರು ಆವಿಯಾದ ನಂತರ ನೀರನ್ನು ಮಾತ್ರ ಹಾಕುತ್ತಿದ್ದೇನೆ. ನಿಮ್ಮ ಅನುಭವವನ್ನು ತಿಳಿಸಿ. ಧನ್ಯವಾದಗಳು.
Submitted by ಗಣೇಶ Mon, 12/24/2012 - 00:13

In reply to by Prakash Narasimhaiya

ಪ್ರಕಾಶ ಅವರೆ, ನಮ್ಮ ಮನೆಯಲ್ಲಿ ಸೊಳ್ಳೆಕಾಟವಿಲ್ಲ. ನನ್ನ ಮಿತ್ರನೊಬ್ಬ ಸೊಳ್ಳೆಕಾಟದ ಬಗ್ಗೆ ಹೇಳಿದಾಗ ನಿಮ್ಮ ಉಪಾಯ ತಿಳಿಸಿದೆ. ಅವನೂ ಉಪಯೋಗಿಸಿ ಥ್ಯಾಂಕ್ಸ್ ಹೇಳಿರುವನು. -ಗಣೇಶ.